ದೇಶದ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಸುದ್ದಿಗಳನ್ನು ಬಿತ್ತರ ಮಾಡಿದರೆ ಹುಷಾರ್ ಎಂಬ ಅರ್ಥದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಾರ್ತಾ ಮತ್ತು ಪ್ರಸಾರ ಇಲಾಖೆ ಮೂಲಕ ಮಾಧ್ಯಮ ಸಂಸ್ಥೆಗಳು ಅದರಲ್ಲೂ ದೃಶ್ಯ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರ ಮಾಧ್ಯಮಗಳ ಹಕ್ಕನ್ನು ಕಸಿಯುವ ಯತ್ನ ನಡೆಸುತ್ತಿದೆ.
ನೆರೆಯ ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದು ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಪಾರ್ಸಿಗಳು, ಬೌದ್ಧರು, ಜೈನರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕರಿಸಿಕೊಂಡಿದೆ.
ಇದನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನೆ ನಡೆಯುತ್ತಿರುವ ಸುದ್ದಿಗಳನ್ನು ದೃಶ್ಯ ಮಾಧ್ಯಮಗಳು ಬಿತ್ತರ ಮಾಡುವ ಮೂಲಕ ಮಸೂದೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿವೆ. ಆದರೆ, ಸುದ್ದಿಯನ್ನೇ ಬಿತ್ತರ ಮಾಡಬಾರದು ಎಂದು ಸರ್ಕಾರ ಖಾಸಗಿ ದೃಶ್ಯ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆ.
ಇಂತಹ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ದೇಶದ್ರೋಹದ ವರ್ತನೆ ಎಂದು ಜರಿದಿದ್ದು, ಈ ಬಗ್ಗೆ ಖಾಸಗಿ ಮಾಧ್ಯಮಗಳಿಗೆ ನೊಟೀಸ್ ಅನ್ನು ಕಳುಹಿಸಿರುವ ವಾರ್ತಾ ಮತ್ತು ಪ್ರಚಾರ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ. ದೇಶದ್ರೋಹದ ವರ್ತನೆಯನ್ನು ತೋರುವ ಅಥವಾ ಅದಕ್ಕೆ ಕುಮ್ಮಕ್ಕು ನೀಡುವಂತಹ ಸುದ್ದಿಗಳನ್ನು ಪ್ರಕಟಿಸಬಾರದು ಅಥವಾ ಬಿತ್ತರಿಸಬಾರದು ಎಂದು ತಾಕೀತು ಮಾಡಿದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಹಿಂಸಾಚಾರದಂತಹ ಪ್ರಕರಣಗಳನ್ನು ಟಿವಿಗಳಲ್ಲಿ ತೋರಿಸಬಾರದು. ಈ ನೊಟೀಸ್ ಅನ್ನು ಪ್ರಮುಖವಾಗಿ ಅಸ್ಸಾಂನ ಖಾಸಗಿ ಸುದ್ದಿವಾಹಿನಿಗಳಿಗೆ ನೀಡಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಜ್ಯ ವಿರೋಧಿಸುತ್ತಿದೆ ಎಂಬ ಸುದ್ದಿಗಳನ್ನು ಬಿತ್ತರ ಮಾಡಬಾರದು ಎಂದು ವಾರ್ತಾ ಇಲಾಖೆ ತಿಳಿಸಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆ `ದೇಶದ್ರೋಹ’ವೆಂಬ ಬೆದರುಬೊಂಬೆಯನ್ನು ತೋರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪುಲ್ವಾಮ ದಾಳಿ ಮತ್ತು ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ನಂತರ ಪ್ರತಿಭಟನೆಗಳ ವರದಿಯನ್ನು ಪ್ರಸಾರ ಮಾಡಬಾರದು. ಇವುಗಳು ದೇಶದ್ರೋಹದ ವರ್ತನೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದರು.
ನಾಗರಿಕರು ಹಿಂಸಾಚಾರದಂತಹ ದೃಶ್ಯಗಳನ್ನು ನೋಡಲು ಬಯಸುವುದಿಲ್ಲ. ಈ ಕಾರಣದಿಂದ ಹಿಂಸಾಚಾರದ ದೃಶ್ಯಗಳನ್ನು ಪ್ರಸಾರ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ಇದಲ್ಲದೇ, ಹಿಂಸಾಚಾರದಂತಹ ದೃಶ್ಯಗಳನ್ನು ಪ್ರಸಾರ ಮಾಡಿದರೆ ಹಿಂಸಾಚಾರಕ್ಕೆ ಪ್ರಚೋದನೆ ಉಂಟು ಮಾಡಿದಂತಾಗಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಬಾಂಗ್ಲಾ ವಿದೇಶಾಂಗ ಮಂತ್ರಿ ಪ್ರವಾಸ ಕ್ಯಾನ್ಸೆಲ್
ಇನ್ನೊಂದೆಡೆ, ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾಗುತ್ತಿದ್ದಂತೆಯೇ ಬಾಂಗ್ಲಾದೇಶದ ವಿದೇಶಾಂಗ ಮಂತ್ರಿ ಎ.ಕೆ.ಅಬ್ದುಲ್ ಮೊಮೆನ್ ಭಾರತ ಭೇಟಿಯನ್ನು ರದ್ದು ಮಾಡಿದ್ದಾರೆ. ಅವರು ಗುರುವಾರ ಪೂರ್ವನಿಯೋಜಿತ ಕಾರ್ಯಕ್ರಮದಂತೆ ಭಾರತಕ್ಕೆ ಬರಬೇಕಿತ್ತು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂಬ ಗೃಹ ಮಂತ್ರಿ ಅಮಿತ್ ಶಾ ಅವರ ಆರೋಪಗಳನ್ನು ತಳ್ಳಿ ಹಾಕಿರುವ ಮೊಮೆನ್, ಇದೊಂದು ಶುದ್ಧ ಸುಳ್ಳು ಆರೋಪ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.