ರಾಮ ಮಂದಿರ ನಿರ್ಮಾಣ ಹಾಗೂ ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರ ಎಸಗಿಲ್ಲ ಎಂಬ ಮಹತ್ವದ ತೀರ್ಪುಗಳನ್ನು ನೀಡಿದ್ದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಾಜಿ ಉದ್ಯೋಗಿಯನ್ನು (ಜೂನಿಯರ್ ಕ್ಲರ್ಕ್) ಸುಪ್ರೀಂಕೋರ್ಟ್ ಪುನರ್ ನೇಮಕ ಮಾಡಿದೆ. ಈ ಮೂಲಕ ದೇಶದ ಅತ್ಯುನ್ನತ ನ್ಯಾಯಾಲಯವು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ.
ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ ತನ್ನ ಪತಿ ಹಾಗೂ ಮೈದುನನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಉದ್ಯೋಗಿಯು ಗೊಗೊಯ್ ಅವರ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದರು.
‘ಇಂಡಿಯನ್ ಎಕ್ಸ್ ಪ್ರೆಸ್’ ವರದಿಯ ಪ್ರಕಾರ ಮಹಿಳಾ ಉದ್ಯೋಗಿಯು ಕರ್ತವ್ಯಕ್ಕೆ ಮರು ನೇಮಕಗೊಂಡಿದ್ದು, ಸದ್ಯ ರಜೆಯಲ್ಲಿದ್ದಾರೆ. ಆಕೆಯನ್ನು ವಜಾಗೊಳಿಸಿದ್ದ ಅವಧಿಯ ವೇತನವನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ಗೊಗೊಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದಂತೆ ಮೊದಲಿಗೆ ಆಕೆಯನ್ನು ವರ್ಗಾವಣೆ ಮಾಡಲಾಗಿತ್ತು. ಆನಂತರ ಸೇವೆಯಿಂದ ವಜಾಗೊಳಿಸಲಾಗಿತ್ತು. ಸಂತ್ರಸ್ತೆಯನ್ನು ತಪ್ಪಿತಸ್ಥೆಯನ್ನಾಗಿಸುವ ಉದ್ದೇಶದಿಂದ ಆಕೆಯ ವಿರುದ್ಧ ದುರುದ್ದೇಶಪೂರಿತ ಪ್ರಕರಣ ದಾಖಲಿಸಲಾಗಿತ್ತು ಎಂಬ ಆರೋಪವಿದ್ದು, ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಪತಿ ಹಾಗೂ ಮೈದುನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು ಎಂಬುದನ್ನು ನೆನಯಬಹುದಾಗಿದೆ.
2019ರ ಏಪ್ರಿಲ್ ನಲ್ಲಿ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ಬೆಳಕಿಗೆ ಬರುತ್ತಲೇ ಸಂತ್ರಸ್ಥೆ ಹಾಗೂ ಆಕೆಯ ಕುಟುಂಬ ಅನುಭವಿಸಿದ್ದ ಯಾತನೆಯನ್ನು ಆಯ್ದ ಆನ್ ಲೈನ್ ಮಾಧ್ಯಮಗಳು ವರದಿ ಮಾಡಿದ್ದವು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೊಗೊಯ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಲ್ಲದೇ, ತಮ್ಮ ವಿರುದ್ಧವೇ ಆರೋಪ ಇರುವ ಪ್ರಕರಣದಲ್ಲಿ ನ್ಯಾಯಪೀಠ ಅಲಂಕರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಇದರ ಬೆನ್ನಲ್ಲೇ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿತ್ತು. ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಸಮಿತಿ ನೇತೃತ್ವ ವಹಿಸಿದ್ದರು. ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಇಂದೂ ಮಲ್ಹೋತ್ರಾ ಅವರು ಸಮಿತಿಯ ಇತರೆ ಸದಸ್ಯರಾಗಿದ್ದರು. ದೂರಿನ ಸೂಕ್ಷ್ಮತೆ ಅರಿಯುವಲ್ಲಿ ಕೋರ್ಟ್ ವಿಫಲವಾಗಿದೆ ಎಂದು ಸಂತ್ರಸ್ಥೆ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿಯು ಗೊಗೊಯ್ ವಿರುದ್ಧ ಮಹಿಳಾ ಉದ್ಯೋಗಿ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂದು ನಿವೃತ್ತ ಸಿಜಿಐ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಸಿಜೆಐ ಬೊಬ್ಡೆ ನೇತೃತ್ವದ ಸಮಿತಿಯ ತೀರ್ಪಿನಿಂದ ಸಂತ್ರಸ್ಥೆ ತೀವ್ರವಾಗಿ ನೊಂದುಕೊಂಡಿದ್ದರು. “ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರಿಂದ ನಾನು ಮತ್ತು ನನ್ನ ಕುಟುಂಬ ಕೆಲಸ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ಮೂವರು ನ್ಯಾಯಮೂರ್ತಿಗಳ ಸಮಿತಿಯು ನನ್ನ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿರುವುದನ್ನು ಕೇಳಿ ದಿಗ್ಬ್ರಮೆಯಾಗಿದೆ” ಎಂದು ‘ದಿ ವೈರ್ ‘ಗೆ ನೀಡಿದ್ದ ಸಂದರ್ಶನದಲ್ಲಿ ಆಕೆ ನೋವು ತೋಡಿಕೊಂಡಿದ್ದರು.
ಸುಪ್ರೀಂಕೋರ್ಟ್ನ ಆಂತರಿಕ ಸಮಿತಿ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿದ ಕೆಲವೇ ತಿಂಗಳಲ್ಲಿ ಸಂತ್ರಸ್ಥೆಯ ವಿರುದ್ಧ ದಾಖಲಿಸಲಾಗಿದ್ದ ಮೋಸದ ಪ್ರಕರಣವನ್ನು ದೆಹಲಿ ನ್ಯಾಯಾಲಯ ಮುಕ್ತಾಯಗೊಳಿಸಿತ್ತು. 2019ರಲ್ಲಿ ಆಕೆಯ ಪತಿ ಮತ್ತು ಮೈದುನನನ್ನು ದೆಹಲಿ ಪೊಲೀಸ್ ಇಲಾಖೆಯು ಪುನರ್ ನೇಮಕ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ದೆಹಲಿ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುವುದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸುಪರ್ದಿನಲ್ಲಿ ಎಂಬುದನ್ನು ಇಲ್ಲಿ ನೆನೆಯಬೇಕಿದೆ.
ನಿವೃತ್ತ ನ್ಯಾ. ಗೊಗೊಯ್ ಅವರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಡೆದುಕೊಂಡ ರೀತಿಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಿವೃತ್ತ ಸಿಜೆಐಗೆ ಕ್ಲೀನ್ ಚಿಟ್ ನೀಡಿದ್ದ ಸುಪ್ರೀಂಕೋರ್ಟ್ ನ ಆಂತರಿಕ ಸಮಿತಿಯ ನಡೆಯನ್ನು ವಿರೋಧಿಸಿ ಹಲವು ಮಹಿಳಾ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದವು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಅವರು ಉನ್ನತ ನ್ಯಾಯಾಲಯದ ನಡೆಯನ್ನು ಟೀಕಿಸಿದ್ದರು.
ಇತ್ತೀಚೆಗೆ ಗೊಗೊಯ್ ಅವರ ವಿರುದ್ಧದ ಲೈಂಗಿಕ ಆರೋಪದ ಪ್ರಕರಣವನ್ನು ಹೇಗೆ ಬಗೆಹರಿಸಲಾಗಿತ್ತು ಎಂಬುದರ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಗೊಗೊಯ್ ಅವರ ವಿರುದ್ಧ ಮಹಿಳಾ ಉದ್ಯೋಗಿ ಮಾಡಿದ್ದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸಿಜೆಐ ಬೊಬ್ಡೆ ಅವರಲ್ಲಿ ಮನವಿ ಮಾಡಿದ್ದರು. ಅಲ್ಲದೇ ಅಟಾರ್ಜಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಕೋರ್ಟ್ ಹೊರತಾಗಿ ಒಬ್ಬರು ಸದಸ್ಯರನ್ನು ಸಮಿತಿಯಲ್ಲಿ ಸೇರಿಸಿಕೊಂಡು ವಿಚಾರಣೆ ನಡೆಸುವಂತೆ ನೀಡಿದ್ದ ಸಲಹೆಯನ್ನೂ ಸಿಜೆಐ ಬೊಬ್ಡೆ ಸಮಿತಿ ಗಣನೆಗೆ ತೆಗೆದುಕೊಂಡಿರಲಿಲ್ಲ. ಅಂತಿಮವಾಗಿ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಪ್ರಕರಣ ಇತ್ಯರ್ಥಪಡಿಸಿದ್ದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸಮಿತಿಯು ಸಾರ್ವಜನಿಕಗೊಳಿಸಲಿಲ್ಲ. ಸಹಜ ನ್ಯಾಯದಾನದ ಪ್ರಕಾರ ಕನಿಷ್ಠ ಆರೋಪ ಮಾಡಿದ್ದ ಮಹಿಳೆಗಾದರೂ ಸಮಿತಿಯ ವರದಿಯನ್ನು ನೀಡಬೇಕಾಗಿತ್ತು. ಆದರೆ, ಅದನ್ನೂ ಸಮಿತಿಯು ಮಾಡಿರಲಿಲ್ಲ.
ಏತನ್ಮಧ್ಯೆ, ಮಹಿಳಾ ಉದ್ಯೋಗಿಯು ತನ್ನನ್ನು ಕರ್ತವ್ಯಕ್ಕೆ ಪುನರ್ ನೇಮಕ ಮಾಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿರುವ ಪ್ರಭಾವಿಯೊಬ್ಬರು ಸುಪ್ರೀಂಕೋರ್ಟ್ ನ ಮಹಿಳಾ ಉದ್ಯೋಗಿಗೆ ಆಕೆಯ ಪತಿ ಹಾಗೂ ಆಕೆಯನ್ನು ಮರು ನೇಮಕ ಮಾಡುವ ಭರವಸೆ ನೀಡಿ ಪ್ರಕರಣವನ್ನು ಹಿಂಪಡೆಯುವಂತೆ ಸಲಹೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇದನ್ನು ನಂಬಿ ಆಕೆಯು ಮನವಿ ಹಿಂಪಡೆದಿದ್ದರು ಎನ್ನಲಾಗಿತ್ತು.
ಈಗ ಅದರಂತೆಯೇ ಆಕೆಯ ಪತಿ ಮತ್ತು ಆಕೆಯ ಪುನರ್ ನೇಮಕವಾಗಿದೆ. ಹೀಗಿರುವಾಗ ಮಹಿಳಾ ಉದ್ಯೋಗಿಗೆ ಉದ್ಯೋಗದ ಭರವಸೆ ನೀಡಿದ ಸರ್ಕಾರದೊಳಗಿರುವ ಕಾಣದ ಕೈ ಯಾವುದು? ಈ ಪ್ರಹಸನ ನಡೆಸಿದ ಉದ್ದೇಶ ಏನಾಗಿತ್ತು? ಮಹಿಳಾ ಉದ್ಯೋಗಿಯನ್ನು ವರ್ಗಾವಣೆ ಮಾಡಿ ಆನಂತರ ವಜಾಗೊಳಿಸಿದ್ದು ಏಕೆ? ಆಕೆಯ ಪತಿ ಹಾಗೂ ಮೈದುನರನ್ನು ಸೇವೆಯಿಂದ ಅಮಾನತುಗೊಳಿಸಿದ್ದು ಏಕೆ? ಮತ್ತೆ ಅವರನ್ನು ಕರ್ತವ್ಯಕ್ಕೆ ಪುನರ್ ನೇಮಕ ಮಾಡಿದ್ದು ಏಕೆ? ಆಕೆಯ ವಿರುದ್ಧ ದಾವೆ ಹಾಕಿ ಆನಂತರ ಅದನ್ನು ಮುಕ್ತಾಯಗೊಳಿಸಿದ್ದು ಏಕೆ? ಹೀಗೆ ಉತ್ತರಗಳಿಲ್ಲದ ನೂರಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ದೇಶದ ಉನ್ನತ ನ್ಯಾಯಾಲಯ ಮತ್ತೆ ಎಲ್ಲರ ಕೇಂದ್ರಬಿಂದುವಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಎಲ್ಲವೂ ಸರಿಯಿಲ್ಲ ಎಂದು 2018ರ ಜನವರಿಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ ಚಲಮೇಶ್ವರ್ ನೇತೃತ್ವದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ್ದರು. ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇಂಥ ಮಹತ್ವದ ಬೆಳವಣಿಗೆ ನಡೆದಿದ್ದು ಅದೇ ಮೊದಲು. ಈ ತಂಡದಲ್ಲಿ ರಂಜನ್ ಗೊಗೊಯ್ ಅವರೂ ಇದ್ದರು. ಕರ್ತವ್ಯದಿಂದ ನಿವೃತ್ತರಾದ ನ್ಯಾಯಮೂರ್ತಿಗಳು ಮಾಧ್ಯಮಗೋಷ್ಠಿ ನಡೆಸುವುದು ವಾಡಿಕೆ. ಆದರೆ, ಈ ಸಂಪ್ರದಾಯವನ್ನು ಗೊಗೊಯ್ ಅವರು ಪಾಲಿಸಲಿಲ್ಲ ಎಂಬುದು ಮತ್ತೊಂದು ಮಹತ್ವದ ಬೆಳವಣಿಗೆ.