ಎಲ್ಲೆಲ್ಲೂ ಭೀತಿ ಹುಟ್ಟಿಸಿರುವ ಕರೋನಾ ಮಹಾಮಾರಿಯ ಆರ್ಭಟ ಮತ್ತು ಮಾಧ್ಯಮಗಳ ಕರೋನಾ ಭಜನೆಯ ನಡುವೆ ದೇಶದಲ್ಲಿ ಹಲವು ಮಹತ್ವದ ವಿದ್ಯಮಾನಗಳು ಸಾರ್ವಜನಿಕ ಚರ್ಚೆಯಿಂದ ದೂರವೇ ಉಳಿದು, ತೆರೆಮರೆಯಲ್ಲೇ ಮುಗಿದುಹೋಗುತ್ತಿವೆ.
ಪ್ರತಿಯೊಬ್ಬ ಭಾರತೀಯ ಬದುಕಿನ ಮೇಲೆ ನೇರ ಪರಿಣಾಮಬೀರುವ ಮತ್ತು ಭವಿಷ್ಯದಲ್ಲಿ ಕರಾಳ ದಿನಗಳನ್ನು ತಂದಿಡುವ ಅಂತಹ ಎರಡು ಪ್ರಮುಖ ವಿದ್ಯಮಾನಗಳು ಒಂದೆರಡು ಮಾಧ್ಯಮಗಳಲ್ಲಿ ಈ ವಾರ ಬೆಳಕಿಗೆ ಬಂದಿವೆ. ಆ ಪೈಕಿ ಒಂದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿ ಮತ್ತು ಚಲನವಲನದ ಮೇಲೆ ಸರ್ಕಾರ ನೇರವಾಗಿ ಕಣ್ಗಾವಲು ಇಡುವ ರಾಷ್ಟ್ರೀಯ ಸಾಮಾಜಿಕ ನೋಂದಣಿ ಎಂಬ ಕಣ್ಗಾವಲು ವ್ಯವಸ್ಥೆ(ಸರ್ವೈಲೆನ್ಸ್ ಸಿಸ್ಟಮ್)ಯನ್ನು ಜಾರಿಗೆ ತರಲು ಸಮಗ್ರ ದತ್ತಾಂಶ ಕೋಶ(ಡೇಟಾಬೇಸ್) ರಚಿಸುತ್ತಿರುವುದು. ಮತ್ತೊಂದು; ಟೆಲಿಕಾಂ ಕಂಪನಿಗಳ ಮೂಲಕ ದೇಶದ ಹಲವು ಭಾಗದಲ್ಲಿ ನಿರ್ದಿಷ್ಟ ಪ್ರದೇಶ ಮತ್ತು ದಿನಗಳಂದು ಜನರ ಮೊಬೈಲ್ ಕರೆ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುವ ಮೂಲಕ ಜನರ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆಘಾತಕಾರಿ ಸಂಗತಿ!
ನೀವು ಯಾವಾಗ ಎಲ್ಲಿ ಹೋದಿರಿ, ಏನು ತಿಂದಿರಿ, ಎಲ್ಲಿ ಮಲಗಿದಿರಿ, ಏನು ಕೊಂಡಿರಿ, ಏನು ಮಾರಿದಿರಿ, ಯಾರ ಜೊತೆ ಎಲ್ಲೆಲ್ಲಿ ಓಡಾದಿರಿ, ಯಾರೊಂದಿಗೆ ಏನೇನು ಮಾತನಾಡಿದಿರಿ, ನಿಮ್ಮ ಕೆಲಸ ಏನು, ಎಷ್ಟು ಸಂಬಳ, ಆಸ್ತಿ ಎಷ್ಟು, ನಿಮ್ಮ ಸಂಸಾರ, ಜಾತಿ ,ಧರ್ಮ ಸೇರಿದಂತೆ ಅಕ್ಷರಶಃ ನಿಮ್ಮ ತಲೆಗೆ ಸಿಸಿಟಿವಿ ಕಟ್ಟಿ ದೆಹಲಿಯಲ್ಲಿ ಕೂತು ನೋಡಿದಂತೆ ದಿನದ 24 ತಾಸೂ ನಿಮ್ಮ ಚಲನವಲನದ ಮೇಲೆ ಕಣ್ಣಿಡುವ ರಾಷ್ಟ್ರೀಯ ಸಾಮಾಜಿಕ ನೋಂದಣಿ ವ್ಯವಸ್ಥೆಯನ್ನು ಈ ವರ್ಷದ ಅಂತ್ಯದ ಹೊತ್ತಿಗೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಆಧಾರ್ ಮಾಹಿತಿಯೊಂದಿಗೆ ಉಳಿದೆಲ್ಲಾ ಸರ್ಕಾರಿ ಇಲಾಖೆಗಳ ಮಾಹಿತಿಯನ್ನು ಜೋಡಿಸುತ್ತಿದೆ ಎಂಬ ದಿಗ್ಭ್ರಮೆ ಹುಟ್ಟಿಸುವ ವರದಿಯನ್ನು ‘ಹಫಿಂಗ್ಟನ್ ಪೋಸ್ಟ್’ ಪ್ರಕಟಿಸಿದೆ. ಕೊರೋನಾ ಗದ್ದಲದ ನಡುವೆ ಆ ಮಹತ್ವದ ವರದಿ ಮತ್ತು ಕೇಂದ್ರ ಸರ್ಕಾರದ ಹುನ್ನಾರ ನಮ್ಮ ಮುಖ್ಯವಾಹಿನಿ ಮಾಧ್ಯಮಗಳಿಂದ ಮರೆಮಾಚಲ್ಪಟ್ಟಿದೆ. ಜನಸಾಮಾನ್ಯರ ಅರಿವಿಗೂ ಬಾರದೆ ಅವರ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ಮಹತ್ವದ ವಿದ್ಯಮಾನವೊಂದು ಸರ್ಕಾರದ ಮಟ್ಟದಲ್ಲಿ ಸದ್ದಿಲ್ಲದೆ ಘಟಿಸತೊಡಗಿದೆ.

ಇದು ಭವಿಷ್ಯದ ದಿನಗಳಲ್ಲಿ ಕಾಡಲಿರುವ ಆತಂಕದ ವಿಷಯವಾಯ್ತು. ಇನ್ನು; ಈಗಾಗಲೇ ನೀವು ಮಾತನಾಡಿರುವ ಸಂಗತಿ, ಯಾರೊಂದಿಗೆ ಯಾವ ದಿನ, ಎಷ್ಟು ಸಮಯ, ಯಾವ ವಿಷಯದ ಬಗ್ಗೆ ಮಾತನಾಡಿದ್ದೀರಿ? ನಿಮ್ಮ ಮೊಬೈಲ್ ನಿಂದ ಯಾವ ಯಾವ ನಂಬರುಗಳಿಗೆ ಯಾವಯಾವಾಗ ಕರೆ ಹೋಗಿವೆ. ಯಾವ ಕರೆ ಎಷ್ಟು ಸಮಯ ತೆಗೆದುಕೊಂಡಿದೆ. ನೀವು ಯಾವ ಹೊತ್ತಲ್ಲಿ ಯಾರೊಂದಿಗೆ ಮಾತನಾಡಿದ್ದೀರಿ ಎಂಬ ಮಾಹಿತಿಯನ್ನು ಈಗಾಗಲೇ ಸರ್ಕಾರ ಪಡೆದುಕೊಂಡಿದೆ ಮತ್ತು ಆ ನಿಮ್ಮ ಸಂಭಾಷಣೆಗಳನ್ನು ದುರ್ಬೀನು ಹಾಕಿ ಜಾಲಾಡತೊಡಗಿದೆ! ಇದು ಎರಡನೇ ಆತಂಕಕಾರಿ ವಿದ್ಯಮಾನ!
ಹೌದು, ಕಳೆದ ತಿಂಗಳು ಮತ್ತು ಅದರ ಹಿಂದಿನ ತಿಂಗಳು ದೇಶದ ಹಲವು ರಾಜ್ಯಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ದಿನಗಳಂದು ಎಲ್ಲಾ ಮೊಬೈಲ್ ಕಂಪನಿಗಳ ಗ್ರಾಹಕರ ಕರೆ ವಿವರ ದಾಖಲೆಯನ್ನು ಕೇಂದ್ರ ಸರ್ಕಾರ ಟೆಲಿಕಾಂ ಇಲಾಖೆಯ ಸ್ಥಳೀಯ ಕಚೇರಿಗಳ ಮೂಲಕ ತರಿಸಿಕೊಳ್ಳತೊಡಗಿದೆ! ಆ ಮೂಲಕ ಇತ್ತೀಚಿನ ದಿನಗಳಲ್ಲಿ ನಿಮ್ಮ ಸಂಪರ್ಕ, ಸಂವಹನ ಮತ್ತು ಮಾತುಕತೆಯ ಮಾಹಿತಿಯನ್ನು ಸರ್ಕಾರ ಜಾಲಾಡುವ ಮೂಲಕ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಅನುಮಾನವಿದೆ ಎಂದು ‘ದ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಹೇಳಿದೆ.
ಪೊಲೀಸ್, ಗುಪ್ತಚರ ಸೇರಿದಂತೆ ವಿವಿಧ ತನಿಖಾ ಮತ್ತು ಕಾನೂನು-ಸುವ್ಯವಸ್ಥೆ ಕಾಯುವ ಸಂಸ್ಥೆ- ಇಲಾಖೆಗಳು ಮತ್ತು ಟೆಲಿಕಾಂ ಇಲಾಖೆ ಕೆಲವೊಮ್ಮೆ ಕೆಲವೊಂದು ನಿರ್ದಿಷ್ಟ ವ್ಯಕ್ತಿಗಳ ಮೊಬೈಲ್ ಕರೆ ವಿವರ ದಾಖಲೆ(ಸಿಡಿಆರ್) ಪಡೆಯುವುದು ಸಾಮಾನ್ಯ. ಆದರೆ, ಅಂತಹ ಸಂದರ್ಭದಲ್ಲಿ ಕೂಡ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಅಥವಾ ಅವರಿಗಿಂತ ಮೇಲ್ಗರ್ಜೆಯ ಅಧಿಕಾರಿಗಳು, ನಿರ್ದಿಷ್ಟ ಕಾರಣ ನೀಡಿ ಅಂತಹ ಮಾಹಿತಿಯನ್ನು ಟೆಲಿಕಾಂ ಸೇವಾ ಸಂಸ್ಥೆಗಳಿಂದ ಪಡೆಯಬೇಕು ಎಂಬುದು ಕಾನೂನು ಮತ್ತು ಅದಕ್ಕೆಂದೇ ನಿರ್ದಿಷ್ಟ ಶಿಷ್ಟಾಚಾರ ಕೂಡ ಇದೆ. ಆದರೆ, ಇದೀಗ ಟೆಲಿಕಾಂ ಇಲಾಖೆಯ ಸ್ಥಳೀಯ ಕಚೇರಿಗಳ ಮೂಲಕ ಆಯಾ ವಲಯದ ಮೊಬೈಲ್ ಸೇವಾ ಸಂಸ್ಥೆಗಳಿಂದ ಕೇಂದ್ರ ಸರ್ಕಾರ ಸಾಮೂಹಿಕವಾಗಿ ಒಂದು ಪ್ರದೇಶದ ಎಲ್ಲರ ಮೊಬೈಲ್ ಸಿಡಿಆರ್ ದಾಖಲೆಯನ್ನು ಸಂಗ್ರಹಿಸತೊಡಗಿದೆ.

ದೆಹಲಿ, ಆಂಧ್ರಪ್ರದೇಶ, ಹರ್ಯಾಣ, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಒಡಿಶಾ, ಮಧ್ಯಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ಟೆಲಿಕಾಂ ವೃತ್ತಗಳಲ್ಲಿ ಕೆಲವು ನಿರ್ದಿಷ್ಟ ದಿನಗಳ ಸಂಪೂರ್ಣ ಮೊಬೈಲ್ ಬಳಕೆದಾರರ ಕರೆ ವಿವರ ದಾಖಲೆ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಕೆಲವು ಟೆಲಿಕಾಂ ಕಂಪನಿಗಳು ಆ ಮಾಹಿತಿ ನೀಡಿದ್ದರೆ, ಇನ್ನೂ ಕೆಲವು ಕಂಪನಿಗಳು ಗೊಂದಲಕ್ಕೆ ಸಿಲುಕಿವೆ. ಕೆಲವು ತಿಂಗಳುಗಳಿಂದ ಇಂತಹ ಮಾಹಿತಿ ಸಂಗ್ರಹ ನಡೆಯುತ್ತಿದೆ. ಆದರೆ, ಜನವರಿ ಮತ್ತು ಫೆಬ್ರವರಿಯಲ್ಲಿ ಹೀಗೆ ಸಾಮೂಹಿಕ ಕರೆ ಮಾಹಿತಿ ಕೇಳಲಾಗಿದೆ. ಇದು ಹೊಸ ಬೆಳವಣಿಗೆ ಎಂದು ಹೆಸರು ಹೇಳಲಿಚ್ಛಿಸದ ಟೆಲಿಕಾಂ ಸಂಸ್ಥೆಯೊಂದರ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಇಂತಹ ಮಾಹಿತಿಯನ್ನು ಕೊಡುವುದು ಕಾನೂನು ಉಲ್ಲಂಘನೆ, ಗ್ರಾಹಕ ಹಿತಕ್ಕೆ ಮಾರಕ ಎಂಬ ಹಿನ್ನೆಲೆಯಲ್ಲಿ ಕಳೆದ ಫೆ.12ರಂದೇ ಭಾರತೀಯ ಸೆಲ್ಯುಲಾರ್ ನಿರ್ವಾಹಕರ ಸಂಘ(ಸಿಒಎಐ) ದೂರವಾಣಿ ಇಲಾಖೆಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಅವರಿಗೆ ದೂರು ಸಲ್ಲಿಸಿದೆ. ನಿರ್ದಿಷ್ಟ ಪ್ರದೇಶ/ ಮಾರ್ಗದ ಸಾಮೂಹಿಕ ಮೊಬೈಲ್ ಬಳಕೆದಾರರ ಸಿಡಿಆರ್ ಮಾಹಿತಿಯನ್ನು ಕೋರಿರುವುದು ಜನರ ಮೇಲೆ ಬೇಹುಗಾರಿಕೆ/ ಕಣ್ಗಾವಲು ಇಡುವ ಪ್ರಯತ್ನ ಎಂಬ ಆರೋಪಕ್ಕೆ ಕಾರಣವಾಗಲಿದೆ. ಅದರಲ್ಲೂ ಸಚಿವರು, ಸಂಸದರು, ನ್ಯಾಯಾಧೀಶರು ಹೆಚ್ಚು ಇರುವ ದೆಹಲಿಯಂತಹ ನಗರದ ಬಳಕೆದಾರರ ಸಾಮೂಹಿಕ ಮಾಹಿತಿ ನೀಡುವುದು ಅಪಾಯಕಾರಿ ಎಂದು ಆ ದೂರಿನಲ್ಲಿ ವಿವರಿಸಲಾಗಿದೆ.
ದೆಹಲಿ ಟೆಲಿಕಾಂ ವೃತ್ತದಲ್ಲಿ ಫೆಬ್ರವರಿ 2, 3 ಮತ್ತು 4ನೇ ತಾರೀಖಿನ ಸಾಮೂಹಿಕ ಸಿಡಿಆರ್ ಮಾಹಿತಿ ಕೋರಲಾಗಿದೆ. ಆದರೆ, ಅದೇ ದಿನಾಂಕಗಳಂದು ಒಂದು ಕಡೆ ಸಿಎಎ- ಎನ್ ಆರ್ ಸಿ ವಿರೋಧಿ ಹೋರಾಟಗಳು ಭುಗಿಲೆದ್ದಿದ್ದವು. ಮತ್ತೊಂದು ಕಡೆ ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರ ಅಂತಿಮಘಟ್ಟ ಅದಾಗಿತ್ತು ಎಂಬುದು ಗಮನಾರ್ಹ ಎಂದೂ ವರದಿ ಹೇಳಿದೆ. ಅಲ್ಲದೆ, ಈ ಸಾಮೂಹಿಕ ಸಿಡಿಆರ್ ಮಾಹಿತಿ ಕೋರಿಕೆಗೆ ಟೆಲಿಕಾಂ ಇಲಾಖೆ, ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ ಎಂದೂ ಮೊಬೈಲ್ ಸೇವಾ ಕಂಪನಿಗಳು ಹೇಳಿವೆ.
ಇದಲ್ಲದೆ, ಮಾಸಿಕವಾಗಿ ಸಾಮೂಹಿಕ ಸಿಡಿಆರ್ ಮಾಹಿತಿಯನ್ನು ನೀಡುವಂತೆ ಟೆಲಿಕಾಂ ಸ್ಥಳೀಯ ಕಚೇರಿಗಳು ಮೊಬೈಲ್ ಸೇವಾ ಸಂಸ್ಥೆಗಳಿಗೆ ಸೂಚಿಸಿವೆ. ಆ ಪೈಕಿ ಆಂಧ್ರಪ್ರದೇಶದಲ್ಲಿ ಪ್ರತಿ ತಿಂಗಳ 1ನೇ ಮತ್ತು 5ನೇ ದಿನಾಂಕದ ಮಾಹಿತಿ ಕೋರಿದ್ದರೆ, ದೆಹಲಿಯಲ್ಲಿ ಪ್ರತಿ ತಿಂಗಳ 18ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಹಾಗೇ ಹರ್ಯಾಣದಲ್ಲಿ ಪ್ರತಿ ತಿಂಗಳ 21, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರದಲ್ಲಿ ಹಿಂದಿನ ತಿಂಗಳ ಕೊನೆಯ ದಿನ, ಕೇರಳ ಮತ್ತು ಒಡಿಶಾದಲ್ಲಿ 15ನೇ ತಾರೀಕು, ಮಧ್ಯಪ್ರದೇಶ ಮತ್ತು ಪಂಜಾಬಿನಲ್ಲಿ ಹಿಂದಿನ ತಿಂಗಳ ಕೊನೆಯ ಮತ್ತು ಚಾಲ್ತಿ ತಿಂಗಳ ಮೊದಲ ದಿನದ ಸಿಡಿಆರ್ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದೂ ಸಿಒಎಐ ತನ್ನ ದೂರಿನಲ್ಲಿ ವಿವರಿಸಿದೆ!
ಈ ಎರಡೂ ವಿದ್ಯಮಾನಗಳು; ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿಯೇ ಸರ್ವಾಧಿಕಾರಿ ಮತ್ತು ಕಣ್ಗಾವಲು ಪ್ರಭುತ್ವ(ಸರ್ವೈಲೆನ್ಸ್ ಸ್ಟೇಟ್)ವೊಂದು ಕಳ್ಳಹೆಜ್ಜೆ ಇಡುತ್ತಾ ಜನ ಸಾಮಾನ್ಯರ ಬದುಕಿನ ಮೇಲೆ ಎರಗುತ್ತಿದೆ ಎಂಬುದಕ್ಕೆ ಆಧಾರಸಹಿತ ಸಾಕ್ಷ್ಯ ಒದಗಿಸಿವೆ. ಆದರೆ, ಸಮೂಹಸನ್ನಿಯಂತಾಗಿರುವ ಕರೋನಾ ಭೀತಿಯ ನಡುವೆ, ಇಂತಹ ಗಂಭೀರ ವಿಷಯಗಳು ಸದ್ದಿಲ್ಲದೆ ತೆರೆಮರೆಗೆ ಸರಿದುಹೋಗುತ್ತಿವೆ!