ರಾಜ್ಯದಲ್ಲಿ ಕರೋನಾ ಅಟ್ಟಹಾಸ ಮೆರೆಯುವ ಮುಂಚೆಯೇ ಸರ್ಕಾರ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಎಂದರೆ, ಅದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು. ಪ್ರೀ ನರ್ಸರಿ, ಎಲ್‌ಕೆಜಿ, ಯುಕೆಜಿ ಇಂದ ಶುರು ಮಾಡಿ, ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ, ಪ್ರೌಢಶಿಕ್ಷಣ ಸೇರಿದಂತೆ ಕಾಲೇಜುಗಳಿಗೂ ಹಂತ ಹಂತವಾಗಿ ರಜೆ ಘೋಷಣೆ ಮಾಡುವ ಮೂಲಕ ಶಾಲಾ ಕಾಲೇಜುಗಳ ಮಕ್ಕಳನ್ನು ಹೆತ್ತವರ ಮಡಿಲು ಸೇರಿಸಿದ್ರು. ಅದರಲ್ಲಿ ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆ ಮಾತ್ರ ನಡೆಯುತ್ತಿತ್ತು. ಉಳಿವರ ಪರೀಕ್ಷೆಗಳು ಆರಂಭ ಆಗಿರಲಿಲ್ಲ. ಆದರೂ ರಜೆ ನೀಡಿ, ಕರೋನಾ ಸಾಮೂಹಿಕ ಹರಡುವಿಕೆಗೆ ತಡೆ ಹಾಕಿತ್ತು ಸರ್ಕಾರ. ದೆಹಲಿಯ ನೋಯ್ದಾದಲ್ಲಿ 2 ಶಾಲೆಗಳನ್ನು ಬಂದ್ ಮಾಡುತ್ತಿದ್ದ ಹಾಗೆ ಎಚ್ಚೆತ್ತುಕೊಂಡು ತೆಗೆದುಕೊಂಡ ನಿರ್ಧಾರ ಇಂದು ಸಾಕಷ್ಟು ನೆಮ್ಮದಿ ತರಿಸುವಂತಾಗಿದೆ. ಆದರೆ ಹೆತ್ತವರ ಎದೆಯಲ್ಲಿ ಶುರುವಾಗಿರುವ ಭಯ ಎಂದರೆ ಮುಂದೇನು ಮಾಡುವುದು ಎಂದು.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಅಂತಿಮ ಒಂದೇ ಒಂದು ಪತ್ರಿಕೆ ಇದ್ದಾಗ ಜನತಾ ಕರ್ಫ್ಯೂ ಎದುರಾಯ್ತು. ಆ ಬಳಿಕ ರಾಜ್ಯ ಸರ್ಕಾರವೇ ಜನತಾ ಕರ್ಫ್ಯೂವಿನ ಮುಂದುವರಿದ ಭಾಗವಾಗಿ ಮತ್ತೊಂದು ದಿನ ಬಸ್ ಸಂಚಾರ ನಿಲ್ಲಿಸಿದ್ದರಿಂದ ಕೊನೆಯ ಒಂದೇ ಒಂದು ಇಂಗ್ಲೀಷ್ ಪತ್ರಿಕೆ ಪರೀಕ್ಷೆ ಹಾಗೆ ಉಳಿದುಕೊಂಡಿದೆ. ಬೇರೆ ಎಲ್ಲಾ 1 ರಿಂದ 9ನೇ ತರಗತಿ ತನಕ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಹಿಂದಿನ ಪರೀಕ್ಷೆಗಳ ಆಧಾರದಲ್ಲಿ ಮುಂದಿನ ತರಗತಿಗೆ ಪಾಸ್ ಮಾಡುವಂತೆಯೂ ತಿಳಿಸಿದೆ. ಆದರೆ ಪಿಯುಸಿ ಮಕ್ಕಳ ವಿಚಾರದಲ್ಲಿ ಅದು ಸಾಧ್ಯವಿಲ್ಲ. ಪಿಯು ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅವಶ್ಯಕತೆ ಇದೆ. ವೈದ್ಯಕೀಯ ಪದವಿಗೆ ಸೇರಬಯಸುವ ಮಕ್ಕಳು ನೀಟ್ ಪರೀಕ್ಷೆ ಬರೆಯುವುದು ಬಾಕಿ ಇದೆ. ಮುಂದಿನ ತಿಂಗಳು ಪರೀಕ್ಷಾ ಫಲಿತಾಂಶ ಕೊಡುತ್ತಿದ್ದ ಪಿಯು ಮಂಡಳಿ ಇನ್ನೊಂದು ಪತ್ರಿಕೆಯ ಪರೀಕ್ಷೆಯನ್ನು ಯಾವ ಆಧಾರದಲ್ಲಿ ನಡೆಸುವುದು. ಒಂದು ವೇಳೆ ಪಿಯು ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದೇ ಹೋದರೆ, ಉಳಿದಿರುವ ಒಂದು ಪತ್ರಿಕೆಯ ಅಂಕವನ್ನು ಯಾವ ರೀತಿ ಕೊಡಬೇಕು ಎನ್ನುವ ಸಂಕಷ್ಟಕ್ಕೆ ಸಿಲುಕಿದೆ.
ಇನ್ನು ಮಾರ್ಚ್ 27, ಶುಕ್ರವಾರದಿಂದ ಆರಂಭವಾಗಬೇಕಿದ್ದ ಎಸ್ಎಸ್ಎಲ್‌ಸಿ ಪರೀಕ್ಷೆ ಕೂಡ ಆರಂಭವಾಗಿಲ್ಲ. ಇನ್ನು ಮೂರು ತಿಂಗಳ ಕಾಲ ಪರೀಕ್ಷೆ ನಡೆಸುವ ಯಾವುದೇ ಸಂದರ್ಭ ಎದುರಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಯಾಕಂದರೆ ಕೇಂದ್ರ ಸರ್ಕಾರ ಈಗಾಗಲೇ ಮೂರು ತಿಂಗಳ ಸಿದ್ಧತೆ ಮಾಡಿಕೊಂಡೇ ಮೂರು ತಿಂಗಳ ಇಎಂಐ ಪಾವತಿ ಮಾಡದಂತೆ ಆರ್‌ಬಿಐ ಸೂಚನೆ ನೀಡಿದೆ. ಇದೀಗ 21 ದಿನಗಳ ಲಾಕ್‌ಡೌನ್ ಮುಂದುವರಿದರೂ ಅಚ್ಚರಿಯೇನಿಲ್ಲ. ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಜೂನ್ ಬಳಿಕ ಮಾಡುವ ಪ್ರಸಂಗ ಎದುರಾದರೆ ಮುಂದಿನ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆತಂಕವೂ ಪ್ರೌಢ ಶಿಕ್ಷಣ ಮಂಡಳಿಯ ಅಧಿಕಾರಿಗಳದ್ದಾಗಿದೆ. ಇನ್ನು ಉನ್ನತ ವ್ಯಾಸಂಗ ಮಾಡುತ್ತಿರುವ ಯುವಕ ಯುವತಿಯ ಸಂಕಷ್ಟವೂ ಇದೇ ಆಗಿದ್ದು, ಅಂತಿಮ ಸೆಮಿಸ್ಟರ್ ಪರೀಕ್ಷೆ ಎದುರಿಸಬೇಕಿದ್ದ ಮಕ್ಕಳು ನಮ್ಮ ಭವಿಷ್ಯವೇನು ಎಂದು ಚಿಂತಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಸದ್ಯಕ್ಕೆ ಯಾವುದೇ ಮಾಹಿತಿಯನ್ನೂ ಕೊಡದೆ ಕರೋನಾ ತಡೆಗಟ್ಟುವ ಕೆಲಸ ಮೊದಲು ಮಾಡೋಣ. ಆ ಬಳಿಕ ಎಲ್ಲದರ ಬಗ್ಗೆಯೂ ಚಿಂತಿಸುವ ಎನ್ನುವಂತಿದೆ. ಆದರೆ ಪೋಷಕರ ಪಾಡು ಹೇಳತೀರದಾಗಿದೆ.
ಸರ್ಕಾರ ಈಗ ಏನು ಮಾಡಬಹುದು?
ಉನ್ನತ ಶಿಕ್ಷಣ ಮಾಡುತ್ತಿದ್ದು ಕೊನೆಯ ಸೆಮಿಸ್ಟರ್ ನಲ್ಲಿದ್ದವರಿಗೆ ಮೂರು ತಿಂಗಳ ಬಳಿಕವೂ ಪರೀಕ್ಷೆ ನಡೆಸಬಹುದು. ಅವರಿಗೆ ಒಂದೇ ಒಂಂದು ಸಮಸ್ಯೆ ಎಂದರೆ ಓದಿದ್ದು ಮರೆತು ಹೋಗಿದ್ದರೆ ಎನ್ನುವ ಭಯ ಅಷ್ಟೇ. ಆದರೆ ಪಿಯು ಹಾಗೂ ಎಸ್ಎಸ್ಎಲ್‌ಸಿ ಮಕ್ಕಳ ಪರೀಕ್ಷೆಗಳನ್ನು ಮೂರು ತಿಂಗಳ ಬಳಿಕ ನಡೆಸುವುದು. ಆ ಬಳಿಕ ವ್ಯಾಲ್ಯುವೇಷನ್ ಮಾಡಿಸುವುದು. ಆ ನಂತರ ಫಲಿತಾಂಶ ಪ್ರಕಟ ಮಾಡುವುದು. ಇದೆಲ್ಲಾ ಕಷ್ಟದಾಯಕ ಎನಿಸುತ್ತದೆ. ಆ ಕಾರಣಕ್ಕಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಗಳ ಕುರಿತು ಆಗಿಂದಾಗ್ಗೆ, ಮಾಹಿತಿಯನ್ನು ನೀಡುವುದರಿಂದ ಹೆತ್ತವರ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿದ ಭಯ ಕಡಿಮೆಯಾಗಬಹುದು. ಮತ್ತು ಈ ಕುರಿತು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೂಡಾ ಶಿಕ್ಷಣ ಇಲಾಖೆ ಗಮನವನ್ನು ಹರಿಸಬೇಕು. ಉಳಿದಂತೆ ಈ ಬಾರಿ ಶಾಲೆಗೆ ದಾಖಲಾಗುವುದಕ್ಕೇ ಯಾವುದೇ ಅಡ್ಡಿ ಆತಂಕವಿಲ್ಲದೆ ಆಗಸ್ಟ್‌ನಲ್ಲಿ ಬೇಕಿದ್ದರೂ ಶಾಲಾ ದಾಖಲಾತಿ ಮಾಡಿಕೊಳ್ಳಬಹುದು.
ಈ ನಡುವೆ ಖಾಸಗಿ ಶಾಲೆಗಳು ಬಾಕಿ ಉಳಿಸಿಕೊಂಡಿರುವ ಫೀಸ್ ಪಾವತಿ ಮಾಡುವಂತೆ ಆಗ್ರಹ ಮಾಡುತ್ತಿರುವ ಬಗ್ಗೆ ಶಿಕ್ಷ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದು, ಈಗಾಗಲೇ ಸುತ್ತೋಲೆ ಕೊಟ್ಟಿದ್ದೇವೆ. ಸರ್ಕಾರ ಎಲ್ಲರಿಗೂ ಕಟ್ಟುನಿಟ್ಟಿನ ಆದೇಶ ಮಾಡಿದೆ. ಸರ್ಕಾರದ ಮುಂದಿನ ಆದೇಶದ ವರೆಗೆ ಸ್ಕೂಲ್ ಅಡ್ಮಿಷನ್ ಮಾಡಿಕೊಳ್ಳುವಂತಿಲ್ಲ. ಜೊತೆಗೆ ಕರೋನಾ ಸಂಕಷ್ಟದಲ್ಲಿರುವ ಮಕ್ಕಳ ಶಾಲಾ ಫೀಸ್ ಕಟ್ಟುವಂತೆ ಒತ್ತಾಯ ಮಾಡಬಾರದು ಎಂದು ಸೂಚಿಸಿದ್ದಾರೆ. ಶಾಲಾ ಆಡಳಿತ ಮಂಡಳಿಗಳ ಹಣದಾಹಕ್ಕೆ ಶಿಕ್ಷಣ ಸಚಿವರು ಖಡಕ್ ಆದೇಶ ಕೊಟ್ಟಿದ್ದಾರೆ. ಆದರೆ ಪರೀಕ್ಷೆ ಬಗ್ಗೆ ಯಾವುದೇ ಮಾತನಾಡಿಲ್ಲ. ಇದೀಗ ತಲೆ ಬಿಸಿ ಮಾಡಿಕೊಂಡಿರುವ ಪೋಷಕರಿಗೆ ನೆಮ್ಮದಿ ತರಬೇಕಿದ್ದರೆ, ಕೂಡಲೇ ಶಿಕ್ಷಣ ಸಚಿವರು ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಅನಿವಾರ್ಯತೆ ಇದೆ ಎನಿಸುತ್ತದೆ.