ರಾಜ್ಯ ಬಿಜೆಪಿಯಲ್ಲಿ ಮೊದಲ ಬಾರಿಗೆ ಬಂಡಾಯ ಭುಗಿಲೇಳುವ ಎಲ್ಲಾ ಲಕ್ಷಗಳು ಕಂಡು ಬರುತ್ತಿದೆ. ಮೊದಲ ದಿನದ ಅಧಿವೇಶ ಮುಗಿಸಿ ಕತ್ತಲು ಆಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಜೋರಾಗಿದೆ. ರಾತ್ರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಅತೃಪ್ತ ಮನಸ್ಸುಗಳು ಒಟ್ಟಿಗೆ ಸೇರಿ ಭೋಜನದ ನೆಪದಲ್ಲಿ ಭಿನ್ನರ ಸಭೆ ನಡೆದಿದೆ. ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನರಚನೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಮಾತುಗಳು ಶುರುವಾಗಿದ್ದು, ಕೆಲವು ಹಿರಿಯರನ್ನು ಕೈಬಿಟ್ಟು ಉಳಿದವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ 20ಕ್ಕೂ ಹೆಚ್ಚು ಶಾಸಕರು ಶೆಟ್ಟರ್ ನಿವಾಸದಲ್ಲಿ ಸಭೆ ಸೇರಿ ಸಂಪುಟ ಸೇರಲು ಅನುಸರಿಸಬೇಕಾದ ಒತ್ತಡ ತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಸಂಪುಟದಲ್ಲಿ ಪ್ರಾಂತ್ಯ, ವಿಭಾಗ, ಜಾತಿ ಜೊತೆಗೆ ಹಿರಿತನಕ್ಕೂ ಮನ್ನಣೆ ನೀಡಬೇಕೆಂಬುದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಒತ್ತಡ ತರಲು ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದರೂ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ, ಶಿವನಗೌಡ ನಾಯಕ, ರಾಜೂಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಎ.ಎಸ್ ಪಾಟೀಲ ನಡಹಳ್ಳಿ, ರುದ್ರಪ್ಪ ಲಮಾಣಿ, ಉಮೇಶ ಕತ್ತಿ, ಸಿ.ಪಿ ಯೋಗೇಶ್ವರ್, ಮುರುಗೇಶ್ ನಿರಾಣಿ ಸೇರಿ ಇತರೆ ನಾಯಕರೂ ಅತೃಪ್ತರ ಸಭೆಯಲ್ಲಿ ಭಾಗಿಯಾಗಿದ್ದರು. ಕ್ರೆಸೆಂಟ್ ರಸ್ತೆಯಲ್ಲಿರೋ ಜಗದೀಶ್ ಶೆಟ್ಟರ್ ಅವರ ಸರ್ಕಾರಿ ನಿವಾಸದಲ್ಲಿ ಇವರೆಲ್ಲಾ ಭೋಜನ ನೆಪದಲ್ಲಿ ಸೇರಿದ್ದು ಸಂಪುಟ ಸೇರುವ ಕಸರತ್ತಿಗಾಗಿ ಎನ್ನುವುದು ಗೊತ್ತಿರೋ ಸಂಗತಿ. ಆದರೆ ಇವರನ್ನೆಲ್ಲಾ ಒಟ್ಟಿಗೆ ಸೇರಿಸುವ ಮೂಲಕ ಶಕ್ತಿಪ್ರದರ್ಶನ ನಡೆಸಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.
ಬಿಜೆಪಿಯಲ್ಲಿನ ಭಿನ್ನಮತಿಯರಿಗೆ ಹೊಸ ನಾಯಕನಾಗಿ ಜಗದೀಶ್ ಶೆಟ್ಟರ್ ತನ್ನ ಪಟ್ಟ ಉಳಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ. ಶೆಟ್ಟರ್, ಮುಖ್ಯಮಂತ್ರಿ ಆಗಿದ್ದವರು, ಈ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಶೆಟ್ಟರ್ ಅವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡುವ ಇಂಗಿತ ವ್ಯಕ್ತವಾಗುತ್ತಿದೆ. ಇದನ್ನು ತಪ್ಪಿಸಲು ಶೆಟ್ಟರ್ ಶಕ್ತಿ ಪ್ರದರ್ಶನದ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಜೊತೆಗೆ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳುವ ಕಸರತ್ತು ಒಂದು ಕಡೆಯಾದ್ರೆ, ಸಭೆಯ ಇನ್ನೊಂದು ಪ್ರಮುಖ ವಿಚಾರ ಎಂದರೆ ವಿಜಯೇಂದ್ರ. ಸರ್ಕಾರದಲ್ಲಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ರೀತಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ವಿಜಯೇಂದ್ರ ಹಸ್ತಕ್ಷೇಪ ಜೋರಾಗಿದೆ ಎನ್ನುವ ಅಸಮಾಧಾನ ಸಭೆಯಲ್ಲಿ ಹೊರ ಬಂದಿದೆ. ಪಕ್ಷದಲ್ಲಿ ನಾವು ಎಷ್ಟೇ ಹಿರಿಯರಾಗಿದ್ದರೂ ವಿಜಯೇಂದ್ರ ಒಪ್ಪಿಗೆಗೆ ಕಾಯುವಂತಾಗಿದೆ.
ಸಚಿವರು, ಶಾಸಕರ ಕೆಲಸ ಕಾರ್ಯಗಳಲ್ಲೂ ವಿಜಯೇಂದ್ರ ದರ್ಬಾರ್ ಜೋರಾಗಿದೆ. ಈಗಲೇ ವಿಜಯೇಂದ್ರ ಅವರನ್ನು ನಿಯಂತ್ರಣ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತೆ ಎಂದು ಕೆಲವು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಬಂಡಾಯದ ಸಭೆ ಬಗ್ಗೆ ಬಿಜೆಪಿ ಶಾಸಕರು, ನಾಯಕರು ಗುಟ್ಟಯ ಬಿಟ್ಟುಕೊಟ್ಟಿಲ್ಲ. ನಾವು ಸಭೆ ಸೇರಿಲ್ಲ. ಬಹಳ ದಿನಗಳ ಬಳಿಕ ಬೆಂಗಳೂರಲ್ಲಿ ಸೇರಿದ್ದೇವೆ. ಹಾಗಾಗಿ ಒಂದೆಡೆ ಊಟಕ್ಕೆ ಸೇರಿದ್ದೇವೆ ಅಷ್ಟೆ ಅನ್ನೋ ಮಾಹಿತಿ ನೀಡಿದ್ದಾರೆ. ಆದರೆ ಅತೃಪ್ತರು ಮಾತ್ರ ಭೋಜನ ನೆಪದಲ್ಲಿ ಸಭೆ ಸೇರಿದ್ದು ಮಾತ್ರ ಸ್ಪಷ್ಟವಾಗಿದೆ.
ಅಧಿಖಾರ ಇಲ್ಲದಿದ್ದಾಗ, ಅಧಿಕಾರಕ್ಕೆ ಬರಲು ಆಪರೇಷನ್ ಕಮಲ ಮಾಡಲಾಯ್ತು. ಅಭಿವೃದ್ಧಿ ಮಾಡಲು ನಾವು ಅಧಿಕಾರಕ್ಕೆ ಬರಲೇಬೇಕು ಎಂದು ಹಠ ಹಿಡಿದ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೀಗ ಅಧಿಕಾರಕ್ಕೆ ಏರಿರುವ ಸಿಎಂ ಯಡಿಯೂರಪ್ಪ, ತನ್ನೆಲ್ಲಾ ಕೆಲಸಗಳ ಮೇಲುಸ್ತುವಾರಿಯನ್ನು ವಿಜಯೇಂದ್ರ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇತ್ತೀಚಿಗೆ ದೆಹಲಿಗೆ ತೆರಳಿದ್ದ ವಿಜಯೇಂದ್ರ ಬಜೆಟ್ ಅಧಿವೇಶನ ಮುಗಿದ ಮೇಲೆ ಸಚಿವ ಸಂಪುಟ ಪುನಾರಚನೆ ಮಾಡುವ ಬಗ್ಗೆ ಹೈಕಮಾಮಡ್ ನಾಯಕರ ಜೊತೆ ಚರ್ಚಿಸಿಕೊಂಡು ಬಂದಿದ್ದರು.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ವಿಜಯೇಂದ್ರ, ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಲಾಗುವುದು ಎನ್ನುವ ಮುನ್ಸೂಚನೆಯನ್ನೂ ಕೊಟ್ಟಿದ್ದರು. ವಿಜಯೇಂದ್ರ ಪಕ್ಷದ ಮೇಲೆ ಹಾಗು ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎನ್ನುವ ಅಸಮಾಧಾನ ಭುಗಿಲೆದ್ದಿದೆ. ಮಿಡ್ನೈಟ್ ಅತೃಪ್ತರ ಸಭೆ ಕೂಡ ನಡೆದಿದೆ. ಸೂಪರ್ ಸಿಎಂ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದೆ. ಮುಂದೆ ಯಾವ ಸ್ವರೂಪ ಪಡೆಯುತ್ತೆ ಕಾದು ನೋಡ್ಬೇಕು.