ಕರೋನಾದಿಂದ ಕಂಗೆಟ್ಟಿರುವ ಭಾರತ 21 ದಿನಗಳ ಕಾಲ ಲಾಕ್‌ಡೌನ್‌ಗೆ ಒಳಗಾಗಿದೆ. 5 ದಿನಗಳ ಹಿಂದೆ ಲಾಕ್ ಡೌನ್ ಮಾಡುವುದನ್ನು ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಮನ್ ಕೀ ಬಾತ್ ನಲ್ಲಿ ದೇಶದ ಜನರನ್ನು ಕ್ಷಮೆಯಾಚಿಸಿದ್ದಾರೆ. ಲಾಕ್ ಡೌನ್ ಮಾಡದೆ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸಲು ಮುಂದಾಗಿದ್ದಾರೆ. ನೀವು ನಿಮ್ಮಷ್ಟೇ ಅಲ್ಲ ನಿಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಬೇಕು. ಇನ್ನೂ ಕೆಲವು ದಿನಗಳ ಕಾಲ ಲಕ್ಷ್ಮಣ ರೇಖೆ ದಾಟಬೇಡಿ. ಕೆಲವು ದಿನ ಎಲ್ಲವನ್ನೂ ನಾವು ಸಹಿಸಿಕೊಳ್ಳಲೇಬೇಕಿದೆ ಎಂದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. 21 ದಿನಗಳ ಲಾಕ್ ಡೌನ್ ಮಾಡುವ ಮುಂಚೆಯೂ ಜನತಾ ಕರ್ಫ್ಯೂ ಹೆಸರಲ್ಲಿ ಜನರಿಗೆ ಲಾಕ್ ಡೌನ್ ಮಾಡಿದರೆ ಶಾಕ್
ಆಗದಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಕರ್ನಾಟಕ ಪೊಲೀಸರಿಗೆ ಲಾಕ್ ಡೌನ್
ಆಗುತ್ತಿದ್ದಂತೆ ಮಾರಿಹಬ್ಬ ಬಂದಷ್ಟೇ ಸಂಭ್ರಮ ಮನೆ ಮಾಡಿದೆಯಾ ಎನ್ನುವ ಅನುಮಾನ ಮೂಡುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರು ಶಿವಮೊಗ್ಗದಲ್ಲಿ ಪೊಲೀಸ್
ದರ್ಬಾರ್ ಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅದೂ ಕೂಡ ಸಿಎಂ ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರದಲ್ಲೇ ಈ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಸುಣ್ಣದಕೊಪ್ಪ ಗ್ರಾಮದಲ್ಲಿ ವ್ಯಕ್ತಿ ಲಕ್ಷ್ಮಣ ನಾಯ್ಕ ಸಾವನ್ನಪ್ಪಿದ್ದಾನೆ. ಸುಣ್ಣದಕೊಪ್ಪ ಗ್ರಾಮದ ಲಕ್ಷ್ಮಣ ನಾಯ್ಕ ಶನಿವಾರ ರಾತ್ರಿ ಜಮೀನಿಗೆ ತೆರಳಿ ವಾಪಸ್ ಬರುವಾಗ ನೈಟ್ ಬೀಟ್ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಾತ್ರಿ 10.30ರ ಸಮಯದಲ್ಲಿ ಗದ್ದೆಯಿಂದ ವಾಪಸ್
ಬರುತ್ತಿದ್ದ ವ್ಯಕ್ತಿಗೆ ಹಲ್ಲೆ ಮಾಡಿದ್ದು ಅಕ್ಷಮ್ಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೊಲೀಸರ ದೌರ್ಜನ್ಯದಿಂದಲೇ ಸಾವನ್ನಪ್ಪಿದ್ದಾರೆ. ಇದಕ್ಕೆ ದೇಹದ ಬಲ ಎದೆ ಮೇಲಿರುವ ಗಾಯದ ಗುರುತುಗಳೇ ಸಾಕ್ಷಿ ಎಂದು ಮೃತರ ಮಗ ಆರೋಪ ಮಾಡಿದ್ದಾರೆ. ಆದರೆ ಗ್ರಾಮಸ್ಥರ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಮೃತ ವ್ಯಕ್ತಿ ಲಕ್ಷ್ಮಣ ನಾಯ್ಕ ಲಾಠಿ ಏಟಿನಿಂದ ಸಾವನ್ನಪ್ಪಿಲ್ಲ. ಲಕ್ಷ್ಮಣ ನಾಯ್ಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು ಖಾಕಿ ದರ್ಪ ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶನಿವಾರ ಎರಡು ಘಟನೆಗಳು ನಡೆದಿದ್ದವು. ಎರಡೂ ಪೊಲೀಸರ ದಬ್ಬಾಳಿಕೆಗೆ ಸಂಬಂಧಿಸಿದ ಸುದ್ದಿಗಳು. ಹಾಸನದಲ್ಲಿ ವ್ಯಕ್ತಿಯೊಬ್ಬರು ಚಿಕ್ಕ ಹುಡುಗನನನ್ನು ಕರೆದುಕೊಂಡು ಮನೆಯಿಂದ ಹೊರ ಬಂದಿದ್ದರು. ರಸ್ತೆಯಲ್ಲಿ ತಡೆದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಗೆ ಮನಸೋ ಇಚ್ಛೆ ಲಾಠಿ ಏಟು ಕೊಟ್ಟಿದ್ದರು. ಹಾಸನ ಮಟನ್ ಮಾರ್ಕೆಟ್ ರಸ್ತೆಯ ಮನೆಯೊಳಕ್ಕೆ ಓಡಿ ಹೋದರೂ ಸುಮ್ಮನಾಗದ ಪೊಲೀಸರು ಮನೆಯೊಳಕ್ಕೂ ಹೋಗಿ ಹಿಗ್ಗಾಮುಗ್ಗಾ ಬಾರಿಸಿದ್ದರು. ಸ್ಥಳದಲ್ಲಿದ್ದ ಪುಟ್ಟ ಬಾಲಕ ಭಯದಿಂದ ಚೀರಿಕೊಂಡಿದ್ದ. ಈ ದೃಶ್ಯ ಸೆರೆ ಹಿಡಿದಿದ್ದ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.
ಅತ್ತ ಕುಂದಾನಗರಿ ಬೆಳಗಾವಿಯಲ್ಲಿ ಶನಿವಾರ ಆರೋಗ್ಯ ಇಲಾಖೆ ಅಧಿಕಾರಿ ಮೇಲೆ ಖಾಕಿ ಸೇನೆ ದರ್ಬಾರ್ ನಡೆಸಿತ್ತು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಡೊಳ್ಳಿನ್, ಕರ್ತವ್ಯಕ್ಕೆ ತೆರಳುತ್ತಿದ್ದಾಗ ಪೊಲೀಸ್ ಪೇದೆಯೊಬ್ಬರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದರು. ನಾನು ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ಹೇಳಿ ಗುರುತಿನ ಕಾರ್ಡ್
ತೋರಿಸುವ ಮುನ್ನವೇ ಹಲ್ಲೆಗೈದು ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಕೊನೆಗೆ ಪೊಲೀಸರೇ ಆಸ್ಪತ್ರೆಗೂ ದಾಖಲು ಮಾಡಿದ್ದರು. ಬೆಳಗಾವಿಯ ಗಾಂಧಿನಗರ ಬಳಿ ಈ ಘಟನೆ ನಡೆದಿತ್ತು.
ಇಷ್ಟೆಲ್ಲಾ ನಡೆದರೂ, ರಾಜ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮೌನಕ್ಕೆ ಶರಣಾಗಿದ್ದಾರೆ. ಪೊಲೀಸರ ನಡೆಯ ಕುರಿತು ಒಂದಿಷ್ಟು ಬೇಸರ ವ್ಯಕ್ತಪಡಿಸುವ ಗೋಜಿಗೆ ಹೋಗದೆ, ಘಟನೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಇರುವುದು ನಿಜಕ್ಕೂ ಕಳವಳಕಾರಿ.
ಪೊಲೀಸರು ಎಲ್ಲರೂ ಕೆಟ್ಟವರು ಎಂದು ಹೇಳಲು ಸಾಧ್ಯವೇ ಇಲ್ಲ. ಸಾಕಷ್ಟು ಮಂದಿ ಅನ್ನವಿಲ್ಲದೆ ಪರದಾಡುವ ನಿರ್ಗತಿಕರಿಗೆ ಅನ್ನ ಉಣಿಸಿದ್ದಾರೆ. ರಸ್ತೆಯಲ್ಲಿ ಬಂದವರನ್ನೆಲ್ಲಾ ಲಾಠಿ ಹಿಡಿದು ಬೆದರಿಸಬೇಡಿ ಎಂದು ಸ್ವತಃ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ ಚನ್ನಣ್ಣನವರ್ ಪೊಲೀಸರಿಗೆ ನೀತಿ ಪಾಠ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪೊಲೀಸರ ಬೆತ್ತದ ಏಟಿಗೆ ಅದೆಷ್ಟೋ ಮಂದಿ ಕುಂಡಿ ಊದಿಸಿಕೊಂಡಿದ್ದಾರೆ. ಪೊಲೀಸರು ಲಾಠಿಯಿಂದ ಬೆದರಿಸಬೇಕೇ ಹೊರತು ಅದನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಹಿಗ್ಗಾಮುಗ್ಗಾ ಬಾರಿಸುವುದು ಮನುಷ್ಯತ್ವ ಎನಿಸಿಕೊಳ್ಳುವುದಿಲ್ಲ. ಸಾಯುವ ಮಟ್ಟಕ್ಕೆ ಹಲ್ಲೆ ಮಾಡುವುದು ಅಮಾನವೀಯ.
ಪೊಲೀಸರು ಶಿವಮೊಗ್ಗದಲ್ಲಿ ಹಲ್ಲೆಯಿಂದ ವ್ಯಕ್ತಿ ಸತ್ತಿಲ್ಲ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಸತ್ಯ. ಪೊಲೀಸರ ಏಟಿಗೆ ಸಾವನ್ನಪ್ಪಿರುವುದಿಲ್ಲ. ಹೃದಯಾಘಾತದಿಂದಲೇ ಸತ್ತಿರುತ್ತಾರೆ. ಆದರೆ ಆ ವ್ಯಕ್ತಿ ಹೃದಯಾಘಾತಕ್ಕೆ ಕಾರಣ ಈ ಪೊಲೀಸ್ ಪೇದೆ ಕೊಟ್ಟ ಏಟು ಆಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಈ ನಡುವೆ, ಹಲವು ಸಾಮಾಜಿಕ ಸಂಘಟನೆಗಳು ಮತ್ತು ಹೋರಾಟಗಾರರು ಪೊಲೀಸರ ಕ್ರಮವನ್ನು ಖಂಡಿಸಿದ್ದು, “ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಮೊಂಡುತನದ ಜನರನ್ನು ಆ ಶಿಸ್ತಿಗೆ ಒಗ್ಗಿಸಲು ಪೊಲೀಸರು ಬೀದಿಗಿಳಿಯುವುದು ಕೂಡ ಅನಿವಾರ್ಯ. ಆದರೆ, ರಸ್ತೆಯಲ್ಲಿ ಸಂಚರಿಸುವ ವ್ಯಕ್ತಿ ಏಕೆ ಬಂದಿದ್ದಾನೆ ಎಂಬುದನ್ನು ತಿಳಿಯುವ ತಾಳ್ಮೆ ಪೊಲೀಸರಿಗೆ ಇರಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ ಜನ ತೀರಾ ಅನಿವಾರ್ಯವಿಲ್ಲದೆ ತಮ್ಮ ಸುರಕ್ಷತೆಯನ್ನೂ ಪಣಕ್ಕಿಟ್ಟು ರಸ್ತೆಗೆ ಇಳಿಯಲಾರರು ಎಂಬುದು ಸಾಮಾನ್ಯ ಜ್ಞಾನ. ಪೊಲೀಸರು ಇದನ್ನು ಅರ್ಥಮಾಡಿಕೊಂಡು ಒಂದಿಷ್ಟು ಸಂಯಮದಿಂದ ವರ್ತಿಸದೇ ಹೋದರೆ, ಕರೋನಾ ಸಾವಿಗೆ ಮುನ್ನವೇ ಜನರ ಲಾಠಿ ಏಟಿಗೆ ಸಾಯುವ ಪರಿಸ್ಥಿತಿ ತಲೆದೋರಬಹುದು” ಎಂಬ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
“ಮುಖ್ಯವಾಗಿ ಶಿಕಾರಿಪುರ ರೈತನ ಸಾವಿನ ಕುರಿತು ಪ್ರತ್ಯೇಕವಾಗಿ ನ್ಯಾಯಾಂಗ ತನಿಖೆಯಾಗಬೇಕು. ಏಕೆಂದರೆ, ಸಾವಿನ ವಿಷಯದಲ್ಲಿ ಜನರು ಮತ್ತು ಕುಟುಂಬವರ್ಗದವರು ಹೇಳುವ ಸಂಗತಿಗಳಿಗೂ, ಪೊಲೀಸರ ಸ್ಪಷ್ಟನೆಗೆ ಸಾಕಷ್ಟು ಗೊಂದಲವಿದೆ. ಜೊತೆಗೆ ರೈತನೊಬ್ಬ ತನ್ನ ಹೊಲಕ್ಕೆ ನೀರು ಬಿಡಲು ಹೋಗುತ್ತಿದ್ದಾಗ ಆತನನ್ನು ತಡೆದು ಆತಂಕ ಮೂಡಿಸುವ ಪ್ರಮೇಯವೇ ಇಲ್ಲ. ಹಾಗಿದ್ದರೂ ಚೆಕ್ ಪೋಸ್ಟ್ ಪೊಲೀಸರು ಯಾಕೆ ಹಾಗೆ ಮಾಡಿದರು? ಎಂಬ ಪ್ರಶ್ನೆಯೂ ಇದೆ. ಹಾಗಾಗಿ ಘಟನೆ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಮತ್ತು ಒಂದು ವೇಳೆ ಪೊಲೀಸರ ತಪ್ಪಿದ್ದರೆ, ತಕ್ಕ ಶಿಕ್ಷೆಯಾಗಬೇಕು” ಎಂದೂ ಶ್ರೀಪಾಲ್ ಆಗ್ರಹಿಸಿದ್ದಾರೆ.
ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಮಾತನಾಡಿದ್ದು, ತನಿಖೆಗೆ ಆದೇಶ ಮಾಡಿದ್ದು, ಹಲ್ಲೆಯಿಂದಲೇ ಸಾವನ್ನಪ್ಪಿದ್ದು ಖಚಿತವಾದರೆ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ. ಆದರೆ ಪೊಲೀಸರ ಹಲ್ಲೆಯಿಂದಲೇ ಹೃದಯಾಘಾತ ಆಗಿರಬಹುದು ಎನ್ನುವದನ್ನೂ ತನಿಖೆಯ ಭಾಗ ಮಾಡಿಕೊಳ್ಳಬೇಕಿದೆ. ಅದರಲ್ಲೂ ಲಾಕ್‌ಡೌನ್ ಹಾಗೂ ಕರ್ಫ್ಯೂ ಎಂದರೆ ಏನು? ಎಂಬುದರ ಅರಿವು ಪೊಲೀಸರಲ್ಲಿ ಮೂಡಬೇಕಿದೆ. ಎರಡೂ ಸಂದರ್ಭಗಳಲ್ಲಿ ಒಂದೇ ನಿಯಮ ಜಾರಿಯಾಗುವುದಿಲ್ಲ ಜ್ಞಾನ ಪೊಲೀಸ್ ಸಿಬ್ಬಂದಿಗಳಲ್ಲಿ ಮೂಡಿಸಬೇಕಿದೆ. ಇನ್ನಾದರೂ ಪೊಲೀಸರು ಕೊಲ್ಲುವ ಕೆಲಸಕ್ಕೆ ಮುಂದಾಗದಿರಲಿ, ಲಾಠಿ ಬೆದರಿಕೆಗೆ ಅಷ್ಟೆ ಹೊರತು ಹತ್ಯೆಗಲ್ಲ ಎನ್ನುವುದನ್ನು ಮನಗಾಣಬೇಕಿದೆ.