ಕಾರ್ಪೊರೆಟ್ ವಲಯಕ್ಕೆ 1.45 ಲಕ್ಷ ಕೋಟಿ ರುಪಾಯಿ ತೆರಿಗೆ ಲಾಭದ ಉಡುಗೊರೆ ನೀಡಿ, ತಿಂಗಳಿಗೆ ಮುಂಚೆಯೇ ಕಾರ್ಪೊರೆಟ್ ದಿಗ್ಗಜಗಳು ದೀಪಾವಳಿ ಆಚರಿಸಿಕೊಳ್ಳಲು ಕಾರಣರಾಗಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹತಾಶರಾಗಿದ್ದಾರೆಯೇ? ಅಥವಾ ಎನ್ ಡಿ ಎ-2 ಸರ್ಕಾರದ ಕಾರ್ಯತಂತ್ರದಂತೆ ವಾಸ್ತವಿಕ ಸ್ಥಿತಿಯನ್ನು ಮರೆಮಾಚಲು ಗಮನ ಬೇರೆಡೆಗೆ ಸೆಳೆಯಲು ವಿಫಲ ಯತ್ನ ನಡೆಸುತ್ತಿದ್ದಾರೆಯೇ? ವಾರಾಂತ್ಯದಲ್ಲಿನ ಬೆಳವಣಿಗೆಗಳು ಈ ಪ್ರಶ್ನೆ ಹುಟ್ಟುಹಾಕಿವೆ.
ಎನ್ ಡಿ ಎ-2 ಸರ್ಕಾರದಲ್ಲಿ ವಿತ್ತ ಸಚಿವೆಯಾಗಿ ಅಧಿಕಾರ ಗ್ರಹಿಸಿದಂದಿನಿಂದಲೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿದ್ದೆಗೆಡಿಸುವ ವಿದ್ಯಮಾನಗಳು ನಡೆದಿವೆ, ನಡೆಯುತ್ತಿವೆ ಮತ್ತು ಮುಂದೆಯೂ ನಡೆಯಲಿವೆ. ಅದೇನೆಂದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ವಿವಿಧ ಸಂವಿಧಾನಿಕ ಸಂಸ್ಥೆಗಳು ಮತ್ತು ಸ್ವತಂತ್ರ ಸಂಸ್ಥೆಗಳು ನಿಖರ ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಜಿಡಿಪಿ ಮುನ್ನಂದಾಜನ್ನು 80 ಮೂಲ ಅಂಶಗಳಷ್ಟು ತಗ್ಗಿಸಿದ್ದರೆ, ಇತ್ತ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹ ಜಿಡಿಪಿ ಮುನ್ನಂದಾಜನ್ನು ಅನಿರೀಕ್ಷಿತ ಎನ್ನಿಸುವಷ್ಟು ದೊಡ್ಡ ಪ್ರಮಾಣದಲ್ಲಿ ತಗ್ಗಿಸಿವೆ. ಭಾರತದ ಜಿಡಿಪಿ ಮುನ್ನಂದಾಜನ್ನು ತಗ್ಗಿಸುವ ವಿಷಯದಲ್ಲಿ ಜಾಗತಿಕ ರೇಟಿಂಗ್ ಏಜೆನ್ಸಿಗಳೂ ಹಿಂದೆ ಬಿದ್ದಿಲ್ಲ.
ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿಜಕ್ಕೂ ಆಘಾತವಾಗಿರುವುದು ಅವರ ದೀರ್ಘಕಾಲದ ಸಂಗಾತಿ ಪರಕಾಲ ಪ್ರಭಾಕರ್ ಅವರೇ ಎನ್ ಡಿ ಎ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದ್ದಾರೆ, ಅಷ್ಟೇ ಅಲ್ಲದೇ ಎನ್ ಡಿ ಎ ಶತಾಯ ಗತಾಯ ವಿರೋಧಿಸುತ್ತಿರುವ ಮತ್ತು ತನ್ನೆಲ್ಲ ಎಲ್ಲಾ ವೈಫಲ್ಯಗಳನ್ನು ವರ್ಗಾಯಿಸುತ್ತಿರುವ ಯುಪಿಎ ಸರ್ಕಾರದ ಆರ್ಥಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರಿಗೆ ಆಘಾತ ಆಗಲು ಎರಡು ಕಾರಣಗಳಿವೆ ಒಂದು- ತಮ್ಮ ಸಂಗಾತಿಗೆ ತಮ್ಮ ಆರ್ಥಿಕ ನೀತಿಗಳನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ ಎಂಬುದಾದರೆ ಮತ್ತೊಂದು- ಅವರ ಸಂಗಾತಿ ಸಾಮಾನ್ಯ ವ್ಯಕ್ತಿಯಲ್ಲ, ಅವರು ರಾಜಕೀಯ ಆರ್ಥಿಕ ತಜ್ಞ. ಅಂದರೆ, ದೇಶದ ರಾಜಕೀಯ ಮತ್ತು ಆರ್ಥಿಕತೆ ಎರಡನ್ನೂ ಅರಿತವರು. ಒಬ್ಬ ರಾಜಕೀಯ ಆರ್ಥಿಕತಜ್ಞ ತಮ್ಮ ಪತ್ನಿಗೆ ಮತ್ತು ಪತ್ನಿ ಪ್ರತಿನಿಧಿಸುವ ಸರ್ಕಾರಕ್ಕೆ ಸಾರ್ವಜನಿಕವಾಗಿ ಅಂದರೆ ದಿನಪತ್ರಿಕೆಯ ಅಂಕಣದ ಮೂಲಕ ನಿಮ್ಮ ಆರ್ಥಿಕ ನೀತಿಯನ್ನು ಬದಲಿಸಿಕೊಳ್ಳಿ ಎಂದು ಸಲಹೆ ಮಾಡಿದರೆ ಅದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.
ಇದರಿಂದ ಎನ್ ಡಿ ಎ ಸರ್ಕಾರಕ್ಕೆ ಮುಜುಗರವಾಗಿರುವಷ್ಟೇ ಆಘಾತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗಾಗಿದೆ. ಈ ಹಂತದಲ್ಲಿ ಅವರೇನು ಮಾಡಬಹುದಿತ್ತು? ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಸುಧಾರಣೆಗೆ ಪ್ರಯತ್ನಿಸಬಹುದಿತ್ತು. ಇಲ್ಲವೇ ಪತಿಯ ಸಲಹೆಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ, ಅವರು ಬೇರೆಯೇ ದಾರಿ ಹಿಡಿದರು, ಅದು ಎನ್ ಡಿ ಎ ಸರ್ಕಾರದ ಕಾರ್ಯತಂತ್ರವೂ ಹೌದು.
ಅದೇನೆಂದರೆ- ಪತಿ ಯಾರ ಆರ್ಥಿಕ ನೀತಿಯನ್ನು ಅನುಸರಿಸುವಂತೆ ಸಲಹೆ ಮಾಡಿದ್ದರೋ ಅವರ ವಿರುದ್ಧವೇ ದೇಶದ ಈಗಿನ ದುಸ್ಥಿತಿಗೆ ಕಾರಣ ಎಂದು ಆರೋಪ ಮಾಡಿದರು. ದೇಶದಲ್ಲೀಗ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಹಂತಕ್ಕೆ ತಲುಪಿದೆ. ನಿಷ್ಕ್ರಿಯ ಆಸ್ತಿ (NPA) ಹತ್ತು ಲಕ್ಷ ಕೋಟಿ ರುಪಾಯಿ ದಾಟಿದೆ. ಇದಕ್ಕೆಲ್ಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರೇ ಕಾರಣ ಎಂಬರ್ಥದಲ್ಲಿ ಆರೋಪ ಮಾಡಿದರು. ಆದರೆ, ಆರೋಪ ಮಾಡುವ ಮುನ್ನ ನಿರ್ಮಲಾ ಸೀತಾರಾಮನ್ ಅವರು ಅಂಕಿ ಅಂಶಗಳತ್ತ ಗಮನ ಹರಿಸಲೇ ಇಲ್ಲ.
ದೇಶದಲ್ಲಿನ ದುಃಸ್ಥಿತಿಗೆ ಯುಪಿಎ ಸರ್ಕಾರವೇ ಕಾರಣ ಎಂಬ ಸಾರ್ವತ್ರಿಕ ಆರೋಪವನ್ನು ಬಿಜೆಪಿ ಕಳೆದ ಐದೂವರೆ ವರ್ಷಗಳಿಂದಲೂ ಮಾಡುತ್ತಲೇ ಬಂದಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ವಿತ್ತ ಸಚಿವೆ ಹಿಂದಿನ ಪ್ರಧಾನಿ ಮತ್ತು ಹಿಂದಿನ ಆರ್ಬಿಐ ಗವರ್ನರ್ ವಿರುದ್ಧ ನಿರ್ಧಿಷ್ಟವಾಗಿ ಆರೋಪ ಮಾಡುವಾಗ ಕನಿಷ್ಠ ಅಂಕಿ ಅಂಶಗಳ ರಕ್ಷಣೆಯನ್ನಾದರೂ ಪಡೆಯಬೇಕು. ಆದರೆ, ನಿರ್ಮಲಾ ಸೀತರಾಮನ್ ಅವರು ಮಾಡಿರುವ ಆರೋಪ ಹತಾಶೆಯ ಪರಾಕಾಷ್ಠೆ ಎನಿಸುತ್ತಿದೆ.
ಏಕೆಂದರೆ- ಯುಪಿಎ ಸರ್ಕಾರದ ಎರಡು ಅವಧಿಯಲ್ಲಿನ ಆರ್ಥಿಕ ಅಭಿವೃದ್ಧಿಯು ನರೇಂದ್ರ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅಭಿವೃದ್ಧಿಗಿಂತ ಹೆಚ್ಚಾಗಿತ್ತು. ರಾಷ್ಟ್ರೀಯ ಸಾಂಖಿಕ ಆಯೋಗ (NSC) ರಚಿಸಿದ್ದ ವಾಸ್ತವಿಕ ವಲಯಗಳ ಅಂಕಿಅಂಶಗಳ ಕುರಿತಾದ ಸಮಿತಿಯು ಸಲ್ಲಿಸಿದ್ದ ಕರಡು ಅಂಕಿಅಂಶಗಳಲ್ಲಿ ಎನ್ ಡಿ ಎ ಸರ್ಕಾರದ ಸಾಧನೆಯು ಯುಪಿಎ ಸರ್ಕಾರದ ಸಾಧನೆಗಿಂತ ಕಳಪೆಯಾಗಿದೆ ಎಂಬುದನ್ನು ಸೂಚಿಸಿತ್ತು. ಆದರೆ, ಎನ್ ಡಿ ಎ ಸರ್ಕಾರ ಸುದಿಪ್ತೊ ಮಂಡಲ್ ನೇತೃತ್ವದ ಸಮಿತಿಯ ಅಂಕಿ ಅಂಶಗಳನ್ನು ನಿರಾಕರಿಸಿತ್ತಲ್ಲದೇ ಹೊಸದಾಗಿ ತಿರುಚಿದ ಅಂಕಿ ಅಂಶಗಳನ್ನು ಪ್ರಕಟಿಸಿ, ಯುಪಿಎ ಸರ್ಕಾರದ ಅವಧಿಯಲ್ಲಿನ ಜಿಡಿಪಿ ದರವನ್ನು ಶೇ. 0.5ರಿಂದ 2.5ರಷ್ಟು ತಗ್ಗಿಸಿತು. ಕರಡು ವರದಿಯಲ್ಲಿ ಕಳಪೆಯಾಗಿದ್ದ ತನ್ನ ಸಾಧನೆಯ ಅಂಕಿಅಂಶಗಳನ್ನು ತಿರುಚಿ ತನ್ನದೇ ಶ್ರೇಷ್ಠ ಸಾಧನೆ ಎಂದು ಘೋಷಿಸಿಕೊಂಡಿತು. ಜಿಡಿಪಿ ಲೆಕ್ಕಚಾರದ ಮಾನದಂಡಗಳನ್ನೇ ಬದಲಾಯಿಸಿತು. ಇದಾದ ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಕಟಿಸುವ ಯಾವುದೇ ಅಂಕಿ ಅಂಶಗಳ ಬಗ್ಗೆಯೂ ದೇಶೀಯ ಅರ್ಥಶಾಸ್ತ್ರಜ್ಞರಲ್ಲದೇ, ವಿಶ್ವಬ್ಯಾಂಕ್, ಐಎಂಎಫ್, ಜಾಗತಿಕ ರೇಟಿಂಗ್ ಸಂಸ್ಥೆಗಳು ಅನುಮಾನದಿಂದಲೇ ನೋಡಲಾರಂಭಿಸಿವೆ.
ಬ್ಯಾಂಕುಗಳ ದುಸ್ಥಿತಿಗೆ ಯಾರು ಕಾರಣ?
ಈಗ ಮುಖ್ಯ ವಿಷಯ ಏನೆಂದರೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ನಿರ್ಧಿಷ್ಟ ಆರೋಪ ಏನೆಂದರೆ- ಬ್ಯಾಂಕುಗಳ ದುಸ್ಥಿತಿಗೆ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರು ಕಾರಣ ಎಂಬುದು.
2014ರ ಚುನಾವಣಾ ಪ್ರಮಾಳಿಕೆಯಲ್ಲಿ ಬಿಜೆಪಿ ಬ್ಯಾಂಕಿಂಗ್ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಭರವಸೆಯನ್ನೂ ನೀಡಿತ್ತು. ನಿಷ್ಕ್ರಿಯ ಸಾಲದ ಸಮಸ್ಯೆ ನಿವಾರಿಸುವುದಾಗಿಯೂ ಹೇಳಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ನಿವ್ವಳ ನಿಷ್ಕ್ರಿಯ ಸಾಲವು 2014 ಜೂನ್ 30ಕ್ಕೆ 2.24 ಲಕ್ಷ ಕೋಟಿ ರುಪಾಯಿಗಳಷ್ಟು ಇತ್ತು. ಈ ಮೊತ್ತವು 2017 ಡಿಸೆಂಬರ್ 30ರ ವೇಳೆಗೆ 7.23 ಲಕ್ಷ ಕೋಟಿಗೆ ಏರಿತ್ತು. ಇತ್ತೀಚಿನ ಕರಡು ಅಂಕಿ ಅಂಶಗಳ ಪ್ರಕಾರ ಎನ್ ಡಿ ಎ ಪ್ರಮಾಣ 10 ಲಕ್ಷ ಕೋಟಿ ರುಪಾಯಿಗಳನ್ನು ದಾಟಿದೆ. ಅಂದರೆ, ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ನಿಷ್ಕ್ರಿಯ ಸಾಲದ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ ಮತ್ತು ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ.
ಅಧಿಕಾರಕ್ಕೆ ಬಂದಾಗ 2.24 ಲಕ್ಷ ಕೋಟಿ ಇದ್ದ ನಿಷ್ಕ್ರಿಯ ಸಾಲವನ್ನು ನರೇಂದ್ರಮೋದಿ ಸರ್ಕಾರ ತಗ್ಗಿಸಬಹುದಿತ್ತು, ಅಥವಾ ಹೆಚ್ಚಾಗದಂತೆ ನೋಡಿಕೊಳ್ಳಬಹುದಿತ್ತು. ಆದರೆ, ಹಾಗೇನೂ ಆಗದೇ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಮತ್ತೊಂದು ಸತ್ಯ ಏನೆಂದರೆ 1.45 ಲಕ್ಷ ಕೋಟಿ ರುಪಾಯಿಗಳ ತೆರಿಗೆ ಕಡಿತದ ಉಡುಗೊರೆ ಪಡೆದಿರುವ ಕಾರ್ಪೊರೆಟ್ ವಲಯದ ಭಾರೀ ಕುಳಗಳೇ ಶೇ. 90ಕ್ಕಿಂತ ಹೆಚ್ಚು ನಿಷ್ಕ್ರಿಯ ಸಾಲದ ಭಾಧ್ಯಸ್ಥರಾಗಿದ್ದಾರೆ. ಅದರಲ್ಲೂ ಮೋದಿ ಆಪ್ತ ಉದ್ಯಮಿಗಳ ಪಾಲು ಶೇ. 50ಕ್ಕಿಂತಲೂ ಹೆಚ್ಚಿದೆ. ನಿಷ್ಕ್ರಿಯ ಸಾಲ ತಡೆಗಟ್ಟುವಲ್ಲಿ ವಿಫಲವಾದರೂ ನಿರ್ಮಲಾ ಸೀತಾರಾಮನ್ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರ ಮೇಲೆ ಆರೋಪ ಮಾಡಿದ್ದಾರೆ.
ಅವರ ಆರೋಪದಲ್ಲಿ ಹುರುಳಿಲ್ಲ ಎಂಬುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಮತ್ತಷ್ಟು ಅಂಕಿ ಅಂಶಗಳು ಇಲ್ಲಿವೆ ನೋಡಿ.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳ ತೀವ್ರ ಪ್ರಮಾಣದಲ್ಲಿ ಹೆಚ್ಚಿವೆ. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಈ ಐದೂವರೆ ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳಿಗೆ ವಂಚನೆ ಮಾಡಿರುವ ಮೊತ್ತವು 2.06 ಲಕ್ಷ ಕೋಟಿ ರುಪಾಯಿಗಳಷ್ಟಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕವೊಂದರಲ್ಲೇ ರೂ. 31,898.63 ಕೋಟಿಗಳಷ್ಟನ್ನು 18 ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚಿಸಲಾಗಿದೆ.
ಕಳೆದ ಹನ್ನೊಂದು ವರ್ಷಗಳ ಪೈಕಿ ಮೊದಲ ಆರು ವರ್ಷಗಳಲ್ಲಿ ಸುಮಾರು ರೂ 31,000 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಿದ್ದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಐದು ವರ್ಷಗಳಲ್ಲಿ ರೂ 1,74,797.67 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಲಾಗಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿನ ವಂಚನೆ ಮೊತ್ತ ರೂ 31,898.63 ಕೋಟಿಗಳೂ ಸೇರಿದರೆ ಮೋದಿ ಸರ್ಕಾರದ ಅವಧಿಯಲ್ಲಿ ಒಟ್ಟು ರೂ 2.06 ಲಕ್ಷ ಕೋಟಿಯಷ್ಟು ವಂಚನೆ ನಡೆದಿದೆ. 2008-09ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 1,860.09 ಕೋಟಿ. 2018-19ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 71,542.93 ಕೋಟಿ. ಅಂದರೆ, ಈ ಹತ್ತು ವರ್ಷಗಳಲ್ಲಿ ವಂಚನೆ ಪ್ರಮಾಣ 38 ಪಟ್ಟು ಹೆಚ್ಚಳವಾಗಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಅಂದರೆ 2014-15ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ರೂ 19,455.07 ಕೋಟಿಗಳಷ್ಟು ವಂಚನೆಯಾಗಿದೆ. 2015-16ರಲ್ಲಿ ರೂ 18,698.82 ಕೋಟಿ, 2016-17ರಲ್ಲಿ ರೂ 23,933.85 ಕೋಟಿಗಳಷ್ಟು ವಂಚನೆಯಾಗಿದೆ. 2017-18ರಲ್ಲಿ ಬ್ಯಾಂಕುಗಳಿಗೆ ವಂಚಿಸಿದ ಮೊತ್ತವು ರೂ 41,167 ಕೋಟಿಗೆ ಜಿಗಿದಿದೆ. 2018-19ನೇ ಸಾಲಿನಲ್ಲಿ ಈ ಮೊತ್ತ ರೂ 71,542.93 ಕೋಟಿ ರುಪಾಯಿಗಳಷ್ಟಾಗಿದೆ. ಅಂದರೆ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತಕ್ಕೆ ಹೋಲಿಸಿದರೆ ನಂತರದ ನಾಲ್ಕು ವರ್ಷಗಳಲ್ಲಿ ವಂಚಿಸಲಾದ ಮೊತ್ತ ನಾಲ್ಕು ಪಟ್ಟು ಜಿಗಿದಿದೆ. ನಿರ್ಮಲಾ ಸೀತಾರಾಮನ್ ಅವರು ಹೇಳಿದ ಸತ್ಯದಂತಿರುವ ಸುಳ್ಳುಗಳು ಇವೇ!