ವಿದ್ಯಾರ್ಥಿ ಬದುಕಿನಲ್ಲಿ ಪಿಯುಸಿ ಎನ್ನುವುದು ಜೀವನದ ತಿರುವು. ಪಿಯುಸಿಯಲ್ಲಿ ವಿದ್ಯಾರ್ಥಿ ಯಾವ ಮಟ್ಟದ ಸಾಧನೆ ಮಾಡಿದ್ದಾನೆ ಅಥವಾ ಮಾಡಿದ್ದಾಳೆ ಎನ್ನುವ ಆಧಾರದಲ್ಲಿ ಆತನ/ಆಕೆಯ ಜೀವನ ರೂಪುಗೊಳ್ಳುತ್ತದೆ ಎಂದರೆ ತಪ್ಪಲ್ಲ. ಬಾಲ್ಯದಿಂದಲೂ ಒಂದೊಂದೇ ಇಟ್ಟಿಗೆ, ಕಲ್ಲು, ಸಿಮೆಂಟ್ ಜೋಡಿಕೊಂಡು ಬರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಜೀವನ ಎಂಬ ಮನೆಯನ್ನು ನಿರ್ಮಾಣ ಮಾಡಲು ಅಡಿಪಾಯವನ್ನು ಭದ್ರ ಮಾಡಿಕೊಳ್ಳುತ್ತಾನೆ. ಈ ಬಾರಿಯೂ ಕೂಡ ಪ್ರತಿ ಬಾರಿಯಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ.
ಕಾರ್ಕಳದ ಸರ್ಕಾರಿ ಪಿಯು ಕಾಲೇಜ್ 100% ಫಲಿತಾಂಶ ಪಡೆದಿದ್ದರೆ, ಕಡೂರಿನ ಜೋಡಿಹೊಚ್ಚಿಹಳ್ಳಿ ಸರ್ಕಾರಿ ಪಿಯು ಕಾಲೇಜು ಕೂಡ ಶೇಕಡ 100 ರಷ್ಟು ಫಲಿತಾಂಶ ಗಳಿಸಿದೆ. ಇನ್ನೂ ಉಡುಪಿಯ ವಿದ್ಯೋದಯ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಭಿಜ್ಞಾ ರಾವ್, 596 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ರೆ, ಕಲಾ ವಿಭಾಗದಲ್ಲಿ ಕರೇಗೌಡ 598 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ತೆಗೆದುಕೊಂಡಿದ್ದಾರೆ. ಬಳ್ಳಾರಿಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕರೇಗೌಡ ಜೊತೆಗೆ ಇನ್ನೂ 10 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇನ್ನೂ ವಾಣಿಜ್ಯ ವಿಭಾಗದಲ್ಲಿ ಅರವಿಂದ ಶ್ರೀವತ್ಸ 598 ಅಂಕಗಳಿ ರಾಜ್ಯಕ್ಕೆ ಅಗ್ರಗಣ್ಯ ಎನಿಸಿಕೊಂಡಿದ್ದಾನೆ.
Shortage of teachers is also one of the reasons for low pass percentage in PUC examinations.@nimmasuresh, who has stopped teachers' appointment process, should own the responsibility for this.
1/2 pic.twitter.com/x1ud2pusXF
— Siddaramaiah (@siddaramaiah) July 15, 2020
ಆದರೆ, ಫಲಿತಾಂಶ ಕುಸಿತಕ್ಕೆ ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂಷಣೆ ಮಾಡಿದ್ದಾರೆ. ಫಲಿತಾಂಶ ಕುಸಿತಕ್ಕೆ ಉಪನ್ಯಾಸಕರ ಕೊರತೆಯೂ ಕಾರಣಗಳಲ್ಲಿ ಒಂದಾಗಿದ್ದು, ಉಪನ್ಯಾಸಕರ ನೇಮಕಾತಿಯನ್ನು ರದ್ದು ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ನೇರ ಕಾರಣ ಎಂದು ದೂರಿದ್ದಾರೆ.
ಸರ್ಕಾರ ಸೂಕ್ತ ಉಪನ್ಯಾಸಕರನ್ನು ನೇಮಕ ಮಾಡಲು ವಿಫಲವಾಗಿದೆಯೋ..? ಅಥವಾ ಸೂಕ್ತ ಪಾಠ ಪ್ರವಚನ ನಡೆದಿದ್ಯೋ ಎನ್ನುವುದು ಎರಡನೇ ಮಾತು. ಆದರೆ ವಿದ್ಯಾರ್ಥಿಗಳು ಸೋಲನ್ನು ಎದುರಿಸಲಾಗದೆ ಸಾವಿನ ಮನೆ ಸೇರುತ್ತಿದ್ದಾರೆ. ದಾವಣಗೆರೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣನಾಗಲು ವಿಫಲನಾದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. 18 ವರ್ಷದ ಜಯರಾಮ್, ಫಲಿತಾಂಶದ ಬಳಿಕ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಹರಿಹರದ ಪಕ್ಕೀರಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ. ಆಟೋ ಚಾಲಕ ಕೊಟ್ರೆಶ್ ಹಾಗೂ ಗೀತಾ ದಂಪತಿ ಪುತ್ರನಾದ ಜಯರಾಮ್, ಎಂಕೆಇಟಿ ಪಿಯು ಕಾಲೇಜಿನ ಸೈನ್ಸ್ ವಿದ್ಯಾರ್ಥಿಯಾಗಿದ್ದ ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಕ್ಕೆ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನೂ ವಿಜಯಪುರದಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂದಗಿ ಪಟ್ಟಣದ ಕಲ್ಯಾಣ ನಗರದ ನಿವಾಸಿ 17 ವರ್ಷದ ಕುಶಾಲ ಕಲ್ಲೂರ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನುತ್ತೀರ್ಣಕ್ಕೆ ಆತ್ಮಹತ್ಯೆ ಪರಿಹಾರವೇ..?
ಪರೀಕ್ಷೆಯಲ್ಲಿ ಫೇಲ್ ಆದ ಮಾತ್ರಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ 12ನೇ ತರಗತಿ ಓದುವ ಓರ್ವ ವಿದ್ಯಾರ್ಥಿ ಆತ್ಮವಿಶ್ವಾಸ ಬೆಳಸಿಕೊಳ್ಳದಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸವುದು ಹೇಗೆ ಎನ್ನುವ ಪ್ರಶ್ನೆಯೂ ಎದುರಾಗುತ್ತೆ. ಪರೀಕ್ಷೆ ಎನ್ನುವುದು ಜೀವನದ ಪರೀಕ್ಷೆಯಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮಾತ್ರಕ್ಕೆ ಆತ ಬುದ್ಧಿವಂತನಾಗಿರಲಾರ ಎನ್ನುವುದನ್ನು ಮೊದಲು ಪೋಷಕರು ಅರಿತುಕೊಂಡರೆ ಆತ್ಮಹತ್ಯೆಗಳ ಸರಣಿಗೆ ಬ್ರೇಕ್ ಹಾಕಬಹುದು. ಓರ್ವ ವಿದ್ಯಾರ್ಥಿ ಚೆನ್ನಾಗಿ ಓದುತ್ತಾ ಇದ್ದಾನೆ ಎಂದರೆ, ಪೋಷಕರಿಗೆ ನಮ್ಮ ಮಗನೂ ಅದೇ ರೀತಿ ಓದಬೇಕು ಎನ್ನುವ ಆಕಾಂಕ್ಷೆ ಮನದಲ್ಲಿ ಮೂಡುವುದು ಸಹಜ. ಆದರೆ ಅದನ್ನು ವಿದ್ಯಾರ್ಥಿ ಮೇಲೆ ಹೇರುವುದು ಈ ರೀತಿ ಸಾವಿಗೆ ದಾರಿ ಮಾಡಿಕೊಡುತ್ತದೆ. ತನ್ನ ತಂದೆ ತಾಯಿಗೆ ನೋವುಂಟು ಮಾಡಿದೆ, ಸಮಾಜದಲ್ಲಿ ಅವರಿಗೆ ಅವಮಾನ ಮಾಡಿದೆ ಎನ್ನುವ ರೀತಿ ವಿದ್ಯಾರ್ಥಿ ಒಮ್ಮೆ ಯೋಚನೆ ಮಾಡಲು ಶುರು ಮಾಡಿದರೆ ಆತ ಅಥವಾ ಆಕೆಗೆ ಕಾಣಿಸುವುದು ಕೇವಲ ಸಾವಿನ ದಾರಿ ಮಾತ್ರ.

ಪರೀಕ್ಷೆಯಲ್ಲೀ ಸೋತರೂ ಗೆಲ್ಲಿಸುವುದು ಹೇಗೆ..?
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದು ಸಾಮಾನ್ಯ. ಕ್ರೀಡಾ ಚಟುವಟಿಯನ್ನೂ ಮಾಡಿಸುತ್ತಾರೆ. ಅದೇ ರೀತಿ ಸೋತವರ ಬಗ್ಗೆ ವಾರಕ್ಕೆ ಒಂದು ಪಾಠದಂತೆ ಶೈಕ್ಷಣಿಕ ವರ್ಷದಲ್ಲಿ 10 ರಿಂದ 15 ಮಹಾನ್ ವ್ಯಕ್ತಿಗಳು, ವಿಜ್ಞಾನಿಗಳು, ರಾಜಕಾರಣಿಗಳು, ಕ್ರೀಡಾಪಟುಗಳ ಬಗ್ಗೆ ಸರಣಿ ಪಾಠಗಳನ್ನು ಮಾಡಬೇಕು. ಪೋಷಕರ ಸಭೆಯ ಹೆಸರಿನಲ್ಲಿ ಎಲ್ಲಾ ಮಕ್ಕಳ ಜೊತೆಗೆ ಪೋಷಕರಿಗೂ ಈ ಬಗ್ಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಎಲ್ಲಾ ತರಗತಿಗಳಿಗೂ ಮಾಡಬೇಕಾದ ಅನಿವಾರ್ಯತೆ ಇಲ್ಲ. ಕೇವಲ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಮಾಡಿದರೆ ಉತ್ತಮ. ಮಕ್ಕಳಿಗೆ ಓದುವುದಕ್ಕೇ ಸಮಯ ಸಿಗುವದಿಲ್ಲ ಎನ್ನುವುದಾದರೆ 9ನೇ ತರಗತಿ ಹಾಗೂ ಪ್ರಥಮ ಪಿಯುಸಿಯಲ್ಲಿಯೇ ಇದನ್ನು ಮನದಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಯಾವ ಭಯವೂ ಇಲ್ಲದೆ ಪರೀಕ್ಷೆ ಎದುರಿಸುವುದನ್ನು ಅಭ್ಯಾಸ ಮಾಡಿಕೊಡಬೇಕು. ಇದರಿಂದ ಉತ್ತಮ ಫಲಿತಾಂಶವೂ ಹೊರಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪರೀಕ್ಷೆಯಲ್ಲಿ ಗೆದ್ದವನಿಗೆ ಮುಂದೆ ಒಂದೇ ಅವಕಾಶ. ಆತ ಮುಂದಿನ ತರಗತಿಗೆ ಹೋಗಬೇಕು. ಆದರೆ ಪರೀಕ್ಷೆಯಲ್ಲಿ ಫೇಲು ಆದವನಿಗೆ ಮಾಡಿದೆಲ್ಲವೂ ಅವಕಾಶ ಎನ್ನುವ ಸತ್ಯವನ್ನು ಅರ್ಥ ಮಾಡಿಸಬೇಕು. ನಾನು ಪರೀಕ್ಷೆಯಲ್ಲಿ ಫೇಲು ಆದರೂ ಜೀವನದ ಪರೀಕ್ಷೆಯಲ;ಲಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ಮೂಡುವಂತೆ ಮಾಡುವುದೇ ಶಿಕ್ಷಣ. ಕೇವಲ ಪುಸ್ತಕದಲ್ಲಿ ಇರುವ ಪಠ್ಯವನ್ನು ಕಂಠಪಾಟ ಮಾಡಿ ಪರೀಕ್ಷೆಯಲ್ಲಿ ಬರೆದ ಮಾತ್ರ ಜೀವನವೆಂಬ ಸಾಗರವನ್ನು ದಾಟಬಲ್ಲ ಎನ್ನುವ ಊಹೆ ನಿಮ್ಮಲ್ಲಿದ್ದರೆ ತೆಗೆದುಹಾಕಿ. ನಾನು ಯಾವುದೇ ಕೆಲಸ ಮಾಡಬಲ್ಲೆ ಎನ್ನುವವನಿಗೆ ಮಾತ್ರ ಅವಕಾಶದ ಬಾಗಿಲು ತೆರೆಯುವುದು. ನಾನು ಇದೊಂದೇ ಕೆಲಸ ಮಾಡಬಲ್ಲೆ ಎಂದರೆ ಅವಕಾಶ ಕಡಿಮೆ. ಇದನ್ನು ಮೊದಲು ಪೋಷಕರೇ ಅರ್ಥ ಮಾಡಿಕೊಳ್ಳಬೇಕಿದೆ. ಸಾವಿನ ಸರಣಿಗೆ ಅಂತ್ಯ ಬೀಳಬೇಕಿದೆ.