ಭಾರೀ ಕುತೂಹಲ ಮೂಡಿಸಿದ್ದ ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆ ಫಲಿತಾಂಶ ಆಡಳಿತರೂಢ ಬಿಜೆಪಿ ಪರವಾಗಿ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಿದ್ದಾರೆ.
Also Read: ಶಿರಾ: ಕೆ ಆರ್ ಪೇಟೆಯಂತೆ ಮತ್ತೆ ಅನಿರೀಕ್ಷಿತ ಗೆಲುವು ಸಾಧಿಸುವ ಹಂಬಲದಲ್ಲಿ ವಿಜಯೇಂದ್ರ
ಬಿಜೆಪಿ ಗೆಲುವಿನೊಂದಿಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರನ್ನು ಹೊತ್ತು ಸಂಭ್ರಮಾಚರಣೆ ನಡೆಸಿದ್ದಾರೆ. ಎರಡೂ ಕ್ಷೇತ್ರಗಳ ಗೆಲುವಿನಲ್ಲಿ ವಿಜಯೇಂದ್ರ ಅವರು ಮಹತ್ವದ ಪಾತ್ರ ವಹಿಸಿದ್ದಾರೆಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿದೆ.
ಈ ಹಿಂದೆ ಕೆ ಆರ್ ಪೇಟೆ ಉಪಚುನಾವಣೆಯಲ್ಲೂ ವಿಜಯೇಂದ್ರ ಪಕ್ಷವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದೊಳಗೆ ವಿಜಯೇಂದ್ರ ಅವರಿಗೆ ಅಭಿಮಾನಿಗಳ ಬಳಗ ಹೆಚ್ಚುತ್ತಿದೆ ಎನ್ನಲಾಗಿದ್ದು, ಇಂದಿನ ಸಂಭ್ರಮಾಚರಣೆಯಲ್ಲಿ ಅದರ ಝಲಕ್ ಕಂಡುಬಂದಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಜಾಲತಾಣದ ಮೂಲಕ ಗೆಲುವಿನ ಸಂಭ್ರಮ ಹಂಚಿಕೊಂಡ ಬಿ ವೈ ವಿಜಯೇಂದ್ರ, ʼಭಾರತೀಯ ಜನತಾ ಪಾರ್ಟಿಯ ಮೇಲೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮೇಲೆ ದೃಢವಿಶ್ವಾಸದ ಜನಾದೇಶ ನೀಡಿದ ಶಿರಾ ಮತ್ತು ರಾಜರಾಜೇಶ್ವರಿನಗರದ ಸಮಸ್ತ ಮತದಾರ ಬಂಧುಗಳಿಗೆ ಆದರ ಪೂರ್ವಕ ಕೃತಜ್ಞತೆಗಳು. ಜನಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಮೂಲಕ ನಿಮ್ಮ ವಿಶ್ವಾಸವನ್ನು ಪಕ್ಷ ಉಳಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ʼಶಿರಾ ಉಪಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿರುವ ಶಿರಾದ ಮಹಾಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಐತಿಹಾಸಿಕ ಗೆಲುವಿಗೆ ಕಾರಣಕರ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ನಮ್ಮ ಎಲ್ಲ ನಾಯಕರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಶಿರಾ ಗೆಲುವು ಪಕ್ಷದ ಗೆಲುವು, ಅಭಿವೃದ್ಧಿ ಮತ್ತು ಪರಿವರ್ತನೆಗಾಗಿ ಮತದಾರ ನೀಡಿರುವ ಜನಾದೇಶ. ಇಂದು ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ಕ್ಷೇತ್ರಕ್ಕೆ ತೆರಳಿದಾಗ ನಮ್ಮ ಕಾರ್ಯಕರ್ತರು, ಸಾರ್ವಜನಿಕರು ತೋರಿದ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿ. ಇನ್ನು ನಮ್ಮ ಶಾಸಕ ಡಾ ರಾಜೇಶ್ ಗೌಡರೊಂದಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದಿದ್ದಾರೆ.