ಕಳೆದ ಆಗಸ್ಟ್‌ನಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದವು. ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭರ್ತಿಯಾಗುವ ತನಕ ಯಾವುದೇ ಕ್ರಮ ಕೈಗೊಳ್ಳದ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರದ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಪರಿಸ್ಥಿತಿ ಗಂಭೀರ ಸ್ಥಿತಿ ತಲುಪಿತ್ತು. ಆ ಬಳಿಕ ಕೊಯ್ನಾ ಜಲಾಶಯದಿಂದ ಏಕಾಏಕಿ ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟಿದ್ದರಿಂದ ಉತ್ತರ ಕರ್ನಾಟಕ ಭಾಗದ ಬಹುತೇಕ ಹಳ್ಳಿಗಳು ಜಲಾವೃತವಾಗಿದ್ದವು ಬಹಳಷ್ಟು ಜನ ಪ್ರಾಣವನ್ನೇ ಕಳೆದುಕೊಂಡರು. ಈ ಸಂದರ್ಭದಲ್ಲಿ ಹಲವಾರು ಘೋಷಣೆ ಮಾಡಿದ್ದ ಸಿಎಂ ಯಡಿಯೂರಪ್ಪ ಈ ಬಾರಿಯ ಬಜೆಟ್‌ನಲ್ಲಿ ಏನನ್ನಾದರೂ ಘೋಷಣೆ ಮಾಡುತ್ತಾರೆ. ಪರಿಹಾರಕ್ಕಾದರೂ ಒಂದಷ್ಟು ಅನುದಾನವನ್ನು ಮೀಸಲಿಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ರಾಜ್ಯ ಬಜೆಟ್‌ನಲ್ಲಿ ಪ್ರವಾಹದ ಬಗ್ಗೆ ಉಲ್ಲೇಖಿಸಿರುವ ಸಿಎಂ ಯಡಿಯೂರಪ್ಪ, ಕರ್ನಾಟಕ ರಾಜ್ಯ ಪದೇ ಪದೇ ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿ ತತ್ತರಿಸುವಂತಾಗಿದೆ. ರಾಜ್ಯ ನೆರೆ ಮತ್ತು ಬರ ಪರಿಸ್ಥಿತಿಯನ್ನು ಏಕಕಾಲದಲ್ಲಿ ಎದುರಿಸುವಂತಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವಾರಕ್ಕೆ ರಾಜ್ಯದ ಅರ್ಧದಷ್ಟು ಭಾಗ ಜಲಪ್ರಯಳವಾಗಿತ್ತು. 2019ರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮೂರು ಬಾರಿ ರುದ್ರಪ್ರವಾಹ ರಾಜ್ಯದ ಮೇಲೆರಗಿತ್ತು. ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು 6,108 ಕೋಟಿ ರೂಪಾಯಿ ಹಣವನ್ನು ವಿವಿಧ ಇಲಾಖೆ ಮೂಲಕ ಮಂಜೂರು ಮಾಡಿದ್ದೇವೆ. ಅದರಲ್ಲಿ 3,423 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದಿದ್ದಾರೆ.
ಪ್ರವಾಹದ ಬಗ್ಗೆ ಮುಂದುವರಿದು ರಾಜ್ಯದಲ್ಲಿ ದಿಢೀರ್ ಮಳೆಯಿಂದ ಹರಿದು ಬಂದ ಅಪಾರ ಪ್ರಮಾಣದ ನೀರು, ಸುಮಾರು ಏಳು ಲಕ್ಷ ಜನರ ಬದುಕನ್ನೇ ಮುಳುಗಿಸಿತು. ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಸಹಸ್ರಾರು ಜಾನುವಾರುಗಳು ಸಾವನ್ನಪ್ಪಿದವು. ಸುಮಾರು 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಿಂದ ಕೊಚ್ಚಿ ಹೋಯಿತು. ರಸ್ತೆ, ಸೇತುವೆ, ಶಾಲೆ, ಅಂಗನವಾಡಿ, ವಾಸದ ಮನೆಗಳು ಮತ್ತು ವಿದ್ಯುತ್ ಮಾರ್ಗಗಳು ಸೇರಿ ಬಹುಪಾಲು ಮೂಲಸೌಕರ್ಯ ಹಾನಿಯಾಯ್ತು ಎಂದಿದ್ದಾರೆ. ಪ್ರವಾಹದಿಂದ 35 ಸಾವಿರದ 160 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿತ್ತು. ಕೇಂದ್ರ ಸರ್ಕಾರ 1869 ಕೋಟಿ ರೂಪಾಯಿ ಅನುದಾನ ಕೊಟ್ಟಿದೆ ಎಂದು ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟೊಂದು ನಷ್ಟಕ್ಕೆ ಒಳಗಾದ ಜನರಿಗೆ ಯಾವ ರೀತಿಯಲ್ಲಿ ಪರಿಹಾರ ಕೊಡ್ತೇವೆ ಎನ್ನುವ ಬಗ್ಗೆ ಚಕಾರ ಎತ್ತಿಲ್ಲ.
ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ NDRF ಮಾನದಂಡ ಮೀರಿ 10 ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರ ನೀಡಿದ್ದೇವೆ. ಈವರೆಗೆ 6.45 ಲಕ್ಷ ರೈತರ ಬ್ಯಾಂಕ್ ಖಾತೆಗೆ 1185 ಕೋಟಿ ಜಮಾ ಮಾಡಲಾಗಿದೆ. 1 ಲಕ್ಷದ 25 ಸಾವಿರದ 795 ಮನೆಗಳು ಹಾನಿಯಾಗಿದ್ದು, ಮನೆ ನಿರ್ಮಾಣಕ್ಕೆ ಈವರೆಗೆ 1,232 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದೇವೆ ಎನ್ನುವ ಅಂಕಿ ಅಂಶ ಕೊಟ್ಟಿದ್ದಾರೆ. ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂಪಾಯಿ, ತೀವ್ರ ಹಾನಿಯಾದ ಮನೆಗಳಿಗೆ ಮೂರು ಲಕ್ಷ, ಭಾಗಶಃ ಹಾನಿಯಾದ ಮನಗಳಿಗೆ 50 ಸಾವಿರ ಕೊಡ್ತೇವೆ. ತುರ್ತು ಪರಿಹಾರದ ರೂಪದಲ್ಲಿ 10 ಸಾವಿರ ರೂಪಾಯಿ, ನೇಕಾರರ ಉಪಕರಣಗಳು ಹಾನಿಯಾದ ಪ್ರಕರಣಗಳಲ್ಲಿ 25 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಪರಿಹಾರ ಪೀಡಿತ ಪ್ರದೇಶಗಳಿಗೆ ಹಣ ಎಲ್ಲಿದೆ ಎಂದು ಸಂಪೂರ್ಣ ಬಜೆಟ್ ಪುಸ್ತಕ ಹುಡುಕಿದರೂ ಕಿಂಚಿತ್ತು ಅನುದಾನ ಮೀಸಲಿಟ್ಟಿಲ್ಲ.
1232 ಮನೆಗಳು ನಾಶವಾಗಿವೆ ಎಂದು ಒಂದು ಕಡೆ ಹೇಳಿರುವ ಸರ್ಕಾರ ಒಂದು ಮನೆಗೆ 5 ಲಕ್ಷ ರೂಪಾಯಿ ಅನುದಾನ ಕೊಡ್ತೇವೆ ಎಂದಿದೆ. ಅಂದರೆ, 6.16 ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಇದನ್ನು ಸ್ವತಃ ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಅನುದಾನ ಎಲ್ಲಿದೆ..? ಎಲ್ಲಿಂದ ತಂದು ಕೊಡ್ತಾರೆ ಎನ್ನುವುದನ್ನು ಹೇಳಿಲ್ಲ. 35,160 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನುವುದನ್ನು ಬಹಿರಂಗವಾಗಿ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಹಣ ಕೊಟ್ಟಿಲ್ಲ, ಕೇವಲ 1869 ಕೋಟಿ ಕೊಟ್ಟಿದ್ದಾರೆ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಆದ್ರೆ ಉಳಿದ 33 ಸಾವಿರ ಕೋಟಿ ರೂಪಾಯಿ ನಷ್ಟವನ್ನು ಉತ್ತರ ಕರ್ನಾಟಕ ಜನರಿಗೆ ತುಂಬಿಕೊಡಲು ಏನು ಮಾಡ್ತೇವೆ ಎನ್ನುವುದರ ಬಗ್ಗೆ ಸೊಲ್ಲೇತ್ತಿಲ್ಲ.