ಕೊಡಗಿನ ತೋಟಗಳಲ್ಲಿ ವರ್ಷವಿಡೀ ಕೆಲಸ ಇದ್ದೇ ಇರುತ್ತದೆ ಮತ್ತು ಕಾಫಿ ಕೃಷಿಯು ಅಪಾರ ಮಾನವ ಶ್ರಮವನ್ನು ಬೇಡುವ ಕೃಷಿ ಅಗಿದೆ. ಇಲ್ಲಿ ಯಾವತ್ತೂ ಕಾರ್ಮಿಕರ ಕೊರತೆ ಇದ್ದೇ ಇರುತ್ತದೆ ಮತ್ತು ಕಾಫಿ ಕೊಯ್ಲಿನ ಸಂದರ್ಭಗಳಲ್ಲಿ ಈ ಕೊರತೆ ತೀವ್ರವಾಗಿರುತ್ತದೆ.ಈ ಕೊರತೆಯನ್ನು ನೀಗಿಸಲೆಂದೇ ಮೊದಲು ಉತ್ತರ ಕರ್ನಟಕ ಭಾಗದಿಂದ ಕಾರ್ಮಿಕರನ್ನು ಕರೆಸಲಾಗುತಿತ್ತು. ವರ್ಷದ ನವೆಂಬರ್ ತಿಂಗಳಿನಲ್ಲಿ ಇಲ್ಲಿಗೆ ಬರುತಿದ್ದ ಕಾರ್ಮಿಕರು ಫೆಬ್ರುವರಿ ಮಾರ್ಚ್ ತಿಂಗಳಿನ ವರೆಗೆ ತೋಟಗಳ ಮಾಲೀಕರು ನೀಡುವ ಲೈನ್ ಮನೆಗಳಲ್ಲಿ ಇದ್ದು ಕೊಯ್ಲು ಮುಗಿಸಿ ತಮ್ಮ ಗ್ರಾಮಗಳಿಗೆ ಹಿಂತಿರುಗುತಿದ್ದರು.
ಕಳೆದೊಂದು ಎರಡು -ದಶಕಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಬೆಳೆ ಒಂದಷ್ಟು ಚೆನ್ನಾಗಿ ಅಗುತ್ತಿರುವುದರಿಂದ ಕಾರ್ಮಿಕರ ವಲಸೆ ಕಡಿಮೆ ಆಯಿತು, ಬೆಂಗಳುರಿನಲ್ಲಿ ಕಟ್ಟಡ ಕಾರ್ಮಿಕರ ಕೊರತೆಯಿಂದ ಜತೆಗೇ ಅಲ್ಲಿ ಇಲ್ಲಿಗಿಂತ ಹೆಚ್ಚು ದಿನಗೂಲಿ ಸಿಗುವುದರಿಂದ ಉತ್ತರ ಕರ್ನಟಕ ಭಾಗದ ಜನರು ಬೆಂಗಳೂರಿಗೆ ವಲಸೆ ಹೋದರು. ಆಗ ಶುರುವಾದದ್ದೇ ಹಿಂದಿ ,ಅಸ್ಸಾಮಿ, ಬೋಜ್ ಪುರಿ ಮಾತನಾಡುವ ಉತ್ತರ ಭಾರತ ಕಾರ್ಮಿಕರ ವಲಸೆ.
ಇವರು ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ತಮ್ಮ ಊರಿಗೆ ತೆರಳುತ್ತಾರೆ ಮತ್ತು ವರ್ಷವಿಡೀ ತೋಟಗಳಲೇ ದುಡಿಯುತ್ತಾರೆ. ಇವರನ್ನು ಇಲ್ಲಿಗೆ ಕರೆತರಲು ಇಲ್ಲಿಯವರೇ ಆಗಿರುವ ದಲ್ಲಾಲಿಗಳು ಉತ್ತರ ಭಾರತದ ದಲ್ಲಾಳಿಗಳೊಂದಿಗೆ ಸಂಪರ್ಕವನ್ನೂ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಕೊಡಗಿನಲ್ಲಿ ಉತ್ತರ ಭಾರತದ ಕಾರ್ಮಿಕರಿಂದಾಗಿ ಅಪರಾಧ ಕೃತ್ಯಗಳು ನಡೆದಿರುವ ಹಿನ್ನೆಲೆಯಲ್ಲಿ ಸ್ತಳೀಯ ಕಾರ್ಮಿಕರೂ ಇವರ ವಿರುದ್ದ ಅಸಮಾಧಾನಗೊಂಡಿದ್ದರು, ಏಕೆಂದರೆ ಇವರು ಸ್ಥಳೀಯ ಕಾರ್ಮಿಕರಿಗಿಂತಲೂ ಕಡಿಮೆ ಕೂಲಿಗೆ ಕೆಲಸ ಮಾಡುತಿದ್ದರು.ಇದಲ್ಲದೆ ಕಳೆದ ವರ್ಷ ಸಿದ್ದಾಪುರ ಸಮೀಪದ ಕಾಪಿ ತೋಟವೊಂದರಲ್ಲಿ ಸ್ಥಳಿಯ ಕಾರ್ಮಿಕ ಕುಟುಂಬವೊಂದರ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು .ಈ ಹತ್ಯೆಯ ಅರೋಪಿಗಳು ಉತ್ತರ ಭಾರತದ ವಲಸೆ ಕಾರ್ಮಿಕರಾಗಿದ್ದು ಕೂಡಲೇ ಪೋಲೀಸರು ಬಂದಿಸುವಲ್ಲಿ ಯಶಸ್ವಿ ಆಗಿದ್ದರು. ಇದು ಸಿದ್ದಾಪುರದಲ್ಲಿ ನಡೆದ ದೊಡ್ಡ ಮಟ್ಟದ ಪ್ರತಿಭಟನೆಗೂ ಕಾರಣವಾಗಿತ್ತು. ಒಂದು ವೇಳೆ ಇವರು ಒಂದು ಅಲ್ಪ ಸಂಖ್ಯಾತ ಕೋಮಿಗೆ ಸೇರಿದವರಾಗಿರುತಿದ್ದಲ್ಲಿ ಹೆಚ್ಚಿನ ಗಲಭೆ ನಡೆಯುತಿದ್ದುದರಲ್ಲಿ ಸಂದೇಹವೇ ಇಲ್ಲ.
ಇದಕ್ಕೂ ಮುನ್ನವೇ ಪೋಲೀಸ್ ಇಲಾಖೆ ಉತ್ತರ ಭಾರತದಿಂದ ವಲಸೆ ಬಂದಿರುವ ಕಾರ್ಮಿಕರ ಗುರುತನ್ನು ಆಯಾ ವ್ಯಾಪ್ತಿಯ ಪೋಲೀಸ್ ಠಾಣೆಗಳಲ್ಲಿ ತೋಟಗಳ ಮಾಲೀಕರು ನೀಡಬೇಕೆಂದೂ ಠಾಣೆಗಳಲ್ಲಿ ಠಾಣಾಧಿಕಾರಿಗಳು ರಿಜಿಸ್ಟರ್ ನಿರ್ವಹಣೆ ಮಾಡಬೇಕೆಂದೂ ಸುತ್ತೋಲೆ ಹೊರಡಿಸಿತ್ತು. ಆದರೆ ತೋಟಗಳ ಮಾಲೀಕರು ಸರಿಯಾದ ಮಾಹಿತಿ ನೀಡಿರಲಿಲ್ಲ , ಇತ್ತೀಚೆಗೆ ಬೆಂಗಳುರಿನಲ್ಲಿ ಬಂಧಿತರಾದ ಶಂಕಿತ ಉಗ್ರರು ನೀಡಿರುವ ಸುಳಿವಿನ ಮೇರೆಗೆ ಗೋಣಿಕೊಪ್ಪ ಸಮೀಪದ ಅರಣ್ಯದಲ್ಲಿ ಉಗ್ರ ಚಟುವಟಿಕೆ ಮತ್ತು ತರಬೇತಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೋಲೀಸರೇ ತೋಟಗಳ ಮಾಲೀಕರಿಗೆ ಮೌಕಿಕ ಸೂಚನೆ ನೀಡಿ ಉತ್ತರ ಭಾರತದ ಕಾರ್ಮಿಕರ ಪರಿಶೀಲನೆಯಲ್ಲಿ ತೊಡಗಿದ್ದಾರೆ,
ಈ ದಿಢೀರ್ ಬೆಳವಣಿಗೆ ಯಿಂದ ಅನೇಕ ಬೆಳೆಗಾರರು ಗಲಿಬಿಲಿಗೆ ಒಳಗಾದರೆ, ಕಾರ್ಮಿಕ ವರ್ಗ ದಾಖಲಾತಿಗಾಗಿ ಹೆಣಗಾಡುತ್ತಿದ್ದ ದೃಶ್ಯ ಗೋಚರಿಸಿತು.ಇಂದು ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗಗಳ ವ್ಯಾಪ್ತಿಯ ತೋಟ ಕಾರ್ಮಿಕರನ್ನು ಸಂಬಂಧಿಸಿದ ಮಾಲೀಕರು ಪೊಲೀಸರ ಮುಂದೆ ‘ಪೆರೇಡ್’ ನಡೆಸ ಬೇಕಾಯಿತು. ಅಲ್ಲದೆ ತಮ್ಮ ತೋಟಗಳಲ್ಲಿ ನೆಲೆಸಿರುವ ಕಾರ್ಮಿಕ ಕುಟುಂಬಗಳ ಸಂಪೂರ್ಣ ವಿವರಗಳೊಂದಿಗೆ ದಾಖಲಾತಿ ಪ್ರದರ್ಶಿಸಬೇಕಾಯಿತು. ತೋಟ ಮಾಲೀಕರು ಹಾಗೂ ಇಂತಹ ಕಾರ್ಮಿಕರನ್ನು ಕೊಡಗಿನಲ್ಲಿ ನೋಡಿಕೊಳ್ಳುತ್ತಿರುವ ಮಧ್ಯವರ್ತಿಗಳು ಸಾಕಷ್ಟು ಕಾರು, ಜೀಪುಗಳೊಂದಿಗೆ, ಪಿಕಪ್ ವಾಹನಗಳ ಸಹಿತ ಲಾರಿಗಳಲ್ಲಿ ತುಂಬಿಸಿಕೊಂಡು ಬಂದು, ತಪಾಸಣಾ ಕೇಂದ್ರದಲ್ಲಿ ಇಳಿಸುತ್ತಿದ್ದ ಚಿತ್ರಣ ಕಂಡುಬಂತು. ಮಡಿಕೇರಿ ನಗರದ ಸಿದ್ದಾಪುರ ರಸ್ತೆ ತಿರುವಿನಿಂದ ಆರ್ಎಂಸಿ ಸಂಕೀರ್ಣ ಹಾಗೂ ಇತರೆಡೆಯ ರಸ್ತೆ ಬದಿ ಸಾಲು ಸಾಲು ಕಾರ್ಮಿಕರನ್ನು ಕರೆತಂದು ಇಳಿಸುತ್ತಿದ್ದ ದೃಶ್ಯದಿಂದ ಸ್ಥಳೀಯರು ಅಚ್ಚರಿಯೊಂದಿಗೆ ಆತಂಕ ವ್ಯಕ್ತಪಡಿಸುತ್ತಿದ್ದರು.
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿ ನೆಲೆಸಿರುವುದು ವೀರಾಜಪೇಟೆ ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ ಮಾತ್ರ. ಎರಡೂ ತಾಲ್ಲೂಕುಗಳಲ್ಲಿ ಅಂದಾಜು ೧೦,೦೦೦ ಕ್ಕೂ ಅಧಿಕ ಕಾರ್ಮಿಕರು ನೆಲೆಸಿರಬಹುದೆಂದು ಅಂದಾಜಿಸಲಾಗಿದೆ. ಪೋಲೀಸರ ತಪಾಸಣೆ ಜಿಲ್ಲೆಯಲ್ಲಿ ಒಂದಷ್ಟು ಆತಂಕವನ್ನೂ ಸೃಷ್ಟಿಸಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ದೇಶಾಧ್ಯಂತ ಬಹು ಚರ್ಚಿತವಾಗುತಿದ್ದು ತೋಟ ಕಾರ್ಮಿಕರು ಇದನ್ನೂ ಕೂಡ ಎನ್ಅರ್ಸಿ ಎಂದೇ ಭಾವಿಸಿದ್ದಾರೆ ಅಲ್ಲದೆ ದಾಖಲಾತಿಗಳು ಇಲ್ಲದವರು ಪೋಲೀಸ್ ವಶದಲ್ಲಿ ಇರಬೇಕಾಗುತ್ತದೆ ಎಂಬ ವದಂತಿಗಳೂ ಹರಿದಾಡುತ್ತಿವೆ.
ಆದರೆ ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಸುಮನ್ ಪನ್ನೇಕರ್ ಅವರು ಕೊಡಗಿನ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ನೆಲೆಸಿರುವ ಹೊರರಾಜ್ಯಗಳ ಕಾರ್ಮಿಕರ ಗುರುತಿನ ಚೀಟಿ ಪರಿಶೀಲನಾ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ವತಿಯಿಂದ ಮೂರು ತಾಲ್ಲೂಕುಗಳಲ್ಲಿ ನಡೆಸಲಾಗಿದೆ. ಈ ಕಾರ್ಯಕ್ರಮವನ್ನು ಸಿಎಎ ಅಥವಾ ಎನ್ಆರ್ಸಿಯೊಂದಿಗೆ ತಳುಕು ಹಾಕಿ ಅಪಪ್ರಚಾರ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಪಿ ಅವರು ಸುಮಾರು 5 ಸಾವಿರ ಕಾರ್ಮಿಕರು ಸರಿಯಾದ ದಾಖಲೆಗಳನ್ನು ನೀಡಿದ್ದಾರೆ ಎಂದರು. ಅಂದಾಜು 500 ಮಂದಿ ಅಪೂರ್ಣ ದಾಖಲೆ ಹೊಂದಿರುವ ಕಾರ್ಮಿಕರಿದ್ದು, ಇವರಿಗೆ ಮುಂದಿನ ಒಂದು ವಾರದ ಒಳಗೆ ದಾಖಲೆಯನ್ನು ಹಾಜರುಪಡಿಸುವಂತೆ ತಿಳಸಲಾಗಿದೆ ಎಂದರು.ಜಿಲ್ಲೆಯಲ್ಲಿ ಹೊರರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಅವಲೋಕಿಸಿ ಜನರಲ್ಲಿ ಮೂಡಿರುವ ಆತಂಕವನ್ನು ದೂರಮಾಡಲು ಕಾರ್ಮಿಕರಿಂದ ಮಾಹಿತಿ ಪಡೆಯಲಾಗಿದೆಯಷ್ಟೇ ಎಂದು ಸ್ಪಷ್ಟಪಡಿಸಿದರು.
ಈ ತಪಾಸಣೆ ಕುರಿತು ಕೊಡಗು ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕ ವಿ ಪಿ ಶಶಿದರ್ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಯಾರ ಅಣತಿಯ ಮೇರೆಗೆ ಪೋಲೀಸರು ದಿಢೀರ್ ತಪಾಸಣೆ ನಡೆಸುತಿದ್ದಾರೋ ಗೊತ್ತಿಲ್ಲ. ಅದರೆ ಎಲ್ಲ ಹಿಂದಿ ಮಾತನಾಡುವ ಕಾರ್ಮಿಕರನ್ನು ಬಾಂಗ್ಲಾ ದೇಶೀಯರೆಂದು ಸಂಶಯಪಡುವುದು ಸರಿಯಲ್ಲ ಎಂದರು. ಒಟ್ಟಿನಲ್ಲಿ ಜಿಲ್ಲೆಯ ಪೋಲೀಸ್ ಇಲಾಖೆ ಕೈಗೊಂಡಿರುವ ತಪಾಸಣೆ ಉತ್ತರ ಭಾರತದ ಕಾರ್ಮಿಕರಲ್ಲಿ ಅತಂಕ ಸೃಷ್ಟಿಸಿರುವುದು ಸುಳ್ಳಲ್ಲ.