ಕನ್ನಡಿಗರು ಶಾಂತಿ ಪ್ರಿಯರು ಎನ್ನುವ ಮಾತೊಂದಿದೆ. ಯಾವುದೇ ಬೇರೆ ಭಾಷೆಯವರು ನಮ್ಮನ್ನು ಮಾತನಾಡಿಸಿದರೂ ನಾವು ಅವರ ಭಾಷೆಯಲ್ಲೇ ಉತ್ತರ ಕೊಟ್ಟು ಕಳುಹಿಸುವಷ್ಟು ನಾವು ಉದಾರಿಗಳು. ಆದರೆ ಇದೀಗ ಎದುರಾಗಿರುವ ಸಮಸ್ಯೆ ಅಂದರೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗುವುದು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಮೊದಲು ಶುರುವಾದ ಪಾಕಿಸ್ತಾನ ಪ್ರೇಮ ಅಂತ್ಯವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೂ ದಿನಗಳು ಕಳೆದಂತೆ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಹುಟ್ಟಿಕೊಂಡಿದೆ.
ಮೈಸೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಹೋರಾಟದಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡುವ ಮೂಲಕ ಯುವತಿ ನಳಿನಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಆ ಬಳಿಕ ನಾಪತ್ತೆಯಾಗಿ ಕೋರ್ಟ್‌ನಿಂದ ಜಾಮೀನು ಪಡೆದ ಬಳಿಕವಷ್ಟೇ ಪೊಲೀಸರ ಎದುರು ಹಾಜರಾಗಿದ್ದಳು. ಆ ಬಳಿಕ ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದರು. ಕೆಎಲ್‌ಇ ಶಿಕ್ಷಣ ಸಂಸ್ಥೆಯವರು ಎನ್ನುವ ಕಾರಣಕ್ಕೆ ಬಿಜೆಪಿ ಸರ್ಕಾರವೇ ಬಿಟ್ಟು ಕಳುಹಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಬಳಿಕ ರಾಜ್ಯ ಸರ್ಕಾರ ಬಂಧನ ಮಾಡಿ ಹಿಂಡಲಗಾ ಜೈಲಿಗೆ ಕಳುಹಿಸುವ ಕೆಲಸ ಮಾಡಿತ್ತು. ಈ ಎರಡು ಕೇಸ್‌ನಲ್ಲಿ ವಕೀಲರ ಸಂಘಗಳು ಕೂಡ ಆರೋಪಿಗಳ ಪರ ವಕಾಲತ್ತು ಹಾಕದಿರಲು ನಿರ್ಧಾರ ಮಾಡಿದ್ದರು. ಆ ನಂತರ ಬೇರೆ ಕಡೆಯಿಂದ ಲಾಯರ್‌ಗಳು ತೆರಳಿ ವಕಾಲತ್ತು ಹಾಕಿದ್ದಾರೆ. ಆಗಲೂ ಸಾಕಷ್ಟು ವಿರೋಧಗಳು ಕೇಳಿಬಂದಿವೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ಸಮಾವೇಶದ ವೇಳೆ ಅಮೂಲ್ಯ ಎನ್ನುವ ಪತ್ರಿಕೋದ್ಯಮ ವಿದ್ಯಾರ್ಥಿನಿ ಪಾಕ್ ಪರ ಘೋಷಣೆ ಕೂಗುವ ಮೂಲಕ ಭಾರೀ ವಿವಾದ ಸೃಷ್ಟಿ ಮಾಡಿದ್ದಳು. ಆ ಬಳಿಕ ಆಕೆಯ ಸ್ನೇಹಿತೆ ಆರ್ದ್ರಾ ಎಂಬ ಮತ್ತೋರ್ವ ಯುವತಿ ಅದೇ ಕೆಲಸವನ್ನು ಪಟ್ಟಣ್ಣ ಚಟ್ಟಿ ಪುರಭವನ (ಟೌನ್‌ಹಾಲ್) ಬಳಿ ಮಾಡಿದ್ದರಿಂದ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗಿ ಬಂತು. ಈ ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಕಸರತ್ತು ನಡೆಸಲಾಗಿದೆ. ಆದರೆ ಕೋರ್ಟ್ ಜಾಮೀನು ನೀಡಿಲ್ಲ ಆದ್ದರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿಕ್ಕಮಗಳೂರಿನ ಅಮೂಲ್ಯ ನಿವಾಸದ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಇತ್ತ ಆರ್ದ್ರಾ ನಿವಾಸಕ್ಕೂ ಪ್ರತಿಭಟನೆಯ ಬಿಸಿ ಮುಟ್ಟಿತ್ತು. ಮಲ್ಲೇಶ್ವರಂನಲ್ಲಿರುವ ಮನೆಗೆ ಪೊಲೀಸ್ ಭದ್ರತೆ ಕೊಡಲಾಗಿತ್ತು.
ಇನ್ನು ಭಾನುವಾರ ಮಾರ್ಚ್ 1ರಂದು ಕಲಬುರಗಿಯ ಮನೆಯ ಗೋಡೆ ಮೇಲೊಂದರಲ್ಲಿ ಪಾಕಿಸ್ತಾನದ ಪರವಾಗಿ ಬರಹ ಬರೆಯಲಾಗಿತ್ತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಅವಾಚ್ಯ ಶಬ್ದದಿಂದ ನಿಂದಿಸಲಾಗಿತ್ತು. ಕಲಬುರಗಿಯ ಸಾತ್ ಗುಂಬಜ್‌ನ ಕಿಶನ್‌ರಾವ್ ಹಾಗರಗುಂಡಗಿ ಎಂಬುವರ ಮನೆ ಗೋಡೆ ಮೇಲೆ ದುಷ್ಕರ್ಮಿಗಳ ರಾತ್ರಿ ವೇಳೆ ಬರೆದಿದ್ದಾರೆ ಎನ್ನಲಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಚೌಕ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಮಹಿಳಾ ಮೋರ್ಚಾ ಕೂಡ ಪ್ರತಿಭಟನೆ ನಡೆಸಿತ್ತು. ಆದರೂ ಸೋಮವಾರ ಶಿವಾಜಿನಗರದ ಸೇನಾ ಕಟ್ಟಡ ಪಕ್ಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರತಿಮೆಯ ಬಳಿ ಎನ್‌ಸಿಸಿ ಕಾಂಪೌಂಡ್ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಬರಹ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಬರಹವಿತ್ತು. ಫ್ರೀ ಕಾಶ್ಮೀರ ಎಂಬ ಬರಹಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಅಳಿಸುವ ಕೆಲಸ ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ಕಡೆ ಉಡುಪಿ ಜಿಲ್ಲೆ ಕುಂದಾಪುರದಲ್ಲೂ ಸೋಮವಾರ ಮಾರ್ಚ್ 2ರಂದು ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ. ನಿರಂತರವಾಗಿ ಪಾಕ್ ಪರ ಘೋಷಣೆ ಕೂಗುವ ಮೂಲಕ ಮಿನಿ ವಿಧಾನಸೌಧ ಪ್ರವೇಶಿಸುವ ಕೆಲಸ ಮಾಡಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸುವ ಕೆಲಸ ಮಾಡಿದ್ದಾರೆ. ಕುಂದಾಪುರ ಠಾಣಾಧಿಕಾರಿ ಹರೀಶ್ ವಿಚಾರಣೆ ನಡೆಸುತ್ತಿದ್ದು, ಪಾಕ್ ಪ್ರೇಮ ತೋರಿಸಿದ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಕುಂದಾಪುರ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ಎಂದು ಗುರುತಿಸಲಾಗಿದೆ. 8 ವರ್ಷದ ಹಿಂದೆ ಶಿಕ್ಷಕನಾಗಿದ್ದ ರಾಘವೇಂದ್ರ ಗಾಣಿಗ, ಇದೇ ಕಾರಣದಿಂದ ಕೆಲಸ ಕಳೆದುಕೊಂಡಿದ್ದ ಎನ್ನಲಾಗಿದೆ. ಈಗಲೂ ಮಾನಸಿಕ ಕಾಯಿಲೆ ಚಿಕಿತ್ಸೆ ಪಡೆಯಲು ಬಂದಿದ್ದಾಗ ತಾಯಿಯ ಕಣ್ತಪ್ಪಿಸಿ ಬಂದು ಘೋಷಣೆ ಕೂಗಿದ್ದ ಎನ್ನುವ ಮಾಹಿತಿ ಸಿಕ್ಕಿದೆ.
ಘೋಷಣೆ ಕೂಗಿ ಎಲ್ಲರೂ ಈಗಾಗಲೇ ಜೈಲಿನಲ್ಲಿದ್ದರೂ ಯಾಕೀ ದೇಶ ವಿರೋಧಿ ಕೆಲಸ ಎನ್ನುವ ಪ್ರಶ್ನೆ ಉದ್ಬವಿಸುವುದು ಸಾಮಾನ್ಯ. ಆದರೆ ಅದಕ್ಕೆ ಉತ್ತರ ತುಂಬಾ ಸರಳ. ಒಂದು ದೇಶವನ್ನು ಯಾರಾದು ಹೊಗಳಿದರೆ ಅದು ದೇಶದ್ರೋಹಿ ಕೆಲಸ ಆಗುವುದಿಲ್ಲ. ಹೊಗಳುವ ಕೆಲಸದ ಜೊತೆಗೆ ನಮ್ಮ ದೇಶವನ್ನು ತೆಗಳುವ ಕಾಯಕ ಮಾಡಿದರೆ ದೇಶದ್ರೋಹದ ಕೇಸ್ ಎಂದು ಸಾಬೀತಾಗುತ್ತದೆ. ಆದರೆ ಈವರೆಲ್ಲರೂ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆಯೇ ಹೊರತು ಭಾರತವನ್ನು ಹಿಯ್ಯಾಳಿಸುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇವರಿಗೆ ಶಿಕ್ಷೆಯಾಗುವುದು ನಮ್ಮ ಕಾನೂನಲ್ಲಿ ಕಷ್ಟ ಸಾಧ್ಯ. 14 ದಿನಗಳ ನ್ಯಾಯಾಂಗ ಬಂಧನ ಮುಗಿಸಿ ಜೈಲಿನಿಂದ ವಾಪಸ್ ಬರುತ್ತೇವೆ ಎನ್ನುವ ನಂಬಿಕೆ ಮೇಲೆ ಹುಚ್ಚಾಟ ನಡೆಸುತ್ತಿದ್ದಾರೆ ಎನ್ನುತ್ತಾರೆ ವಕೀಲರು. ಕಾನೂನು ಪ್ರಕಾರ ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಅಲ್ಲದೆ ಇರಬಹುದು. ಆದರೆ ಭಾವನಾತ್ಮಕವಾಗಿ ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರವಾಗಿದೆ. ಹೀಗಾಗಿ ಅದು ಶಿಕ್ಷಾರ್ಹ ಅಲ್ಲದಿರಬಹುದು. ಆದರೂ ವಿವಾದದಿಂದ ದೂರ ಇರುವುದು ಒಳಿತು.