ಸಾರ್ವಜನಿಕ ವಲಯದ ತೀವ್ರ ವಿರೋಧದ ಹೊರತಾಗಿಯೂ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ಕಾನೂನಿನ ವಿರುದ್ಧದ `ದಂಗೆ’ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ದೇಶಾದ್ಯಂತ ಇಂದು ವಿವಿಧ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಪೌರತ್ವ ಕಾನೂನಿನ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಅಲ್ಲಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆದಿದ್ದರೆ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದವು.
ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರಲ್ಲದೇ, ಅಶ್ರುವಾಯು ಸಿಡಿಸಿದ್ದಾರೆ. ಆದರೆ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಆಜಾದಿ ಆಜಾದಿ ಘೋಷಣೆಗಳನ್ನು ಕೂಗುತ್ತಾ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಇನ್ನು ಇತ್ತ ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಯನ್ನು ಹತ್ತಿಕ್ಕಲೆಂದೇ ರಾಜ್ಯ ಬಿಜೆಪಿ ಸರ್ಕಾರ ಮಂಗಳವಾರವೇ ರಾಜ್ಯಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ ವಿವಿಧ ಸಂಘಟನೆಗಳು ಇಂದು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆಗಳನ್ನು ನಡೆಸಿದರು.
ಅಲ್ಲಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ಕೋಮುದ್ವೇಷದ ಕಾನೂನನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಈ ಕಾನೂನು ಅಲ್ಪಸಂಖ್ಯಾತ ಮುಸ್ಲಿಂರನ್ನು ಕೀಳಾಗಿ ಕಾಣುವಂತಹ ಕಾನೂನಾಗಿದೆ. ಮುಸ್ಲಿಂರನ್ನು ಕಡೆಗಣಿಸಿ ಹಿಂದೂ ಧರ್ಮದವರನ್ನು ಓಲೈಸಿಕೊಳ್ಳುವ ವೋಟ್ ಬ್ಯಾಂಕ್ ರಾಜಕಾರಣವಾಗಿದೆ. ಈ ದುರುದ್ದೇಶಪೂರ್ವಕವಾದ ಕಾನೂನು ದೇಶಕ್ಕೆ ಬೇಡವೇ ಬೇಡ, ನಮಗೆ ಆಜಾದಿ ಬೇಕು, ಕಾನೂನನ್ನು ತರಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಡೌನ್ ಡೌನ್ ಎಂದು ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ವ್ಯಾಪಕವಾಗಿ ಈ ಪ್ರತಿಭಟನೆ ಸಾಗಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ, ಪೋಲಿಸರು ಪ್ರತಿಭಟನಕಾರರನ್ನು ಬಸ್ಸಿನಲ್ಲಿ ಮತ್ತೊಂದು ಕಡೆಗೆ ರವಾನಿಸಿದರು.
ಟೌನ್ ಹಾಲ್ ಬಳಿ ಪ್ರತಿಭಟನೆ ತಣ್ಣಗಾಗುತ್ತಿದ್ದಂತೆ, ಸಿಲ್ವರ್ ಜುಬ್ಲಿ ಪಾರ್ಕ್‌ನತ್ತ ಮತ್ತಷ್ಟು ಮಂದಿ ಪ್ರತಿಭಟನೆಗೆ ಇಳಿದ್ದಿದ್ದರು, ಸುಮಾರು ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಎರಡು ಸಾವಿರಕ್ಕೂ ಅಧಿಕ ಮಂದಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮೈಸೂರು ರಸ್ತೆ ಮೇಲು ಸೇತುವೆ, ಎಸ್‌ಜೆಪಿ ರಸ್ತೆ, ಜೆಸಿ ರಸ್ತೆ ಹಾಗೂ ಕಾರ್ಪೋರೇಶನ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪ್ರಯಾಣಿಸಲು ಪರದಾಡುತ್ತಿದ್ದರು.
ಪ್ರತಿಭಟನೆಯಿಂದ ಜನರು ಚೆದುರಿ, ವಾಹನ ಸವಾರರಿಗೆ ಸಮಸ್ಯೆ ಉಂಟಾಗಬಾರದೆಂದು ಪೋಲಿಸರು ಪ್ರತಿಭಟನಕಾರರ ಸುತ್ತಾ ಬಿಎಂಟಿಸಿ ಬಸ್ಸುಗಳನ್ನು ಕರೆಯಿಸಿ ನಿಲ್ಲಿಸಿದರು. ಆದರೂ ಜನರು ರಸ್ತೆಯ ಮಧ್ಯದಲ್ಲೆ ಕೂತು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಹೆಚ್ಚು ಪೋಲಿಸ್ ಪ್ರೊಟೆಕ್ಷನ್ ಇದ್ದರೂ, ಪ್ರತಿಭಟನಕಾರರನ್ನು ಸಮಾಧಾನ ಮಾಡುವಲ್ಲಿ ಪೋಲಿಸರು ವಿಫಲರಾದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷಾದ್ ಕೂಡ ಪ್ರತಿಭಟನೆಗೆ ಕೈ ಜೋಡಿಸಿದರು. ಸಮಯ ಮೀರುತ್ತಿದ್ದಂತೆ ಪೋಲಿಸರು ರಿಜ್ವಾನ್ ಅರ್ಷಾದ್ ಅವರನ್ನು ಸಮಾಧಾನ ಪಡಿಸಿ, ತಮ್ಮ ವಾಹನದಲ್ಲಿ ಕರೆದೊಯ್ದರು.
ಹಲವಾರು ಮಂದಿ ಸರಪಳಿಯಂತೆ ನಿಲ್ಲುವ ಮೂಲಕ ಪ್ರತಿಭಟನೆಗೆ ಮತ್ತಷ್ಟು ಧ್ವನಿಗೂಡಿಸಿದರು.

ಮಂಗಳೂರಿನಲ್ಲಿ ವ್ಯಾಪಕ ಹಿಂಸಾಚಾರ
ಇನ್ನು ಮಂಗಳೂರಿನಲ್ಲಿ ಬೆಳಗ್ಗೆಯಿಂದ ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಪೊಲೀಸರು ನಿಷೇಧಾಜ್ಞೆ ಇರುವುದರಿಂದ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದಾಗ ಪ್ರತಿಭಟನಾಕಾರರ ಆಕ್ರೋಶದ ಕಟ್ಟೆ ಒಡೆಯಿತು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಗಳು ನಡೆದು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಅವಕಾಶ ನೀಡದ ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದರು. ಇದನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರಾದರೂ ಪರಿಸ್ಥಿತಿ ಯಥಾಸ್ಥಿತಿಗೆ ಮರಳದ ಹಿನ್ನೆಲೆಯಲ್ಲಿ ಮಂಗಳೂರಿನ ಆರಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ curfew ಹೇರಲಾಗಿದೆ. ಈ ಮೂಲಕ ಪ್ರತಿಭಟನೆಗೆ ಮುಂದಾಗುವವರು ಕಂಡಲ್ಲಿ ಗುಂಡಿಕ್ಕಲು ಆದೇಶಿಲಾಗಿದೆ.

ರಾಜ್ಯ ಬಿಜೆಪಿ ಸರ್ಕಾರ ಈ ಆದೇಶದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಮಂಗಳೂರಿನ ಬಂದರು, ಪಾಂಡೇಶ್ವರ, ಬರ್ಕೆ, ಹಂಪನಕಟ್ಟೆ ಮತ್ತು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿಯವರೆಗೂ ಕರ್ಫ್ಯೂ ಹೇರಲಾಗಿದೆ.
ಈ ಕಾನೂನು ಜನವಿರೋಧಿ ಮಾತ್ರವಲ್ಲ, ದೇಶದ ಮೂಲ ಸಿದ್ಧಾಂತಕ್ಕೇ ಧಕ್ಕೆಯುಂಟು ಮಾಡುತ್ತಿದೆ. ಈ ಕಾನೂನಿನ ಪ್ರಕಾರ ಹೊರದೇಶದಿಂದ ಬಂದ ಭಾರತೀಯರಿಗೆ ಪೌರತ್ವದ ಆಶ್ವಾಸನೆ ನೀಡುತ್ತದೆ. ಆದರೆ ದೇಶದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಮೂಲಸೌಕರ್ಯದ ಭದ್ರತೆಯನ್ನು ಒದಗಿಸುವುದಿಲ್ಲ. ಇದು ಭಾರತವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಆರ್ಥಿಕತೆ ಹಾಗೂ ಕೇಂದ್ರ ಸರ್ಕಾರದ ಸೋಲುಗಳ ಬಗ್ಗೆ ಜನರ ದಿಕ್ಕು ತಪ್ಪಿಸುವ ಹುನ್ನಾರ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮಾಡಿದ ವಿವಿಧ ಸಂಘಟನೆಗಳ ನಾಯಕರು ಆರೋಪಿಸಿದರು.