ಈ ಹಿಂದೂ ಮತೀಯವಾದಿಗಳಿಗೆ ಏನಾಗಿದೆಯೋ ಎಂಬುದು ಅರ್ಥವಾಗುತ್ತಿಲ್ಲ. ಈ ಕೋಮುವಾದದ ಹೊದ್ದು ಅದರಲ್ಲೇ ಮಿಂದೇಳುತ್ತಿರುವ ಆಶ್ರಯದಲ್ಲಿ ಅರಳಿರುವ ಕಮಲ ಪಾಳಯ ಅರ್ಥಾತ್ ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಸಂಘಪರಿವಾರದ ಹಿಡನ್ ಅಜೆಂಡಾದ ಕಾರ್ಯಕ್ರಮಗಳು ಒಂದಲ್ಲಾ ಒಂದು ರೀತಿಯಲ್ಲಿ ಜಾರಿಯಾಗುತ್ತಿವೆ.
ಅಂತಹ ಹಿಡನ್ ಅಜೆಂಡಾಗಳಲ್ಲಿ ಪೌರತ್ವ ಕಾನೂನೂ ಸಹ ಒಂದು. ಇದರಲ್ಲಿ ಮುಸ್ಲಿಂರನ್ನು ಹೊರಗಿಡುವ ತನ್ನ ಬಹುದಿನದ ಆಸೆಯನ್ನು ತೀರಿಸಿಕೊಳ್ಳಲು ಹೊರಟಿವೆ ಸಂಘಪರಿವಾರಿಗಳು. ಇದನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು, ಮುಸಲ್ಮಾನರನ್ನು ದೂಷಿಸುವ ಭರಾಟೆಯಲ್ಲಿ ಕೋಮುದ್ವೇಷದ ಬೀಜವನ್ನು ದೇಶಾದ್ಯಂತ ಬಿತ್ತುತ್ತಿದ್ದಾರೆ,
ಇದಕ್ಕೆ ನಮ್ಮ ರಾಜ್ಯವೇನೂ ಹೊರತಾಗಿಲ್ಲ. ಸಂಘಪರಿವಾರದ ಆಶಯವನ್ನೇ ಉಸಿರಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ಟರಂತಹವರಿಂದ ಕೋಮುದ್ವೇಷದ ಮಾತುಗಳನ್ನಲ್ಲದೇ ಇನ್ನೇನು ಕೇಳಲು ಸಾಧ್ಯ. ಇವರ ಪ್ರಕಾರ ಭಾರತ ಹಿಂದೂ ರಾಷ್ಟ್ರ. ಅದು ಸಂಘ ಪರಿವಾರಿಗಳು ಘೋಷಣೆ ಮಾಡಿಕೊಂಡಿರುವುದು. ಸಮಗ್ರ ಭಾರತದ ಪರಿಕಲ್ಪನೆಯಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಕೋಮಿನವರು, ಎಲ್ಲಾ ಸಮುದಾಯದವರೂ ಒಂದೇ. ಭಾರತ ಮಾತೆ ಎಲ್ಲರನ್ನೂ ತನ್ನೊಡಲಲ್ಲಿಟ್ಟುಕೊಂಡು ಸಾಕಿ ಸಲಹುತ್ತಿದ್ದಾಳೆ. ಆದರೆ, ಭಾರತ ಮಾತೆಯ ಹೆಸರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಂತಹವರು ಕೋಮುದ್ವೇಷದ ಮಾತುಗಳನ್ನಾಡುತ್ತಿದ್ದಾರೆ.
ಅವರ ಪ್ರಕಾರ ಹಿಂದೂ ರಾಷ್ಟ್ರದಲ್ಲಿ ಮುಸ್ಲಿಂರು ಅತಿಥಿಗಳಂತೆ! ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಿಕೊಳ್ಳಲು ಹಿಂದೂ ನಾಯಕರು ಎಷ್ಟು ಶ್ರಮವಹಿಸಿದ್ದಾರೋ ಅಷ್ಟೇ ಶ್ರಮವನ್ನು ಮುಸ್ಲಿಂ ಬಾಂಧವರು ವಹಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂ ಮುಸಲ್ಮಾನರು, ಸಿಖ್ಖರು, ಕ್ರೈಸ್ತರು ಎಂಬ ಬೋರ್ಡ್ ಹಾಕಿಕೊಂಡು ಹೋರಾಟ ಮಾಡಿರಲಿಲ್ಲ. ನಾವೆಲ್ಲಾ ಭಾರತೀಯರು ಎಂಬ ಹಣೆ ಪಟ್ಟಿಯೊಂದಿಗೆ ಎಲ್ಲಾ ಧರ್ಮದವರೂ ಹೋರಾಟದಲ್ಲಿ ತೊಡಗಿದ್ದರು.
ಅವರ ಈ ಪರಿಶ್ರಮದಿಂದಲೇ ನಮ್ಮ ಹೆಮ್ಮೆಯ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು, ಪ್ರಭಾಕರ ಭಟ್ಟರಂತಹವರು ಸುಭೀಕ್ಷವಾಗಿ ಬದುಕು ಸಾಗಿಸುತ್ತಿರಲು ಸಾಧ್ಯವಾಗಿದೆ. ಆದರೆ, ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸುಭೀಕ್ಷವಾಗಿರುವ ಸಮಗ್ರ ಭಾರತವನ್ನು ಧರ್ಮದ ಹೆಸರಿನಲ್ಲಿ ಒಡೆದು ಆಳಲು ಹೊರಟಿರುವುದು ಅವರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿ ನಿಂತಿದೆ.
ಪ್ರಭಾಕರ ಭಟ್ಟರು ದೇಶದಲ್ಲಿನ ಮುಸ್ಲಿಂರು ಅತಿಥಿಗಳಂತೆ ಬದುಕಬೇಕು ಎಂದಿದ್ದಾರೆ. ಪ್ರಭಾಕರ ಭಟ್ಟರ ವಂಶ ಅಥವಾ ಸಂತತಿ ಭಾರತದಲ್ಲಿ ಹೇಗೆ ಜೀವನ ಸಾಗಿಸಿತ್ತೋ ಅದೇ ರೀತಿ ಮುಸಲ್ಮಾನ ಬಾಂಧವರ ಕುಟುಂಬಗಳೂ ತಲೆತಲಾಂತರದಿಂದ ಭಾರತದಲ್ಲಿ ಜೀವನ ಸಾಗಿಸುತ್ತಾ ಬಂದಿವೆ. ಈ ನೆಲದಲ್ಲಿ ಪ್ರಭಾಕರ ಭಟ್ಟರಿಗೆ ಎಷ್ಟು ಹಕ್ಕಿದೆಯೋ ಮುಸಲ್ಮಾನರಿಗೂ ಅಷ್ಟೇ ಹಕ್ಕಿದೆ. ಯಾವನೋ ಒಬ್ಬ ಮುಠ್ಠಾಳ ಪಾಕಿಸ್ತಾನ ಜಿಂದಾಬಾದ್, ಭಾರತ ಮುರ್ದಾಬಾದ್ ಎಂದು ಹೇಳಿದಾಕ್ಷಣಕ್ಕೆ ಇಡೀ ಮುಸ್ಲಿಂರು ಪಾಕಿಸ್ತಾನಕ್ಕೆ ಆಪ್ತರು, ಭಾರತಕ್ಕೆ ದ್ವೇಷಿಗಳು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನದ ಪರಮಾವಧಿಯಾಗುತ್ತದೆ.
ಒಂದು ವೇಳೆ ಪ್ರಭಾಕರ ಭಟ್ಟರು ಹೇಳಿದಂತೆ ಮುಸ್ಲಿಂರನ್ನು ನಮ್ಮ ದೇಶದ ಅತಿಥಿಗಳೆಂದು ಭಾವಿಸೋಣ. ಕೋಮು ವಿಷವರ್ತುಲದಲ್ಲೇ ಇರುವ ಪ್ರಭಾಕರ ಭಟ್ಟರಂತಹವರು ನಮ್ಮ ದೇಶದ ಅದೆಷ್ಟು ಮುಸಲ್ಮಾನರಿಗೆ ಅತಿಥಿ ಸತ್ಕಾರ ಮಾಡುತ್ತಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನ್ವರ್ ಮಾನಿಪ್ಪಾಡಿಯಂತಹ ಬಿಜೆಪಿ ಪರವಾದ ಮುಸ್ಲಿಂನನ್ನು ಹೊರತುಪಡಿಸಿ ಸಾಮಾನ್ಯ ಒಬ್ಬೇ ಒಬ್ಬ ಮುಸಲ್ಮಾನ ಬಾಂಧವನನ್ನು ನೀನು ನನ್ನ ಅತಿಥಿ ಬಾ, ನಿನಗೆ ಅತಿಥಿ ಸತ್ಕಾರ ಮಾಡುತ್ತೇನೆಂಬ ದಾರ್ಷ್ಯತನ ಪ್ರಭಾಕರ ಭಟ್ಟರಲ್ಲಿದೆಯೇ? ಮಾತಿನಲ್ಲಿ ಬಂದದ್ದನ್ನು ಕೃತಿಯಲ್ಲಿ ಅಳವಡಿಕೆ ಮಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅದನ್ನು ಬಿಟ್ಟು ಚಪ್ಪಾಳೆ ಗಿಟ್ಟಿಸಲೋಸುಗ ಅಥವಾ ಸಮಾಜ ಸ್ವಾಸ್ಥ್ಯವನ್ನು ಕೆಡಿಸುವಂತಹ ಹೇಳಿಕೆಗಳನ್ನು ನೀಡಿದರೆ ಏನು ಉಪಯೋಗ?
ಇವರ ಮಾತುಗಳನ್ನು ಕೇಳಿ ಪ್ರೇರೇಪಿತಗೊಳ್ಳುವ ಕೆಲವೊಂದಿಷ್ಟು ಕುದಿರಕ್ತರ ಯುವಕರಲ್ಲಿ ದ್ವೇಷ-ಅಸೂಯೆ ಜ್ವಾಲೆ ಉರಿಯುತ್ತದೆ. ಇದರ ಪರಿಣಾಮ ಮತ್ತೊಂದು ಕೋಮಿನ ಮೇಲೆ ದಾಳಿ, ದಾಂಧಲೆಯಂತಹ ಪ್ರಕರಣಗಳು ನಡೆಯುತ್ತವೆ. ಕೋಮು ದ್ವೇಷವನ್ನು ಹರಡುವ ಮೂಲಕ ನಾಲಗೆ ಚಪಲವನ್ನು ತೀರಿಸಿಕೊಳ್ಳಲಾಗುತ್ತದೆ. ಇಂತಹ ಹೇಳಿಕೆ ನೀಡಿದವರು ವಂದಿ ಮಾಗದರ ಮಧ್ಯದಲ್ಲಿ ಬೆಚ್ಚಗೆ ಕುಳಿತ್ತಿರುತ್ತಾರೆ. ಇವರ ಮಾತನ್ನು ಕೇಳಿ ಸಂಘರ್ಷದಲ್ಲಿ ತೊಡಗುವ ಅಮಾಯಕರು ಬಲಿಯಾಗುತ್ತಾರೆ. ಇದಿಷ್ಟೇ ಕೋಮುವಾದಿಗಳ ಸಾಧನೆಯಾಗುತ್ತದೆ.
ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಯಾವ ಸಂವಿಧಾನವೂ ಹೇಳಿಲ್ಲ. ಇದು ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಒಂದು ಪರಿಕಲ್ಪನೆಯಾಗಿದೆಯೇ ಹೊರತು ಸಮಗ್ರ ಭಾರತದ ಸಮಗ್ರ ಉನ್ನತಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಇದು ಪ್ರಭಾಕರ ಭಟ್ಟರಂತಹ ಸಂಘಪರಿವಾರಿಗಳಿಗೂ ಗೊತ್ತು. ಆದರೆ, ಈ ಹಿಂದೂವಾದವನ್ನೇ ಉಸಿರಾಡುತ್ತಾ, ಇದನ್ನೇ ಸೇವನೆ ಮಾಡುತ್ತಾ, ಇದರ ಹೆಸರಲ್ಲೇ ಸಮಾಜದಲ್ಲಿ ಉನ್ನತ ಮಟ್ಟಕ್ಕೇರುತ್ತಾ ಬಂದಿರುವ ಇಂತಹವರಿಗೆ ಈ ವಿಚಾರ ಪ್ರಸ್ತಾಪ ಮಾಡದೇ ಇದ್ದರೆ ತಿಂದ ಭಾರತಾಂಬೆಯ ಅನ್ನ ಜೀರ್ಣವಾಗುವುದಿಲ್ಲ, ಭಾರತದ ನೆಲದಲ್ಲಿ ನಿದ್ದೆಯೇ ಬರುವುದಿಲ್ಲ!
ಪೌರತ್ವ ವಿಚಾರದಲ್ಲಿ ಮುಸ್ಲಿಂರು ಹೊರದೇಶದವರು, ಅವರು ಅತಿಥಿಗಳಾಗಿರಬೇಕು ಎಂಬ ನೀಡಿರುವ ಪ್ರಭಾಕರ ಭಟ್ಟರ ಹೇಳಿಕೆಯಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಅಥವಾ ಆಶ್ಚರ್ಯವನ್ನೂ ಪಡಬೇಕಿಲ್ಲ. ಏಕೆಂದರೆ, ಭಟ್ಟರು ನಡೆಸುತ್ತಿರುವ ಶಾಲೆಯಲ್ಲಿ ಮುಗ್ಧ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವುದರಲ್ಲಿ ಅವರು ನಿಸ್ಸೀಮರಾಗಿದ್ದಾರೆ.
ಇತ್ತೀಚೆಗೆ, ತಮ್ಮ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಪ್ರಕರಣವನ್ನು ಚಿಕ್ಕ ಮಕ್ಕಳಿಂದ ಪುನರ್ ಸೃಷ್ಟಿ ಮಾಡಿಸಿ ವಿವಾದ ಸೃಷ್ಟಿಸಿದ್ದರು. ಇದಲ್ಲದೇ, ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಮುಸ್ಲಿಂ ನಾಯಕರು ಮತ್ತು ಮುಸ್ಲಿಂ ಬಾಂಧವರ ಬಗ್ಗೆ ಹಲವು ಬಗೆಯ ಟೀಕೆ-ಟಿಪ್ಪಣಿ ಮಾಡಿ ವಿವಾದಕ್ಕೆ ಗುರಿಯಾಗಿದ್ದರು.
ಅವರ ಮನಸ್ಸಿನಲ್ಲಿರುವುದು ಇಂತಹದ್ದೇ ಯೋಚನೆ ಬಿಟ್ಟರೆ ಸಮಾಜ ಸುಧಾರಣೆಯ ಯಾವುದೇ ಯೋಚನೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಪ್ರಭಾಕರ ಭಟ್ಟರು ಹೇಳಿದಾ ತಕ್ಷಣಕ್ಕೆ ಮುಸ್ಲಿಂರು ಎದೆಗುಂದುವ ಅಗತ್ಯವಿಲ್ಲ ಮತ್ತು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ.