ಬಿಜೆಪಿಯ ಜಯಭೇರಿಯ ಈ ಭವಿಷ್ಯ ಅನಿರೀಕ್ಷಿತವೇನೂ ಅಲ್ಲ. ಹಾಗೆ ನೋಡಿದರೆ ಮತದಾನಕ್ಕ ಬಹು ಮುನ್ನವೇ ಫಲಿತಾಂಶ ನಿರ್ಧಾರವಾಗಿರುವ ಸ್ಥಿತಿ ರೂಪು ತಳೆದಿತ್ತು. ಮಹಾರಾಷ್ಟ್ರದ ಕಾಂಗ್ರೆಸ್ ಮತ್ತು ಎನ್. ಸಿ. ಪಿ. ಯಿಂದ ನಾಯಕರು ಹಿಂಡು ಹಿಂಡಾಗಿ ಬಿಜೆಪಿಗೆ ಗುಳೆ ಹೋಗತೊಡಗಿದ್ದರು. ಕೆಲವರು ತಾವಾಗಿ ಹೊರಟರೆ ಇನ್ನು ಕೆಲ ಭಾರೀ ಕುಳಗಳನ್ನು ಬಿಜೆಪಿಯೇ ಬಲೆಗೆ ಕೆಡವಿಕೊಂಡಿತ್ತು. ಯುದ್ಧ ನಡೆಯುವ ಮೊದಲೇ ಪ್ರತಿಪಕ್ಷಗಳನ್ನು ಹಲವು ವಿಧಗಳಲ್ಲಿ ಬಡಿದು ಹಣ್ಣುಗಾಯಿ-ನೀರುಗಾಯಿ ಆಗಿಸಿ ನಿಸ್ತೇಜ ಮಾಡುವಲ್ಲಿ ಮೋದಿ-ಶಾ ನೇತೃತ್ವದ ಬಿಜೆಪಿ ಯಶಸ್ವಿಯಾಗಿತ್ತು. ಈ ದಮನದ ವಿರುದ್ಧ ಪುಟಿದೇಳುವ ಚೈತನ್ಯವನ್ನು ಪ್ರತಿಪಕ್ಷಗಳು ತೋರಲಿಲ್ಲ. ಅಹಮಿಕೆಗಳಲ್ಲಿ ಮುಳುಗಿರುವ ಅವುಗಳು ಒಂದಾಗಿ ನಿಲ್ಲುವ ಸೂಚನೆಯೂ ಕಾಣುತ್ತಿಲ್ಲ.
ಮೋದಿ-ಶಾ ಕಟ್ಟುವ ಹುಸಿ ರಾಷ್ಟ್ರವಾದ ಮತ್ತು ಪಾಕ್ ವಿರೋಧಿ, ಮುಸ್ಲಿಂ ವಿರೋಧಿ ಕಥನಗಳಿಗೆ ಪ್ರತಿಕಥನ ಕಟ್ಟುವ ಸಾಮರ್ಥ್ಯವನ್ನು ಪ್ರತಿಪಕ್ಷಗಳು ಕಳೆದ ಐದೂವರೆ ವರ್ಷಗಳಲ್ಲಿ ಯಾವಾಗಲೂ ತೋರಿಲ್ಲ. ಸಮಾಜವನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸುವ ಕಥನಗಳಿಗೆ, ಕೂಡಿಸುವ ಮತ್ತು ಕಟ್ಟುವ ಪ್ರತಿಕಥನಗಳನ್ನು ಕಟ್ಟುವುದು ಅಷ್ಟು ಸುಲಭವೂ ಅಲ್ಲ. ಆದರೆ ಆ ದಿಸೆಯಲ್ಲಿ ಗಂಭೀರ ಪ್ರಯತ್ನವೇ ನಡೆಯಲಿಲ್ಲ. ಮತದಾನದ ದಿನ ಹೊಸ್ತಿಲಲ್ಲಿ ನಿಂತಾಗಲೂ ಮೋಶಾ ಜೋಡಿ ತನ್ನ ಪಟ್ಟು ಸಡಿಲಿಸಲಿಲ್ಲ. ಜನಪ್ರಿಯ ಬಾಲಿವುಡ್ ತಾರೆಗಳನ್ನು ದೆಹಲಿಯ ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಜಮಾಯಿಸಿಕೊಂಡರು ಮೋದಿ. ಸಮೂಹ ಮಾಧ್ಯಮಗಳಲ್ಲಿ ಭರಾಟೆಯ ಪ್ರಚಾರ. ಮೋದಿಯವರೊಂದಿಗೆ ಜನಪ್ರಿಯ ಸಿನೆಮಾ ನಟ ನಟಿಯರ ಫೋಟೋಗಳು. ವಿಡಿಯೋಗಳು.
ಮತದಾನದ ದಿನದ ಹಿಂದಿನ ದಿನ ಪಾಕಿಸ್ತಾನದೊಂದಿಗೆ ಮತ್ತೊಂದು ‘ಯುದ್ಧ’. ಮತಗಟ್ಟೆಗಳಿಗೆ ತೆರಳುವ ಮುನ್ನ ಮತದಾರರು ಪತ್ರಿಕೆಗಳು ಟೀವಿಗಳಲ್ಲಿ ಕಂಡದ್ದು ಪಾಕ್ ವಿರುದ್ಧ ಭಾರತದ ಯಶಸ್ವೀ ದಾಳಿ. ಭಯೋತ್ಪಾದಕರು ಮತ್ತು ಪಾಕ್ ಸೈನಿಕರ ಸಾವುಗಳ ವರದಿಗಳು. ದೇಶವನ್ನು ಕಾಡುವ ನಿರುದ್ಯೋಗ, ಹಸಿವು, ಕೃಷಿ ಬಿಕ್ಕಟ್ಟಿನಂತಹ ಜನಸಮೂಹಗಳ ದಿನನಿತ್ಯದ ಸಂಕಟಗಳನ್ನು ಆಳುವ ಪಕ್ಷ ಚರ್ಚೆಗೇ ತರಲಿಲ್ಲ. ಚುನಾವಣಾ ಪ್ರಚಾರ ನಡೆದದ್ದೆಲ್ಲ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ಪ್ರತಿಪಕ್ಷಗಳನ್ನು ಖಳನಾಯಕರಂತೆ ಬಿಂಬಿಸುವ ಸುತ್ತಮುತ್ತಲೇ.

ಗಾಳಿ ಬೀಸುವ ದಿಕ್ಕನ್ನು ಅರಿತ ಶಿವಸೇನೆ ಪ್ರಧಾನಿ ವಿರುದ್ಧ ತಾನು ಉಗುಳಿದ್ದನ್ನೇ ನುಂಗಿತು. ಬಿಜೆಪಿಗೆ ಹಿರಿಯಣ್ಣನ ಸ್ಥಾನ ಬಿಟ್ಟು ಕೊಟ್ಟಿತು. ಶಿವಸೇನೆಯನ್ನು ಹಣಿದು ಮಣಿಸುವಲ್ಲಿ, ರೈತರ ಆಕ್ರೋಶವನ್ನು ಹಿಮ್ಮೆಟ್ಟಿಸುವಲ್ಲಿ, ಮರಾಠರ ಮೀಸಲಾತಿ ಆಗ್ರಹವನ್ನು ತಣಿಸುವಲ್ಲಿ, ಕಾಂಗ್ರೆಸ್-ಎನ್.ಸಿ.ಪಿ. ಪಾಳೆಯದ ಮೇಲೆ ದಾಳಿ ನಡೆಸಿ ಗಲಿಬಿಲಿ ಮೂಡಿಸಿ ಅಲ್ಲಿನ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರುವಲ್ಲಿ ಹಾಗೂ ತಮ್ಮದೇ ಪಕ್ಷದ ಭಿನ್ನಮತೀಯ ಚಟುವಟಿಕೆಯನ್ನು ಅಂಕೆಯಲ್ಲಿ ಇರಿಸುವಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೋರಿರುವ ಚಾಕಚಕ್ಯತೆ ಕೂಡ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮುನ್ನಡೆಗೆ ದಾರಿ ಮಾಡಿದ್ದು ಹೌದು.
ಹರಿಯಾಣದಲ್ಲಿ ಬಿಜೆಪಿಯ ಜಯಭೇರಿಗೆ ಮೇಲ್ನೋಟಕ್ಕೆ ಯಾವ ಅಡೆತಡೆಗಳೂ ಕಾಣುತ್ತಿಲ್ಲ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಮನೋಹರಲಾಲ್ ಖಟ್ಟರ್ ಎರಡನೆಯ ಬಾರಿಗೆ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎನ್ನತೊಡಗಿವೆ. ಆದರೆ ಒಂದು ಮತಗಟ್ಟೆ ಸಮೀಕ್ಷೆಯು ತ್ರಿಶಂಕು ವಿಧಾನಸಭೆಯ ಭವಿಷ್ಯವನ್ನೂ ನುಡಿದಿವೆ.
ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಸಮಬಲದಲ್ಲಿ ಸೆಣೆಸಿದ್ದು ದೇವೀಲಾಲ್ ಮೊಮ್ಮಗ ದುಷ್ಯಂತ ಚೌಟಾಲ ಅವರ ಜನತಾಂತ್ರಿಕ ಜನತಾ ಪಾರ್ಟಿಯು ಬೆಂಬಲಿಸುವ ಪಕ್ಷ ಸರ್ಕಾರ ರಚಿಸಬಹುದು ಎಂದಿದೆ. ಚೌಟಾಲ ಪಕ್ಷಕ್ಕೆ ಆರರಿಂದ ಹತ್ತು ಸೀಟುಗಳು ದಕ್ಕುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ಸಿಗೆ ಶೇ. 32ರಷ್ಟು, ಬಿಜೆಪಿಗೆ ಶೇ. 33ರಷ್ಟು ಹಾಗೂ ಜನತಾಂತ್ರಿಕ ಜನತಾ ಪಾರ್ಟಿಗೆ ಶೇ. 14ರಷ್ಟು ಮತಗಳು ದೊರೆಯುವ ಸಾಧ್ಯತೆಯನ್ನು ಪ್ರಕಟಿಸಿದೆ. ನ್ಯೂಸ್-18 ಸಮೀಕ್ಷೆಯು ಬಿಜೆಪಿಗೆ 75 ಸೀಟುಗಳ ಭರ್ಜರಿ ಗೆಲುವನ್ನು ಕಂಡಿದೆ. ಈ ಹಿಂದೆ ಚುನಾವಣೆ ಸಮೀಕ್ಷಾಶಾಸ್ತ್ರಜ್ಞರಾಗಿದ್ದು ಈಗ ಸ್ವರಾಜ್ ಪಕ್ಷದ ಮೂಲಕ ಸಕ್ರಿಯ ರಾಜಕಾರಣದಲ್ಲಿರುವ ಪ್ರೊ. ಯೋಗೇಂದ್ರ ಯಾದವ್ ಕೂಡ ಹರಿಯಾಣದಲ್ಲಿ ಬಿಜೆಪಿಗೆ ದೊಡ್ಡ ಬಹುಮತವೇ ಬರುವುದೆಂಬ ನಂಬಿಕೆ ಪ್ರಕಟಿಸಿದ್ದಾರೆ. ಇಂಡಿಯಾ ಟುಡೇ ಮತಗಟ್ಟೆ ಸಮೀಕ್ಷೆಯು ವಾಸ್ತವದಿಂದ ದೂರ ಎಂದಿದ್ದಾರೆ. ಹರಿಯಾಣ ಚುನಾವಣೆಗಳಲ್ಲಿ ಸ್ವರಾಜ್ ಪಕ್ಷ ಸಕ್ರಿಯವಾಗಿ ಪಾಲ್ಗೊಂಡಿತ್ತು. ನೆಲಮಟ್ಟದಲ್ಲಿ ಬಿಜೆಪಿಯ ಪರ ಗಾಳಿ ಇದ್ದುದನ್ನು ತಾವು ಕಂಡಿರುವುದಾಗಿ ಯಾದವ್ ಹೇಳಿದ್ದಾರೆ.

2014ರ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 90 ಸೀಟುಗಳ ಪೈಕಿ ಬಿಜೆಪಿ 47ರ ಸರಳ ಬಹುಮತ ಗಳಿಸಿತ್ತು. ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿಗೆ ದಕ್ಕಿದ್ದು 15 ಸೀಟುಗಳು. ಪ್ರಾದೇಶಿಕ ಪಕ್ಷದ ಊರುಗೋಲು ಅಥವಾ ಮುಲಾಜು ಮರ್ಜಿಯಿಲ್ಲದೆ ಬಿಜೆಪಿ ಹರಿಯಾಣವನ್ನು ಮೊದಲ ಸಲ ಗೆದ್ದುಕೊಂಡದ್ದು 2014ರಲ್ಲಿ. ಐದು ತಿಂಗಳ ಹಿಂದೆ ಲೋಕಸಭೆ ಚುನಾವಣೆಗಳಲ್ಲಿ ಎಲ್ಲ ಹತ್ತು ಸೀಟುಗಳನ್ನು ಬಾಚಿಕೊಂಡಿತ್ತು. ಈ ರಾಜ್ಯದಲ್ಲಿ ಬಲಿಷ್ಠ ರಾಜಕೀಯ ಕುಟುಂಬಗಳು ಆರಂಭದಿಂದಲೂ ಬೇರು ಬಿಟ್ಟಿವೆ. ಕಾಂಗ್ರೆಸ್ಸಿನ ಮಹಾರಥಿ ಭೂಪೀಂದರ್ ಸಿಂಗ್ ಹುಡ್ಡಾ ಮತ್ತು ಅವರ ಮಗ ದೀಪಿಂದರ್ ಹುಡ್ಡಾ ಅವರ ಜಂಟಿ ಭಿತ್ತಿಪತ್ರಗಳು ಈ ಮಾತಿಗೆ ಒಂದು ಸಣ್ಣ ಮಾದರಿ ಮಾತ್ರ.
ದೇವೀಲಾಲ್ ಕುಟುಂಬ, ಬನ್ನೀಲಾಲ್ ಕುಟುಂಬ, ಭಜನಲಾಲ್ ಕುಟುಂಬಗಳ ನಡುವೆ ಬಿಜೆಪಿ ತಲೆಯೆತ್ತಿದೆ. ಆದರೆ ಈ ಯಶಸ್ಸು ಕುಟುಂಬ ರಾಜಕಾರಣದ ವಿರುದ್ಧ ರಾಜಕಾರಣ ಮಾಡಿ ಗಳಿಸಿದ್ದಲ್ಲ. ಆಯಾರಾಮ್-ಗಯಾರಾಮ್ ಎಂದು ಜನಪ್ರಿಯ ಭಾಷೆಯಲ್ಲಿ ಕರೆಯಲಾಗುವ ಪಕ್ಷಾಂತರ ರಾಜಕಾರಣವೇ ಬಿಜೆಪಿ ಯಶಸ್ಸಿನ ಸೋಪಾನ. ಭಾರತೀಯ ರಾಷ್ಟ್ರೀಯ ಲೋಕದಳ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಭ್ರಮನಿರಸನಗೊಂಡವರನ್ನು ತೋಳು ತೆರೆದು ಆಲಿಂಗಿಸಿದೆ ಕೇಸರಿ ಪಕ್ಷ. ರಾಜಕೀಯವಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠ ಜಾಟ್ ಜನಾಂಗದ ಪ್ರಾಬಲ್ಯದಿಂದ ಅಸಮಾಧಾನಗೊಂಡಿದ್ದ ಇತರೆ 34 ಜಾತಿಗಳನ್ನು ಒಟ್ಟುಗೂಡಿಸಿದ್ದು ಬಿಜೆಪಿಯನ್ನು ಬೇರನ್ನು ಆಳಕ್ಕಿಳಿಸಿದ ಇನ್ನೊಂದು ಅಂಶ. ಶೇ. 90ಕ್ಕೂ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಹೊಂದಿರುವ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ನಡೆಯೂ ಜನಮನ ಗೆದ್ದಿದೆ. ಭಾರತೀಯ ಸೇನೆಗೆ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು ಕಳಿಸಿರುವ ರಾಜ್ಯವಿದು ಎಂಬುದು ಗಮನಾರ್ಹ. 18 ಸಾವಿರ ಡಿ ಗ್ರೂಪ್ ಸರ್ಕಾರಿ ಹುದ್ದೆಗಳಿಗೆ ಹಣ ಮತ್ತು ವಶೀಲಿಯ ಪಾತ್ರವಿಲ್ಲದೆ ಜರುಗಿರುವ ನೇಮಕಾತಿ ಖಟ್ಟರ್ ಆಡಳಿತಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

ಹಾಗೆಂದು ಹಸಿರು ಕ್ರಾಂತಿಯ ಮುಂಚೂಣಿಯಲ್ಲಿದ್ದ ಈ ಸೀಮೆಯಲ್ಲಿ ರೈತರು ಆನಂದವಾಗಿಲ್ಲ. ಕೃಷಿ ಬಿಕ್ಕಟ್ಟಿನಿಂದ ಹರಿಯಾಣ ಹೊರತೇನೂ ಅಲ್ಲ. ಆದರೆ ರೈತಾಪಿ ಸಮಸ್ಯೆಗಳು ವರ್ಗಭೇದ ಮತ್ತು ಜಾತಿಭೇದಗಳ ಮೇಲು ಕೀಳಿನಿಂದ ಏಕಶಿಲೆಯಂತೆ ಮೇಲೆದ್ದು ಆಳುವ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಉದಾಹರಣೆಗಳು ಸ್ವತಂತ್ರ ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಈ ಮಾತು ಹರಿಯಾಣಕ್ಕೂ ಅನ್ವಯಿಸುತ್ತದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯನ್ನು ಎದುರಿಸಿ ನಿಲ್ಲುವ ಬಲಿಷ್ಠ ಪ್ರತಿಪಕ್ಷ ದೇಶದಲ್ಲಿ ಇಲ್ಲ, ಅಂದಮೇಲೆ ಅದು ಹರಿಯಾಣದಲ್ಲೂ ಇಲ್ಲ. ಇಳಿಜಾರಿನ ಹಾದಿ ಹಿಡಿದಿರುವ ಕಾಂಗ್ರೆಸ್ ಮರುಚೇತರಿಕೆ ಸನಿಹದಲ್ಲೆಲ್ಲೂ ಕಾಣುತ್ತಿಲ್ಲ. ಜಾತಿ ಲೆಕ್ಕಾಚಾರದ ರಾಜಕಾರಣವನ್ನು ಸಂಪೂರ್ಣವಾಗಿ ಕೈ ಬಿಡದೆ, ಅದರ ಜೊತೆಗೆ ಆಕ್ರಮಣಕಾರಿ ರಾಷ್ಟ್ರವಾದ ಮತ್ತು ಈ ದೇಶ ಬಹುಸಂಖ್ಯಾತರಿಗೆ ಸೇರಿದ್ದು ಎಂಬ ಭಾವನೆಯನ್ನು ಬಿಜೆಪಿ ಬಿತ್ತಿ ಬೆಳೆಸಿದೆ. ಅದರ ಫಸಲಿನ ಕಟಾವನ್ನು ಒಂದರ ನಂತರ ಮತ್ತೊಂದರಂತೆ ಚುನಾವಣೆಗಳಲ್ಲಿ ಮಾಡತೊಡಗಿದೆ. ಈಗ ಮಾಡತೊಡಗಿದೆ.
ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಬಂಪರ್ ಫಸಲಿನ ಕಟಾವು ಮುಂಬರುವ ಚುನಾವಣೆಗಳಲ್ಲಿ ತಗ್ಗೀತು ಎನ್ನಲು ಯಾವ ಕಾರಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಪ್ರತಿಪಕ್ಷಗಳು ಹಾಸಿಗೆ ಹಿಡಿದು ಆಳುವ ಪಕ್ಷ ಆಕಾಶದೆತ್ತರಕ್ಕೆ ನಿಂತು ಆರ್ಭಟಿಸುವುದು ಜನತಂತ್ರದ ಆರೋಗ್ಯಕ್ಕೆ ಒಳ್ಳೆಯದಲ್ಲ.