ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಪ್ರಾದೇಶಿಕ ಪಕ್ಷಗಳಿಗೆ ಬಲ ಬಂದಂತಾಗಿದೆ. ಇದು ತಮ್ಮದು ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಪ್ರತಿಪಾದಿಸುತ್ತಿರುವ ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ ಮಾತು. ಅವರ ಮಾತು ಅಕ್ಷರಶಃ ನಿಜ. ಅಂತಾರಾಜ್ಯ ವಿವಾದಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದಾಗಲೇ ಪರಿಹಾರ ಸಿಗುವುದು ಹೆಚ್ಚು. ಅಷ್ಟೇ ಅಲ್ಲ, ಕೇಂದ್ರದಿಂದ ರಾಜ್ಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಹರಿದು ಬರುವುದೂ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿದಾಗ ಮಾತ್ರ. ಇದಕ್ಕೆ ಉದಾಹರಣೆ, ಕೇಂದ್ರದಲ್ಲಿ ಎನ್ ಡಿಎ ಮತ್ತು ಯುಪಿಎ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಆ ಸರ್ಕಾರದಲ್ಲಿ ಭಾಗಿಯಾಗಿದ್ದ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಕ್ಕೆ ಸಾಕಷ್ಟು ಅನುಕೂಲಗಳನ್ನು ಮಾಡಿಸಿಕೊಂಡವು. ಅದೇ ರೀತಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಪ್ರತಿವರ್ಷ ಕಾಣಿಸಿಕೊಳ್ಳುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದು ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇದ್ದಾಗ. ಅಷ್ಟರ ಮಟ್ಟಿಗೆ ಪ್ರಾದೇಶಿಕ ಪಕ್ಷಗಳು ರಾಜ್ಯದ ಹಿತ ಕಾಪಾಡಲು ಶ್ರಮಿಸುತ್ತವೆ.
ಮಾಜಿ ಪ್ರಧಾನಿ ದೇವೇಗೌಡರ ಮಾತನ್ನೇ ತೆಗೆದುಕೊಳ್ಳುವುದಾದರೆ, ದೆಹಲಿ ಚುನಾವಣೆ ಫಲಿತಾಂಶ ಪ್ರಾದೇಶಿಕ ಪಕ್ಷಗಳಿಗೆ ಅಂದರೆ ರಾಜ್ಯದಲ್ಲಿ ಜೆಡಿಎಸ್ ಗೆ ಹೆಚ್ಚು ಬಲ ಬಂದಂತಾಗಿದೆ. ಆದರೆ, ಈ ಬಲವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಳಿಸಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಜನರ ಮಧ್ಯೆ ಕೊಂಡೊಯ್ದು ಅಧಿಕಾರಕ್ಕೆ ತರುವಂತಹ ಛಾತಿ ಇರುವವರು ಪಕ್ಷದಲ್ಲಿ ಯಾರಿದ್ದಾರೆ? ದೇವೇಗೌಡರಿಗೆ ಈ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಇದೆಯಾದರೂ ವಯಸ್ಸಿನ ಕಾರಣದಿಂದ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸುವುದು ಕಷ್ಟಸಾಧ್ಯ.
ದೇವೇಗೌಡರು ಹೇಳಿದಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಗಟ್ಟಿಯಾಗಿ ನೆಲೆನಿಲ್ಲಬೇಕು ಎಂದಾದರೆ ಅದು ಜೆಡಿಎಸ್ ನಿಂದ ಮಾತ್ರ ಸಾಧ್ಯ. ಏಕೆಂದರೆ ರಾಜ್ಯದಲ್ಲಿ ಇನ್ನುಳಿದಿರುವ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು. ಉಳಿದಂತೆ ಸಣ್ಣ ಪುಟ್ಟ ಪಕ್ಷಗಳಿದ್ದರೂ ಅವು ಹೆಸರಿಗೆ ಮಾತ್ರ ಎನ್ನುವಂತಿವೆ. ಅಷ್ಟೇ ಅಲ್ಲ, ಆ ಪಕ್ಷದಲ್ಲಿ ಜನರ ಮಧ್ಯೆ ಹೋಗುವ ನಾಯಕರೂ ಇಲ್ಲ. ಆದರೆ, ದೇವೇಗೌಡರ ಗರಡಿಯಲ್ಲಿ ಪಳಗಿರುವ ಜೆಡಿಎಸ್ ಪಕ್ಷ ಮತ್ತು ಆ ಪಕ್ಷದ ನಾಯಕರಿಗೆ ರಾಜ್ಯದಲ್ಲಿ ಪಕ್ಷ ಗಟ್ಟಿಗೊಳಿಸುವ ಎಲ್ಲಾ ಸಾಮರ್ಥ್ಯ ಇದೆ. ಏಕೆಂದರೆ, ಪ್ರಾದೇಶಿಕ ಪಕ್ಷಗಳ ನಾಯಕರು ಗಟ್ಟಿಯಾಗಿ ನಿಂತರೆ ಜನ ತಾವಾಗಿಯೇ ಅವರ ಬಳಿ ಬಂದು ಅಧಿಕಾರ ಕೊಡುತ್ತಾರೆ.
ಇದಕ್ಕೆ ಉದಾಹರಣೆ 1993ರ ಚುನಾವಣೆ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪರಿವಾರ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಎದ್ದುನಿಂತಾಗ ಜನ ಮೆಚ್ಚಿ ಅಧಿಕಾರಕ್ಕೆ ತಂದರು. ನಂತರ ಎಸ್.ಆರ್.ಬೊಮ್ಮಾಯಿ ಅವರವರೆಗೂ ಅದು ಮುಂದುವರಿದಿತ್ತು. ಆದರೆ, ಪಕ್ಷದೊಳಗಿನ ನಾಯಕರೇ ಪರಸ್ಪರ ಕಾಲೆಳೆಯುತ್ತಾ ಅಧಿಕಾರಕ್ಕಾಗಿ ಹಪಹಪಿಸಿದಾಗ ಕೈ ಹಿಡಿದ ಜನ ಕೈಬಿಟ್ಟು ದೂರ ಸರಿದರು. ಪರಿಣಾಮ ಜನತಾ ಪರಿವಾರ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆದರೆ, ದೇವೇಗೌಡರ ಶ್ರಮದಿಂದ ಮತ್ತೆ ಜನತಾ ಪರಿವಾರ ಅಧಿಕಾರಕ್ಕೆ ಬಂತು. ಆಗಲೂ ಆಂತರಿಕ ಕಚ್ಚಾಟದಿಂದ ಪಕ್ಷ ಸೋಲಬೇಕಾಯಿತೇ ಹೊರತು ಜನರು ತಿರಸ್ಕರಿಸಿದ್ದಲ್ಲ. ಜನತಾ ಪರಿವಾರದ ನಾಯಕರು ಅಧಿಕಾರದಲ್ಲಿದ್ದಾಗ ಆಡಳಿತ ನಡೆಸುವುದಕ್ಕಿಂತ ಪರಸ್ಪರ ಕಿತ್ತಾಡಿದ್ದೇ ಹೆಚ್ಚು ಎನ್ನುವಾಗ ಜನ ಬೇರೆ ಮಾರ್ಗವಿಲ್ಲದೆ ಅನಿವಾರ್ಯವಾಗಿ ರಾಷ್ಟ್ರೀಯ ಪಕ್ಷಗಳನ್ನು ನೆಚ್ಚಿಕೊಳ್ಳಬೇಕಾಯಿತು.
ಜೆಡಿಎಸ್ ಗೆ ಈಗಲೂ ಅವಕಾಶವಿದೆ, ಬಳಸಿಕೊಳ್ಳುವವರು ಬೇಕಷ್ಟೆ
ಕಳೆದ ಎರಡು ದಶಕಗಳಿಂದ ರಾಷ್ಟ್ರೀಯ ಪಕ್ಷಗಳದ್ದೇ ಕಾರುಬಾರು. ಈ ಮಧ್ಯೆ ಎರಡು ಬಾರಿ ಆ ಪಕ್ಷಗಳ ಬೆಂಬಲದೊಂದಿಗೆ ಎರಡು ಬಾರಿ ಜೆಡಿಎಸ್ ಅಧಿಕಾರ ಹಿಡಿಯಿತಾದರೂ ಹೆಚ್ಚು ದಿನ ಉಳಿಯಲಿಲ್ಲ. ಆದರೆ, ಆ ಅವಧಿಯ ಆಡಳಿತ ಜನರ ಮನಸ್ಸಿನಲ್ಲಿ ಉಳಿದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಯಲ್ಲೂ ಅಲ್ಪಕಾಲದಲ್ಲೇ ಸರ್ಕಾರ ಮಾಡಿದ ಸಾಧನೆ ಕಾಂಗ್ರೆಸ್ ಮತ್ತು ಬಿಜೆಪಿ 14 ವರ್ಷ ಮಾಡಿದ ಸಾಧನೆಗಿಂತ ಮಿಗಿಲಾಗಿ ಜನರಿಗೆ ಮೆಚ್ಚುಗೆಯಾಗಿದೆ. ಆದರೆ, ಉಳಿದ ಅವಧಿಯಲ್ಲಿ ಅಧಿಕಾರ ನಡೆಸಿ ರಾಜ್ಯದಲ್ಲಿ ಪ್ರಸ್ತುತ ಬಲಾಢ್ಯ ಎನಿಸಿಕೊಂಡಿರುವ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು. ಈ ಸರ್ಕಾರಗಳ ಅವಧಿಯಲ್ಲಿ ಆಡಳಿತ ಕಳಪೆ ಆಗದಿದ್ದರೂ ಅಂತಾರಾಜ್ಯ ವಿವಾದಗಳು, ಕೇಂದ್ರದಿಂದ ಬರುವ ಅನುದಾನ, ಆರ್ಥಿಕ ನೆರವಿನಲ್ಲಿ ಅನ್ಯಾಯವಾಗುತ್ತಿತ್ತು ಮತ್ತು ಆಗುತ್ತಲೇ ಇದೆ. ಹೀಗಾಗಿ ಪ್ರಾದೇಶಿಕ ಪಕ್ಷವೊಂದು ಗಟ್ಟಿಯಾಗಿ ನೆಲೆ ನಿಲ್ಲುವ ಸೂಚನೆ ಸಿಕ್ಕಿದರೆ ಜನ ಬೆಂಬಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಈ ಹಿಂದೆಯೂ ಸಾಬೀತಾಗಿದೆ.
ಅಂದರೆ, ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಜೆಡಿಎಸ್ ಗೆ ಮುಕ್ತ ಅವಕಾಶವಿದೆ. ಆದರೆ, ಅದನ್ನು ಬಳಸಿಕೊಳ್ಳುವವರು ಪಕ್ಷದಲ್ಲಿ ಯಾರಿದ್ದಾರೆ ಎಂಬ ಪ್ರಶ್ಮೆಗೆ ಪ್ರಶ್ನೆಯೇ ಉತ್ತರವಾಗುತ್ತದೆಯೇ ಹೊರತು ನಿರ್ದಿಷ್ಟ ವ್ಯಕ್ತಿ ಕಾಣಿಸುತ್ತಿಲ್ಲ. ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಷ ಎನಿಸಿಕೊಂಡಿದೆ ಏನೋ ನಿಜ. ಆದರೆ, ದೇವೇಗೌಡರು ಇಲ್ಲದಿದ್ದರೆ ಜೆಡಿಎಸ್ ಗೆ ನೆಲೆಯೇ ಇಲ್ಲ ಎನ್ನುವುದೂ ಸತ್ಯ. ಈ ಕಾರಣಕ್ಕಾಗಿ ದೇವೇಗೌಡರ ಬಳಿಕ ಪಕ್ಷವನ್ನು ಮುನ್ನಡೆಸುವ ಸಮರ್ಥ ಉತ್ತರಾಧಿಕಾರಿ ಕಾಣಿಸುತ್ತಿಲ್ಲ.
ದೇವೇಗೌಡರಿಗೆ ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಿ ಅಧಿಕಾರಕ್ಕೆ ತರುವ ಸಾಮರ್ಥ್ಯವೂ ಇದೆ, ಇಚ್ಛಾಶಕ್ತಿಯೂ ಇದೆ. ಆದರೆ, ವಯಸ್ಸು ಅದಕ್ಕೆ ಅವಕಾಶ ಕೊಡುತ್ತಿಲ್ಲ. ವಯೋವೃದ್ಧರಾಗಿರುವ ಅವರು ಈಗಲೂ ಪಕ್ಷಕ್ಕಾಗಿ ದುಡಿಯುತ್ತಿರುವುದನ್ನು ಗಮನಿಸಿದಾಗ ಇತರೆ ನಾಯಕರಿಗೆ ಅದು ಸ್ಪೂರ್ತಿಯಾಗಬೇಕು. ಪ್ರಸ್ತುತ ದೇವೇಗೌಡರ ಉತ್ತರಾಧಿಕಾರಿ ಎನಿಸಿಕೊಂಡಿರುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಅನಾರೋಗ್ಯದ ನಡುವೆಯೂ ಅವರು ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಆದರೆ, ಅದು ನಿರಂತರವಾಗಿರುವುದಿಲ್ಲ ಎಂಬುದೇ ಸಮಸ್ಯೆ.
2008ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ನಾಲ್ಕಾರು ತಿಂಗಳು ಕುಮಾರಸ್ವಾಮಿ ಅವರು ಸಕ್ರಿಯರಾಗಿದ್ದರು. ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಮುನ್ಸೂಚನೆ ನೀಡಿದ್ದರು. ಕೆಲ ಸಮಯದ ನಂತರ ಅವರು ಸುಮ್ಮನಾದರು. ದೇವೇಗೌಡರೊಬ್ಬರೇ ಜೆಡಿಎಸ್ ಬಲಪಡಿಸುತ್ತೇನೆ ಎಂದು ಓಡಾಡಿದರು. ಆದರೆ, ಅವರಿಗೆ ಇತರೆ ನಾಯಕರಿಂದ ಬೆಂಬಲ ಸಿಗದ ಕಾರಣ ಜನ ಒಪ್ಪಿಕೊಳ್ಳಲಿಲ್ಲ. ಹೀಗೆ ಮೌನವಾದ ಕುಮಾರಸ್ವಾಮಿ ಅವರು ಮತ್ತೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದು 2013 ಮತ್ತು 2018ರ ಚುನಾವಣೆಯಲ್ಲಿ.
2018ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ, ಪಕ್ಷಗಳ ನಾಯಕರ ಕಚ್ಚಾಟದಿಂದ ಸರ್ಕಾರ ಉರುಳಿತು. ಇದಾದ ಬಳಿಕ ಕುಮಾರಸ್ವಾಮಿ ಅವರು ಮಾತುಗಳಲ್ಲಿ ಸಕ್ರಿಯರಾಗಿದ್ದಾರೆಯೇ ಹೊರತು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿಲ್ಲ. ಈಗಲೂ ದೇವೇಗೌಡರೊಬ್ಬರೇ ಆ ಕೆಲಸ ಮಾಡುತ್ತಿದ್ದಾರೆ. ಇನ್ನು ದೇವೇಗೌಡರ ಇನ್ನೊಬ್ಬ ಪುತ್ರ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಗೆ ಮಾತ್ರ ಸೀಮಿತರಾಗಿದ್ದಾರೆ.
ಹೀಗಾಗಿ ಪ್ರಾದೇಶಿಕ ಪಕ್ಷವಾಗಿ ಕರ್ನಾಟಕವನ್ನು ಮುನ್ನಡೆಸಲು ಎಲ್ಲಾ ಅವಕಾಶಗಳಿದ್ದರೂ ಅದನ್ನು ಜೆಡಿಎಸ್ ಮತ್ತು ಆ ಪಕ್ಷದ ನಾಯಕರು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಪ್ರಾದೇಶಿಕ ಪಕ್ಷಗಳಿಗೆ ಬಲ ಬಂದರೂ ಕರ್ನಾಟಕದಲ್ಲಿ ಆ ಬಲವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸುವವರು ಜೆಡಿಎಸ್ ನಲ್ಲಿ ಮುಂದೆ ಬರುತ್ತಿಲ್ಲ. ಆ ಕೆಲಸ ಆದರೆ ಕರ್ನಾಟಕ ಮತ್ತು ಕನ್ನಡಿಗರಿಗೆ ಲಾಭವಾಗುತ್ತದೆ.