ಕರ್ನಾಟಕದಿಂದ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ರಾಷ್ಟ್ರೀಯ ಉದ್ಯಾನ) ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766 (ಹಿಂದೆ 212)ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯಬೇಕು ಎಂದು ದಶಕಗಳಿಂದ ನಡೆಯುತ್ತಿರುವ ಅಭಿವೃದ್ಧಿ ಹೆಸರಿನ ಟಿಂಬರ್ ಸೇರಿದಂತೆ ವಾಣಿಜ್ಯ ಲಾಭಕ್ಕಾಗಿ ನಡೆಯುತ್ತಿರುವ ಲಾಬಿಯ ಹೋರಾಟಕ್ಕೆ ಕೊನೆಗೂ ಸೋಲಾಗುವುದು ಖಚಿತವಾಗುತ್ತಿದೆ. ನಿಷೇಧ ತೆರವು ಸಾಧ್ಯವೇ ಇಲ್ಲ ಎಂದು ಕರ್ನಾಟಕ ದೃಢ ನಿಲುವು ತಳೆದಿದ್ದರೂ ಬೇರೆ ಬೇರೆ ಮಾರ್ಗಗಳಿಂದ ನಿಲುವು ಸಡಿಲಿಸುವಂತೆ ರಾಜ್ಯದ ಮೇಲೆ ಒತ್ತಡ ತರುತ್ತಲೇ ಇದ್ದ ಕೇಂದ್ರ ಸರ್ಕಾರವೂ ಈಗ ಕಾನೂನು ಹೋರಾಟದಲ್ಲಿ ರಾಜ್ಯದ ದೃಢ ನಿಲುವಿಗೆ ಮಣಿದಿದೆ.
ಇದರ ಪರಿಣಾಮವೇ ಬಂಡೀಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಕರ್ನಾಟಕದ ಎರಡು ಮತ್ತು ಕೇರಳದ ಮೂರು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸೂಚಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ. ಅಷ್ಟೇ ಅಲ್ಲ, ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯನ್ನು ಶಾಶ್ವತವಾಗಿ ಮುಚ್ಚಿದರೂ ಈ ಪರ್ಯಾಯ ಮಾರ್ಗಗಳಿಂದಾಗಿ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಅಂಶವನ್ನೂ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ. ಇದರೊಂದಿಗೆ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ನಿಷೇಧಿಸಿ ಕರ್ನಾಟಕ ಸರ್ಕಾರ 2009ರಲ್ಲಿ ಹೊರಡಿಸಿದ ಆದೇಶದ ವಿರುದ್ಧ ಕೇರಳ ಸರ್ಕಾರ ದಶಕಗಳಿಂದ ನಡೆಸುತ್ತಿರುವ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಗಳು ಗೋಚರಿಸುತ್ತಿವೆ.
ಕೇರಳದ ಕೋಳಿಕ್ಕೋಡ್ಅನ್ನು ಕರ್ನಾಟಕದ ಕೊಳ್ಳೇಗಾಲದೊಂದಿಗೆ ಬೆಸೆಯುವ 272 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧವಿದೆ. 2009ರಲ್ಲಿ ರಾಜ್ಯ ಸರ್ಕಾರ ರಾತ್ರಿ ವಾಹನ ಸಂಚಾರ ನಿಷೇಧಿಸಿತ್ತು. ಇದಕ್ಕೆ ತಮಿಳುನಾಡು ಸಮ್ಮತಿಸಿತ್ತಾದರೂ ಕೇರಳ ಕ್ಯಾತೆ ತೆಗೆದಿತ್ತು. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಲ್ಲದೆ, ರಾಜಕೀಯವಾಗಿಯೂ ರಾಜ್ಯದ ಮೇಲೆ ಒತ್ತಡ ಹೇರುತ್ತಲೇ ಬಂದಿತ್ತು. ಆದರೆ, ರಾಜಕೀಯ ಒತ್ತಡಕ್ಕೆ ಸರ್ಕಾರ ಮಣಿಯದ ಕಾರಣ ಕಾನೂನು ಹೋರಾಟ ತೀವ್ರಗೊಳಿಸಿತ್ತು. ಅಲ್ಲೂ ಕೂಡ ಅದಕ್ಕೆ ನ್ಯಾಯ ಸಿಗಲಿಲ್ಲ. ರಾತ್ರಿ ವಾಹನ ಸಂಚಾರ ನಿಷೇಧಿಸಿದ್ದ ರಾಜ್ಯದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.
ಆದರೂ ಹೋರಾಟ ಮುಂದುವರಿಸಿದ ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಯ ಹೆದ್ದಾರಿ 766ರ ಬಂಡೀಪುರ ಣರಣ್ಯದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಸಿದ್ಧಪಡಿಸುವಂತೆ ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರ ಎಲಿವೇಟೆಡ್ ರಸ್ತೆ ನಿರ್ಮಿಸುವ ಬಗ್ಗೆ ರಾಜ್ಯದ ಅಭಿಪ್ರಾಯ ಕೇಳಿತ್ತಾದರೂ ಅದಕ್ಕೆ ಸರ್ಕಾರ ಒಪ್ಪಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆಯೂ ಈ ಪ್ರಸ್ತಾವನೆ ಇಟ್ಟಿತ್ತು. ಇದನ್ನು ಒಪ್ಪದ ಸುಪ್ರೀಂ ಕೋರ್ಟ್, ರಾತ್ರಿ ಸಂಚಾರ ನಿಷೇಧ ತೆರವು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿತ್ತಲ್ಲದೆ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚುವ ನಿಟ್ಟಿನಲ್ಲಿ ಯೋಚನೆ ಮಾಡಿ. ಪರ್ಯಾಯ ರಸ್ತೆ ಹುಡುಕಿ ಎಂದು ಆ. 7ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿ ನಾಲ್ಕು ವಾರಗಳ ಸಮಯಾವಕಾಶ ನೀಡಿತ್ತು. ಅದರಂತೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಪರ್ಯಾಯ ಮಾರ್ಗಗಳ ಕುರಿತು ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಿದೆ.
ಬಂಡೀಪುರ ರಸ್ತೆಗೆ ಪರ್ಯಾಯವಾಗಿ ಕರ್ನಾಟಕ ರಾಜ್ಯ ಹೆದ್ದಾರಿ 90, ರಾಜ್ಯ ಹೆದ್ದಾರಿ 89 ಇದೆ. ಹೆದ್ದಾರಿ 90 ಮೈಸೂರು ಜಿಲ್ಲೆಯ ಹುಣಸೂರು, ಕಲ್ಬೆಟ್ಟ, ಪಂಚವಳ್ಳಿ, ತಿತಿಮತಿ, ಗೋಣಿಕೊಪ್ಪಲು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಬಂಡೀಪುರ ಮಾರ್ಗಕ್ಕೆ ಹೋಲಿಸಿದರೆ ಈ ರಸ್ತೆ ಮೂಲಕ ಹೆಚ್ಚುವರಿಯಾಗಿ 20 ಕಿ.ಮೀ. ಕ್ರಮಿಸಬೇಕಾಗುತ್ತದೆ. ಅದೇ ರೀತಿ ರಾಜ್ಯ ಹೆದ್ದಾರಿ 89 ವಿರಾಜಪೇಟೆ-ಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೇರಳ ರಾಜ್ಯ ಹೆದ್ದಾರಿ 59 ಮತ್ತು ಕೇರಳದ ಪ್ರಮುಖ ಜಿಲ್ಲಾ ರಸ್ತೆಗಳಾದ 002, 001ನ್ನು ಬಳಸಿಕೊಂಡು ಕೋಳಿಕ್ಕೋಡ್ ಹೋಗಬಹುದು. ಈ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ರಾಷ್ಟ್ರೀಯ ಹೆದ್ದಾರಿ 766ರ ಬಂಡೀಪುರ ರಕ್ಷಿತಾರಣ್ಯದ ಮಾರ್ಗವನ್ನು ಶಾಶ್ವತವಾಗಿ ಮುಚ್ಚಿದರೂ ಯಾವುದೇ ಸಮಸ್ಸೆಯಾಗದು ಎಂಬುದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದ ಸಾರಾಂಶ.
ಇದಿಷ್ಟೇ ಅಲ್ಲ, ಕರ್ನಾಟಕ ತನ್ನ ರಾಜ್ಯ ಹೆದ್ದಾರಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದೆ. ಕೇರಳ ಸರ್ಕಾರವೂ ತನ್ನ ಒಂದು ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಮಾಡಿದೆ. ಇದರ ಜತೆಗೆ ಕೇರಳವು ತನ್ನ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ತಾಂತ್ರಿಕವಾಗಿ ಮತ್ತು ಜಾಗದ ಅಗತ್ಯತೆಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಬೇಕು. ಈ ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ರೂಪಿಸಿ ಎರಡೂ ಬದಿ ನಿರ್ದಿಷ್ಟ ಪ್ರಮಾಣದ ಜಾಗ ಬಿಟ್ಟುಬಿಡಬೇಕು. ರಾಜ್ಯ ಸರ್ಕಾರ ಈ ಮಾನದಂಡ ಪೂರೈಸಿದರೆ ಅದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಪರಿಗಣಿಸಲು ಚಿಂತಿಸಲಾಗುವುದು ಎಂದೂ ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರದ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹಾಗೂ ಎಸ್.ರವೀಂದ್ರ ಭಟ್ ನೇತೃತ್ವದ ದ್ವಿಸದಸ್ಯ ಪೀಠ ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಗೆ ಸೂಚಿಸಿದೆ.
ಕೇಂದ್ರದ ನಿಲುವು ಬದಲಿದ್ದರಿಂದ ಒಪ್ಪದೆ ಕೇರಳಕ್ಕೆ ಬೇರೆ ಮಾರ್ಗವಿಲ್ಲ
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 (ಹಿಂದೆ 212) ಮತ್ತು 67ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಅದರಲ್ಲೂ ರಾತ್ರಿ ವೇಳೆ ವಾಹನಗಳ ಸಂಚಾರದಿಂದ ವನ್ಯಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿದ್ದವು. ಇದನ್ನು ತಡೆಗಟ್ಟಲು ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲೂ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಬೇಕು ಎಂದು ಹುಲಿ ಯೋಜನೆ ನಿರ್ದೇಶಕರಾಗಿದ್ದ ರಾಜು ಅವರು 2009ರಲ್ಲಿ ಆಗಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ 2009 ಜೂ.3ರಂದು ರಾತ್ರಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದರು. ಆ ನಂತರದಲ್ಲಿ ಬಂಡೀಪುರದಲ್ಲಿ ವನ್ಯಜೀವಿಗಳು ಅಪಘಾತದಲ್ಲಿ ಸಾವನ್ನಪ್ಪುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಕರ್ನಾಟಕ ಸರ್ಕಾರ ಮತ್ತು ಪರಿಸರವಾದಿಗಳು ಬಂಡೀಪುರ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಜತೆಗೆ ಪರ್ಯಾಯ ರಸ್ತೆಗಳ ಮೂಲಕ ಹೆಚ್ಚು ದೂರ ಕ್ರಮಿಸಬೇಕಾದ ಪರಿಸ್ಥಿತಿ ಇಲ್ಲದ ಕಾರಣ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟು ವನ್ಯಜೀವಿಗಳ ಪ್ರಾಣದ ಜತೆ ಚೆಲ್ಲಾಟವಾಡುವ ಅಗತ್ಯವಿಲ್ಲ ಎಂದೂ ಹೇಳಿದ್ದವು. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿತ್ತು. ಆದರೆ, ಕೇರಳ ಸರ್ಕಾರ ಮತ್ತು ಕೇರಳದ ಒತ್ತಡದಿಂದ ಕೇಂದ್ರ ಸರ್ಕಾರ ನಿಷೇಧ ತೆರವಿಗೆ ಪ್ರಯತ್ನಿಸುತ್ತಲೇ ಇತ್ತು. ಇದೀಗ ಕೇಂದ್ರ ತನ್ನ ನಿಲುವು ಬದಲಿಸಿದ್ದರಿಂದ ಕೇರಳಕ್ಕೆ ಅನ್ಯ ಮಾರ್ಗವಿಲ್ಲದಂತಾಗಿದೆ.