“ಬಲಿದಾನ್ ದೇಂಗೆ, ಫಾಂಸಿ ಭಿ ಚಡ್ ಜಾಯೆಂಗೆ, ಹಜಾ಼ರ್ ಬಾರ್ ಜೇಲ್ ಜಾಯೆಂಗೆ, ಮಗರ್ ಇಸ್ ಸರ್ಕಾರ್ ಕೆ ಸಾಮ್ನೆ ಜುಕೆಂಗೆ ನಹಿ”, ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾ಼ದ್ ಅವರು ಹೇಳಿದ ಮಾತುಗಳಿವು. ಬಲಿದಾನ ನೀಡುತ್ತೇವೆ, ಗಲ್ಲಿಗೂ ಏರುತ್ತವೆ, ಸಾವಿರ ಬಾರಿ ಜೈಲಿಗೆ ಬೇಕದರೂ ಹೋಗುತ್ತೇವೆ, ಆದರೆ ಈ ಸರ್ಕಾರದ ಮುಂದೆ ಯಾವತ್ತೂ ತಲೆ ಬಾಗುವುದಿಲ್ಲ ಎಂದು CAA ವಿರುದ್ದ ತಮ್ಮ ಮುಂದಿನ ಹೋರಾಟದ ಸ್ವರೂಪವನ್ನು ಆಜಾ಼ದ್ ಅವರು ಬಿಚ್ಚಿಟ್ಟಿದ್ದಾರೆ.
ಡಿಸೆಂಬರ್ 20ರಂದು ದೆಹಲಿಯ ದರಿಯಾಗಂಜ್‌ನಲ್ಲಿ CAA ವಿರುದ್ದ ಪ್ರತಿಭಟಿಸುವ ಸಂದರ್ಭದಲ್ಲಿ ಆಜಾ಼ದ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಜುಮ್ಮಾ ಮಸೀದಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು ದೆಹಲಿಯಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಲು ಕಾರಣವೆಂದು ಪೊಲೀಸರ ಆರೋಪವಾಗಿತ್ತು. ಜನವರಿ 15ರಂದು ಷರತ್ತು ಬದ್ದ ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು. ಬಿಡುಗಡೆಗೊಂಡ 24 ತಾಸುಗಳ ಒಳಗಾಗಿ ದೆಹಲಿಯಿಂದ ಮುಂದಿನ ನಾಲ್ಕು ವಾರಗಳ ಮಟ್ಟಿಗಾದರೂ ದೂರವಿರಬೇಕಂಬುದು ಕೋರ್ಟ್‌ನ ಆದೇಶವಾಗಿತ್ತು. ದೆಹಲಿಯಲ್ಲಿದ್ದ 24 ತಾಸಗಳಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವನ್ನು ದೆಹಲಿ ನ್ಯಾಯಾಲಯ ನೀಡಲಿಲ್ಲ.
ಹೀಗೆ ಕಠಿಣ ಷರತ್ತುಗಳ ಮೇಲೆ ಜನವರಿ 16ರಂದು ತಿಹಾರ್ ಜೈಲಿನಿಂದ ಹೊರಕ್ಕೆ ಕಾಲಿಟ್ಟ ಉತ್ತರ ಪ್ರದೇಶದ ದಲಿತ ಮುಖಂಡ ಆಜಾ಼ದ್‌ರನ್ನು ಅವರ ಸಾವಿರಾರು ಬೆಂಬಲಿಗರು ʼಜೈ ಭೀಮ್ʼ ಹಾಗೂ ʼಇಂಕ್ವಿಲಾಬ್ ಜಿಂದಾಬಾದ್ʼ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಹೀಗೆ ಬಿಡುಗಡೆಗೊಂಡ ಆಜಾ಼ದ್ ಅವರು ಪ್ರತಿಭಟನೆಯಲ್ಲಿ ಭಾಗವಹಿಲು ಅನುಮತಿ ಇಲ್ಲದೇ ಇರುವುದರಿಂದ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜುಮ್ಮಾ ಮಸೀದಿ, ರವಿದಾಸ ದೇವಸ್ಥಾನ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರವನ್ನು ಭೇಟಿ ಮಾಡಿ ಇಂಡಿಯನ್ ವಿಮೆನ್ಸ್ ಪ್ರೆಸ್ ಕಾರ್ಪ್ಸ್ ಕಡೆ ಹೆಜ್ಜೆ ಹಾಕಿದರು. ರಾತ್ರಿ ಸುಮಾರು 9 ಗಂಟೆಗೆ ದೆಹಲಿಯ ಗಡಿಯನ್ನು ದಾಟಿದರು.
“ನಾನು ನಿರಾಶ್ರಿತರಿಗೆ ಪೌರತ್ವ ನೋಡುವಂತಹ CAA ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಆದರೆ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇನೆ, ಒಂದು ವೇಳೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡದೇ ಹೋಗುತ್ತಿದ್ದರೆ, ನಮ್ಮ ಹಕ್ಕುಗಳನ್ನು ನೀಡದೇ ಹೋಗುತ್ತಿದ್ದರೆ ನನ್ನಂತಹ ಹಾಗೂ ಹಲವು ಕೆಳ ವರ್ಗದ ಜನರು ಇಂದಿಗೂ ಮೇಲ್ವರ್ಗದವರಿಂದ ಶೋಷಣೆಯನ್ನು ಅನುಭವಿಸಬೇಕಾಗುತ್ತಿತ್ತು.” ಎಂದು ಹೇಳಿದರು.
ತಮ್ಮ “ಪ್ರಚೋದನಾಕಾರಿ” ಭಾಷಣ ಮಾಡಿದ ದಿನದ ಕುರಿತು ಮಾತನಾಡಿದ ಅವರು “ನಾನು ಅಂದು ಜುಮ್ಮಾ ಮಸೀದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋದೆ. ಏಕೆಂದರೆ ಭಾರತದಲ್ಲಿ ನಡೆದ ಚಳವಳಿಗಳ ಜೊತೆಗೆ ದೆಹಲಿಯ ಜುಮ್ಮಾ ಮಸೀದಿಗೆ ಐತಿಹಾಸಿಕ ಸಂಬಂಧವಿದೆ. ಮೌಲಾನಾ ಆಜಾ಼ದ್ ಅವರು ಭಾರತದ ವಿಭಜನೆಯ ವಿರುದ್ದ ತಮ್ಮ ಚಳವಳಿಯನ್ನು ಇಲ್ಲಿಂದಲೇ ಪ್ರಾರಂಭಿಸಿದ್ದರು. ಇಂದು ಭಾರತ ಇನ್ನೊಂದು ವಿಭಜನೆಯನ್ನು ಎದುರು ನೋಡುತ್ತಾ ಇದೆ. ಇದನ್ನು ಪ್ರತಿಭಟಿಸುವುದು ನನ್ನ ಸಾಂವಿಧಾನಿಕ ಹಕ್ಕು,” ಎಂದರು.
ಈ ವೇಳೆ ಸಂವಿಧಾನದ ಆರ್ಟಿಕಲ್ 51ರ Part IV A ಅನ್ನು ನೆನಪಿಸಿಕೊಂಡ ಆಜಾ಼ದ್, ಭಾರತದ ಸಂವಿಧಾನವನ್ನು ರಕ್ಷಿಸುವುದು ಎಲ್ಲರ ಹಕ್ಕು. ಯಾವಾಗ ಸರ್ಕಾರವು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತದೆಯೋ, ಆಗ ಸಂವಿಧಾನ ಕೂಡ ದುರ್ಬಲವಾಗುತ್ತದೆ. ಆ ಕಾರಣಕ್ಕಾಗಿ ನಾನು CAA ವಿರುದ್ದ ಬೀದಿಗೆ ಇಳಿದಿದ್ದೇನೆ. ಅಸ್ಸಾಂನಲ್ಲಿ 19 ಲಕ್ಷ ಜನರನ್ನು NRCಯಿಂದ ಹೊರಗಿಡಲಾಗಿದೆ. ಪ್ರಧಾನಿ ಮೋದಿಯವರು ನಿರಾಖರಿಸುತ್ತಿರುವ ಗೃಹ ಮಂತ್ರ ಅಮಿತ್ ಶಾ ಅವರು ಒಪ್ಪಿಕೊಳ್ಳುತ್ತಿರುವ NRCಯನ್ನು ದೇಶದಾದ್ಯಂತ ಜಾರಿಗೆ ತಂದರೆ ಅದಕ್ಕೆ ತಗಲುವ ಖರ್ಚು ಎಷ್ಟಾಗಬಹುದು, ಎಂದು ಅವರು ಪ್ರಶ್ನೆ ಹಾಕಿದರು.
ಇಷ್ಟರವರೆಗೆ ದೇಶವನ್ನು ಒಡೆಯಲು ರಾಮ ಮಂದಿರವನ್ನು ದಾಳವಾಗಿಸಿದ್ದರು. ಈಗ ಅದು ಮುಕ್ತಾಯಗೊಂಡಿರುವುದಕ್ಕೆ, ಮುಂದಿನ ಹಂತದ ದೇಶ ಒಡೆಯುವ ಯೋಜನೆಯಾಗಿ CAA, NRC ಹಾಗೂ NPR ಅನ್ನು ಜಾರಿಗೆ ತರುತ್ತಿದ್ದಾರೆ. ಈ ಸರ್ಕಾರಕ್ಕಿಂತ ನಾವೇ ಹೆಚ್ಚು ಭಾರತೀಯರು. ಈ ದೇಶಕ್ಕಾಗಿ ರಕ್ತವನ್ನೂ ನೀಡಲೂ ಸಿದ್ದನಿದ್ದೇನೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳಿಗೆ ಒಂದು ವಿಷಯ ನೆನಪಿಸುತ್ತಾ ಇದ್ದೇನೆ, ದೇಶದ ಯಾವುದೇ ನ್ಯಾಯಾಲಯಕ್ಕಿಂತ ಜನತಾ ನ್ಯಾಯಾಲಯ ದೊಡ್ಡದು. ಪ್ರಧಾನಿಯವರು ತಮ್ಮನ್ನು ಸಂವಿಧಾನಕ್ಕಿಂತ ಮೇಲ್ಪಟ್ಟವರು ಎಂದು ಭಾವಿಸಿಕೊಂಡಿದ್ದಾರೆ. ಈ ನೆಲದ ಸೋದರತ್ವ ಹಾಗೂ ಭ್ರಾತೃತ್ವತೆ ನಿಮ್ಮ ರಾಜಕೀಯಕ್ಕಿಂತಲೂ ಮೇಲು, ಎಂದು ಗುಡುಗಿದರು.
“ಬಿಜೆಪಿಯವರಿಗೆ ಇದು ಕೇವಲ ಚುನಾವಣಾ ಅಜೆಂಡಾ. ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದನ್ನು ಕೈಬಿಡಲೂ ಬಹುದು, ಆದರೆ ನಮಗಿದು ಸಾವು ಬದುಕಿನ ಹೋರಾಟ. ಈ ಹೋರಾಟದಲ್ಲಿ ಒಂದಿಚ್ಚೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ವಿಶ್ವಾಸವಿದೆ ಈ ಯುದ್ದದಲ್ಲಿ ಜಯ ನಮ್ಮದೇ ಆಗಿರುತ್ತದೆ,” ಎಂದರು.
ರಾಜಕೀಯ ಅಖಾಡಕ್ಕೆ ಧುಮುಕುವ ಸಿದ್ದತೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜಕೀಯಕ್ಕೆ ಬರಬೇಕಾಗಿತ್ತು, ಆದರೆ ಅದಕ್ಕಿಂತಲೂ ಮುಖ್ಯವಾಗಿ CAA, NRC ಪ್ರತಿಭಟನೆಗಳನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಈ ಯುದ್ದದಲ್ಲಿ ಯಾರು ನೇತೃತ್ವ ವಹಿಸಿದರು, ಅವರ ಹಿಂದೆ ಬೆನ್ನುಲುಬಾಗಿ ನಿಲ್ಲಲು ನಾನು ಸಿದ್ದ, ಎಂದು ಹೇಳಿದರು.
ಕೃಪೆ: ದಿ ವೈರ್