ಜಗತ್ತಿನ ಅತ್ಯಂತ ಹಳೆಯ ಕಾನೂನು ವ್ಯಾಜ್ಯಗಳ ಪಟ್ಟಿಗೆ ಸೇರಿದ್ದ ವ್ಯಾಜ್ಯವೊಂದು ಮೊನ್ನೆ ಗಾಂಧೀ ಜಯಂತಿಯಂದು ತೀರುವಳಿ ಕಂಡಿತು. ಈ ವ್ಯಾಜ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಹೈದರಾಬಾ`ದಿನ ನಿಜಾಮ್ ವಂಶಸ್ಥರು ಭಾರತದ ಜೊತೆಗೆ ನಿಂತಿದ್ದರು. ಸ್ವಾತಂತ್ರ್ಯದ ಹೊಸ್ತಿಲಿನ ಭಾರತದ ವಿಭಜನೆಯ ಹೊತ್ತಿನಲ್ಲಿ ನಿಜಾಮ್ ಗೆ ಸಂಬಂಧಿಸಿದ ಹಣದ ಕುರಿತ ವಿವಾದವಿದು. ಬ್ರಿಟಿಷ್ ಬ್ಯಾಂಕೊಂದರಲ್ಲಿ ಬಿದ್ದಿದ್ದ ಈ ಮೊತ್ತ ಕಾಲ ಕಾಲಕ್ಕೆ ಬ್ಯಾಂಕು ಸೇರಿಸಿದ ಬಡ್ಡಿ ಸಹಿತ 35 ಪಟ್ಟು ಬೆಳೆದು 35 ಲಕ್ಷ ಪೌಂಡುಗಳಾಗಿತ್ತು.
ಭಾರತ ಮತ್ತು ನಿಜಾಮ್ ವಂಶಸ್ಥರಿಗೆ ಗೆಲುವಾಗಿದೆ. ಪಾಕಿಸ್ತಾನದ ವಾದಕ್ಕೆ ಸೋಲಾಗಿದೆ. ಲಂಡನ್ನಿನ ನ್ಯಾಶನಲ್ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿದ್ದ 35 ಲಕ್ಷ ಪೌಂಡುಗಳನ್ನು (ಸುಮಾರು 306 ಕೋಟಿ ರುಪಾಯಿ) ಭಾರತದ ಹೈದರಾಬಾದಿನ ಏಳನೆಯ ನಿಜಾಮನ ವಾರಸುದಾರರು ಪಡೆದುಕೊಳ್ಳುವುದೆಂದು ಬ್ರಿಟಿಷ್ ಹೈಕೋರ್ಟ್ ತೀರ್ಪು ನೀಡಿತು. ಈ ಹಣವು ನ್ಯಾಯಯುತವಾಗಿ ನಿಜಾಮ್ ಕುಟುಂಬಕ್ಕೆ ಸೇರಬೇಕೆಂದು ಸಾರಿತು. ಈ ಹಣದ ಮೇಲೆ ಪಾಕಿಸ್ತಾನಕ್ಕೆ ಯಾವ ಹಕ್ಕೂ ಇಲ್ಲ ಎಂದೂ ವಿಧಿಸಿತು.
ಈ ತಗಾದೆಯಲ್ಲಿ ಉಭಯ ದೇಶಗಳಿಗೂ ಹಣಕ್ಕಿಂತ ಪ್ರತಿಷ್ಠೆ ಮುಖ್ಯವಾಗಿತ್ತು. ತನ್ನದೇ ಭೂಭೂಗದಲ್ಲಿದ್ದ ಹೈದರಾಬಾದ್ ಪ್ರಾಂತ್ಯದ ಹಣದ ಮೇಲೆ ಪಾಕಿಸ್ತಾನಕ್ಕೆ ಏನು ಹಕ್ಕಿದೆ ಎಂಬುದು ಭಾರತದ ನಿಲುವು. ಹೈದರಾಬಾದನ್ನು ಆಳುವ ಮುಸ್ಲಿಂ ರಾಜಕುಮಾರ ಸ್ವತಂತ್ರ ರಾಜ್ಯವಾಗಿ ಪಾಕಿಸ್ತಾನದ ಜೊತೆ ಸಂಬಂಧ ಬಯಸಿದ್ದಾಗ, ಬಲವಂತವಾಗಿ ಸೈನ್ಯವನ್ನು ಕಳಿಸಿ ಭಾರತಕ್ಕೆ ಸೇರಿಸಿಕೊಳ್ಳಲಾಗಿದೆ…ಹೀಗಾಗಿ ಹೈದರಾಬಾದ್ ಜೊತೆ ತನ್ನ ಸಂಬಂಧವೇ ಮಿಗಿಲು. ಹಣ ತನಗೇ ಸೇರಬೇಕು ಎಂಬುದು ಪಾಕಿಸ್ತಾನದ ಧೋರಣೆಯಾಗಿತ್ತು. ನ್ಯಾಯಾಲಯದ ಹೊರಗೆ ಪರಸ್ಪರ ಸಮ್ಮತಿಯಿಂದ ಈ ತಗಾದೆಯನ್ನು ಬಗೆಹರಿಸಿಕೊಳ್ಳುವ ಹಲವು ಯತ್ನಗಳು ವಿಫಲವಾದವು. ಕಡೆಯ ಗಳಿಗೆಯಲ್ಲಿ ಪಾಕಿಸ್ತಾನ ಹಿಂದೆ ಸರಿದದ್ದೇ ಈ ವೈಫಲ್ಯಕ್ಕೆ ಕಾರಣ. ಇಬ್ಬರೂ ಕೂಡಿ ಈ ಮೊಕದ್ದಮೆಯನ್ನು ಮುನ್ನಡೆಸಲು ನಿಜಾಮ್ ನ ಮೊಮ್ಮಕ್ಕಳು ಮತ್ತು ಭಾರತ ಸರ್ಕಾರದ ನಡುವೆ 2018ರಲ್ಲಿ ಒಪ್ಪಂದ ಏರ್ಪಟ್ಟಿತು.
ಹಿನ್ನೆಲೆ ಏನು:
ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ಭಾರತದೊಂದಿಗೆ ತನ್ನ ರಾಜ್ಯವನ್ನು ವಿಲೀನಗೊಳಿಸಲು ಹೈದರಾಬಾದಿನ ಏಳನೆಯ ನಿಜಾಮ ಒಸ್ಮಾನ್ ಆಲಿ ಖಾನ್ ಒಪ್ಪುವುದಿಲ್ಲ. ಭಾರತದ ಅತ್ಯಂತ ಹಣವಂತ ರಾಜಕುಮಾರರಲ್ಲಿ ಒಬ್ಬನಾಗಿದ್ದ ಆತ ಲಂಡನ್ನಿನ ಎರಡು ಬ್ಯಾಂಕುಗಳಲ್ಲಿ ಖಾತೆ ತೆರೆದು ದೊಡ್ಡ ಮೊತ್ತಗಳನ್ನು ಇರಿಸಿರುತ್ತಾನೆ. ಈ ಹಣದಿಂದ ಹೈದರಾಬಾದಿನ ರಕ್ಷಣೆಗೆ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗುತ್ತಾನೆ. ಲಂಡನ್ನಿನ ವೆಸ್ಟ್ ಮಿನಿಸ್ಟರ್ ಬ್ಯಾಂಕಿನಲ್ಲಿ ಹೈದರಾಬಾದ್ ನಿಜಾಮ್ ಖಾತೆಯಲ್ಲಿರುವ ಹತ್ತು ಲಕ್ಷ ಪೌಂಡ್ ಸ್ಟರ್ಲಿಂಗ್ ಗಳಷ್ಟು ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲು ಒಪ್ಪಿಗೆ ನೀಡಬೇಕು. ಈ ಹಣವನ್ನು ನಂಬಿಕೆ ವಿಶ್ವಾಸದ ಮೇರೆಗೆ ನಿಮ್ಮ ಖಾತೆಯಲ್ಲಿ ಇರಿಸಿಕೊಳ್ಳಬೇಕು ಎಂದು ನಿಜಾಮನ ರಾಯಭಾರಿ ಮತ್ತು ವಿದೇಶಮಂತ್ರಿಯಾಗಿದ್ದ ಮೊಯಿನ್ ನವಾಜ್ ಜಂಗ್, ಬ್ರಿಟನ್ನಿನಲ್ಲಿ ಪಾಕಿಸ್ತಾನದ ಹೈ ಕಮಿಷನರ್ ಹಬೀಬ್ ಇಬ್ರಾಹಿಂ ರಹೀಮತುಲ್ಲಾ ಅವರಿಗೆ 1948ರ ಸೆಪ್ಟಂಬರ್ 15ರಂದು ಪತ್ರ ಬರೆದು ಕೋರಿರುತ್ತಾನೆ. ಹಣವನ್ನು ಇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿ ರಹೀಮತುಲ್ಲಾ ಅಂದೇ ಉತ್ತರ ಬರೆಯುತ್ತಾರೆ. 1948ರ ಸೆಪ್ಟಂಬರ್ 16ರಂದು ಬ್ರಿಟನ್ನಿನಲ್ಲಿ ಪಾಕಿಸ್ತಾನದ ಹೈಕಮಿಷನರ್ ನನ್ನು ಭೇಟಿ ಮಾಡಿ ಹತ್ತು ಲಕ್ಷ ಪೌಂಡುಗಳಷ್ಟು ಹಣವನ್ನು ಒಪ್ಪಿಸಿಕೊಳ್ಳುವಂತೆ ಕೋರುತ್ತಾನೆ. ಪಾಕಿಸ್ತಾನದ ವಿದೇಶಾಂಗ ಮಂತ್ರಿ ಮಹಮ್ಮದ್ ಜಫ್ರುಲ್ಲಾಖಾನ್ ಸಮ್ಮುಖದಲ್ಲಿ ಈ ಭೇಟಿ ಜರುಗುತ್ತದೆ. ಹೈಕಮಿಷನರ್ ಖಾತೆಗೆ 1948ರ ಸೆಪ್ಟಂಬರ್ 20ರಂದು ಹಣ ವರ್ಗಾವಣೆಯಾಗುತ್ತದೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಅಂದಿನ ಆಂಧ್ರಪ್ರದೇಶದ (ಇಂದಿನ ತೆಲಂಗಾಣ) ಭಾಗಗಳು ನಿಜಾಮನ ರಾಜ್ಯಕ್ಕೆ ಸೇರಿದ್ದವು. ಹತ್ತು ಸಾವಿರ ಚದರ ಮೈಲಿ ವಿಸ್ತೀರ್ಣದ ಜಮೀನಿನಿಂದ ಬಂದ ಆದಾಯವೆಲ್ಲ ನೇರವಾಗಿ ಅರಸನ ಖಾಸಗಿ ಬಳಕೆಗೆ ಸಲ್ಲುತ್ತಿತ್ತು. ಆ ಕಾಲಕ್ಕೆ ವಿಶ್ವದ ಅತ್ಯಂತ ಶ್ರೀಮಂತನೆಂದು ನಿಜಾಮನನ್ನು ಪರಿಗಣಿಸಲಾಗಿತ್ತು. ಅಮೆರಿಕೆಯ ಟೈಮ್ ನಿಯತಕಾಲಿಕ ಒಸ್ಮಾನ್ ಅಲಿ ಖಾನ್ ಜಗತ್ತಿನ ಅತ್ಯಂತ ಶ್ರೀಮಂತನೆಂದು ಬಣ್ಣಿಸಿ 1937ರ ತನ್ನ ಸಂಚಿಕೆಯೊಂದರ ಮುಖಪುಟದಲ್ಲಿ ಆತನ ಭಾವಚಿತ್ರವನ್ನು ಪ್ರಕಟಿಸಿತ್ತು. ಆಗಿನ ಕಾಲಕ್ಕೆ ಆತನ ಐಶ್ವರ್ಯ 200 ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿತ್ತು. ಒಂದು ಅಂದಾಜಿನ ಪ್ರಕಾರ ಭಾರತೀಯ ಸೈನ್ಯದ ವಿರುದ್ಧ ತನ್ನ ಸೈನ್ಯವನ್ನು ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸಲು ಆತ 20 ಲಕ್ಷ ಪೌಂಡುಗಳಷ್ಟು ಹಣವನ್ನು ವೆಚ್ಚ ಮಾಡಿದ ಎನ್ನಲಾಗಿದೆ.
ನಾಲ್ಕು ದಿನಗಳ ಯುದ್ಧದ ನಂತರ 1948ರ ಸೆಪ್ಟಂಬರ್ 17ರಂದು ನಿಜಾಮನ ಸೈನ್ಯ ಭಾರತಕ್ಕೆ ಶರಣಾಯಿತು. ಹಣದ ವರ್ಗಾವಣೆ ಪ್ರಕ್ರಿಯೆಗೆ ಈ ಶರಣಾಗತಿಗೆ ಮುನ್ನವೇ ಚಾಲನೆ ದೊರೆತಿತ್ತು. ಹೀಗಾಗಿ ಸೆಪ್ಟಂಬರ್ 20ರಂದು ಹಣ ವರ್ಗಾವಣೆಯಾಯಿತು. ಈ ಹಣವನ್ನು ಮರಳಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಡುವಂತೆ ಸೆಪ್ಟಂಬರ್ 27ರಂದು ಭಾರತದ ಗೌರ್ನರ್ ಜನರಲ್ ಮತ್ತು ಉಪಪ್ರಧಾನಮಂತ್ರಿಗೆ ನಿಜಾಮ ಮನವಿ ಸಲ್ಲಿಸಿದ. ಆದರೆ ಬ್ಯಾಂಕ್ ಒಪ್ಪಲಿಲ್ಲ.
ಭಾರತದ ವಿರುದ್ಧ ಹೈದರಾಬಾದನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕಳಿಸುವಂತೆ ಪಾಕಿಸ್ತಾನದ ಸ್ಥಾಪಕ ಮಹಮ್ಮದಾಲಿ ಜಿನ್ನಾ ಅವರನ್ನು ನಿಜಾಂ ಕೋರಿದ್ದನೆನ್ಲುವುದಕ್ಕೆ ದಾಖಲೆ ದಸ್ತಾವೇಜುಗಳು ತನ್ನ ಬಳಿ ಇವೆ. ಬ್ರಿಟಿಷ್ ಪೈಲಟ್ ಫ್ರೆಡ್ರಿಕ್ ಸಿಡ್ನಿ ಕಾಟನ್ ಎಂಬಾತ ಶಸ್ತ್ರಾಸ್ತ್ರಗಳನ್ನು ಮುಟ್ಟಿಸುವ ಸಂಬಂಧ ಕರಾಚಿ ಮತ್ತು ಹೈದರಾಬಾದ್ ನಡುವೆ 33 ಬಾರಿ ಓಡಾಡಿದ್ದ. ಹೀಗಾಗಿ ಬ್ಯಾಂಕಿನಲ್ಲಿದ್ದ ನಿಜಾಮ್ ಹಣ ಈ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿದ್ದು ಎಂದು ಪಾಕಿಸ್ತಾನ ವಾದಿಸಿತ್ತು.
ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಾಲ್ಕು ವಾರಗಳ ಅವಕಾಶವಿದೆ. ಪಾಕಿಸ್ತಾನದ ಮುಂದಿನ ಹೆಜ್ಜೆಯನ್ನು ಕಾದು ನೋಡಬೇಕಿದೆ. ಪಾಕಿಸ್ತಾನ ಮೇಲ್ಮನವಿ ಸಲ್ಲಿಸಿದೆ ಹೋದಲ್ಲಿ ಹಣ ನಮ್ಮ ಕೈಸೇರಲಿದೆ ಎಂಬುದು ಏಳನೆಯ ನಿಜಾಮ್ ನ ಮೊಮ್ಮಗ ನಜಾಫ್ ಅಲಿ ಖಾನ್ ಪ್ರತಿಕ್ರಿಯೆ.