ಕರೋನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಇಡೀ ದೇಶವೇ ಸ್ವಯಂಪ್ರೇರಿತ ʼಕ್ವಾರೆಂಟೈನ್ʼಗೆ ಒಳಪಟ್ಟಿದೆ. ಅಲ್ಲದೇ ಸರಕಾರದ ಜೊತೆ ಜೊತೆಗೆ ಸಾಮಾಜಿಕ ಸಂಘಟನೆಗಳು, ಕ್ರೀಡಾಪಟುಗಳು, ಚಲನಚಿತ್ರ ನಟರು, ರಾಜಕಾರಣಿಗಳೆಲ್ಲರೂ ಸೇರಿ ಕೋವಿಡ್-19 ನಿಂದ ಮುಕ್ತರಾಗಲು ಜನರಲ್ಲಿ ವಿವಿಧ ರೀತಿಯ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಬಂದಿರುವ ಮಹಾಮಾರಿಯನ್ನು ಹೊಡೆದೋಡಿಸಲು ಸಾರ್ವಜನಿಕರು ಸರಕಾರದ ಜೊತೆ ಕೈ ಜೋಡಿಸಬೇಕೆನ್ನುವುದು ಈಗಾಗಲೇ ಹಲವು ಮಂದಿ ವಿನಂತಿಸಿಕೊಂಡಿದ್ದಾರೆ. ಅಂತೆಯೇ ಬಾಲಿವುಡ್ ʼಬಿಗ್ ಬಿʼ ಅಮಿತಾಬ್ ಬಚ್ಚನ್ ಕೂಡಾ ಜಾಗೃತಿ ಮೂಡಿಸುವ ಕೆಲವೊಂದು ವೀಡಿಯೋಗಳನ್ನು ಯೂಟ್ಯೂಬ್ ಮೂಲಕ ಹರಿಯಬಿಟ್ಟಿದ್ದಾರೆ. ವಿಚಿತ್ರ ಅಂದ್ರೆ ಈ ರೀತಿ ವೀಡಿಯೋ ಹರಿಯಬಿಟ್ಟ ಅಮಿತಾಬ್ ಬಚ್ಚನ್ ಅವರಲ್ಲಿಯೇ ಕರೋನಾ ಸೋಂಕು ಸಂಬಂಧ ಜ್ಞಾನದ ಕೊರತೆ ಎಷ್ಟಿದೆ ಅನ್ನೋದು ಸದ್ಯ ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಕೇಳದ ಭಾರತೀಯ ಸಿನಿಪ್ರಿಯರೇ ಇಲ್ಲ. ಇಂತಹ ನಟನೊಬ್ಬ ತಾನು ನೀಡುತ್ತಿರುವ ಹೇಳಿಕೆ ಬಗ್ಗೆ ಒಂದಿಷ್ಟು ಪೂರ್ವಾಪರ ಮಾಹಿತಿ ತಿಳಿದುಕೊಳ್ಳದೇ ಇರುವುದು ಅಚ್ಚರಿಯೇ ಸರಿ. ಅದು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ʼತಪ್ಪಾದ ಮಾಹಿತಿʼ ನೀಡೋದು ಎಷ್ಟು ಸರಿ ಅನ್ನೋದು ಕೂಡಾ ಗಂಭೀರವಾದ ಚರ್ಚೆ ವಿಚಾರ.
ಅಷ್ಟಕ್ಕೂ ಅಮಿತಾಬ್ ಬಚ್ಚನ್ ತಾನೇ ತಯಾರಿಸಿದ ವೀಡಿಯೋದಲ್ಲಿ ನೊಣಗಳಿಂದಾಗಿ ಕರೋನಾ ವೈರಸ್ ಬರುತ್ತೆ ಅನ್ನೋದಾಗಿ ತಿಳಿಸಿದ್ದಾರೆ. ಯಾವಾಗ ನೊಣ ಸೋಂಕು ಪೀಡಿತ ವ್ಯಕ್ತಿಯ ಮಲದ ಮೇಲೆ ಹೋಗಿ ಸೇರುತ್ತೋ ಅದರಿಂದ ಕರೋನಾ ವೈರಸ್ ಪಸರಿಸುತ್ತೆ ಅಂತಾ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ. ಆದರೆ ಕಳೆದ ವಾರ ಕರೋನಾ ಸೋಂಕು ಪೀಡಿತ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದ ತಜ್ಞರ ತಂಡವೊಂದರ ವರದಿ ಈ ಎಲ್ಲಾ ಸಾಧ್ಯತೆಗಳನ್ನು ಅಷ್ಟು ಸುಲಭವಾಗಿ ʼಹೌದುʼ ಎನ್ನಲು ಸಾಧ್ಯವಾಗುವುದಿಲ್ಲ.
98 ಮಂದಿ ಸೋಂಕಿತರಲ್ಲಿ 74 ಮಂದಿ ಸೋಂಕಿತರಿಂದ ಗಂಟಲು ದ್ರವ ಹಾಗೂ ಆ ವ್ಯಕ್ತಿಗಳ ಮಲದ ಮೇಲೆ ನಡೆಸಲಾದ ಅಧ್ಯಯನದ ವರದಿ ಗಮನಿಸೋದಾದರೆ, ಶೇಕಡಾ 45 ಸೋಂಕು ಪೀಡಿತರ ಮಲದ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ʼನೆಗೆಟಿವ್ʼ ಎಂದು ತೋರಿಸಿದ್ರೆ, ಅದೇ ಗಂಟಲು ದ್ರವದ ಮೇಲೆ ನಡೆಸಲಾದ ಅದೇ ವ್ಯಕ್ತಿಗಳ ಆರೋಗ್ಯ ಪರೀಕ್ಷೆಯಲ್ಲಿ ಕೋವಿಡ್-19 ʼಪಾಸಿಟಿವ್ʼ ಎಂದು ವರದಿ ನೀಡಿತ್ತು. ಅದೇ ಉಳಿದ ಶೇಕಡಾ 55 ರಷ್ಟು ರೋಗಿಗಳ ಮಲ ಹಾಗೂ ಗಂಟಲು ದ್ರವದ ಎರಡೂ ಪರೀಕ್ಷೆಗಳಲ್ಲೂ ಕೋವಿಡ್-19 ದೃಢವಾಗಿತ್ತು. ಆದರೆ ಮೊದಲಿನ ಗಂಟಲು ದ್ರವದ ಮೇಲೆ ಪಾಸಿಟಿವ್ ರಿಪೋರ್ಟ್ ಸರಿಸುಮಾರು 15.4 ದಿನಗಳಲ್ಲಿ ಖಚಿತ ವರದಿ ಪಡೆಯಲು ಸಾಧ್ಯವಾದರೆ, ಅದೇ ಶೇಕಡಾ 55 ಜನರ ಮಲ ಹಾಗೂ ಗಂಟಲು ದ್ರವ ಪಾಸಿಟಿವ್ ವರದಿ ಪಡೆಯಲು ಸುಮಾರು 16.7 ದಿನಗಳು ಬೇಕಾಯಿತು. ಆದರೆ ಮಲದ ಪರೀಕ್ಷೆಗೆ ಮಾತ್ರ ಸೀಮಿತವಾಗಿ ವರದಿ ನಿರೀಕ್ಷಿಸಬೇಕಾದರೆ ಕರೋನಾ ಸೋಂಕು ಲಕ್ಷಣಗಳಿದ್ದ ವ್ಯಕ್ತಿಯ ಪಾಸಿಟಿವ್ ವರದಿ ಕೈ ಸೇರಲು ಸರಿಸುಮಾರು 27.9 ದಿನಗಳೇ ಬೇಕಾಗುತ್ತದೆ.
ಅದಲ್ಲದೇ ಅಮಿತಾಬ್ ಬಚ್ಚನ್ ಅವರು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಸ್ವಚ್ಛ ಭಾರತದಂತಹ ಜನಾಂದೋಲನ ಹಮ್ಮಿಕೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೇ ಶೌಚಾಲಯ ಬಳಕೆ ಬಗ್ಗೆ ಅವರು ಒತ್ತು ನೀಡುವಂತೆ ತಿಳಿಸಿದ್ದಾರೆ, ಸ್ವಚ್ಛತೆ ವಿಚಾರದಲ್ಲೇನೋ ಅವರು ಹೇಳಿರುವ ವಿಚಾರ ಸರಿಯಿದೆ. ಆದರೆ, ಕರೋನಾ ವೈರಸ್ ಸೋಂಕಿನ ಹರಡುವಿಕೆ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವುದು ಎಷ್ಟು ಸರಿ ಎನ್ನುವುದು ಸಹಜ ಪ್ರಶ್ನೆ.
ಹಾಗಂತ ಮಲದಲ್ಲಿ ವೈರಸ್ ಸೇರುವುದಿಲ್ಲ ಎಂದು ಖಂಡಾತುಂಡವಾಗಿ ನಿರಾಕರಿಸಲು ಸಾಧ್ಯವಾಗಿಲ್ಲ. ಯಾಕೆಂದರೆ, ಕರೋನಾ ವೈರಸ್ ಕುರಿತ ಹೆಚ್ಚಿನ ಅಧ್ಯಯನಗಳು ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಆದ್ದರಿಂದ ಮನುಷ್ಯನ ಮಲ ಅಥವಾ ನೊಣಗಳಿಂದಾಗಿ ಕೋವಿಡ್-19 ಬರುತ್ತೆ ಅನ್ನೋದನ್ನು ಅಷ್ಟು ನಿಖರವಾಗಿ ಹೇಳಲು ಸಾಧ್ಯವಾಗದು. ಹಾಗಂತ ಪತ್ತೆ ಹಚ್ಚಲಾದ ಶೇಕಡಾ 45 ರಷ್ಟು ಸೋಂಕಿತರ ಮಲ ವರದಿಯಲ್ಲಿ ಪಾಸಿಟಿವ್ ಪತ್ತೆ ಹಚ್ಚಲು ಗಂಟಲು ದ್ರವದ ವರದಿ ಬಂದ ಸರಿಸುಮಾರು ಹನ್ನೊಂದು ದಿನಗಳ ನಂತರ ಮಲ ಪರೀಕ್ಷೆ ವರದಿಯು ಪಾಸಿಟಿವ್ ಬಂದಿದ್ದವು. ಹಾಗಂತ ಪ್ರತಿ ರೋಗಿಯಲ್ಲಿಯೂ ಅಥವಾ ಕೆಲವೊಂದು ವೈರಸ್‌ಗಳು ಮಲದೊಂದಿಗೆ ಜೊತೆಗೂಡಿರುವ ಸಾಧ್ಯತೆಗಳು ಇರುತ್ತವೆ ಅಂತಾ ತಜ್ಞರು ತಿಳಿಸುತ್ತಾರೆ.
ಇನ್ನೊಂದು ಪ್ರಮುಖ ವಿಚಾರವೆಂದರೆ, ಸೋಂಕು ಲಕ್ಷಣ ವ್ಯಕ್ತಿಯ ಗಂಟಲು ದ್ರವದ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಕರೋನಾ ವೈರಸ್‌ನ ಆಕ್ರಮಣ ಪತ್ತೆ ಹಚ್ಚಲಾಗದಿದ್ದರೆ, ಆತನ ಮಲದ ಪರೀಕ್ಷೆ ನಡೆಸಬೇಕು ಎಂದು ತಜ್ಞ ಸಂಶೋಧಕರು ತಿಳಿಸುತ್ತಾರೆ. ಯಾಕೆಂದರೆ ಶಂಕಿತ ರೋಗಿಯ ಮೇಲೆ ಸಾಂಕ್ರಾಮಿಕ ಕರೋನಾ ವೈರಸ್ ಪತ್ತೆ ಹಚ್ಚುವ ಎಲ್ಲಾ ವಿಧಾನಗಳನ್ನು ಬಳಸುವ ಮೂಲಕ ಸಾಂಕ್ರಾಮಿಕ ರೋಗ ಹರಡುವ ಚೈನ್ ಲಿಂಕ್‌ನ್ನು ತುಂಡರಿಸುವ ಮಹತ್ವದ ಉದ್ದೇಶವನ್ನ ಈ ವಿಚಾರವು ಹೊಂದಿದೆ. ಆ ಕಾರಣಕ್ಕಾಗಿಯೇ ಈ ರೀತಿಯ ಸೋಂಕು ಲಕ್ಷಣ ಹೊಂದಿರುವ ವ್ಯಕ್ತಿಯನ್ನು ಮನೆ ಅಥವಾ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ನಲ್ಲಿ ಇಡುವ ಮೂಲಕ ನಿಗಾ ವಹಿಸುವುದು ಉತ್ತಮ ಅನ್ನೋದು ಕೂಡಾ ಸಂಶೋಧಕರ ಅಭಿಪ್ರಾಯ.
ಕೋವಿಡ್-19 ವ್ಯಕ್ತಿಯ ಮಲದ ಮೇಲೆ ಬೀರುವ ಪ್ರಭಾವದ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಯಾಕೆಂದರೆ ಸದ್ಯ ಕರೋನಾ ವೈರಸ್ ಮೇಲೆ ನಡೆದ ಸಂಶೋಧನೆಗಳೆಲ್ಲ ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆ ಈ ವೈರಾಣು ಇದೇ ರೀತಿಯಾಗಿ ವರ್ತಿಸುತ್ತದೆ ಎಂದು ಹೇಳಲಾಗದು. ಒಂದೊಮ್ಮೆ ಸೋಂಕು ಪೀಡಿತ ವ್ಯಕ್ತಿಯ ಗಂಟಲು ದ್ರವಕ್ಕಿಂತಲೂ ಜಾಸ್ತಿ, ಆತನ ಮಲದ ಮೇಲೆ ಹೆಚ್ಚು ಕಾಲ ವೈರಸ್ ಇರೋ ಸಾಧ್ಯತೆ ಇದ್ದರೂ, ಅದನ್ನು ಸುಲಭವಾಗಿ ಇಷ್ಟೇ ದಿನ ಇರುತ್ತದೆ ಮತ್ತು ಹೀಗೆಯೇ ಪರಿಣಾಮ ಬೀರುತ್ತದೆ ಹೇಳಲು ಸದ್ಯದ ಪರಿಸ್ಥಿತಿಯಲ್ಲಿ ಸಂಶೋಧಕರಿಗೂ ಸಾಧ್ಯವಾಗಿಲ್ಲ. ಹಾಗಂತ ಎಲ್ಲೂ ನೊಣಗಳಿಂದಾಗಿ ಕರೋನಾ ಹರಡುತ್ತದೆ ಅನ್ನೋದನ್ನು ಈ ಕುರಿತು ಸಂಶೋಧನೆ ನಡೆಸಿದ ತಂಡ ಎಲ್ಲೂ ಹೇಳಿಲ್ಲ.
ಆದರೆ ಅಮಿತಾಬ್ ಬಚ್ಚನ್ ಅವರು ತಮ್ಮ ಹೇಳಿಕೆಯಲ್ಲಿ ಕರೋನಾ ಸೋಂಕಿತ ವ್ಯಕ್ತಿಯ ಮಲದಲ್ಲಿ ಕೂತ ನೊಣ ಆಹಾರದ ಮೇಲೆ ಬಂದು ಕೂತರೆ ಕರೋನಾ ಹರಡುವುದಾಗಿ ತಿಳಿಸಿದ್ಧಾರೆ. ಆ ಕಾರಣಕ್ಕಾಗಿ ಬಯಲು ಶೌಚವನ್ನು ಕೊನೆಗೊಳಿಸಬೇಕಿದೆ ಎಂದಿದ್ದಾರೆ. ಆದರೆ ನೈಜತೆ ವಿಚಾರವನ್ನು ದೂರವಿಟ್ಟಾಗ , ಅದರಲ್ಲೂ ಮಾಧ್ಯಮಗಳು ಇಂತಹದ್ದೇ ಹೇಳಿಕೆಗಳ ಮೇಲೆ ಫೋಕಸ್ ಮಾಡೋದರಿಂದ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಮಾಡುವ ಜಾಗೃತಿಗಳು ವ್ಯರ್ಥವಾಗಿ ಹೋಗಬಹುದು. ಅಲ್ಲದೇ ಇಂತಹ ಹೇಳಿಕೆಗಳು ಅವರ ಅಭಿಮಾನಿಗಳಲ್ಲಿ ಹಾಗೂ ಸಮಾಜದ ಒಂದು ವರ್ಗದಲ್ಲಿ ಅನಗತ್ಯ ಗೊಂದಲ ಹುಟ್ಟುಹಾಕಬಹದು. ಆದ್ದರಿಂದ ಸೆಲೆಬ್ರಿಟಿಗಳಾದವರು ತಾವು ನೀಡುವ ಹೇಳಿಕೆ ಬಗ್ಗೆ ತಾವು ಮೊದಲು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅದಿಲ್ಲದೇ ಹೋದಾಗ ಈ ರೀತಿ ಅನಗತ್ಯ ಗೊಂದಲಗಳು ಸಮಾಜವನ್ನು ವಿರುದ್ಧ ದಿಕ್ಕಿಗೆ ಕೊಂಡೊಯ್ಯುವ ಆತಂಕ ಎದುರಾಗಬಹುದು..