ದೇಶದಲ್ಲಿ ಜಾತಿ-ಧರ್ಮದ ಸಂಕೋಲೆಗಳಿಂದ ಜನರಿಗೆ ಮುಕ್ತಿ ದೊರಕಿಸಬೇಕು ಎಂದು ಹೋರಾಟ ನಡೆಸಿದವರು ಬಸವಣ್ಣ. ಪ್ರಸ್ತುತ ಕಾಲಘಟ್ಟದಲ್ಲಿ ಬಸವಣ್ಣನ ತತ್ವ ಮತ್ತು ಸಿದ್ದಾಂತಗಳ ಕುರಿತು ಎಳ್ಳಷ್ಟೂ ಪರಿಚಯವಿಲ್ಲದವರು, ಅವರ ಹೆಸರಿನಲ್ಲಿ ಓಟು ಗಿಟ್ಟಿಸಿಕೊಂಡು ವಿಧಾನಸೌಧದ ಮೆಟ್ಟಿಲು ಹತ್ತಲು ಹಾತೊರೆಯುತ್ತಾರೆ.
ಅದರಲ್ಲೂ ಜಾತಿ ಪದ್ದತಿ, ಸನಾತನ ಚಿಂತನೆ ಮತ್ತು ಪರಂಪರೆಯ ವಿರುದ್ದಸಿಡಿದೆದ್ದಿದ್ದ ಬಸವಣ್ಣ ಅವರನ್ನು ಮತ್ತೆ ಅದೇ ವ್ಯೂಹಕ್ಕೆ ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂಬುದು ಮಾಜಿ ಐಪಿಎಸ್ ಅಧಿಕಾರಿ ಎಸ್ ಎಂ ಜಾಮದಾರ್ ಅವರ ಅಭಿಪ್ರಾಯ. ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರದಂದು ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರ ಹಿಂದಿನ ಷಡ್ಯಂತ್ರ ಮತ್ತು ಈ ಕುರಿತಾಗಿ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ನೀಡಿರುವ ಜಾಹಿರಾತಿನ ಕುರಿತು ಪ್ರತಿಧ್ವನಿಯೊಂದಿಗೆ ಎಸ್ ಎಂ ಜಾಮದಾರ್ ಅವರು ಹಂಚಿಕೊಂಡಿರುವ ಮಾತುಗಳ ಆಯ್ದ ಭಾಗ ಇಲ್ಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇವತ್ತಿನ ಅನುಭವ ಮಂಟಪ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದ ಜಾಹಿರಾತಿನಲ್ಲಿ ಮೊದಲ ವಾಕ್ಯದಲ್ಲಿಯೇ ʼಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿʼ ಎಂಬ ವಾಕ್ಯವನ್ನು ಬಳಸಲಾಗಿದೆ. ಇದು ಖುದ್ದು ಬಸವಣ್ಣನವರ ತತ್ವ, ಸಿದ್ದಾಂತಗಳಿಗೆ ವಿರುದ್ದವಾದದ್ದು. ಬಸವಣ್ಣನವರ ಹೋರಾಟ ಸನಾತನ ಧರ್ಮ, ಸಂಪ್ರದಾಯದ ವಿರುದ್ದವಾಗಿತ್ತು. ಹೀಗಿರುವಾಗ, ಸನಾತನ ಚಿಂತನೆಯ ಮರುಸೃಷ್ಟಿ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
“ಇದು ದ್ವಂದ್ವ ಅರ್ಥವನ್ನು ಕೊಡುತ್ತದೆ. ಇದು ಸಂಘಪರಿವಾರದ ಪ್ರೊಪಗಾಂಡವನ್ನು ಪ್ರಚುರಪಡಿಸುವ ಹುನ್ನಾರ. ಬಸವಣ್ಣನ ಮರುಸೃಷ್ಟಿ ಮಾಡಿದರೆ, ಅದು ಸನಾತನ ಪರಂಪರೆಗೆ ವಿರುದ್ದವಾಗುತ್ತದೆ. ಸನಾತನ ಪರಂಪರೆ ಚಿಂತನೆಗಳು ಮುಂದುವರೆದರೆ ಅದು ಬಸವಣ್ಣನಿಗೆ ವಿರುದ್ದವಾಗುತ್ತದೆ. ಇವೆರಡರಲ್ಲಿ ಯಾವುದು ಸತ್ಯ? ಅವರ ಸಿದ್ದಾಂತಗಳಿಗೆ ವಿರುದ್ದವಾಗಿರುವ ಅನುಭವ ಮಂಟಪವನ್ನು ನಿರ್ಮಿಸಿ ಬಿಜೆಪಿ ಸರ್ಕಾರ ಸಾಧೀಸುವುದಾದರೂ ಏನು?” ಎಂದಿದ್ದಾರೆ.
ಬಸವಣ್ಣನನ್ನು ಹಿಂದುವಾಗಿ ಬಿಂಬಿಸುವ ಅವರನ್ನು ಆರ್ಎಸ್ಎಸ್ಗೆ ಸೆಳೆಯುವ ಹುನ್ನಾರವಿದು. ಬಸವಣ್ಣನ ಮುಖಾಂತರ ಬಸವಣ್ಣನ ವಿರುದ್ದವಾದ ಪ್ರೊಪಗಾಂಡವನ್ನು ಪ್ರಚಾರ ಮಾಡುತ್ತಿದ್ದಾರೆ, ಎಂದು ಅವರು ಆರೋಪಿಸಿದ್ದಾರೆ.
ಇನ್ನು ಅನುಭವ ಮಂಟಪಕ್ಕೆ ಅಡಿಗಲ್ಲು ಹಾಕಲು ಸರ್ಕಾರ ಇಷ್ಟು ಅವಸರ ಏಕೆ ಮಾಡಿತು? ಎಂಬ ಪ್ರಶ್ನೆಯನ್ನು ಎತ್ತಿರುವ ಜಾಮದಾರ್ ಅವರು, ಅನುಭವ ಮಂಟಪ ನಿರ್ಮಾಣಕ್ಕೆ ಅಂದಾಜು ಆಯವ್ಯಯದ ಅಂದಾಜು ಇಲ್ಲ, ಇನ್ನೂ ಟೆಂಡರ್ ಇಲ್ಲ ಮತ್ತು ಕಾಮಗಾರಿಗಳಿಗೆ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಇದ್ಯಾವುದೂ ಇಲ್ಲದೇ, ಶಂಕು ಸ್ಥಾಪನೆ ಕಾರ್ಯಕ್ರಮ ನಡೆಸುವ ಅವಸರವೇನಿತ್ತು? ಎಂದು ಹೇಳಿದ್ದಾರೆ.
ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವವಿರುವ ಜಾಮದಾರ್ ಅವರು ಅನುಭವ ಮಂಟಪ ನಿರ್ಮಾಣ ಮಾಡುವ ಕಾರ್ಯದ ಪ್ರಗತಿಯ ಕುರಿತು ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮದ ಟೆಂಡರ್ ಪಾಸ್ ಆಗಿ ಅದರ ವರ್ಕ್ ಆರ್ಡರ್ ದೊರೆತು, ಕೆಲಸ ಆರಂಭವಾಗಬೇಕಾದರೆ, ನವೆಂಬರ್ ತಿಂಗಳಾಗಬಹುದು, ಎಂದಿದ್ದಾರೆ.
ಜನವರಿ 5ರಂದು, ನಿರ್ಮಾಣ ಕಾರ್ಯಕ್ಕೆ ನೂರು ಕೋಟಿ ರೂ ಬಿಡುಗಡೆಗೊಳಿಸಲಾಗುವುದು ಎಂದು ಆದೇಶ ನೀಡಲಾಗಿದೆ. ಆದರೆ, ಡಿಸೆಂಬರ್ 14ಕ್ಕೆ ಟೆಂಡರ್ಗಳನ್ನು ಕೋರಿ ಜಾಹಿರಾತು ನೀಡಲಾಗಿತ್ತು. ಟೆಂಡರ್ ಸಲ್ಲಿಸಲು ಕೊನೇಯ ದಿನಾಂಕ ಜನವರಿ 16 ಎಂದು ನಮೂದಿಸಲಾಗಿತ್ತು. ಇವತ್ತು ಜನವರಿ 6, ಇನ್ನೂ ಟೆಂಡರ್ ತೆರೆಯಲು 10 ದಿನಗಳು ಬಾಕಿ ಇರುವಾಗಲೇ ಅಡಿಗಲ್ಲು ಹಾಕಲಾಗಿದೆ.
ಈ ಟೆಂಡರ್ ತೆರದ ನಂತರ ಅದು ತಾಂತ್ರಿಕ ಮತ್ತು ಆರ್ಥಿಕ ಅರ್ಹತೆಯನ್ನು ಪೂರೈಸಿದೆಯೇ ಎಂದು ಪರಿಶೀಲಿಸುವಾಗ ಜನವರಿ ಕೊನೆಗೊಳ್ಳುತ್ತೆ. ಈಗ ಕರೆದಿರುವ ಟೆಂಡರ್, ಕಾಮಗಾರಿಯ ಆಯವ್ಯಯವನ್ನು ಅಂದಾಜಿಸಲು ಕರೆದಿರುವ ಟೆಂಡರ್. ಅವರಿಗೆ ಈ ಕೆಲಸ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಂದರೆ, ಏಪ್ರಿಲ್ ಕೊನೆಯ ಹಂತದಲ್ಲಿ ಈ ವರದಿ ಬರಬಹುದು. ಅದಾದ ಬಳಿಕ ಆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಸರ್ಕಾರ ಅದನ್ನು ಪುರಸ್ಕರಿಸಿದ ನಂತರ ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಬೇಕು. ಇದಕ್ಕೆ ಕನಿಷ್ಟ ಒಂದು ತಿಂಗಳಾದರೂ ಬೇಕು. ಅಂದರೆ ಮೇ ಕೊನೇಯವರೆಗೆ ಟೆಂಡರ್ ಕರೆಯಲು ಸಾಧ್ಯವಾಗುವುದಿಲ್ಲ.
ಟೆಂಡರ್ ಅನ್ನು KTPP ಕಾಯ್ದೆಯ ಅನುಸಾರವಾಗಿ ಕರೆಯಬೇಕು. ಇದು 100 ಕೋಟಿಯ ಟೆಂಡರ್ ಆಗಿರುವುದರಿಂದ ಕನಿಷ್ಟ ಮೂರು ತಿಂಗಳಾದರೂ ಸಮಯ ಬೇಕು. ಹೀಗಾಗಿ ಆಗಸ್ಟ್ಗಿಂತ ಮುಂಚೆ ಅದರ ಟೆಂಡರ್ ಪ್ರಕ್ರಿಯೆಯೇ ಮುಗಿದಿರಲ್ಲ. ಇದಾದ ಬಳಿಕ ವರ್ಕ್ ಆರ್ಡರ್ ನೀಡಬೇಕು. ವರ್ಕ್ ಆರ್ಡರ್ ನೀಡಿದ ಬಳಿಕ ಟೆಂಡರ್ ಪಡೆದವರಿಗೆ ಒಂದು ತಿಂಗಳು ಕಾಲಾವಕಾಶ ನೀಡಬೇಕು. ಇಷ್ಟರ ವೇಳೆಗೆ ನವೆಂಬರ್ ಬಂದಿರುತ್ತದೆ.
ಇಷ್ಟು ದೀರ್ಘಕಾಲದ ಪ್ರಕ್ರಿಯೆ ಬಾಕಿ ಇರುವಾಗಲೇ ಇವರು ಅಡಿಗಲ್ಲು ಹಾಕುತ್ತಾ ಇದ್ದಾರೆ. ಇದಕ್ಕೆ ಒಂದೇ ಕಾರಣ, ಅದೇನೆಂದರೆ, ಇನ್ನು ಹದಿನೈದು ದಿನಗಳ ಒಳಗಾಗಿ ಬಸವಕಲ್ಯಾಣ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಅದಕ್ಕಿಂತಲೂ ಪೂರ್ವದಲ್ಲಿ ಈ ರೀತಿಯ ಪ್ರಚಾರ/ಅಪಪ್ರಚಾರದಿಂದ ಜನರನ್ನು ಸೆಳೆಯುವ ಗಿಮಿಕ್ ಇದು, ಎಂದು ಸರ್ಕಾರದ ವಿರುದ್ದ ಖಾರವಾಗಿ ನುಡಿದಿದ್ದಾರೆ.
ಒಟ್ಟಿನಲ್ಲಿ, ಚುನಾವಣೆ ಹತ್ತಿರ ಬಂದಾಗ ಪ್ರತಿಮೆ ನಿರ್ಮಾಣ, ಜಾತಿ-ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ಜನರ ಮತಗಳಿಸುವ ರಾಜಕೀಯ ತಂತ್ರಗಾರಿಗೆ ಇಲ್ಲಿಯೂ ಅಡಗಿದೆ ಎಂಬುದು ಎಸ್ ಎಂ ಜಾಮದಾರ್ ಅವರ ಅಭಿಪ್ರಾಯ.