ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶಾದ್ಯಂತ ಪ್ರತಿಭಟನೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಮತ್ತು ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಹೊಸ ಸಾಫ್ಟ್ ವೇರ್ ಅನ್ನು ಅಳವಡಿಸುತ್ತಿದೆ. ಇಂತಹದ್ದೊಂದು ಸಾಫ್ಟ್ ವೇರ್ ಅನ್ನು ಇದೇ ಮೊದಲ ಬಾರಿಗೆ ಕಳೆದ ವಾರ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಪ್ರಧಾನಿ ಮೋದಿ ಅವರ ರ್ಯಾಲಿಯಲ್ಲಿ ಅಳವಡಿಸಲಾಗಿತ್ತು.
ಅದೆಂದರೆ, ಆಟೋಮೇಡೆಡ್ ಫೇಶಿಯಲ್ ರೆಕಗ್ನಿಶನ್ ಸಿಸ್ಟಂ. ಇದರ ಮೂಲಕ ಸಾರ್ವಜನಿಕ ಸಭೆಗಳಿಗೆ ಬರುವ ಅಥವಾ ಪ್ರತಿಭಟನೆ ನಡೆಸುವ ಪ್ರತಿಯೊಬ್ಬರ ಮುಖಚರ್ಯೆಯನ್ನು ಈ ಸಾಫ್ಟ್ ವೇರ್ ಹಿಡಿದಿಡಲಿದೆ.
ದೇಶಾದ್ಯಂತ ಸಿಎಎ ಮತ್ತು ಎನ್ಆರ್‌ಸಿ ವಿರುದ್ಧ ಪ್ರತಿಭಟನೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದೆ.
ಜನವಿರೋಧಿ ನೀತಿಗಳನ್ನು ಅನುಷ್ಠಾನಕ್ಕೆ ತಂದರೆ ಆಡಳಿತ ನಡೆಸುವವರಿಗೆ ಸದಾ ಜನರ ಮೇಲೆ ಅಪನಂಬಿಕೆ, ಯಾವ ಸಂದರ್ಭದಲ್ಲಿ ಜನರು ರೊಚ್ಚಿಗೆದ್ದು ದಾಂಧಲೆ ಉಂಟು ಮಾಡುತ್ತಾರೆಯೋ ಎಂಬ ಆತಂಕ ಮನೆ ಮಾಡಿರುತ್ತದೆ. ಈ ಕಾರಣದಿಂದಲೇ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಈ ಸಾಫ್ಟ್ ವೇರ್ ಸಿಸ್ಟಂ ಅಂದರೆ, ಸಾರ್ವಜನಿಕ ಸಭೆಗಳಿಗೆ ಬರುವ ಪ್ರತಿಯೊಬ್ಬರ ಫೋಟೋಗಳು ಇದರಲ್ಲಿ ಸೆರೆ ಹಿಡಿಯುತ್ತವೆ. ಒಂದು ವೇಳೆ ಪ್ರತಿಭಟನೆ ಸೇರಿದಂತೆ ಮತ್ತಿತರೆ ಕುಕೃತ್ಯಗಳನ್ನು ನಡೆಸುವ ವ್ಯಕ್ತಿಗಳನ್ನು ಈ ಫೋಟೋಗಳ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು ಎಂಬುದು ದೆಹಲಿ ಪೊಲೀಸರ ಅಂಬೋಣ. ಇದುವರೆಗೆ ಈ ವ್ಯವಸ್ಥೆಯನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಅಳವಡಿಸಲಾಗಿತ್ತು. ದೆಹಲಿ ರ್ಯಾಲಿಯ ಸಂದರ್ಭದಲ್ಲಿ ಅಳವಡಿಸುಸಿದ್ದು, ರಾಜಕೀಯ ರ್ಯಾಲಿಯೊಂದರಲ್ಲಿ ಮೊದಲ ಬಾರಿಗೆ ಅಳವಡಿಸಿದಂತಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ರ್ಯಾಲಿಯಲ್ಲಿ ಸಭಿಕರ ಸಾಲಿನಲ್ಲಿ ಬಂದು ಕುಳಿತುಕೊಳ್ಳುವವರಲ್ಲಿ ಕೆಲವರು ಸರ್ಕಾರ, ಮೋದಿ ವಿರುದ್ಧ ಘೋಷಣೆ ಕೂಗಿ, ಬ್ಯಾನರ ಪ್ರದರ್ಶನ ಮಾಡಿ ಗದ್ದಲ ಎಬ್ಬಿಸುತ್ತಾರೆಂಬ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮುಖ ಪತ್ತೆ ಮಾಡುವ ಸಾಫ್ಟ್ ವೇರ್ ಅನ್ನು ರ್ಯಾಲಿಯಲ್ಲಿ ಅಳವಡಿಸಿದ್ದರು.
ಸಭೆಗೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯೂ ಸಹ ಪ್ರವೇಶದ್ವಾರದಲ್ಲಿ ಅಳವಡಿಸಲಾಗುವ ಲೋಹ ಪರಿಶೋಧಕ ಯಂತ್ರದ ದ್ವಾರದ ಮೂಲಕ ಆಗಮಿಸಬೇಕು. ಅಲ್ಲಿಯೇ ಇರುವ ಕ್ಯಾಮೆರಾದಲ್ಲಿ ಅವರೆಲ್ಲರ ಫೋಟೋವನ್ನು ಸೆರೆ ಹಿಡಿಯಲಾಗುತ್ತದೆ.
ಒಂದು ವೇಳೆ ಸಮಾರಂಭಗಳಲ್ಲಿ ಗದ್ದಲವೆಬ್ಬಿಸಿದರೆ ಈ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿರುವ ಫೋಟೋಗಳ ಆಧಾರದಲ್ಲಿ ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪ ತಳೆದು ಸಾಕಷ್ಟು ಹಾನಿಯಾಗುತ್ತಿದೆ. ಕರ್ನಾಟಕ, ಉತ್ತರಪ್ರದೇಶ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳಿಂದ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ ಮತ್ತು ಅಲ್ಲಲ್ಲಿ ಘರ್ಷಣೆಗಳು ನಡೆದು 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಸಾಕಷ್ಟು ದೌರ್ಜನ್ಯ ನಡೆಸಿದ್ದಾರೆ. ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ಮುಖಂಡರೆಲ್ಲಾ ಒಂದು ನಿರ್ದಿಷ್ಟ ಕೋಮಿನವರೇ ಈ ಗಲಭೆ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.
ಪ್ರತಿಭಟನೆಗಳ ಬಿಸಿ ಇನ್ನೂ ತಣ್ಣಗಾಗಿಲ್ಲ. ಬಿಜೆಪಿ ನಾಯಕರು ಎಲ್ಲೇ ಹೋದರೂ ಪ್ರತಿಭಟನೆ ಬಿಸಿ ತಟ್ಟುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಅಥವಾ ಅವರಲ್ಲಿ ಬೆದರಿಕೆ ಹುಟ್ಟಿಸಲೆಂದೇ ಬಿಜೆಪಿ ಸರ್ಕಾರ ಮುಖಚರ್ಯೆಯನ್ನು ಪತ್ತೆ ಮಾಡುವಂತಹ ಸಾಫ್ಟ್ ವೇರ್ ಅನ್ನು ಅಳವಡಿಸುತ್ತಿದೆ ಎಂಬ ಆರೋಪಗಳು ಬರುತ್ತಿವೆ.
ಜನಪರವಾದ ಯೋಜನೆಗಳನ್ನು ತಂದಿದ್ದರೆ ಇಂತಹ ಇರಿಸು ಮುರಿಸುಗಳನ್ನು ಎದುರಿಸುವ ಅಗತ್ಯವಿರುತ್ತಿರಲಿಲ್ಲ. ದೆಹಲಿ ಪೊಲೀಸರ ಪ್ರಕಾರ ಪದೇಪದೆ ಅಪರಾಧಗಳನ್ನು ಎಸಗುವವರು ಮತ್ತು ರೌಡಿ ಪಟ್ಟಿಯಲ್ಲಿರುವವರನ್ನು ಪತ್ತೆ ಮಾಡಲೆಂದೇ ಈ ಸಾಫ್ಟ್ ವೇರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ, ಪ್ರತಿಭಟನೆಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳಲ್ಲಿ ಇಂತಹ ವ್ಯಕ್ತಿಗಳು ಸೇರಿಕೊಂಡು ಕುಕೃತ್ಯ ಎಸಗಬಹುದೆಂಬ ಕಾರಣದಿಂದ ಇದನ್ನು ರ್ಯಾಲಿಯಲ್ಲಿ ಬಳಸಲಾಗಿತ್ತು.
ಆದರೆ, ಇದರ ಹಿಂದಿನ ಉದ್ದೇಶವೇ ಬೇರೆಯಾಗಿತ್ತು. ಅದೆಂದರೆ, ರ್ಯಾಲಿಗೆ ಆಗಮಿಸುವ ಪ್ರತಿಭಟನೆಕಾರರನ್ನು ಹತ್ತಿಕ್ಕಲೆಂದೇ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಈ ಮೂಲಕ ಬಿಜೆಪಿ ಸರ್ಕಾರ ಪ್ರತಿಭಟನಾಕಾರರ ಧ್ವನಿ ಅಡಗಿಸಲೆಂದೇ ಈ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು.