ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುವುದು, ಯಾವುದೋ ಒಂದು ಘಟನೆ ನಡೆದಾಗ ಅದಕ್ಕೆ ಸರ್ಕಾರ ಮತ್ತು ಅಧಿಕಾರದಲ್ಲಿರುವ ಪಕ್ಷಗಳನ್ನು ಹೊಣೆಗಾರನ್ನಾಗಿ ಮಾಡುವುದು, ಮುಖ್ಯಮಂತ್ರಿ, ಸಚಿವರ ರಾಜೀನಾಮೆಗೆ ಒತ್ತಾಯಿಸುವುದು, ಅಧಿಕಾರಿಗಳು ಆಡಳಿತ ನಡೆಸುವವರ ಮೂಗಿನ ನೇರಕ್ಕೆ ನಡೆಯುತ್ತಿದ್ದಾರೆ ಎಂದು ಆರೋಪಿಸುವುದು…. ಇವೆಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಮಾನ್ಯ. ಅದರಲ್ಲೂ ಭಾರತದಂತಹ ರಾಷ್ಟ್ರಗಳಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಮೊಸರಲ್ಲೂ ಕಲ್ಲು ಹುಡುಕುವದನ್ನು ಪ್ರತಿಪಕ್ಷದಲ್ಲಿದ್ದವರು ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಯಾವ ರಾಜಕೀಯ ಪಕ್ಷಗಳು ಹೊರತಲ್ಲ.
ಇತ್ತೀಚಿನ ದಿನಗಳಲ್ಲೇಕೋ ವಿರೋದ ಪಕ್ಷದ ನಾಯಕರು ಸರ್ಕಾರ ಅಥವಾ ಆಡಳಿತ ಪಕ್ಷವನ್ನು ಟೀಕಿಸುವ ಭರದಲ್ಲಿ, ಸರ್ಕಾರದ ಮೇಲೆ ಆರೋಪಗಳನ್ನು ಮಾಡುವ ಸಂದರ್ಭದಲ್ಲಿ ತಮ್ಮ ವ್ಯಾಪ್ತಿ ಮೀರಿ, ನಾಲಿಗೆಯನ್ನು ಹಿಡಿತಕ್ಕೆ ತೆಗೆದುಕೊಳ್ಳದೆ ಮಾತನಾಡುತ್ತಾರೆ. ಅದೇ ರೀತಿ ಆಡಳಿತ ಪಕ್ಷದವರೂ ತಾವು ಅಧಿಕಾರದಲ್ಲಿದ್ದೇವೆ ಎಂಬುದನ್ನು ಮರೆತು ಪ್ರತಿಪಕ್ಷಗಳ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಬಳಸುತ್ತಿದ್ದಾರೆ. ಉದಾಹರಣೆಗೆ ಬಿಜೆಪಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದು ಮುಸ್ಲಿಂ ವಿರೋಧಿ ಎಂಬುದನ್ನು ಬಿಂಬಿಸಿ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಪ್ರತಿಪಕ್ಷಗಳು ಮುಂದಾದರೆ, ಪ್ರತಿಪಕ್ಷದವರನ್ನು ಪಾಕಿಸ್ತಾನಕ್ಕೆ ಹೋಲಿಸಿ ನಾವು ಮಾತ್ರ ಭಾರತವನ್ನು ರಕ್ಷಣೆ ಮಾಡುವವರು ಎಂದು ಬಿಜೆಪಿಯವರು ಮಾತನಾಡುತ್ತಾರೆ.
ರಾಜಕೀಯ ಕಾರಣಗಳಿಗಾಗಿ ಈ ರೀತಿಯ ಆರೋಪ- ಪ್ರತ್ಯಾರೋಪಗಳು ಸಾಮಾನ್ಯ. ಅಂತಹ ಆರೋಪಗಳನ್ನು ಮಾಡಿಕೊಳ್ಳದೇ ಇದ್ದರೆ ಆ ಪಕ್ಷಗಳಿಗೆ ಭವಿಷ್ಯವೂ ಇರುವುದಿಲ್ಲ. ಆದರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸ್ ವ್ಯವಸ್ಥೆಯನ್ನು ಧಿಕ್ಕರಿಸುವ, ಅವ ಸ್ಥೈರ್ಯ ಕುಂದಿಸುವ ಹೇಳಿಕೆಗಳನ್ನು ನೀಡುವುದು ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ ಎಂಬುದರಲ್ಲಿ ಎರಡು ಮಾತಿಲ್ಲ. ಪೊಲೀಸರು ಆಡಳಿತ ಪಕ್ಷದ ಪರ ಕೆಲಸ ಮಾಡುತ್ತಾರೆ. ಅಧಿಕಾರದಲ್ಲಿದ್ದವರ ಪಕ್ಷಪಾತಿಗಳಾಗಿದ್ದಾರೆ ಎಂದು ಆರೋಪಿಸುವುದರಲ್ಲಿ ಅರ್ಥವಿದೆ. ಏಕೆಂದರೆ, ವ್ಯವಸ್ಥೆ ಇರುವುದೇ ಹಾಗೆ. ಆಡಳಿತ ಪಕ್ಷ ಏನು ಹೇಳುತ್ತದೋ ಅದನ್ನು ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ, ತಾವು ಅಧಿಕಾರಾದಲ್ಲಿದ್ದಾಗ ರಕ್ಷಕರಾಗಿದ್ದ, ಕಳ್ಳರು, ದರೋಡೆಕೋರರು, ಸಮಾಜ ಘಾತುಕರನ್ನು ಮಟ್ಟ ಹಾಕುತ್ತಿದ್ದ ಪೊಲೀಸರು ತಮ್ಮ ಅಧಿಕಾರ ಹೋಗುತ್ತಿದ್ದಂತೆ ಆ ಪೋಲಿಸರನ್ನು ಕಳ್ಳರು, ಸಮಾಜ ಘಾತುಕರಿಗೆ ಹೋಲಿಸಿ ಮಾತನಾಡುವುದು ಸರಿಯಲ್ಲ.
ಹತಾಶೆಯ ಭರದಲ್ಲಿ ಹಳಿ ತಪ್ಪಿದ ಹೇಳಿಕೆಗಳು
ಸದ್ಯ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡುತ್ತಿರುವುದು ಇದೇ ಕೆಲಸವನ್ನು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹೋರಾಟ ಹಿಂಸಾರೂಪಕ್ಕಿಳಿದಾಗ ಪೊಲೀಸರು ನಡೆಸಿದ ಗೋಲಿಬಾರ್, ಆ ಕುರಿತ ವೀಡಿಯೋ ಸಾಕ್ಷ್ಯಗಳು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ, ಪ್ರತಿಕ್ರಿಯೆಗಳು ಇದನ್ನು ಸಾಬೀತುಪಡಿಸುತ್ತವೆ. ಈ ಹೇಳಿಕೆಗಳ ಹಿಂದೆ ಸರ್ಕಾರದ ಮೇಲಿನ ಆಕ್ರೋಶಕ್ಕಿಂತ ಪೊಲೀಸರ ಮೇಲೆ ಅದರಲ್ಲೂ ಮುಖ್ಯವಾಗಿ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಅವರ ಮೇಲೆ ಇದ್ದ ಸಿಟ್ಟೇ ಜಾಸ್ತಿ ಎಂಬುದು ಎದ್ದು ಕಾಣುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸುವಾಗ ಎಚ್.ಡಿ.ಕುಮಾರಸ್ವಾಮಿ ಅವರು, ನಾಳೆ ಹರ್ಷ (ಮಂಗಳೂರು ಪೊಲೀಸ್ ಆಯುಕ್ತ) ಎಲ್ಲಿ ಬಾಂಬ್ ಇಡುತ್ತಾರಂತೆ ಎಂದು ಪ್ರಶ್ನಿಸಿದ್ದು ಅವರು ಯಾವ ಮಟ್ಟಕ್ಕೆ ಹೋಗುತ್ತಿದ್ದಾರೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ.

ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರ ಕುರಿತಂತೆ ನೀಡಿದ ಹೇಳಿಕೆಯನ್ನು, ನಾನು ತಮಾಷೆ ಮಾಡಿದ್ದು ಅಷ್ಟೆ ಎಂದು ತಿಪ್ಪೆ ಸಾರಿಸುವ ಕೆಲಸಕ್ಕೆ ಕುಮಾರಸ್ವಾಮಿ ಮುಂದಾದರು. ಆದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ ಕುಮಾರಸ್ವಾಮಿ ಅವರ ಇಂತಹ ಹೇಳಿಕೆಗಳು ಅವರ ಘನತೆಯನ್ನು ಹಾಳು ಮಾಡುತ್ತದೆಯೇ ಹೊರತು ರಾಜಕೀಯವಾಗಿ ಯಾವ ಲಾಭವೂ ಸಿಗುವುದಿಲ್ಲ. ಆದರ ಬದಲಾಗಿ ಕುಮಾರಸ್ವಾಮಿ ಮತ್ತು ಅವರ ಪಕ್ಷಕ್ಕೆ ಇಂತಹ ಹೇಳಿಕೆಗಳು ಹಿನ್ನಡೆ ತಂದುಕೊಡಬಹುದು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹೋರಾಟದ ವೇಳೆ ಪೊಲೀಸರು ಗೋಲಿಬಾರ್ ನಡೆಸಬೇಕಾದ ಅಗತ್ಯ ಇಲ್ಲದೇ ಇದ್ದಿರಬಹುದು. ಆದರೆ, ಹೋರಾಟ ಹಿಂಸಾರೂಪಕ್ಕಿಳಿದದ್ದು ಸುಳ್ಳಲ್ಲ. ಪ್ರತಿಭಟನಾಕಾರರು ಪೊಲೀಸರ ವಾಹನಕ್ಕೆ ಅಡ್ಡ ಹಾಕಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ಇವೆಲ್ಲವೂ ನಡೆದಿದೆ. ಅದಕ್ಕೆ ಸಾಕ್ಷಿಗಳೂ ಇವೆ. ಆದರೆ, ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಕೆಲವು ವೀಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಅಮಾಯಕರ ಮೇಲೆ ಪೊಲೀಸರು ಕಲ್ಲೆಸೆದು, ಗುಂಡು ಹಾರಿಸಿದರು. ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಹೇಳಿದರೆ ಯಾರು ತಾನೇ ನಂಬುತ್ತಾರೆ.
ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿ ಇಡೀ ರಾಜ್ಯದಲ್ಲಿ ಆತಂಕ ಮನೆ ಮಾಡಿದ್ದರೆ ಅದೊಂದು ಅಣಕು ಪ್ರದರ್ಶನ ಎಂದು ಪೊಲೀಸರ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಬಾಂಬ್ ಇಟ್ಟಿದ್ದು ಮುಸ್ಲಿಮರಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದರ ಜತೆಗೆ ಪೊಲೀಸರು ಮತ್ತು ಆರೋಪಿ ಸೇರಿಯೇ ಈ ಎಲ್ಲಾ ನಾಟಕವಾಡಿದರು ಎಂಬಂತೆ ಮಾತನಾಡಿದರು.

ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ರಾಜಕೀಯ ಪುಡಾರಿ ಇಂತಹ ಆರೋಪ, ಟೀಕೆಗಳನ್ನು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇರಲಿಲ್ಲ. ಆದರೆ, ಮಾಜಿ ಪ್ರಧಾನಿಯೊಬ್ಬರ ಪುತ್ರನಾಗಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಸಂಪೂರ್ಣ ಅರಿವು ಇರುವ ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದರೆ ರಾಜಕೀಯವಾಗಿ ಅವರು ಎಷ್ಟೊಂದು ಹತಾಶರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ತಮ್ಮ ರಾಜಕೀಯ ಹತಾಶೆಯನ್ನು ಅವರು ಸರ್ಕಾರ ಅಥವಾ ಆಡಳಿತ ಪಕ್ಷದ ವಿರುದ್ಧ ತೋರಿಸಿದ್ದರೆ ಅದಕ್ಕೊಂದು ಅರ್ಥ ಅಥವಾ ಬೆಲೆ ಇರುತ್ತಿತ್ತು. ಆದರೆ, ಪೊಲೀಸರ ಮೇಲೆ ತೋರಿಸುವ ಅಗತ್ಯ ಇರಲಿಲ್ಲ. ಕುಮಾರಸ್ವಾಮಿ ಅವರು ಪೊಲೀಸರ ವಿರುದ್ಧ ಪುಂಖಾನುಪುಂಖವಾಗಿ ಆರೋಪ, ಟೀಕೆಗಳನ್ನು ಮಾಡುತ್ತಿದ್ದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಹಿಡಿದು ಜೆಡಿಎಸ್ ಶಾಸಕರು, ಮುಖಂಡರಾರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅಷ್ಟರ ಮಟ್ಟಿಗೆ ಅವರ ಟೀಕೆ ಬೇಸರ ತರಿಸಿತ್ತು. ಆ ಮೂಲಕ ಕುಮಾರಸ್ವಾಮಿ ಅವರು ತಮ್ಮ ಗೌರವಕ್ಕೆ ತಾವೇ ಧಕ್ಕೆ ತಂದುಕೊಂಡರು.
ಟೀಕೆಗಳು ಸುಧಾರಣೆ ತರಬೇಕೇ ಹೊರತು ನೈತಿಕ ಸ್ಥೈರ್ಯ ಕುಂದಿಸಬಾರದು
ಹಾಗೆಂದು ಇಲ್ಲಿ ಪೊಲೀಸರು ಮಾಡಿದ್ದೆಲ್ಲಾ ಸರಿ ಎಂದು ಅರ್ಥವಲ್ಲ. ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಿಸಿದರು. ಬಾಂಬ್ ಪತ್ತೆ ಪ್ರಕರಣದಲ್ಲಿ ಪೊಲೀಸ್ ಗುಪ್ತಚರ ವಿಭಾಗ, ರಕ್ಷಣಾ ವಿಭಾಗ ವಿಫಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಸಂದರ್ಭದಲ್ಲಿ ಪೊಲೀಸರು ಮತ್ತು ಇಲಾಖೆ ಬಗ್ಗೆ ಮಾಡುವ ಟೀಕೆಗಳು ಅವರ ಕಾರ್ಯವೈಖರಿಯನ್ನು ಸುಧಾರಣೆ ಮಾಡುವಂತಿರಬೇಕೇ ಹೊರತು ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು.
ಏಕೆಂದರೆ, ಪೊಲೀಸರು ಇರುವುದೇ ಹಾಗೆ. ಯಾವ ಪಕ್ಷ ಅಧಿಕಾರದಲ್ಲಿದ್ದು ಯಾವ ರೀತಿಯ ನಿರ್ದೇಶನ ನೀಡುತ್ತದೋ ಅದನ್ನು ಪಾಲಿಸುತ್ತಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯದ ನಾನಾ ಕಡೆಗಳಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಏಕೆಂದರೆ, ಆಡಳಿತ ನಡೆಸುವವರಿಂದ ಬಂದಿದ್ದ ನಿರ್ದೇಶನಗಳನ್ನು ಅವರು ಪಾಲಿಸಿದ್ದರು. ಅದೇ ರೀತಿ ಈಗ ಆಡಳಿತದಲ್ಲಿರುವ ಪಕ್ಷ ಯಾವ ರೀತಿಯ ಆದೇಶಗಳನ್ನು ನೀಡುತ್ತದೋ ಅದೇ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಯಾವತ್ತೂ ಅವರು ನಿರ್ದಿಷ್ಟ ಕೋಮಿನ ವಿರುದ್ಧ ದುರುದ್ದೇಶಪೂರಿತ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಹೀಗಾಗಿ ಪೊಲೀಸರ ಕಾರ್ಯವೈಖರಿಯನ್ನು ಟೀಕೆ ಮಾಡುವಾಗ ಅದಕ್ಕೆ ಕೋಮು ಬಣ್ಣ ಬಳಿಯುವುದು ಸರಿಯಲ್ಲ