ಬ್ರಿಟೀಷರನ್ನು ಭಾರತದಿಂದ ಓಡಿಸಲು ಕೈ ಜೋಡಿಸಿದ ನಾಯಕರಲ್ಲಿ ಸದ್ಯ ಜೀವಂತ ಇರುವ ದಂತಕತೆ ದೊರೆಸ್ವಾಮಿ. ಸ್ವಾತಂತ್ರ್ಯ ಹೋರಾಟದಲ್ಲಿ ಯುದ್ಧ ಮಾಡದೆ ಇರಬಹುದು. ಆದರೆ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಕೂಗುತ್ತಾ ಸಾಗಿದವರಲ್ಲಿ ಬದುಕಿರುವ ಜೀವಂತ ಉದಾಹರಣೆ ನಮ್ಮ ಕಣ್ಣೆದುರು ಇರುವ ಹೆಚ್ ಎಸ್ ದೊರೆಸ್ವಾಮಿ . ಈ ಇಳಿ ವಯಸ್ಸಿನಲ್ಲೂ ಕೂಡ ಆಳುವ ವರ್ಗ ತಪ್ಪು ಮಾಡಿದಾಗ ಪ್ರತಿಭಟನೆ/ಸತ್ಯಾಗ್ರಹ ಎಂಬ ಅಸ್ತ್ರವನ್ನು ಪ್ರಯೋಗ ಮಾಡುತ್ತಾರೆ. ಮಹಾತ್ಮ ಗಾಂಧಿ ಜೊತೆಗೂ ಒಡನಾಟ ಇಟ್ಟುಕೊಂಡಿದ್ದ ಹೆಚ್ ಎಸ್ ದೊರೆಸ್ವಾಮಿ ಅವರನ್ನು ಸರ್ಕಾರವೇ ಸ್ವಾತಂತ್ಯ ಹೋರಾಟಗಾರ ಎಂದು ಗುರುತಿಸಿದೆ. ಆದರೆ, ಬಿಜೆಪಿ ಸರ್ಕಾರದ ನಿಲುವುಗಳನ್ನು ಯಾರು ವಿರೋಧಿಸುತ್ತಾರೆ ಅಂತವರನ್ನು ಕೀಳಾಗಿ ಟೀಕಿಸುವ ಪರಿಪಾಠ ಬೆಳೆಯುತ್ತಿದೆ. ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯೂ ಕೀಳಾಗಿ ಮಾತನಾಡುವ ರೂಢಿ ಇತ್ತೀಚಿಗೆ ಬೆಳೆಸಿಕೊಂಡಂತೆ ಕಾಣುತ್ತಿದೆ.
ಪೌರತ್ವ ತಿದ್ದುಪಡಿ ಹೋರಾಟದಲ್ಲಿ ಭಾಗಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾನು ನನ್ನ ಜೀವಮಾನದಲ್ಲಿ ಸಾಕಷ್ಟು ಹೋರಾಟಗಳನ್ನು ನೋಡಿದ್ದೇನೆ. ಆದರೆ, ಈಗಿನ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಮಸ್ಯೆ ಉದ್ಭವಿಸಿದೆ. ಇಂದಿನ ಪರಿಸ್ಥಿತಿ 70 ವರ್ಷದ ಹಿಂದೆ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತಿದೆ ಎಂದಿದ್ದರು. ಮೋದಿ ಹಾಗು ಅವರ ಇಡೀ ಸರ್ಕಾರ ದೇಶದ ಸಮಸ್ಯೆಯನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಈ ಕ್ರಮ ಕೈಗೊಂಡಿದೆ. ದೇಶದಲ್ಲಿ ಎದುರಾಗಿರುವ ಆರ್ಥಿಕ ದುಸ್ಥಿತಿ, ನಿರುದ್ಯೋಗ ಸಮಸ್ಯೆ ಬಗೆಹರಿಸುವ ಕಡೆಗೆ ಗಮನ ಕೊಡಬೇಕು ಎಂದು ಆಗ್ರಹ ಮಾಡಿದ್ದರು. ಈ ಸರ್ಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡದೆ ನನಗೆ ಬೇರೆ ಆಯ್ಕೆ ಇಲ್ಲ ಎಂದಿದ್ದರು. ನನ್ನ ದೇಹದಲ್ಲಿ ಕೊನೆಯ ಉಸಿರು ಇರುವ ತನಕ ನಾನು ಹೋರಾಟ ಮಾಡುತ್ತಲೇ ಇರುತ್ತೇನೆ ಎಂದು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯ ಮಾತಗಳನ್ನಾಡಿದ್ದರು 101 ವರ್ಷದ ಹಿರಿಯ ಗಾಂಧಿವಾದಿ ಹೆಚ್ ಎಸ್ ದೊರೆಸ್ವಾಮಿ .
ಅವರ ಮಾತುಗಳಿಗೆ ಪ್ರತಿಯಾಗಿ, ಹೆಚ್ ಎಸ್ ದೊರೆಸ್ವಾಮಿ ಓರ್ವ ʼನಕಲಿʼ ಸ್ವಾತಂತ್ರ್ಯ ಹೋರಾಟಗಾರ, ʼಪಾಕಿಸ್ತಾನದ ಏಜೆಂಟ್ʼ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಕೂಡ ಹೋರಾಟ ಮಾಡಿದ್ದಾರೆ. ಆದರೆ ಸಿದ್ಧಾಂತ ಬೇರೆ ಬೇರೆ ಇದ್ದವು ಎಂದಿರುವ ಯತ್ನಾಳ್, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎನ್ನುತ್ತಾರೆ. ಇವರಿಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಇತ್ತೀಚಿಗೆ ದೇಶದಲ್ಲಿ ಜ್ವಾಲಾಮುಖಿಯಂತೆ ಆರ್ಭಟಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟವನ್ನು ಬೆಂಬಲಿಸಿ, ಹೋರಾಟದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾದ ನಿಲುವನ್ನು ವಿರೋಧಿಸಿದ್ದರು. ಈ ನಿರ್ಧಾರ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿತ್ತು. ಕೇಂದ್ರ ಸರ್ಕಾರ ಜಾರಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸದೆ ಇದ್ದರೆ, ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಆಗಿರುತ್ತಿದ್ದರು. ಆದರೆ ವಿರೋಧ ಮಾಡಿದ್ದಕ್ಕೆ ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಅನ್ನಿಸಿಕೊಳ್ಳುವಂತೆ ಆಗಿದೆ.
ಗಾಂಧಿವಾದ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದಿದ್ದ ಭ್ರಷ್ಟಾಚಾರಿ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹೆಚ್ ಎಸ್ ದೊರೆಸ್ವಾಮಿ ಅವರು ಬೆಂಗಳೂರು ಹಾಗು ಕರ್ನಾಟಕದ ಸಮಸ್ಯೆಗಳು ಬಂದಾಗಲೂ ಸಕ್ರಿಯವಾಗಿ ತಾವೇ ಮುಂದೆ ನಿಂತು ಪ್ರತಿಭಟಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರ ಜೊತೆಗೂಡಿ ಬಿಜೆಪಿ ನಾಯಕರೇ ಹೋರಾಟ ಮಾಡಿದ ನಿದರ್ಶನಗಳು ಇವೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಸಂಸ್ಥಾಪಕರಲ್ಲಿ ಒಬ್ಬರಾದ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ದೊರೆಸ್ವಾಮಿಯವರ ನೇತೃತ್ವದಲ್ಲಿ ಈ ಹಿಂದಿನ ಸರ್ಕಾರಗಳ ವಿರುದ್ಧ ಅಬ್ಬರಿಸಿದ್ರು. ರಾಜಕಾಲುವೆ ಒತ್ತುವರಿಯಲ್ಲಿ ನೆಲೆ ಕಳೆದುಕೊಂಡವರ ಸೂರಿಗಾಗಿ ನಡೆದ ಹೋರಾಟದಲ್ಲಿ ದೊರೆಸ್ವಾಮಿ ಅವರ ಜೊತೆಗೂಡಿದ್ದರು. ಸಂತ್ರಸ್ತರು ಕಾನೂನು ಹೋರಾಟ ನಡೆಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ನೆರವು ಕೊಡಲಿದೆ ಎಂದು ಘೋಷಣೆ ಮಾಡಿದ್ದರು
ಕರ್ನಾಟಕ ಮುನ್ಸಿಪಲ್ ಕಾರಪೊರೇಷನ್ ಆಕ್ಟ್ ( ಕೆಎಂಸಿ ಕಾಯಿದೆ ) ಮತ್ತು ವಾರ್ಡ್ ಸಮಿತಿಗಳ ಮೇಲೆ ಹೊಸದಾಗಿ ಜಾರಿಗೆ ತಂದಿದ್ದ ನಿಯಮ ವಿರೋಧಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಈ ಹೋರಾಟದಲ್ಲೂ ನಮ್ಮ ಬೆಂಗಳೂರು ಪ್ರತಿಷ್ಠಾನದ ಕಾರ್ಯಕರ್ತರು ಭಾಗಿಯಾಗಿದ್ದರು. ನೂತನ ನಿಯಮ ಜಾರಿ ಮಾಡುವಾಗ ಸಾರ್ವಜನಿಕರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಪಾಲಿಕೆ ಸದಸ್ಯರಿಗೆ ವಿಟೋ ಅಧಿಕಾರ ನೀಡಿ, ವಾರ್ಡ್ ಸಮಿತಿಗಳನ್ನು ವ್ಯರ್ಥ ಮಾಡಲಾಗಿದೆ. ಇದು ನಾಗರಿಕರಿಗೆ ಮಾಡಿದ ದ್ರೋಹ ಎಂದು ಆರೋಪಿಸಿದ್ದರು.
ಇದೇ ರೀತಿ ಮರಗಳ ಮಾರಣ ಹೋಮ ನಡೆಯುವಾಗ, ಸ್ಟೀಲ್ ಬ್ರಿಡ್ಜ್ ಪ್ರಸ್ತಾಪ ಬಂದಿದ್ದಾಗಲೂ ಹೆಚ್ ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟಗಳು ನಡೆದಿದ್ದವು. ಬೆಂಗಳೂರು ಪ್ರತಿಸ್ಠಾನ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ದೊರೆಸ್ವಾಮಿಯವರನ್ನು ಹೋರಾಟಕ್ಕೆ ಮುಂಚೂಣಿಯಲ್ಲಿ ನಿಲ್ಲಿಸಿದ್ದರು. ಆದರೆ ಇದೀಗ ತಮ್ಮದೇ ಸರ್ಕಾರ ಬಂದಾಗ ಹಿಯ್ಯಾಳಿಸುವುದು ರಾಜಕಾರಣಿಗಳಿಗೆ ಅಂಟಿದ ರೋಗ ಎನ್ನುವಂತಾಗಿದೆ. ಇಂದು ಮತ್ತೆ ಮಾಧ್ಯಮಗಳ ಜೊತೆ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ನಕಲಿ ಹೋರಾಟಗಾರ ಎಂದಿರುವ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಒಂದು ವೇಳೆ ಕಾಂಗ್ರೆಸ್‌ಗೆ ಖಂಡಿಸುವ ಮನಸ್ಸು ಇದ್ದರೆ, ನಾಳೆ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಅಭಿನಂದನಾ ಸಮಾರಂಭ ಬಹಿಷ್ಕರಿಸಿ ಸಿಎಂ ಯಡಿಯೂರಪ್ಪ ಮೇಲೆ ಕ್ರಮಕ್ಕೆ ಆಗ್ರಹಿಸಬೇಕು. ಅದನ್ನು ಬಿಟ್ಟು ಸಮಾಜದಲ್ಲಿ ಪೋಸ್ ಕೊಡುತ್ತ ಖಂಡಿಸುತ್ತೇವೆ ಎಂದರೆ ಪ್ರಯೋಜನ ಇಲ್ಲ ಎನಿಸುತ್ತದೆ.
101 ವರ್ಷದ ಹಿರಿಯ ಜೀವ ಹೋರಾಟ ಮಾಡಿ ಸಾಧಿಸುವುದು ಏನೂ ಇಲ್ಲ. ಆದರೆ ಈ ವಯಸ್ಸಿನಲ್ಲಿ ಹೋರಾಟಕ್ಕೆ ಸ್ಫೂರ್ತಿ ಚಿಲುಮೆಯಾಗುತ್ತಿರುವ ದೊರೆಸ್ವಾಮಿಯವರಿಗೆ ದೊರೆಸ್ವಾಮಿಯವರೇ ಸಾಟಿ. ಹೋರಾಟದ ತೆವಲಿಗೆ ದೊರೆಸ್ವಾಮಿಯವರನ್ನು ಬಳಸಿಕೊಳ್ಳುತ್ತಿದ್ದ ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಯತ್ನಾಳ್ ಮಾತನ್ನು ಖಂಡಿಸುವ ಜೊತೆಗೆ ಹೈಕಮಾಂಡ್ ಗಮನ ಸೆಳೆಯುವ ಮೂಲಕ ದೊರೆಸ್ವಾಮಿ ಅವರನ್ನು ಬಳಸಿ ಬಿಸಾಡುವ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕಿದೆ.