ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದಲ್ಲಿ ಜಾರಿಯಾಗಿದ್ದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಆಗಿದೆ. ಆದರೂ ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಜೊತೆಗೆ ಪ್ರಗತಿಪರರು ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರ ಗುಂಡೇಟಿಗೆ ಹಲವಾರು ಮಂದಿ ತಮ್ಮ ಜೀವನವನ್ನೇ ಕಳೆದುಕೊಂಡಿದ್ದಾರೆ. ಆದರೆ ಭಾನುವಾರ ವಾರಣಸಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಆರ್ಟಿಕಲ್ 370 ವಿಚಾರದಲ್ಲಿ ನಮ್ಮ ನಿಲುವಿಗೆ ಬದ್ಧ ಎನ್ನುವ ಮೂಲಕ ಹೋರಾಟಗಾರರಿಗೆ ತಿರುಗೇಟು ಕೊಟ್ಟಿದ್ದಾರೆ. ಜೊತೆಗೆ ಈ ನಿಲುವು ದೇಶದ ರಕ್ಷಣೆಗಾಗಿ ಎಂದು ಮತ್ತೆ ದೇಶಪ್ರೇಮ ಸಾರಿದ್ದಾರೆ. ಈ ನಡುವೆ ಪೌರತ್ವ ತಿದ್ದುಪಡಿ ಕಾಯ್ದೆ ಮಹಾರಾಷ್ಟ್ರದ ಮೈತ್ರಿ ಸರ್ಕಾರದ ನಡುವೆ ಬಿರುಕು ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ಬದ್ಧ ವೈರಿಗಳಾಗಿ ಸೆಣಸಾಡಿಕೊಂಡು ಬಂದಿದ್ದ ಶಿವಸೇನೆ, ಕಾಂಗ್ರೆಸ್ ಹಾಗು ಎನ್‌ಸಿಪಿ ಜೊತೆ ಸೇರಿಕೊಂಡು ಅಧಿಕಾರ ಹಿಡಿದಿದೆ. ಶಿವಸೇನೆ ಮೊದಲಿನಿಂದಲೂ ಬಲಪಂಥಿಯ ವಾದಕ್ಕೆ ಮನ್ನಣೆ ಕೊಡುತ್ತಾ ಹಿಂದುತ್ವ ಅಜೆಂಡವನ್ನೇ ಬಳಸಿ ಪಕ್ಷವನ್ನು ಬೆಳೆಸಿದೆ. ಆದರೆ ಅಧಿಕಾರ ಹಂಚಿಕೆಯಲ್ಲಿ ಆದ ಗೊಂದಲದಿಂದ ಕುಪಿತಗೊಂಡ ಉದ್ಧವ್ ಠಾಕ್ರೆ, ಕಾಂಗ್ರೆಸ್ ಹಾಗು ಎನ್‌ಸಿಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಿಎಂ ಸ್ಥಾನಕ್ಕೆ ಏರುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾರೆ. ಅದೂ ಅಲ್ಲದೆ ರಾತ್ರೋರಾತ್ರಿ ಎನ್‌ಸಿಪಿ ಗುಂಪಿನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದ ದೇವೇಂದ್ರ ಫಡ್ನಾವಿಸ್ ಅವರನ್ನು ಕೇವಲ 2 ದಿನದಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಇದೀಗ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದು, ಮೇ 1 ರಿಂದ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ನಿರ್ಧಾರ ಮಾಡಿದೆ. ಆದರೆ ಮಹಾ ವಿಕಾಸ್ ಅಘಡಿ ಮೈತ್ರಿಕೂಟ ಸಭೆ ನಡೆಸಿ ಅಂತಿಮ ನಿರ್ಧಾರ ಮಾಡುವ ತನಕ ಯಾವುದೇ ಹೇಳಿಕೆ ನೀಡದಂತೆ ಆಗ್ರಹಿಸಿದೆ. ಈಗಾಗಲೇ ಕಾಂಗ್ರೆಸ್ ಹಾಗು ಎನ್‌ಸಿಪಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಾರಾಸಗಟಾಗಿ ವಿರೋಧಿಸಿದೆ. ಆದರೆ ರಾಜ್ಯಸಭೆಯಲ್ಲಿ ಕಾಯ್ದೆ ಅಂಗೀಕಾರದ ವೇಳೆ ಗೈರಾಗುವ ಮೂಲಕ ಬಿಜೆಪಿ ನಿರ್ಧಾರಕ್ಕೆ ಪರೋಕ್ಷವಾಗಿ ಸಾಥ್ ಕೊಟ್ಟಿದ್ದ ಶಿವಸೇನೆ ನಿಲುವೇನು ಎನ್ನುವುದು ಇನ್ನಷ್ಟೇ ಹೊರಬೀಳಬೇಕಿದೆ.
ಬಿಜೆಪಿ ಜೊತೆ ಮತ್ತೆ ಸೇನೆ ಕೈಜೋಡಿಸುತ್ತಾ..?
ಕಾಂಗ್ರೆಸ್ ಹಾಗು ಎನ್‌ಸಿಪಿ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಗುದ್ದಾಡುತ್ತಿರುವ ಶಿವಸೇನೆ ಮತ್ತೆ ಬಿಜೆಪಿ ಜೊತೆಗೆ ಕೈಜೋಡಿಸುತ್ತಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಆದರೆ ಈ ಸಾಧ್ಯತೆಯೂ ತೀರ ಕಡಿಮೆ ಆಗಿದ್ದು, ಭಾನುವಾರ ಮಹಾರಾಷ್ಟ್ರಕ್ಕೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶಿವಸೇನೆ ವಿರುದ್ಧ ಕೆಂಡ ಕಾರಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಜನರು ಹೆಚ್ಚಿನ ಬೆಂಬಲ ಕೊಟ್ಟಿದ್ದರು. ಆದರೆ ಕೆಲವರು ಸ್ವಹಿತಾಸಕ್ತಿಗಾಗಿ ವಿರೋಧಿಸಿಕೊಂಡು ಬಂದಿದ್ದವರ ಜೊತೆಗೆ ಕೈಜೋಡಿಸಿ ಅಧಿಕಾರ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಟ ನಡೆಸಿ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಸ್ಪೃಧಿಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ ಎನ್ನುವ ಮೂಲಕ ಶಿವಸೇನೆ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಶಿವಸೇನೆ ಮುಂದಿನ ಆಯ್ಕೆಗಳು ಏನು..?
ಬಿಜೆಪಿ ಜೊತೆಗೆ ಅಧಿಕಾರ ಹಂಚಿಕೆಯಲ್ಲಿ ನಡೆದ ಘರ್ಷಣೆಯೇ ಕಾಂಗ್ರೆಸ್, ಎನ್‌ಸಿಪಿ ಜೊತೆಗೆ ಸೇರಿಕೊಂಡು ಶಿವಸೇನೆ ಅಧಿಕಾರ ಹಿಡಿಯಲು ಕಾರಣ. ಆದರೆ ಇದೀಗ ಅದೇ ಬಿಜೆಪಿ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವ ವಿಚಾರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಒಂದು ವೇಳೆ ಪೌರತ್ವ ಕಾಯ್ದೆಯನ್ನು ಜಾರಿ ಮಾಡದೆ ವಿರೋಧಿಸಿದರೆ ಈಗಿರುವ ಮತಬ್ಯಾಂಕ್ ಛಿದ್ರವಾಗು ಭೀತಿ ಶಿವಸೇನೆಯದ್ದು, ಜಾರಿ ಮಾಡಲು ಮುಂದಾದರೆ ಆಕಸ್ಮಿಕವಾಗಿ ಠಾಕ್ರೆ ಕುಟುಂಬಕ್ಕೆ ಸಿಕ್ಕಿರುವ ಸಿಎಂ ಕುರ್ಚಿ ಕಾಲು ಮುರಿದು ಬೀಳಲಿದೆ. ಅಡ್ಡಕತ್ತರಿಯಲ್ಲಿ ಸಿಲುಕಿರುವ ಶಿವಸೇನೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.