ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ಆನಂತರದ ಬೆಳವಣಿಗೆಗಳ ಬಗ್ಗೆ ದೇಶಾದ್ಯಾಂತ ಚರ್ಚೆ ನಡೆಯುತ್ತಿರುವ ನಡುವೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮತ್ತೊಂದು ಮುಜುಗರದ ಸನ್ನಿವೇಶ ನಿರ್ಮಿಸಿಕೊಂಡಿದೆ. ಮುಂದಿನ ತಿಂಗಳು ಮೋದಿ ಸರ್ಕಾರದ ಆರನೇ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಜೆಟ್ ಮಂಡಿಸಲಿದ್ದಾರೆ. ಈ ನಿಮಿತ್ತ ನೀತಿ ಆಯೋಗದಲ್ಲಿ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಗುರುವಾರ ನಡೆದ ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೈರಾಗಿದ್ದು ಎಲ್ಲರು ಹುಬ್ಬೇರಿಸುವಂತೆ ಮಾಡಿದೆ. ವಿಚಿತ್ರವೆಂದರೆ ಈ ಸಭೆಯಲ್ಲಿ ಹಣಕಾಸು ಸಚಿವೆಗೆ ಬದಲಾಗಿ ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹಾಗೂ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಮೋದಿ ಆಡಳಿತಕ್ಕೆ ಬಂದ ನಂತರ ಹಿಂದಿನ ಸಂಪ್ರದಾಯವನ್ನು ಮುರಿದು ರೈಲ್ವೆ ಬಜೆಟ್ ಅನ್ನು ಹಣಕಾಸು ಬಜೆಟ್ ಗೆ ಸೇರಿಸಲಾಗಿತ್ತು. ಹೀಗಾಗಿ ಗೋಯೆಲ್ ಭಾಗಿಯಾಗಿರಬಹುದು. ಕೈಗಾರಿಕಾ ಸಚಿವರಾದ ಗಡ್ಕರಿ ಉಪಸ್ಥಿತಿಯ ಬಗ್ಗೆಯೂ ಹೆಚ್ಚಿನ ತಕರಾರೇನು ಇಲ್ಲ. ಸರ್ಕಾರದಲ್ಲಿ ನಂ.2 ಸ್ಥಾನದಲ್ಲಿರುವ ಹಿರಿಯ ಸಚಿವ ಅಮಿತ್ ಶಾ ಉಪಸ್ಥಿತಿ ಸಮರ್ಥಿಸಿದರೂ ಹಣಕಾಸು ಜವಾಬ್ದಾರಿ ಹೊತ್ತಿರುವ ನಿರ್ಮಲಾ ಗೈರನ್ನು ಮೋದಿಯವರು ಹೇಗೆ ಸಮರ್ಥಿಸುತ್ತಾರೆ? ಮೋದಿ ನೇತೃತ್ವದ ಆಯವ್ಯಯದ ಪ್ರಮುಖ ಸಭೆ ನಡೆಯುತ್ತಿರುವಾಗ ಸಚಿವೆ ನಿರ್ಮಲಾ ಅವರು ಬಿಜೆಪಿ ಕಚೇರಿಯಲ್ಲಿ ಪಕ್ಷದ ಬೆಂಬಲಿಗರಿಂದ ಬಜೆಟ್ ಕುರಿತು ಸಲಹೆ-ಸೂಚನೆ ಆಲಿಸುತ್ತಿದ್ದರು ಎಂಬ ವಿಚಾರ ಸರ್ಕಾರದ ಬಗ್ಗೆ ಯಾವ ಸಂದೇಶ ರವಾನಿಸಲಿದೆ? ಮೋದಿಯವರ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ನೀತಿ ಆಯೋಗದ ಸಭೆಗಳಲ್ಲಿ ಕಡ್ಡಾಯವಾಗಿ ಉಪಸ್ಥಿತರಿರುತ್ತಿದ್ದರು ಎಂಬುದನ್ನು ನಿರ್ಮಲಾ ಅವರಿಗೆ ನೆನಪಿಸಿಕೊಡಬೇಕಿತ್ತೆ? ಮೋದಿಯವರೇ ಉದ್ದೇಶಪೂರ್ವಕಾಗಿ ನಿರ್ಮಲಾ ಅವರನ್ನು ಸಭೆಯಿಂದ ದೂರ ಇಟ್ಟಿದ್ದರೇ?
ಬಿಜೆಪಿ ಹಾಗೂ ಮೋದಿ ಸರ್ಕಾರದ ಅಪಸವ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಇತ್ತೀಚೆಗೆ ಮೋದಿಯವರು ಬಜೆಟ್ ಹಿನ್ನೆಲೆಯಲ್ಲಿ ದೇಶದ ಅಗ್ರಮಾನ್ಯ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಸೇರಿದಂತೆ ಹಲವರ ಸಭೆ ನಡೆಸಿದ್ದರು. ಈ ಸಭೆಯಲ್ಲೂ ನಿರ್ಮಲಾ ಪಾಲ್ಗೊಂಡಿರಲಿಲ್ಲ. ಹಣಕಾಸು ವ್ಯವಹಾರ ಸೇರಿದಂತೆ ಯಾವುದೇ ಖಾತೆಗೆ ಸಂಬಂಧಿಸಿದ ಚರ್ಚೆ ನಡೆಯುವಾಗ ಸಂಬಂಧಿಸಿದ ಖಾತೆ ಜವಾಬ್ದಾರಿ ಹೊತ್ತಿರುವ ಸಚಿವರ ಉಪಸ್ಥಿತಿ ಸಾಮಾನ್ಯವಾಗಿರುತ್ತದೆ. ಆದರೆ, ನಿರ್ಮಲಾ ಅನುಪಸ್ಥಿತಿಯು ಗಂಭೀರ ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.
ಮೋದಿ ನೇತೃತ್ವದ ಪ್ರಧಾನ ಮಂತ್ರಿ ಕಾರ್ಯಾಲಯವು (ಪಿಎಂಒ) ಹಿಂದೆಂದೂ ಕಂಡಿರದ ಮಟ್ಟಿಗೆ ಕೇಂದ್ರೀಕೃತವಾಗಿದೆ ಎನ್ನುವ ಗಂಭೀರ ಆರೋಪವಿದೆ. ಭಾರತವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಹಾಗೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಿಎಂಒ ಕಚೇರಿ ತನ್ನಲ್ಲೇ ಇಟ್ಟುಕೊಂಡಿದೆ ಎನ್ನಲಾಗಿದೆ. ಇದೇ ವಿಚಾರವನ್ನು ಈಚೆಗೆ ನೊಬೆಲ್ ವಿಜೇತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಪುನರುಚ್ಚರಿಸಿದ್ದರು. ಸಂಬಂಧಪಟ್ಟವರನ್ನು ಚರ್ಚೆಯಲ್ಲಿ ಭಾಗಿಯಾಗಿಸಿ ನಿರ್ಧಾರ ಮಾಡಿದರೆ ಸಾಕಷ್ಟು ಸಮಸ್ಯೆಗಳಿಂದ ಪಾರಾಗಬಹುದು ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರೋತ್ಸಾಹಿಸದ ಪಿಎಂಒ, ಹಿಂದೆ ಎರಡು ಮಹತ್ವದ ಸಂದರ್ಭದಲ್ಲಿ ತನ್ನ ವ್ಯಾಪ್ತಿ ಮೀರಿ ಅಥವಾ ಸಂಬಂಧಪಟ್ಟವರ ಸಲಹೆಯನ್ನು ಉಲ್ಲಂಘಿಸಿ ಮೋದಿಯವರು ನಿರ್ಧಾರ ಕೈಗೊಂಡಿದ್ದರು ಎನ್ನುವ ವರದಿಗಳಿವೆ.
2016 ನವೆಂಬರ್ 8ರಂದು ಮೋದಿಯವರು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಚಾರಿತ್ರಿಕ ನಿರ್ಧಾರ ಪ್ರಕಟಿಸಿದ್ದರು. ಇದರಿಂದ ಸರ್ಕಾರ ಹೇಳಿದಂತೆ ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ಕಪ್ಪು ಹಣ ನಿರ್ಮೂಲನೆ ಆಗಲಿಲ್ಲ. ಬದಲಾಗಿ ಪೂರ್ವಾಪರದ ಅರಿವಿಲ್ಲದ ಏಕಪಕ್ಷೀಯವಾಗಿ ಕೆಲವೇ ಕೆಲವರ ಸಲಹೆ-ಸೂಚನೆ ಮೇರೆಗೆ ಕೈಗೊಂಡ ನೋಟು ರದ್ದತಿ ನಿರ್ಧಾರದಿಂದ ದೇಶದ ಆರ್ಥಿಕತೆ ಇಂದು ಗಂಭೀರ ಸ್ಥಿತಿ ತಲುಪಿದೆ. ಅನುತ್ಪಾದಕ ಸಾಲದಿಂದ ಬ್ಯಾಂಕಿಂಗ್ ವ್ಯವಸ್ಥೆ ತತ್ತರಿಸುತ್ತಿದೆ. ಈ ನಿರ್ಧಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಪ್ಪಿಗೆ ನೀಡಿರಲಿಲ್ಲ. ಸುಮಾರು 40 ದಿನಗಳ ಬಳಿಕ ಬಲವಂತದಿಂದಾಗಿ ಒಪ್ಪಿಗೆ ವರದಿ ಕಳುಹಿಸಿತ್ತು ಎನ್ನುವ ವಿಚಾರವು ಮಾಹಿತಿ ಹಕ್ಕು ಅರ್ಜಿಯಿಂದ ಬಹಿರಂಗಗೊಂಡಿತ್ತು. ಇನ್ನೂ ಗಂಭೀರ ಆರೋಪವೆಂದರೆ ನೋಟು ರದ್ದತಿಯ ತೀರ್ಮಾನವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಘೋಷಿತ ತಜ್ಞರೊಬ್ಬರ ಸಲಹೆಯಾಗಿದ್ದು, ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಗಮನಕ್ಕೇ ಇರಲಿಲ್ಲ ಎಂಬುದಾಗಿತ್ತು. ವಿರೋಧ ಪಕ್ಷಗಳ ಈ ಆರೋಪಕ್ಕೆ ಬಿಜೆಪಿ ಇದುವರೆಗೂ ಸ್ಪಷ್ಟ ಉತ್ತರ ನೀಡಿಲ್ಲ.
ಇನ್ನು, 2019ರ ಲೋಕಸಭಾ ಚುನಾವಣೆಗೂ ಮುನ್ನ ಭಾರಿ ವಿವಾದ ಸೃಷ್ಟಿಸಿದ್ದ ಸಾವಿರಾರು ಕೋಟಿ ಮೌಲ್ಯದ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದ. ಸುಪ್ರೀಂಕೋರ್ಟ್ ಸರ್ಕಾರದ ವಾದವನ್ನು ಪುರಷ್ಕರಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆಯಾದರೂ ರಕ್ಷಣಾ ಸಚಿವಾಲಯದ ತಜ್ಞರನ್ನೊಳಗೊಂಡ ತಂಡವನ್ನು ಬದಿಗೊತ್ತಿ ಪಿಎಂಒ, ಫ್ರಾನ್ಸ್ ನೊಂದಿಗೆ ರಫೇಲ್ ಒಪ್ಪಂದ ಮಾಡಿಕೊಂಡಿತ್ತು ಎನ್ನುವ ತನಿಖಾ ವರದಿಯು ಮೋದಿ ಸರ್ಕಾರದ ಕೇಂದ್ರೀಕೃತ ವ್ಯವಸ್ಥೆಯ ಬಗ್ಗೆ ಬೆರಳು ಮಾಡಿತ್ತು.
ರಫೇಲ್ ಒಪ್ಪಂದ ಕುರಿತು ಪ್ರತಿಷ್ಠಿತ ‘ದಿ ಹಿಂದೂ’ ಪತ್ರಿಕೆ ಸರಣಿ ತನಿಖಾ ವರದಿ ಪ್ರಕಟಿಸಿದ್ದರಿಂದ ಕಂಗೆಟ್ಟಿದ್ದ ಮೋದಿ ಸರ್ಕಾರವು ಸುಪ್ರೀಂಕೋರ್ಟ್ ನಲ್ಲಿ ನಗೆಪಾಟಲಿಗೆ ಈಡಾಗಿತ್ತು . ರಫೇಲ್ ಒಪ್ಪಂದ ಕುರಿತ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟ್ ಮುಂದೆ ಹೇಳುವ ಮೂಲಕ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿದ್ದರು. ರಕ್ಷಣಾ ಇಲಾಖೆಯ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸಬಾರದು ಎಂಬ ನಿಯಮ ಮುರಿದ ಆರೋಪದಲ್ಲಿ ದಿ ಹಿಂದೂ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಮೋದಿ ಸರ್ಕಾರ ನೀಡಿತ್ತು ಎಂಬುದನ್ನು ನೆನೆಯಬಹುದು.
ಅನುಭವಿಗಳು ಹಾಗೂ ಸಮರ್ಥ ಸಚಿವರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ ಎನ್ನುವ ವಿಚಾರ ಇತ್ತೀಚೆಗಿನ ಹಲವು ಬೆಳವಣಿಗಗಳು ಸಾಬೀತುಪಡಿಸಿವೆ. ಕಳೆದೊಂದು ತಿಂಗಳಿಂದ ವಿವಾದಗಳಲ್ಲಿ ಸಿಲುಕಿರುವ ಸರ್ಕಾರವನ್ನು ಪ್ರಬಲವಾಗಿ ಸಮರ್ಥಿಸುವ ಹಾಗೂ ಪರಿಸ್ಥಿತಿ ತಿಳಿಗೊಳಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಈಗ ಬಜೆಟ್ ಪೂರ್ವಭಾವಿ ಸಭೆಯನ್ನು ಹಣಕಾಸು ಸಚಿವರ ಅನುಪಸ್ಥಿತಿಯಲ್ಲಿ ನಡೆಸುವ ಮೂಲಕ ವಿರೋಧಿಗಳಿಗೆ ಮತ್ತೊಂದು ಅಸ್ತ್ರವನ್ನು ಅನಾಯಾಸವಾಗಿ ವರ್ಗಾಯಿಸಿದೆ.