ಮೂರು ಬಾರಿ ನೇಣು ಕುಣಿಕೆಯಿಂದ ಪಾರಾಗಿದ್ದ ನಿರ್ಭಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗ ಅಪರಾಧಿಗಳು ಈಗ ಮತ್ತೊಂದು ಬಾರಿ ನೀಡಲಾಗಿರುವ ಡೆತ್ ವಾರೆಂಟ್ ಅನ್ನು ತಳ್ಳಿ ಹಾಕಲು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ, ಈಗ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ತನ್ನ ದಯಾ ಅರ್ಜಿಯನ್ನು ರದ್ದುಗೊಳಿಸಲು ದೆಹಲಿ ಉಪ ಮುಖ್ಯಮಂತ್ರಿಗಳಿಗೆ ಅರ್ಹತೆಯೇ ಇರಲಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾನೆ.
ವಿನಯ್ ಶರ್ಮಾನ ದಯಾ ಅರ್ಜಿಯನ್ನು ವಜಾಗೊಳಿಸುವ ಸಂದರ್ಭ ದೆಹಲಿಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಆ ಕಾರಣಕ್ಕಾಗಿ, ದೆಹಲಿಯ ಉಪ ಮುಖ್ಯಮಂತ್ರಿಗಳಾದ ಮನೀಷ್ ಸಿಸೋಡಿಯಾ ಅವರಿಗೆ ಅರ್ಜಿಯನ್ನು ವಜಾಗೊಳಿಸಲು ಅನರ್ಹರಾಗಿದ್ದರು. ಫೆಬ್ರುವರಿ 8ರಂದು ನಡೆದ ಚುನಾವಣೆಗಾಗಿ ಮನೀಷ್ ಸಿಸೋಡಿಯಾ ಪ್ರಚಾರ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ದಯಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ, ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಮನೀಷ್ ಸಿಸೋಡಿಯಾ ಅವರ ಡಿಜಿಟಲ್ ಸಹಿಯ ಅಗತ್ಯವಿತ್ತು. ಆದರೆ, ಅವರು ಕೇವಲ ವಾಟ್ಸಾಪ್ ಸ್ಕ್ರೀನ್‌ಶಾಟ್ ಕಳುಹಿಸಿದ್ದಾರೆ. ಹಾಗಾಗಿ ದಯಾ ಅರ್ಜಿಯನ್ನು ತಿರಸ್ಕರಿಸಿದ್ದ ಊರ್ಜಿತವಾಗುವುದಿಲ್ಲ ಎಂಬ ಅಂಶವನ್ನು ಇಲ್ಲಿ ಒತ್ತಿ ಹೇಳಲಾಗಿದೆ.
ಇತ್ತೀಚಿಗೆ ಜೈಲಿನ ಗೋಡೆಗೆ ತನ್ನ ಹಣೆಯನ್ನು ಜಜ್ಜಿ ಗಾಯಗೊಳಿಸಿ ಆ ನೆಪದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ವಿನಯ್ ಶರ್ಮಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಲೆಗೆ ತೀವ್ರವಾದ ಗಾಯವಾಗಿದೆ, ಬಲ ಭುಜದ ಮೂಳೆ ಮುರಿದು ಹೋಗಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಹಾಗೂ ಸ್ಕಿಜೋಫ್ರೇನಿಯಾ (ಮಾನಸಿಕ ರೋಗ) ದಿಂದ ಬಳಲುತ್ತಾ ಇದ್ದೇನೆ ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇನ್ನು, ತಲೆಗೆ ಏಟಾಗಿರುವುದರಿಂದ ತನಗೆ ತನ್ನ ಸ್ವಂತ ತಾಯಿಯನ್ನು ಕೂಡಾ ಗುರುತು ಹಿಡಿಯಲಾಗುತ್ತಿಲ್ಲ, ನನ್ನ ವಕೀಲರು ಯಾರೆಂಬುದು ಕೂಡ ಗುರುತು ಹಿಡಿಯಲಾಗುತ್ತಿಲ್ಲ, ಎಂದು ಹೇಳಿದ್ದಾನೆ.
ಜೈಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ವಿನಯ್ ಶರ್ಮಾ ಖುದ್ದು ತನ್ನ ತಲೆ ಹಾಗೂ ಭುಜವನ್ನು ಗೋಡೆಗೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾನೆ.
ಇನ್ನುಳಿದ ಮೂವರು ಅಪರಾಧಿಗಳಾದ ಅಕ್ಷಯ್ ಠಾಕೂರ್, ಮುಖೇಶ್ ಸಿಂಗ್ ಹಾಗೂ ಪವನ್ ಗುಪ್ತಾ ಅವರಿಗೆ ಮಾರ್ಚ್ 3ರಂದು ಬೆಳಿಗ್ಗಿನ ಜಾವ 6 ಗಂಟೆಗೆ ಸರಿಯಾಗಿ ನೇಣಿಗೆ ಏರಿಸಬೇಕೆಂದು ಡೆತ್ ವಾರೆಂಟ್ ಹೊರಡಿಸಲಾಗಿದೆ. ಮೂರು ಬಾರಿ ಡೆತ್ ವಾರೆಂಟ್ ಹೊರಡಿಸಿದ್ದರೂ, ಕಾನೂನಿನಲ್ಲಿರುವ ದೋಷಗಳನ್ನು ಅರಿತು ನೇಣು ಕುಣಿಕೆಯಿಂದ ಪಾರಾಗುತ್ತಿದ್ದ ಅಪರಾಧಿಗಳದ್ದು ಹೊಸ ವರಸೆ ಆರಂಭವಾಗಿದೆ. ಈ ಬಾರಿಯಾದರೂ, ಅವರು ಮಾಡಿರುವ ಪಾಪಕ್ಕೆ ಶಿಕ್ಷೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.