ಕೋವಿಡ್ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ಕಾಂಗ್ರೆಸ್‌ನ ಸಾರ್ವಜನಿಕ ಮತಪ್ರಚಾರ ಸಭೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮಾನತುಗೊಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಎಲ್ಲಾ ರಾಜಕೀಯ ನೇತಾರರಿಗೂ ಈ ಕುರಿತು ಯೋಚಿಸುವಂತೆ ಸಲಹೆ ನೀಡಿದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ ಸಾರ್ವಜನಿಕ ರ್ಯಾಲಿಗಳನ್ನು ಸ್ಥಗಿತಗೊಳಿಸುತ್ತಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
“ಪ್ರಸ್ತುತ ಸಂದರ್ಭಗಳಲ್ಲಿ ದೊಡ್ಡ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸಲು ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜನರ ಆರೋಗ್ಯವನ್ನು ಗಮನಹರಿಸದರೆ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿರುವ ರಾಜಕಾರಣಿಗಳ ನಡುವೆ ರಾಹುಲ್ ಗಾಂಧಿ ಅವರ ಈ ನಿರ್ಧಾರ ಮಹತ್ವಪೂರ್ಣವೆನಿಸಿದೆ
ಭಾರತದಾದ್ಯಂತ 2,61,500 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ರಾಹುಲ್ ಗಾಂಧಿ ತಮ್ಮ ಈ ನಿರ್ಧಾರ ಪ್ರಕಟಿಸಿದ್ದಾರೆ.
ರಾಹುಲ್ ಗಾಂಧಿ ಈ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕಳೆದ ವರ್ಷದ ಆರಂಭದಲ್ಲೂ ಅಷ್ಟೇ, ಸೋಂಕು ಭಾರತದಲ್ಲಿ ಕಾಣಿಸಿಕೊಳ್ಳುವಾಗಲೇ ರಾಹುಲ್ ಗಾಂಧಿ ಕರೋನಾ ಸೋಂಕಿನ ಕುರಿತಂತೆ ಮುನ್ನೆಚ್ಚರಿಕೆ ವಹಿಸುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡಿದ್ದರು. ಸುನಾಮಿಯಂತ ಭೀಕರ ದುರಂತ ಬರಲಿದೆ ಎಂದು ಎಚ್ಚರಿಸಿದ್ದರು.
ಈ ಹಿಂದೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಜನತೆಯ ಆರೋಗ್ಯದ ದೃಷ್ಟಿಯಿಂದ ಕೊನೆಯ ದಿನದ ಮತಪ್ರಚಾರವನ್ನು ಬಸವಕಲ್ಯಾಣದಲ್ಲಿ ಮೊಟಕುಗೊಳಿಸಿದ್ದರು.





