ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಗೆಳೆಯರೊಬ್ಬರು ಇತ್ತೀಚಿಗೆ ಭೇಟಿಯಾಗಿದ್ದಾಗ, “ನೀವು ಏನೇ ಮಾಡಿದರೂ ನಮ್ಮ ದೇಶವನ್ನು ಬಯಲು ಬಹಿರ್ದೆಸೆ (ಮಲಮೂತ್ರ ವಿಸರ್ಜನೆ) ಮುಕ್ತ ಮಾಡಲು ಸಾಧ್ಯವಿಲ್ಲ ಸರ್” ಎಂದರು.
ಅದಕ್ಕೆ ಅವರು ಕೊಟ್ಟ ಕಾರಣ, “ನಮ್ಮಲ್ಲಿ ಒಳ್ಳೊಳ್ಳೆ ಮನೆಗಳಿವೆ, ಅದಕ್ಕೆ ತಕ್ಕುದಾದ ಹೈಟೆಕ್ ಶೌಚಾಲಯಗಳೂ ಇವೆ, ಜನರ ಬಳಿ ಉತ್ತಮ ಕಾರುಗಳಿವೆ, ಕೈಯಲ್ಲಿ ಹತ್ತಾರು ಸಾವಿರ ರೂ. ಬೆಲೆ ಬಾಳುವ ಸ್ಮಾರ್ಟ್ ಫೋನುಗಳೂ ಇವೆ; ಆದರೆ ಬೆಳಗ್ಗೆ ಮಾತ್ರ ಎದ್ದು ಕೈಯಲ್ಲಿ ತಂಬಿಗೆ ಹಿಡಿದು ಬಯಲು ಬಹಿರ್ದೆಸೆಗೆ ಹೋಗುವುದು ಮಾತ್ರ ತಪ್ಪಿಲ್ಲ” ಎಂಬ ವಾಸ್ತವಾಂಶ ಬಿಚ್ಚಿಟ್ಟರು. ಕುಡಿಯುವ ನೀರಿಗೆ ತತ್ವಾರ ಇರುವಾಗ, ಶೌಚಾಲಯಕ್ಕೆಲ್ಲಿ ಬಕೆಟ್ ಗಟ್ಟಲೆ ನೀರು ತರುವುದು ಎಂಬುದು ಅವರ ಪ್ರಶ್ನೆಯಾಗಿತ್ತು. ಭಾರತದ ಬಹುತೇಕ ಪ್ರದೇಶಗಳಲ್ಲಿ ಇದೇ ಸ್ಥಿತಿ ಇರುವುದು ಸುಳ್ಳಲ್ಲ.
ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತಿತರ ಪ್ರದೇಶಗಳಲ್ಲಿ ಹಂದಿ ಮಾಂಸ ಸೇವಿಸುವ ಜನ ಹೆಚ್ಚಿದ್ದಾರೆ. ಈ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂದಿಗಳು ಸರಬರಾಜಾಗುವುದು ಉತ್ತರ ಕರ್ನಾಟಕದ ಜಿಲ್ಲೆಗಳಿಂದ. ಉತ್ತರ ಕರ್ನಾಟಕದ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಇಂದಿಗೂ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು ಇವೇ ಹಂದಿಗಳು ಎಂಬುದು ಕಟು ಸತ್ಯ.
‘ಸಬ್ ಅಚ್ಚಾ ಹೈ’, ‘ಸಬ್ ಚಂಗಾ ಸಿ’, ‘ಬತಾಜ್ ಮಜಾ ಮಾ ಚೆ’, ‘ಅಂತ ಬಾಗುಂದಿ’, ‘ಎಲ್ಲಾ ಚೆನ್ನಾಗಿದೆ’, ‘ಎಲ್ಲಾಂ ಸೌಖ್ಯಂ’ – ಹೀಗೆ ಭಾರತ ಎಲ್ಲಾ ರೀತಿಯಲ್ಲೂ ಚೆನ್ನಾಗಿದೆ ಎಂಬುದಾಗಿ ವಿವಿಧ ಭಾರತೀಯ ಭಾಷೆಗಳಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಹೂಸ್ಟನ್ ನಲ್ಲಿ ಇತ್ತೀಚೆಗೆ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಹೇಳಿದ್ದಲ್ಲದೆ, ‘ಸ್ವಚ್ಛ ಭಾರತ ಆಂದೋಲನ’ದ ಸಾಧನೆಗಾಗಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿ ಪಡೆದುಕೊಂಡು ಬಂದಿದ್ದಾರೆ.
ಗಾಂಧಿ ಜಯಂತಿಯ 150ನೇ ವರ್ಷಾಚರಣೆಯ ದಿನವಾದ ಇಂದು (ಅಕ್ಟೋಬರ್ 2, 2019) ಭಾರತವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂಬುದಾಗಿ ಘೋಷಿಷಲಾಗುತ್ತಿದೆ. ಹಾಗಿದ್ದರೆ ಭಾರತ ನಿಜಕ್ಕೂ ಬಯಲು ಬಹಿರ್ದೆಸೆ ಮುಕ್ತವಾಗಿದೆಯೇ ಎಂಬ ಪ್ರಶ್ನೆಗೆ ಈ ಲೇಖನದ ಆರಂಭದಲ್ಲೇ ಹೇಳಿರುವ ಉದಾಹರಣೆಯಲ್ಲಿ ಉತ್ತರವಿದೆ.
ಹಾಗೆಂದು ‘ಸ್ವಚ್ಛ ಭಾರತ ಆಂದೋಲನ’ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರೆ ತಪ್ಪಾಗುತ್ತದೆ. ಈ ಆಂದೋಲನದಿಂದ ಖಂಡಿತವಾಗಿ ಬಯಲು ಬಹಿರ್ದೆಸೆ ಮತ್ತು ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿದೆ. ಆದರೆ ಈ ಆಂದೋಲನವು ಶೌಚಾಲಯ ಬಳಕೆಗೆ ಎದುರಾಗುವ ನೀರು ಮತ್ತಿತರ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸದ ಕಾರಣ ಯಶಸ್ಸು ಕಾಣುತ್ತಿಲ್ಲ.
ಅಧಿಕೃತ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಕಳೆದ ನಾಲ್ಕು ವರ್ಷಗಳಲ್ಲಿ 6 ಲಕ್ಷ ಹಳ್ಳಿಗಳಲ್ಲಿ 10 ಕೋಟಿ ಮತ್ತು ನಗರ ಪ್ರದೇಶಗಳಲ್ಲಿ 63 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ ಇದು ಗಣನೀಯ ಸಾಧನೆಯೇ. ಯುನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಘಟನೆಯ ಜಂಟಿ ಮೇಲ್ವಿಚಾರಣಾ ಕಾರ್ಯಕ್ರಮದ 2019ರ ವರದಿ ಪ್ರಕಾರ, ಭಾರತದಲ್ಲಿ 2000 ಮತ್ತು 2014 ರ ನಡುವಿನ ಅವಧಿಯಲ್ಲಿ ಬಯಲು ಬಹಿರ್ದೆಸೆ ಪ್ರಮಾಣ ಶೇಕಡವಾರು 3 ಅಂಶಗಳಷ್ಟು ಕಡಿಮೆಯಾಗಿದ್ದರೆ, 2015 ಮತ್ತು 2019 ರ ನಡುವಿನ ಅವಧಿಯಲ್ಲಿ ಶೇಕಡವಾರು 12 ಅಂಶಗಳಷ್ಟು ಕಡಿಮೆಯಾಗಿದೆ.
ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಅಂಕಿ-ಅಂಶಗಳ ಪ್ರಕಾರ, ಗ್ರಾಮೀಣ ಭಾರತದ ಶೇಕಡ 93 ಕುಟುಂಬಗಳು ಶೌಚಾಲಯ ಸೌಲಭ್ಯ ಹೊಂದಿವೆ. ಅವರಲ್ಲಿ ಶೇಕಡ 96 ರಷ್ಟು ಕುಟುಂಬಗಳು ಶೌಚಾಲಯ ಬಳಸುತ್ತಿವೆ ಎಂದು ಹೇಳಲಾಗಿತ್ತು. ಈಗ ಇಡೀ ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬೇಕಾದರೆ, ದೇಶದ ಎಲ್ಲಾ ಕುಟುಂಬಗಳು ಶೌಚಾಲಯ ಹೊಂದಬೇಕಿರುತ್ತದೆ. ವಾಸ್ತವವಾಗಿ ಇಂದಿಗೂ ಎಲ್ಲಾ ಮನೆಗಳೂ ಶೌಚಾಲಯ ಹೊಂದಿರುವ ಹಳ್ಳಿಗಳ ಸಂಖ್ಯೆ ಕಡಿಮೆ ಇದೆ. ಶೌಚಾಲಯ ಇದ್ದರೂ ಬಳಸುವವರ ಪ್ರಮಾಣ ಇನ್ನೂ ಕಡಿಮೆ.
“ಕೇವಲ ಐದು ವರ್ಷಗಳ ಹಿಂದೆ ಬಯಲು ಬಹಿರ್ದೆಸೆಗೆ ಹೋಗುವ ಪ್ರಪಂಚದ ಜನರಲ್ಲಿ ಶೇ.60 ರಷ್ಟು ಮಂದಿ ಭಾರತದಲ್ಲೇ ಇದ್ದರು. ಈಗ ಭಾರತ ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಗೆ ಬಂದಿದೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ಆದರೆ, ಈಗ ನಿರ್ಮಿಸಲಾಗಿರುವ ಶೌಚಾಲಯಗಳೆಲ್ಲಾ ನಿರಂತರವಾಗಿ ಬಳಕೆಯಲ್ಲಿರುತ್ತವೆಯೇ, ಶೌಚಗುಂಡಿಯಲ್ಲಿ ಸಂಗ್ರಹವಾಗುವ ಮಲವನ್ನು ಯಾವ ರೀತಿ ವಿಲೇವಾರಿ ಮಾಡಲಾಗುತ್ತದೆ ಎಂಬುದು ಮುಂದೆ ದೊಡ್ಡ ಸವಾಲಾಗಲಿದೆ” ಎಂಬುದಾಗಿ ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಸಂಸ್ಥೆಯ ಮಹಾನಿರ್ದೇಶಕಿ ಸುನಿತಾ ನಾರಾಯಣ್ ಅವರು ಗಾಂಧಿ ಜಯಂತಿ ಮುನ್ನಾದಿನ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ವಾಸ್ತವ ಬೇರೆಯೇ ಇದೆ:
ಹರ್ಯಾಣ ರಾಜ್ಯವನ್ನು 2017 ರಲ್ಲಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂಬುದಾಗಿ ಘೋಷಿಸಲಾಯಿತು. ಆದರೆ ಆ ರಾಜ್ಯದ ಜನರು ಬಯಲಲ್ಲಿ ಮಲವಿಸರ್ಜನೆಗೆ ಹೋಗುವ ಅಭ್ಯಾಸ ಬಿಟ್ಟಿಲ್ಲ ಎಂಬ ಸತ್ಯವು ‘ಡೌನ್ ಟು ಅರ್ಥ್’ ನಿಯತಕಾಲಿಕವು ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಭಾರತದ ಹಳ್ಳಿಗಳ ಸ್ಥಿತಿಗತಿ ಮತ್ತು ನೀರಿನ ಸಮಸ್ಯೆಯ ಅರಿವಿರುವವರಿಗೆ ಇದೇನು ತನಿಖೆ ನಡೆಸಿ ತಿಳಿದುಕೊಳ್ಳಬೇಕಾದ ಸತ್ಯವಲ್ಲ ಎಂಬುದು ಬೇರೆಮಾತು ಬಿಡಿ.
ಸ್ವಚ್ಛ ಭಾರತ ಆಂದೋಲನದಿಂದಾಗಿ ಜನರು ಶೌಚಾಲಯವನ್ನೇನೋ ಕಟ್ಟಿಸಿಕೊಂಡಿದ್ದಾರೆ. ಆದರೆ ನೀರಿನ ಕೊರತೆ ಕಾರಣದಿಂದ ಇಂತಹ ಬಹುತೇಕ ಶೌಚಾಲಯಗಳು ಕೇವಲ ಸರ್ಕಾರಿ ಲೆಕ್ಕದ ಬಾಬ್ತುಗಳಾಗಿವೆ. ಇನ್ನು ಶೌಚಾಲಯ ನಿರ್ಮಾಣದಲ್ಲಿ ವೈಜ್ಞಾನಿಕ ವಿಧಾನ ಅನುಸರಿಸದಿದ್ದರೆ, ಅವುಗಳನ್ನು ನಿರ್ಮಿಸಿಯೂ ನಿರುಪಯುಕ್ತವಾಗುಳಿಯುತ್ತವೆ.
ಗ್ರಾಮೀಣ ಪ್ರದೇಶಗಳಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯ ಕಟ್ಟುವಾಗ ಮಲಸಂಗ್ರಹಕ್ಕಾಗಿ ಎರಡು ಗುಂಡಿಗಳನ್ನು ನಿರ್ಮಿಸಿದರೆ, ಒಂದು ಗುಂಡಿ ತುಂಬಿದ ನಂತರ ಮತ್ತೊಂದು ಗುಂಡಿಗೆ ಮಲ ಹರಿಯುವಂತೆ ಮಾಡಬಹುದು. ಮೊದಲನೆಯ ಗುಂಡಿಯ ಮಲ ಸಂಪೂರ್ಣ ಒಣಗಿ ಗೊಬ್ಬರವಾದ ನಂತರ ಅದನ್ನು ಹೊರತೆಗೆಯಲು ಮತ್ತು ಜಮೀನುಗಳಿಗೆ ಹಾಕಲು ಸುಲಭವಾಗುತ್ತದೆ. ಆದರೆ ಹಳ್ಳಿಗಳಲ್ಲಿ ಬಹುತೇಕ ಶೌಚಾಲಯಗಳು ಒಂದು ಗುಂಡಿಯನ್ನು ಮಾತ್ರ ಹೊಂದಿವೆ. ಅದು ತುಂಬಿದರೆ ಹೊರತೆಗೆಯಲು ಸಮಸ್ಯೆ ಎದುರಾಗುತ್ತದೆ. ಈಗ ಮಲ ಹೊರುವ ಪದ್ಧತಿ ನಿಷೇಧಗೊಂಡಿರುವುದರಿಂದ ಜನರಿಂದ ಮಲ ಹೊರತೆಗೆಸಲು ಸಾಧ್ಯವಿಲ್ಲ. ಹಾಗೇ ಒಣಗಲು ತಿಂಗಳುಗಳ ಕಾಲ ಬಿಡಬೇಕೆಂದರೆ, ಮನೆಯವರೆಲ್ಲಾ ಮತ್ತೆ ಬಯಲು ಬಹಿರ್ದೆಸೆಗೆ ಹೋಗದೇ ವಿಧಿಯಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದು ನೀರು ಲಭ್ಯವಿರುವ ಹಳ್ಳಿಗಳ ಶೌಚಾಲಯಗಳ ಪರಿಸ್ಥಿತಿ. ನೀರಿನ ಸೌಲಭ್ಯವಿಲ್ಲದ ಶೌಚಾಲಯಗಳು ಬಳಸುವವರಿಲ್ಲದೆ ‘ನಿರ್ಮಲ’ವಾಗಿಯೇ ಉಳಿಯಲಿವೆ! ವರದಿಯೊಂದರ ಪ್ರಕಾರ, ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿರುವ ಪಂಚಾಯಿತಿಗಳ ವ್ಯಾಪ್ತಿಯ ಶೌಚಾಲಯಗಳಲ್ಲಿ ನಿತ್ಯ ಬಳಕೆಯಲ್ಲಿರುವುದು ಶೇ. 49 ಮಾತ್ರ.
“ತ್ಯಾಜ್ಯ ವಿಲೇವಾರಿ ಪದ್ಧತಿ ಸುಧಾರಣೆಗೊಳ್ಳದ ಭಾರತದಲ್ಲಿ ಇಡೀ ದೇಶ ಬಯಲು ಮಲವಿಸರ್ಜನೆ ಮುಕ್ತವಾದರೆ ಸಂಗ್ರಹವಾಗುವ ಮಲದ ವಿಲೇವಾರಿಯೇ ಮುಂದೆ ದೊಡ್ಡ ಸಮಸ್ಯೆಯಾಗಲಿದೆ. ಅದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನೂ ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ” ಎಂದು ಸುನಿತಾ ನಾರಾಯಣ್ ಎಚ್ಚರಿಸುತ್ತಾರೆ.
ಅಂದಹಾಗೆ, ನಮ್ಮ ಕರ್ನಾಟಕ ರಾಜ್ಯವನ್ನು ಕಳೆದ 2018 ನವಂಬರ್ 19 ರಂದೇ ‘ಬಹಿರ್ದೆಸೆ ಮುಕ್ತ ರಾಜ್ಯ’ ಎಂಬುದಾಗಿ ಘೋಷಿಸಲಾಗಿದೆ. ಆದರೆ ಹಾಸನ, ಮಂಡ್ಯ, ಮೈಸೂರು ಪ್ರದೇಶಗಳಿಗೆ ಉತ್ತರ ಕರ್ನಾಟಕದಿಂದ ಸರಬರಾಜಾಗುತ್ತಿರುವ ಹಂದಿಗಳ ಸಂಖ್ಯೆಯಲ್ಲಿ ಮಾತ್ರ ಯಾವುದೇ ಕೊರತೆ ಕಂಡುಬಂದಿಲ್ಲ!