ತಿಂಗಳುಗಳ ಕಾಲ ಗಗನಕ್ಕೇರಿದ ಈರುಳಿ ಬೆಲೆಯನ್ನು ನಿಯಂತ್ರಿಸಲಾಗದ ಭಾರತ ಸರ್ಕಾರ ನೆರೆಯ ಚೀನಾ ಹಾಗೂ ಟರ್ಕಿ ದೇಶಗಳಿಂದ 11,000 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಂಡಿದೆ!
`ದಿ ಪ್ರಿಂಟ್’ ಪ್ರಕಟಿಸಿದ ವರದಿ ಈ ಮಾಹಿತಿಯನ್ನು ಹೊರಹಾಕಿದೆ. ಭಾನುವಾರ ಮತ್ತು ಸೋಮವಾರ ಹಲವು ಮಂದಿ ಟ್ವಿಟರ್‍ನಲ್ಲಿ ಹಳದಿ ಬಣ್ಣ, ನುಣುಪಾದ ಈರುಳ್ಳಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವು ಎಲ್ಲಿ ಬೆಳೆದ ಈರುಳ್ಳಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.
ಸುಳಿವು ಬೆನ್ನುಹತ್ತಿದ ದಿ ಪ್ರಿಂಟ್, ಭಾರತ ಸರ್ಕಾರ ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಟನ್ ಈರುಳ್ಳಿ ತರಿಸಿಕೊಂಡಿರುವುದಾಗಿ ಲಭ್ಯವಾಗಿರುವ ದಾಖಲೆಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಅಗ್ಗದ ಆಟಿಕೆಗಳು, ಎಲೆಕ್ಟ್ರಾನಿಕ್ ಸರಕನ್ನು ಭಾರತದ ಮಾರುಕಟ್ಟೆಗೆ ಪೂರೈಸುತ್ತಿದ್ದ ಚೀನಾ ಈಗ ಆಹಾರ-ಕೃಷಿ ಉತ್ಪನ್ನಗಳಿಗೆ ಪೂರೈಸಲಾರಂಭಿಸಿದಂತಾಗಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಭಾರತ 2ನೇ ಅತಿ ದೊಡ್ಡ ಈರುಳ್ಳಿ ಉತ್ಪಾದಕ ದೇಶ. ಆದರೆ ದಿಢೀರನೆ ಈರುಳ್ಳಿ 80 ರಿಂದ 200 ರೂ.ಗಳವರೆಗೆ ತಲುಪಿದೆ.
ಆದರೆ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೋರೇಷನ್ ಎಂಬ ಸಾರ್ವಜನಿಕ ಟ್ರೇಡಿಂಗ್ ಏಜೆನ್ಸಿ ಜಾಗತಿಕ ಟೆಂಡರ್ ಕರೆದು ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಈರುಳ್ಳಿ ಖರೀದಿಸಿದೆ. ಈ ಕುರಿತು ದಿ ಪ್ರಿಂಟ್‍ಗೆ ದಾಖಲೆಗಳು ಲಭ್ಯವಾಗಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಆದರೆ ಆಶ್ಚರ್ಯದ ಸಂಗತಿಯೆಂದರೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರ ವರದಿಗಾರರ ನೀಡಿರುವ ಮಾಹಿತಿಯ ಪ್ರಕಾರ 2020ರ ಜನವರಿ 31ರಂದು ಈರುಳ್ಳಿ ಭಾರತಕ್ಕೆ ಬರಬೇಕಿದೆ. ಬಂದ ನಂತರ ಈರುಳ್ಳಿ ಬೆಲೆ 70 ರಿಂದ 80 ರೂ.ಗಳಿಗೆ ಇಳಿಯಲಿದೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ನೆದರ್‍ಲ್ಯಾಂಡ್, ಈಜಿಪ್ತ್, ಇರಾನ್ ಮತ್ತು ರಷ್ಯಾಗಳಿಂದ ಈರುಳ್ಳಿ ತರಿಸಿಕೊಳ್ಳುತ್ತಿರುವುದಾಗಿ ವರದಿ ಉಲ್ಲೇಖಿಸಿದೆ.
ನವೆಂಬರ್‍ನಲ್ಲಿಯೇ ಸರ್ಕಾರ 1.2 ಲಕ್ಷ ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ಎಂಎಂಟಿಸಿ ಕೇವಲ 40,000 ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯಲ್ಲಿ ತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪೈಕಿ 11,000 ಮೆಟ್ರಿಕ್ ಟನ್ ಈರುಳ್ಳಿಯನ್ನು ಕಳೆದ ವಾರ ಆರ್ಡರ್ ಮಾಡಲಾಗಿತ್ತು. ಈ ಪೈಕಿ 290 ಮೆಟ್ರಿಕ್ ಟನ್ ಈರುಳ್ಳಿ ಭಾರತದ ಬಂದರನ್ನು ಈಗಾಗಲೇ ತಲುಪಿದೆ.
ಚೀನಾದಿಂದ ಬಂದರೂ ದರದಲ್ಲಿ ಹೆಚ್ಚೇನು ವ್ಯತ್ಯಾಸವಾಗುತ್ತಿಲ್ಲ. 600 ಡಾಲರ್ (42,702ರೂ.)ಗೆ ಮೆಟ್ರಿಕ್ ಟನ್‍ನಂತೆ ಈರುಳ್ಳಿ ಆಮದು ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿತ್ತು. ಆದರೆ ಚೀನಾದಿಂದ ಆಮದಾಗುತ್ತಿರುವ ಈರುಳ್ಳಿ ಟನ್‍ಗೆ 714 ಡಾಲರ್ (50,886 ರೂ)ಗಳ ದರಕ್ಕೆ ಭಾರತಕ್ಕೆ ಬರುತ್ತಿದೆ. ಭಾರತ ಸರ್ಕಾರದ ಆಮದು ನೀತಿ ಹಲವು ದೇಶಗಳು ಬಿಡ್ ಮಾಡಲು ಮುಂದಾಗದಂತೆ ಮಾಡಿದೆ. ಹಾಗಾಗಿ ಚೀನಾ ಮತ್ತು ಟರ್ಕಿಗಳಿಂದ ಮಾತ್ರಕ್ಕೆ ಸದ್ಯಕ್ಕೆ ಈರುಳ್ಳಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.