ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ನ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಇಡಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಇದರೊಂದಿಗೆ ಶಿವಕುಮಾರ್ ಅವರಿಗೆ ಮತ್ತಷ್ಟು ದಿನ ತಿಹಾರ್ ಜೈಲೇ ಗತಿ ಎನ್ನುವಂತಾಗಿದೆ. ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾರಣವನ್ನೇ ಪ್ರಧಾನವಾಗಿಟ್ಟುಕೊಂಡು ಜಾಮೀನು ಕೊಡಿಸಲು ಶಿವಕುಮಾರ್ ಪರ ವಕೀಲರು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. ಅನಾರೋಗ್ಯವಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ. ಈಗಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಮಾಧಾನ ತರದಿದ್ದರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಹೇಳಿದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಗುರುವಾರ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ವಕೀಲರು ನಿರ್ಧರಿಸಿದ್ದಾರೆ.
ಇಡಿ ಅಧಿಕಾರಿಗಳು ಡಿ. ಕೆ. ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಕಾರಣ, ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾದ 8.59 ಕೋಟಿ ರೂಪಾಯಿ. ಆದರೆ, ಇದಿಷ್ಟೇ ಅಂಶದ ಬಗ್ಗೆ ವಿಚಾರಣೆ ನಡೆದಿದ್ದರೆ ಶಿವಕುಮಾರ್ ಅವರಿಗೆ ಸುಲಭವಾಗಿ ಜಾಮೀನು ಲಭ್ಯವಾಗುತ್ತಿತ್ತು. ಆದರೆ, ಇಡಿ ತನಿಖಾಧಿಕಾರಿಗಳು ಬಗೆದಷ್ಟೂ ಒಂದೊಂದೇ ಪ್ರಕರಣಗಳು ಇದಕ್ಕೆ ಸೇರಿಕೊಂಡವು. ಪುತ್ರಿ ಐಶ್ವರ್ಯಾ ವಿಚಾರಣೆ ವೇಳೆ ನೀಡಿದ ಹೇಳಿಕೆಗಳು ಕೂಡ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿತು. ಇದರ ಪರಿಣಾಮ ಶಿವಕುಮಾರ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಇಡಿ ಅಧಿಕಾರಿಗಳಿಗೆ ಪ್ರಬಲ ಕಾರಣಗಳು ಸಿಕ್ಕಿದವು.
ಆರ್ಥಿಕ ಅಪರಾಧಗಳ ಕುರಿತು ಇಡಿ ನಡೆಸುತ್ತಿರುವ ತನಿಖೆ, ಈ ತನಿಖಾ ಸಂಸ್ಥೆಗೆ ಇರುವ ಅಧಿಕಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸರಿಯಾದ ಮಾಹಿತಿಯೇ ಇಲ್ಲದ ಕಾರಣ ಶಿವಕುಮಾರ್ ಅವರಿಗೆ ಜಾಮೀನು ಸಿಗಬಹುದು ಎಂದು ಬಹುತೇಕರು ನಿರ್ಧರಿಸಿದ್ದರು. ಆದರೆ, ತೆರಿಗೆ ಪಾವತಿಸಿ ಆದಾಯ ಘೋಷಿಸಿದ ಮಾತ್ರಕ್ಕೆ ಗಳಿಸಿದ್ದೆಲ್ಲವೂ ಸಕ್ರಮವಾಗುವುದಿಲ್ಲ. ಗಳಿಸಿದ ಹಣಕ್ಕೆ ಮೂಲ ತೋರಿಸಿ ಆ ಮೂಲಗಳು ಕಾನೂನು ಬದ್ಧವಾಗಿದ್ದರೆ ಮಾತ್ರ ಅದು ಸಕ್ರಮ ಆದಾಯವಾಗುತ್ತದೆ ಎಂದು ಇಡಿ ಪರ ವಕೀಲರು ಕಳೆದ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದಾಗಲೇ ಪ್ರಕರಣ ಇಷ್ಟೊಂದು ಗಂಭೀರವಿದೆ ಎಂಬುದು ಅರ್ಥವಾಗಿದ್ದು. ಇದೀಗ ಜಾಮೀನು ನಿರಾಕರಣೆಯೊಂದಿಗೆ ಆ ಗಂಭೀರತೆಯ ಪರಿಣಾಮವೂ ಗೊತ್ತಾಗಿದೆ.

ಜಾಮೀನು ನಿರಾಕರಣೆಗೆ ಇಡಿ ಆಕ್ಷೇಪಣೆಗಳೇನು
1997ರಿಂದ 2017ರವರೆಗೆ ಶಿವಕುಮಾರ್ ಅವರು ತಮ್ಮ ಕೃಷಿ ಆದಾಯ 1.38 ಕೋಟಿ ರೂ. ಎಂದು ತೋರಿಸಿದ್ದರು. ಆದರೆ, ಅವರ ಘೋಷಿತ ಆಸ್ತಿಯೇ (ತೆರಿಗೆ ಪಾವತಿಸಿದ್ದು) 800 ಕೋಟಿ ರೂಪಾಯಿ ಇದೆ. ಇಷ್ಟೊಂದು ಆದಾಯ ಬಂದಿದ್ದು ಎಲ್ಲಿಂದ ಅದರ ಮೂಲ ಯಾವುದು ಎಂಬುದು ತೋರಿಸಿಲ್ಲ. ಹೀಗಾಗಿ ಈ ಆದಾಯ ಸಕ್ರಮವಾಗಿ ಬಂದಿರುವುದಲ್ಲ. ಆದ್ದರಿಂದ ಇದೊಂದು ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರಿರುವ ಪ್ರಕರಣವಾಗಿರುವುದರಿಂದ ಲಘುವಾಗಿ ಪರಿಗಣಿಸಬಾರದು. ಗಂಭೀರ ಪ್ರಕರಣಗಳಿಗೆ ಜಾಮೀನು ನೀಡಿದರೆ ತನಿಖೆಯ ಉದ್ದೇಶವೇ ವ್ಯರ್ಥವಾಗುತ್ತದೆ ಎಂಬುದು ಇಡಿಯ ಮೊದಲ ವಾದ.
ಇದೊಂದು ಗಂಭೀರ ಪ್ರಕರಣ. ಸುಮಾರು 317 ಖಾತೆಗಳ ಮೂಲಕ ಹಣದ ವಹಿವಾಟು ನಡೆದಿದೆ. ಅದರಲ್ಲೂ ಕೇವಲ ಎರಡು ಖಾತೆಗಳಲ್ಲಿ 161 ಕೋಟಿ ರೂ. ವಹಿವಾಟು ನಡೆದಿದೆ. ಈ ಎಲ್ಲಾ ವಹಿವಾಟುಗಳು ಯಾರ ಮಧ್ಯೆ ನಡೆದಿದೆ. ಅವುಗಳಲ್ಲಿ ಬೇನಾಮಿ ವ್ಯವಹಾರಗಳು ಯಾವುವು ಎಂಬುದೆಲ್ಲಾ ತನಿಖೆಯಾಗಬೇಕಿದೆ. ತನಿಖೆಯ ವ್ಯಾಪ್ತಿ ದೊಡ್ಡದಿದ್ದು, ವಿಚಾರಣೆ ಮುಕ್ತಾಯವಾಗಿಲ್ಲ. 14 ದಿನ ಶಿವಕುಮಾರ್ ಅವರು ಇಡಿ ವಶದಲ್ಲಿದ್ದರೂ ತನಿಖೆ ನಡೆಸಲು ಸಾಧ್ಯವಾಗಿದ್ದು 4 ಗಂಟೆ ಮಾತ್ರ. ಈ ಸಂದರ್ಭದಲ್ಲಿ ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿಲ್ಲ. ಪುತ್ರಿಯ ಹೆಸರಿನಲ್ಲಿ 108 ಕೋಟಿ ರೂ. ಮೊತ್ತದ ಆಸ್ತಿ ಇದ್ದು, ಅದರಲ್ಲಿ 40 ಕೋಟಿ ರೂ. ಸಾಲವಿದೆ. ಈ ಸಾಲ ಕೊಟ್ಟವರು ಯಾರು ಎಂಬುದೇ ಪುತ್ರಿಗೆ ಗೊತ್ತಿಲ್ಲ. ಕುಟುಂಬದ ಹೆಸರಿನಲ್ಲಿ ಮಾತ್ರವಲ್ಲದೆ, ಅವರಿಗೆ ಗೊತ್ತಿಲ್ಲದಂತೆ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇವೆಲ್ಲದರ ಬಗ್ಗೆ ವಿಚಾರಣೆ ನಡೆಸಬೇಕಿದೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಅಥವಾ ಸಾಕ್ಷಿಗಳನ್ನು ತಿರುಚುವ ಕೆಲಸ ಆಗಬಹುದು. ಆದ್ದರಿಂದ ನ್ಯಾಯಾಂಗ ಬಂಧನದಲ್ಲಿದ್ದರೆ ಬೇಕಾದಾಗ ಕರೆಸಿ ವಿಚಾರಣೆ ನಡೆಸಬಹುದು. ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಬೇಡ ಎಂಬುದು ಇಡಿ ವಾದವಾಗಿತ್ತು. ಇದಕ್ಕೆ ನ್ಯಾಯಾಲಯ ಅಸ್ತು ಎಂದಿದೆ.

ಜಾಮೀನು ನಿರಾಕರಣೆಗೆ 5 ಕಾರಣಗಳು
1. ಇದು ಹಣದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಹಲವಾರು ಮಂದಿಯ ಮಧ್ಯೆ ಆಗಿರುವಂತಹದ್ದು. ಎಲ್ಲಾ ಮಾಹಿತಿಗಳನ್ನು ಪಡೆಯಬೇಕಾದರೆ ಇನ್ನಷ್ಟು ಮಂದಿಯನ್ನು ವಿಚಾರಣೆ ನಡೆಸಬೇಕಾಗುತ್ತದೆ. ವ್ಯವಹಾರ ನಡೆಸಿದವರೆಲ್ಲರೂ ಆಪ್ತರು, ಪರಿಚಯಸ್ಥರು ಆಗಿರುವುದರಿಂದ ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದರೆ ಇತರರೊಂದಿಗೆ ಮುಕ್ತವಾಗಿ ಚರ್ಚಿಸಿ ತನಿಖೆಯ ದಾರಿ ತಪ್ಪಿಸಬಹುದು.
2. ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್ ಮಾತ್ರವಲ್ಲ, ಅವರ ಕುಟುಂಬದವರ ಹೆಸರೂ ಕೇಳಿಬಂದಿದೆ. ಅವರ ಪುತ್ರಿಯನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಆದರೆ, ತಾಯಿ, ಸಹೋದರ, ಪತ್ನಿಯ ವಿಚಾರಣೆ ಆಗಿಲ್ಲ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದರೆ ಮುಖಾಮುಖಿ ವಿಚಾರಣೆ ಕಷ್ಟವಾಗಬಹುದು.
3. ಶಿವಕುಮಾರ್ ಅವರ ಆಸ್ತಿ ಹೆಚ್ಚಳವಾಗಿದ್ದು ಬಹುತೇಕ ಅವರು ಅಧಿಕಾರದಲ್ಲಿದ್ದಾಗ. ಅಂದರೆ, 1999-2004, 2004-2006, 2013-2018ರ ಅವಧಿಯಲ್ಲಿ. ಇಲ್ಲಿ ಅಧಿಕಾರ ದುರುಪಯೋಗವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆ ಕುರಿತು ವಿಚಾರಣೆ ನಡೆಸಬೇಕಾದರೆ ಶಿವಕುಮಾರ್ ಹೊರಗಿರುವುದು ಸರಿಯಲ್ಲ.
4. ಬ್ಯಾಂಕ್ ಖಾತೆಗಳು, ಅದರಲ್ಲಿ ವರ್ಗಾವಣೆಯಾಗಿರುವ ಹಣ, ಆ ಹಣದ ಮೂಲ ಹೀಗೆ ನಾನಾ ಅಂಶಗಳ ಬಗ್ಗೆ ತನಿಖೆ ಜತೆಗೆ ದೆಹಲಿ ಫ್ಲಾಟ್ ಗಳಲ್ಲಿ ಪತ್ತೆಯಾದ ಹಣದ ಕುರಿತಂತೆ ನ್ಯಾಯಾಲಯದ ಆದೇಶದ ಕಾರಣ ಬಂಧನಕ್ಕೆ ಒಳಗಾಗದವರನ್ನು ಕೂಡ ವಿಚಾರಣೆ ನಡೆಸಬೇಕಿದ್ದು, ಅದಕ್ಕೆ ಕಾಲಾವಕಾಶ ಬೇಕು.
5. ಡಿ.ಕೆ.ಶಿವಕುಮಾರ್ 14 ದಿನ ಇಡಿ ವಶದಲ್ಲಿದ್ದರೂ ಆ ಪೈಕಿ ಕೊನೆಯ ನಾಲ್ಕು ದಿನ ಆಸ್ಪತ್ರೆಯಲ್ಲೇ ಇದ್ದರು. ಈ ಅವಧಿಯಲ್ಲಿ ತನಿಖೆ ಸಾಖ್ಯವಾಗಿಲ್ಲ. ಇನ್ನು ಉಳಿದ 11 ದಿನಗಳಲ್ಲಿ ಕೇವಲ ನಾಲ್ಕು ಗಂಟೆ ಮಾತ್ರ ಅವರು ವಿಚಾರಣೆಗೆ ಸಹಕರಿಸಿದ್ದಾರೆ. ಉಳಿದ ಅವಧಿಯಲ್ಲಿ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ ಎಂದು ಇಡಿ ಅಧಿಕಾರಿಗಳು ನೀಡಿದ ಮಾಹಿತಿ.
ಈ ಎಲ್ಲಾ ಕಾರಣಗಳಿಂದಾಗಿ ಶಿವಕುಮಾರ್ ಅವರು ಮತ್ತಷ್ಟು ದಿನ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಇದರ ಮಧ್ಯೆಯೇ ಇಡಿ ಅಧಿಕಾರಿಗಳು ಇನ್ನಷ್ಟು ಆಳಕ್ಕೆ ತನಿಖೆಯನ್ನು ಕೊಂಡೊಯ್ಯುವಂತೆ ಕಾಣುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಶಿವಕುಮಾರ್ ಮಾತ್ರವಲ್ಲ, ಅವರೊಂದಿಗೆ ವ್ಯಾವಹಾರ ನಡೆಸಿದ ಇತರರಿಗೂ ಅಪಾಯ ಎದುರಾಗುವುದು ಖಂಡಿತ.