ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ ಒಂದು ಅಲಿಖಿತ ನಿಯಮವಿದೆ. ಅದೆಂದರೆ, ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ಅದು ಇಷ್ಟವಿರಲಿ, ಇಲ್ಲದಿರಲಿ ಒಪ್ಪಲೇಬೇಕು. ಇದನ್ನು ಮೀರಿ ಹೇಳಿಕೆಗಳನ್ನು ನೀಡಿದರೆ ಅಥವಾ ವರ್ತಿಸಿದರೆ ಅಂತಹ ನಾಯಕನನ್ನು ಮೂಲೆಗೆ ಕೂರಿಸಲಾಗುತ್ತದೆ ಅಥವಾ ಪಕ್ಷದಿಂದಲೇ ಹೊರ ದಬ್ಬಲಾಗುತ್ತದೆ. ಇದಕ್ಕೆ ಹಲವಾರು ನಿದರ್ಶನಗಳಿವೆ.
ಆದರೂ, ಪಕ್ಷದ ನಿರ್ಣಯಗಳಿಗೆ ಅಲ್ಲಲ್ಲಿ ಒಂದಿಬ್ಬರು ಧ್ವನಿ ಎತ್ತುತ್ತಲೇ ಪಕ್ಷ ನೀಡುವ ಯಾವುದೇ ಶಿಕ್ಷೆಯನ್ನು ಎದುರಿಸುವವರೂ ಪಕ್ಷದಲ್ಲಿದ್ದಾರೆ. ದೇಶಾದ್ಯಂತ ವಿವಾದ ಸೃಷ್ಟಿಸಿರುವ ಸಿಎಎ, ಎನ್ಆರ್ ಸಿಯಂತಹ ನೀತಿಗಳನ್ನು ಪಕ್ಷದಲ್ಲಿ ಏಕಧ್ವನಿಯಾಗಿ ಎಲ್ಲರೂ ಸ್ವೀಕರಿಸುತ್ತಿದ್ದಾರೆ. ಈ ಬಗ್ಗೆ ಪರವಾದ ಪ್ರತಿಕ್ರಿಯೆಗಳನ್ನೂ ನೀಡುತ್ತಿದ್ದಾರೆ. ಆದರೆ, ಈ ಕಾಯ್ದೆಗಳನ್ನು ಆಳವಾಗಿ ಅಧ್ಯಯನ ಮಾಡಿಕೊಂಡಿರುವ ಕೆಲವರು ತಮ್ಮ ಪಕ್ಷ ಇದೇಕೆ ಹೀಗೆ ಅಲ್ಪಸಂಖ್ಯಾತ ವಿರೋಧಿ ನೀತಿ ಅದರಲ್ಲಿಯೂ ಮುಸಲ್ಮಾನರ ವಿರೋಧಿ ನೀತಿಯನ್ನು ತೆಗೆದುಕೊಂಡಿದೆ ಎಂಬ ಪ್ರಶ್ನೆಯನ್ನು ತಮ್ಮೊಳಗೇ ಹಾಕಿಕೊಂಡು ಅದರ ನಂಜನ್ನು ನುಂಗಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ಇದು ಸರಿಯಿಲ್ಲ ಎಂದು ಪಕ್ಷದ ಸಂಘಟನೆಯೊಳಗೆ ಒಂದು ಸಣ್ಣ ಧ್ವನಿಯಲ್ಲಿ ಹೇಳಿ ಸುಮ್ಮನಾಗುತ್ತಿದ್ದಾರೆ. ಆದರೆ, ಇದರ ವಿರುದ್ಧ ಧೈರ್ಯವಾಗಿ ಮಾತನಾಡುವ ದಾರ್ಷ್ಯವನ್ನು ಯಾರೂ ತೋರಿಸುತ್ತಿಲ್ಲ. ಒಂದು ವೇಳೆ ದಾರ್ಷ್ಯ ತೋರಿದರೆ ತಮಗೆ ಪಕ್ಷದ ನಾಯಕರು ಇನ್ನಿಲ್ಲದಂತೆ ಕಾಡಿ ರಾಜಕೀಯ ಭವಿಷ್ಯವನ್ನೇ ಹಾಳು ಮಾಡುತ್ತಾರೆ ಎಂದು ಮೌನಕ್ಕೆ ಶರಣಾದವರೂ ಇದ್ದಾರೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಈ ವಿವಾದಿತ ಸಿಎಎ, ಎನ್ಆರ್ ಸಿ ವಿರುದ್ಧ ಧ್ವನಿ ಎತ್ತುವಂತಹ `ರಾಜಾಹುಲಿ’ಯೊಂದು ಮಧ್ಯಪ್ರದೇಶದಲ್ಲಿ ಹುಟ್ಟಿಕೊಂಡಿದೆ.
ಈ ಕಾಯ್ದೆ ವಿರುದ್ಧ ದೇಶಾದ್ಯಂತ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವುದೇ ಕಾರಣಕ್ಕೂ ಸಿಎಎ ಕೈಬಿಡುವುದಿಲ್ಲ ಎಂದು ಹೇಳಿದೆ. ಅಲ್ಲದೇ, ಇದರಿಂದ ಭಾರತದ ವಾಸಿಗಳಾಗಿರುವ ಮುಸ್ಲಿಂರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾ ಬಂದಿದೆ. ಆದರೆ, ಮಧ್ಯಪ್ರದೇಶ ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಪಕ್ಷದ ವಿರುದ್ಧ ನಿಂತಿದ್ದು, ಈ ನೀತಿ ದೇಶಾದ್ಯಂತ ಪ್ರತಿಯೊಂದು ಬೀದಿಯಲ್ಲಿಯೂ ನಾಗರಿಕ ಯುದ್ಧಕ್ಕೆ ಕಾರಣವಾಗಿದೆ ಎಂದು ಹೇಳುವ ಮೂಲಕ ಬಿಜೆಪಿಗರ ಕಣ್ಣನ್ನು ಕೆಂಪಾಗುವಂತೆ ಮಾಡಿದ್ದಾರೆ.
ಈ ಸಿಎಎಯಿಂದ ದೇಶಕ್ಕೆ ಪ್ರಯೋಜನವೇನೂ ಇಲ್ಲ. ಇದು ಕೇವಲ ಕೇಸರಿ ಪಕ್ಷದ ವೋಟ್ ಬ್ಯಾಂಕ್ ಅನ್ನು ಕ್ರೋಢೀಕರಿಸಲು ಮಾತ್ರ ಪ್ರಯೋಜನಕಾರಿಯಾಗಲಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
ಈ ಹೇಳಿಕೆಯೊಂದನ್ನು ಮಾತ್ರ ಹೇಳಿ ಸುಮ್ಮನಾಗಿದ್ದಾರೆ ಬಿಜೆಪಿಗರು ಸುಮ್ಮನಿರುತ್ತಿದ್ದರೇನೋ? ಆದರೆ, ಇನ್ನೂ ಮುಂದುವರಿದು ತ್ರಿಪಾಠಿ ಪಕ್ಷ ಮತ್ತು ಪಕ್ಷದ ನಾಯಕತ್ವಕ್ಕೇ ಪಾಠ ಮಾಡಿದ್ದಾರೆ. ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಅನುಸರಿಸಬೇಕು ಅಥವಾ ಆ ಸಂವಿಧಾನವನ್ನು ಹರಿದು ಬಿಸಾಕಬೇಕು ಎಂದು ಹೇಳುವ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸಿದರೆ ದೇಶವನ್ನು ಧಾರ್ಮಿಕವಾಗಿ ವಿಭಜಿಸಲು ಸಾಧ್ಯವಿಲ್ಲ ಎಂಬುದನ್ನು ಹೇಳಿದ್ದಾರೆ.
ದೇಶದ ಪ್ರತಿಯೊಂದು ಹಾದಿ ಬೀದಿಯಲ್ಲೂ ನಾಗರಿಕ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಮ್ಮ ದೇಶಕ್ಕೆ ಮಾರಕವಾಗಿದೆ. ನಾವು ಇಂತಹ ನಾಗರಿಕ-ಯುದ್ಧದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈ ಪರಿಸ್ಥಿತಿ ಏಕೆ ಬಂದಿತು ಎಂಬುದನ್ನು ಅರಿತ ಮೇಲೆ ನಾನು ಈ ಸಿಎಎಯನ್ನು ವಿರೋಧಿಸುತ್ತಿದ್ದೇನೆ. ಈ ನಾಗರಿಕ ಯುದ್ಧವೆಂಬುದು ಕೇವಲ ನನ್ನ ಕ್ಷೇತ್ರ ಮೈಹಾರ್ ನಲ್ಲಿ ಮಾತ್ರವಿಲ್ಲ, ಇಡೀ ದೇಶದಲ್ಲಿದೆ ಎಂದಿದ್ದಾರೆ.
ಹೀಗೆ ಈ ವಿವಾದಿತ ಸಿಎಎ ಹೇಗೆಲ್ಲಾ ಮಾರಕವಾಗುತ್ತದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ತ್ರಿಪಾಠಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ನಾವು ಸಂವಿಧಾನಕ್ಕೆ ಬದ್ಧರಾಗಿ ದೇಶದ ಆಡಳಿತವನ್ನು ನಡೆಸಬೇಕು ಅಥವಾ ಬಿಜೆಪಿ ತನ್ನದೇ ಆದ ಸಂವಿಧಾನದ ಪ್ರಕಾರ ಆಡಳಿತ ನಡೆಸಬೇಕು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನವನ್ನು ಹರಿದು ಬಿಸಾಡಬೇಕು ಎಂದು ತ್ರಿಪಾಠಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಎಲ್ಲಾ ಧರ್ಮೀಯರು ನಾವೆಲ್ಲಾ ಒಟ್ಟಾಗಿ ಜೀವಿಸುತ್ತೇವೆ ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ ದೇಶವನ್ನು ವಿಭಜನೆ ಮಾಡಲು ಹೊರಟಿರುವುದು ಸರಿಯಲ್ಲ. ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಲು ಕೈ ಹಾಕಬಾರದು ಎಂದಿದ್ದಾರೆ.
ನಾನು ಸಿಎಎಯನ್ನು ವಿರೋಧಿಸುತ್ತಿದ್ದೇನೆಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದರ್ಥವಲ್ಲ ಅಥವಾ ಬಿಜೆಪಿಯನ್ನು ಬಿಡುತ್ತೇನೆ ಎಂದೂ ಅರ್ಥವಲ್ಲ. ಈ ಸಿಎಎಯನ್ನು ಮತಬ್ಯಾಂಕಿಗಾಗಿ ತರುತ್ತಿರುವುದು ಎಂಬುದಂತೂ ಸ್ಪಷ್ಟವಾಗುತ್ತಿದೆ. ಇದರಿಂದ ಬಿಜೆಪಿಗೆ ಲಾಭವಾಗುತ್ತದೆಯೇ ಹೊರತು ದೇಶಕ್ಕೇನೂ ಪ್ರಯೋಜನವಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನ್ನ ಭಾವನೆಗಳು ಮತ್ತು ಅನುಭವದ ಆಧಾರದ ಮೇಲೆ ಈ ಹೇಳಿಕೆಯನ್ನು ನೀಡುತ್ತಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ನಾಗರಿಕರ ನೋಂದಣಿ ಮಾಡಿಸುವಂತಹ ಯಾವುದೇ ಪ್ರಕ್ರಿಯೆಯನ್ನು ನಾನು ಬೆಂಬಲಿಸುವುದಿಲ್ಲ. ಈ ಎನ್ಆರ್ ಸಿಯನ್ನು ಜಾರಿಗೆ ತಂದರೆ ನನ್ನ ಕ್ಷೇತ್ರದ ಗ್ರಾಮಗಳಷ್ಟೇ ಅಲ್ಲ, ಇಡೀ ದೇಶದ ಗ್ರಾಮಗಳ ಜನತೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಹಳ್ಳಿಯ ಜನರು ಒಂದು ರೇಷನ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಪೌರತ್ವ ಸಾಬೀತುಪಡಿಸುವಂತಹ ದಾಖಲೆಗಳನ್ನು ಹೊಂದಿಸಿಕೊಳ್ಳುವುದಾದರೂ ಹೇಗೆ? ಪೌರತ್ವವನ್ನು ಸಾಬೀತುಪಡಿಸುವುದಾದರೂ ಹೇಗೆ ಎಂದು ತ್ರಿಪಾಠಿ ತಮ್ಮ ಪಕ್ಷಕ್ಕೆ ಪ್ರಶ್ನೆಯ ಗೂಗ್ಲಿ ಎಸೆದಿದ್ದಾರೆ.
ತ್ರಿಪಾಠಿ ಬಿಜೆಪಿ ಪಾಲಿಗೆ ಹಲವು ಬಾರಿ ವಿಲನ್ ಆಗಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕ್ರಿಮಿನಲ್ ಲಾ ಅಮೆಂಡ್ ಮೆಂಟ್ ಬಿಲ್ ಅನ್ನು ಮಂಡನೆ ಮಾಡಿದಾಗ ಪಕ್ಷದ ಆದೇಶವನ್ನು ಧಿಕ್ಕರಿಸಿ ಸರ್ಕಾರದ ಪರವಾಗಿ ಮತಹಾಕಿದ್ದರು. ಇವರಿಗೆ ಮತ್ತೋರ್ವ ಬಿಜೆಪಿ ಶಾಸಕ ಶರದ್ ಕೋಲ್ ಬೆಂಬಲ ನೀಡಿ ಮತ ಚಲಾಯಿಸಿದ್ದರು.
ತ್ರಿಪಾಠಿ ರೀತಿಯಲ್ಲಿ ಸಿಎಎ ವಿರುದ್ಧ ಹೇಳಿಕೆ ನೀಡಿದವರ ಬಿಜೆಪಿಗರ ಸಂಖ್ಯೆ ಅತ್ಯಂತ ವಿರಳವಾಗಿದ್ದರೂ ಅವರು ಜನಸಾಮಾನ್ಯರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಪಕ್ಷದ ನಿರ್ಧಾರದ ವಿರುದ್ಧ ಅದರಲ್ಲೂ ಬಿಜೆಪಿ ವಿರುದ್ಧ ಮಾತನಾಡುವ ಮೂಲಕ ತಮಗೆ ಮತ ಹಾಕಿದ ಜನರಿಗೆ ಮತ್ತಷ್ಟು ಹತ್ತಿರವಾಗುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಿಎಎ ವಿರುದ್ಧ ತ್ರಿಪಾಠಿ ಮಾತ್ರವಲ್ಲದೇ, ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಚಂದ್ರ ಬೋಸ್ ಸಹ ಧ್ವನಿ ಎತ್ತಿದ್ದು, ಈ ಸಿಎಎನಲ್ಲಿ ಮುಸ್ಲಿಂ ವಲಸಿಗರನ್ನೂ ಸೇರಿಸಬೇಕು. ನಮಗೆ ಬಹುಮತ ಇದೆ ಎಂಬ ಕಾರಣಕ್ಕೆ ರಾಜಕಾರಣದ ಉಗ್ರವಾದವನ್ನು ಮಾಡಬಾರದು ಎಂದು ಹೇಳಿದ್ದರು.
ಏನೇ ಆಗಲಿ, ಮುಸ್ಲಿಂರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಕಾಣುವ ವಿವಾದಿತ ಸಿಎಎ ಮತ್ತು ಎನ್ಆರ್ ಸಿಗಳನ್ನು ತರಲು ಹೊರಟಿರುವ ಬಿಜೆಪಿಗೆ ಬಿಜೆಪಿಯಲ್ಲೇ ಧ್ವನಿ ಎತ್ತುವಂತಹವರು ಹುಟ್ಟಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಜನವಿರೋಧಿ ನೀತಿಗಳನ್ನು ತರುತ್ತಿರುವ ಬಿಜೆಪಿಯಲ್ಲಿಯೇ ಕನಿಷ್ಠಪಕ್ಷ ಜನಹಿತಕ್ಕಾಗಿ ನಿಲ್ಲುವ ಇಂತಹ ರಾಜಾಹುಲಿಗಳು ಇರುವುದು ಒಳ್ಳೆಯ ಬೆಳವಣಿಗೆಯಾಗಿದೆ ಮತ್ತು ಈ ರಾಜಾಹುಲಿಗಳು ಜನವಿರೋಧಿ ನೀತಿಗಳ ವಿರುದ್ಧ ಘರ್ಜಿಸುತ್ತಾ ಇದ್ದರೆ ಜನತೆಗೊಂದಿಷ್ಟು ನೆಮ್ಮದಿಯ ವಾತಾವರಣ ಸಿಗುವಂತಾಗುತ್ತದೆ.