ಮಹತ್ವದ ಕಾರ್ಯಾಚರಣೆಯಲ್ಲಿ ಜಾರಿ ನಿರ್ದೇಶನಾಲಯವು ದೇಶದ ಬ್ಯಾಂಕಿಂಗ್ ಗೆ ವಂಚಿಸಿ, ಅಕ್ರಮ ಹಣ ವರ್ಗಾವಣೆ ನಡೆಸಿ ಪಲಾಯನ ಮಾಡಿದ್ದ ಉದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಒಡೆತನದ ಸಂಸ್ಥೆಗಳಿಗೆ ಸೇರಿದ ವಜ್ರ ಮತ್ತು ಮುತ್ತುಗಳನ್ನು ಹಾಂಗ್ ಕಾಂಗ್ ನಿಂದ ವಾಪಾಸ್ ಭಾರತಕ್ಕೆ ಮರಳಿ ತರುವಲ್ಲಿ ಇಡಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸುಮಾರು 1,350 ಕೋಟಿ ರೂಪಾಯಿಯ 2300 ಕ್ಕೂ ಅಧಿಕ ಕೆಜಿಯ ವಜ್ರ, ಮುತ್ತು ಹಾಗೂ ಚಿನ್ನಾಭರಣಗಳನ್ನ ಇಡಿ ಅಧಿಕಾರಿಗಳು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 108 ಪ್ಯಾಕೇಜ್ ಗಳ ರೂಪದಲ್ಲಿ ಮುಂಬೈನ ಬಂದರಿನಲ್ಲಿ ತಂದಿಳಿಸಲಾಯಿತು ಅಂತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ 32 ಪ್ಯಾಕೆಜ್ ಗಳು ನೀರವ್ ಮೋದಿ ಸಾಮ್ಯದ ಕಂಪೆನಿಗೆ ಸೇರಿದ್ದರೆ, ಉಳಿದೆಲ್ಲವೂ ಚೋಕ್ಸಿ ಒಡೆತನದ ಕಂಪೆನಿಗೆ ಸೇರಿದ್ದಾಗಿ ಹೇಳಲಾಗಿದೆ. ಇವರಿಬ್ಬರು ಈ ಎಲ್ಲಾ ಸರಕುಗಳ ಜೊತೆಗೆ ಹಾಂಗ್ ಕಾಂಗ್ ನಿಂದ ದುಬೈಗೆ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ 2018 ರಲ್ಲಿ ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
48 ರ ಹರೆಯದ ನೀರವ್ ಮೋದಿ ಹಾಗೂ 60 ರ ಹರೆಯದ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ನಕಲಿ ಗ್ಯಾರಂಟಿಗಳನ್ನ ಇರಿಸಿ ಸಾಲಗಳನ್ನ ಪಡೆದಿದ್ದರು. ಈ ಕುರಿತು ಸಿಬಿಐ ತನಿಖೆಗೆ ಮುಂದಾಗುತ್ತಲೇ ಇವರಿಬ್ಬರೂ 2018 ರಲ್ಲಿ ದೇಶ ಬಿಟ್ಟು ಪಲಾಯನಗೈದಿದ್ದರು. ಇಬ್ಬರ ಮೇಲೂ ಮುಂಬೈಯ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 15 ಸಾವಿರ ಕೋಟಿ ರೂಪಾಯಿ ವಂಚಿಸಿರುವ ಆರೋಪವಿದ್ದು, ಸದ್ಯ ಜಾರಿ ನಿರ್ದೇಶನಾಲಯ (ED) ಅದರ ತನಿಖೆಯಲ್ಲಿ ನಿರತವಾಗಿದೆ.
ನೀರವ್ ಮೋದಿಯನ್ನ ಕಳೆದ ವರುಷವೇ ಲಂಡನ್ ನಲ್ಲಿ ಬಂಧಿಸಿರುವ ಇಡಿ ಅಧಿಕಾರಿಗಳು, ಭಾರತಕ್ಕೆ ಕರೆತರಲು ಕಾನೂನು ಮೊರೆ ಹೋಗಿದ್ದಾರೆ. ಇನ್ನು ನೀರವ್ ಮೋದಿ ಬ್ಯಾಂಕ್ ಗೆ ನೀಡಬೇಕಿರುವ ಹಣವನ್ನ ಮರಳಿ ಪಡೆಯುವ ಉದ್ದೇಶದಿಂದ ಈಗಾಗಲೇ ನೀರವ್ ಮೋದಿಗೆ ಸೇರಿದ ರಾಲ್ಸ್ ರಾಯ್ಸ್ ಕಾರು, ಖ್ಯಾತ ಚಿತ್ರಕಾರ ಎಂಎಫ್ ಹುಸೇನ್ ಹಾಗೂ ಅಮೃತಾ ಶೆರ್ಗಿಲ್ ರಚನೆಯ ಚಿತ್ರಗಳು ಹಾಗೂ ಐಷಾರಾಮಿ ಕೆಲವು ಸರಕುಗಳನ್ನ ಈಗಾಗಲೇ ಹರಾಜು ಹಾಕಿ ಹಣ ಪಡೆಯಲಾಗಿದೆ. ಇದೀಗ ಇಡಿ ಅಧಿಕಾರಿಗಳು 1350 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನ ವಾಪಾಸ್ ತರುವಲ್ಲಿ ಸಾಧ್ಯವಾಗಿದ್ದು, ವಿಜಯ್ ಮಲ್ಯ ಬಳಿಕ ನೀರವ್ ಮೋದಿ ಕೇಸ್ ನಲ್ಲೂ ಭಾರತ ಯಶಸ್ಸಿನ ಹೆಜ್ಜೆ ಇರಿಸಿದಂತಾಗಿದೆ.