ನೀವು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಹಬ್ಬ ಹರಿದಿನ, ಮದುವೆ ಸಂಭ್ರಮಗಳ ಹೊತ್ತಿನಲ್ಲಿ ಖರೀದಿಸಿಟ್ಟ ಚಿನ್ನ ಹೆಚ್ಚು ಸುರಕ್ಷಿತ ಎಂದೇ ನೀವು ಭಾವಿಸಿದ್ದೀರಾದರೆ, ನಿಮಗೆ ಆತಂಕ ತರಬಹುದಾದ ಸುದ್ದಿ ಇದು !
ನೀವು ನಿಮ್ಮಲ್ಲಿರುವ ಚಿನ್ನದ ಪ್ರಮಾಣವನ್ನು ಘೋಷಣೆ ಮಾಡಿಕೊಳ್ಳಬೇಕು. ಮತ್ತು ಚಿನ್ನ ಖರೀದಿಸಿದ್ದಕ್ಕೆ ದಾಖಲೆ ಒದಗಿಸಬೇಕು. ಒಂದು ವೇಳೆ ದಾಖಲೆ ಒದಗಿಸದ ಚಿನ್ನದ ಮೇಲೆ ನೀವು ಇಂತಿಷ್ಟು ತೆರಿಗೆ ಪಾವತಿಸಿ ಚಿನ್ನವನ್ನು ಅಧಿಕೃತಗೊಳಿಸಿಕೊಳ್ಳಬಹುದು. ಇದು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ತರಲು ಉದ್ದೇಶಿರುವ ‘ಚಿನ್ನದ ಕ್ಷಮಾದಾನ ಯೋಜನೆ’ಯ ಪ್ರಾಥಮಿಕ ಸ್ವರೂಪ.
ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಿಷ್ಟವಾದ ರೂಪುರೇಷೆಗಳನ್ನೇನೂ ಪ್ರಕಟಿಸಿಲ್ಲ. ಆದರೆ, ಎಲ್ಲವೂ ಪೂರ್ವತಯಾರಿಯ ಹಂತದಲ್ಲಿವೆ ಎಂದು ಐಎಎನ್ಎಸ್ ವರದಿ ಉಲ್ಲೇಖಿಸಿ ಮಿಂಟ್ ಪತ್ರಿಕೆ ವರದಿ ಮಾಡಿದೆ. ವರದಿಯನ್ನು ನಂಬಬಹುದಾದರೆ, ಯಾರ ಬಳಿ ಚಿನ್ನ ಖರೀದಿಸಿದ್ದಕ್ಕೆ ದಾಖಲೆ ಇಲ್ಲವೋ ಅವರು ಚಿನ್ನದ ಮೌಲ್ಯದ ಕನಿಷ್ಠ ಶೇ.30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಜತೆಗೆ ಶೇ.3ರಷ್ಟು ಶೈಕ್ಷಣಿಕ ಉಪಕರ ಹೇರಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ನಿಮ್ಮ ಬಳಿ 10 ತೊಲ ಚಿನ್ನ (ಅಂದರೆ 100 ಗ್ರಾಮ್) ಇದೆ ಎಂದಿಟ್ಟುಕೊಳ್ಳಿ. ಆ ಚಿನ್ನ ಖರೀದಿಸಿದ್ದಕ್ಕೆ ನಿಮ್ಮ ಬಳಿ ಯಾವುದೇ ದಾಖಲೆ ಇರುವುದಿಲ್ಲ. ಆಗ ನೀವು ನಿಮ್ಮ ಚಿನ್ನವನ್ನು ಅಧಿಕೃತವಾಗಿ ಘೋಷಿಸಿಕೊಳ್ಳಬೇಕಾದರೆ, ಶೇ.33 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಈಗ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ ದರ ಪ್ರತಿ 10 ಗ್ರಾಮ್ ಗೆ 40000 ರುಪಾಯಿ ಆಜುಬಾಜಿನಲ್ಲಿದೆ. ನಿಮ್ಮ 100 ಗ್ರಾಮ್ ಚಿನ್ನದ ಮಾರುಕಟ್ಟೆ ಮೌಲ್ಯ 4 ಲಕ್ಷ ರುಪಾಯಿಗಳಾಗುತ್ತದೆ. ಎಂದಾದರೆ ನೀವು 4 ಲಕ್ಷದ ಮೇಲೆ ಶೇ.30ರಷ್ಟು ಅಂದರೆ, 1.32 ಲಕ್ಷ ರುಪಾಯಿಗಳನ್ನು ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ. ನಂತರ ನಿಮ್ಮದು ಅಧಿಕೃತ ಚಿನ್ನವಾಗುತ್ತದೆ.
ನರೇಂದ್ರಮೋದಿ ಸರ್ಕಾರವು ಕಪ್ಪುಹಣವನ್ನು ನಿಗ್ರಹಿಸುವ ಸಲುವಾಗಿ ಈ ಹೊಸ ಚಿನ್ನದ ಕ್ಷಮಾದಾನ ಯೋಜನೆಯನ್ನು ರೂಪಿಸುತ್ತಿದೆ. ಅದನ್ನು ಶೀಘ್ರದಲ್ಲೇ ಯಾವಾಗಬೇಕಾದರೂ ಪ್ರಕಟಿಸುವ ನಿರೀಕ್ಷೆ ಇದೆ. 2016 ನವೆಂಬರ್ 8 ರಂದು ಜಾರಿಗೆ ತಂದ ಅಪನಗದೀಕರಣ ಯೋಜನೆಯ ವೈಫಲ್ಯದ ಪ್ರತಿಫಲವೇ ಈ ಚಿನ್ನ ಕ್ಷಮಾದಾನ ಯೋಜನೆ ಎನ್ನಲಾಗುತ್ತಿದೆ. ಏಕೆಂದರೆ ಕಪ್ಪುಹಣ ನಿಗ್ರಹಿಸಲೆಂದೇ ಮೋದಿ ಸರ್ಕಾರ ಜಾರಿಗೆ ತಂದಿದ್ದ ಅವಪನಗದೀಕರಣ ಯೋಜನೆಯು ಭಾರತ ಇತಿಹಾಸದ ಅತ್ಯಂತ ವೈಫಲ್ಯ ಕಂಡ ಹಣಕಾಸು ಕಾರ್ಯನೀತಿಯಾಗಿ ದಾಖಲಾಗಿದೆ. 2016 ನವೆಂಬರ್ 8 ರಂದು ಅಪನಗದೀಕರಣದ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರವು 500 ಮತ್ತ 1000 ರುಪಾಯಿ ನೋಟುಗಳ ಚಲಾವಣೆ ರದ್ದು ಮಾಡಿತ್ತು. ಆಗ ಚಲಾವಣೆಯಲ್ಲಿ ಇದ್ದ ಒಟ್ಟಾರೆ ನಗದಿನ ಪೈಕಿ ಶೇ.86 ರಷ್ಟು ಪ್ರಮಾಣ ಅಂದರೆ 15.4 ಲಕ್ಷ ಕೋಟಿ ಮೌಲ್ಯದ ನೋಟುಗಳ ಚಲಾವಣೆ ರದ್ದು ಮಾಡಲಾಗಿತ್ತು. ಮೋದಿ ಸರ್ಕಾರವು ರದ್ದಾದ ನೋಟುಗಳ ಪೈಕಿ ಸುಮಾರು 3-4 ಲಕ್ಷ ಕೋಟಿ ರುಪಾಯಿಗಳು ಕಪ್ಪುಹಣವಾಗಿದ್ದು, ಅದು ವಾಪಾಸು ಬ್ಯಾಂಕುಗಳಿಗೆ ಬರುವುದಿಲ್ಲ ಎಂಬ ತಪ್ಪು ಲೆಕ್ಕಚಾರ ಹಾಕಿತ್ತು. ಆದರೆ, ರದ್ದಾದ ನೋಟುಗಳ ಪೈಕಿ ಶೇ.99ರಷ್ಟು ನೋಟುಗಳು ಬ್ಯಾಂಕುಗಳಿಗೆ ವಾಪಾಸಾದವು. ಮೋದಿ ಸರ್ಕಾರದ ಅಪನಗದೀಕರಣ ಯೋಜನೆ ವೈಫಲ್ಯವಾಗಿದ್ದಷ್ಟೇ ಅಲ್ಲ ಇಡೀ ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ತಳ್ಳಿತ್ತು.
ಇಷ್ಟಾದರೂ ಕಪ್ಪು ಹಣದ ವಿರುದ್ಧ ಸಾರಿದ ಸಮರವನ್ನು ನಿಲ್ಲಿಸ ಮೋದಿ ಸರ್ಕಾರವು ನಂತರ 2017ರಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಹೆಸರಿನಡಿ ಐಡಿಎಸ್-2 ಎಂಬ ಕಪ್ಪುಹಣ ಕ್ಷಮಾದಾನ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಡಿ ಕಪ್ಪುಹಣ ಘೋಷಣೆ ಮಾಡಿಕೊಂಡವರು ಘೋಷಣೆ ಮಾಡಿದ ಮೊತ್ತದ ಮೇಲೆ ಶೇಕಡ ಇಂತಿಷ್ಟು ತೆರಿಗೆ ಪಾವತಿಸಿದ ನಂತರ ಬಿಳಿ ಹಣ ಅಥವಾ ಅಧಿಕೃತ ಹಣವಾಗಿ ಪರಿವರ್ತಿಸಿಕೊಳ್ಳಬಹುದಾಗಿತ್ತು. ಸೀಮಿತ ಅವಧಿಯ ಐಡಿಎಸ್-2 ಯೋಜನೆಯು ಕೊಂಚ ಯಶಸ್ಸನ್ನು ಕಂಡಿತ್ತು.
ಈಗ ಚಿನ್ನದ ಮೇಲೆಕೆ ಕಣ್ಣು?
ನಗದು ರೂಪದಲ್ಲಿನ ಕಪ್ಪು ಹಣ ಸಂಗ್ರಹಿಸಲು ಸಾಧ್ಯವಾಗದ ಮೋದಿ ಸರ್ಕಾರಕ್ಕೆ ದೇಶದಲ್ಲಿರುವ ಬಹಳಷ್ಟು ಮಂದಿ ಕಪ್ಪುಹಣವನ್ನು ಚಿನ್ನದ ಮೇಲೆ ತೊಡಗಿಸಿದ್ದಾರೆ ಎಂಬ ಬಲವಾದ ನಂಬಿಕೆ ಇದೆ. ಹೀಗಾಗಿ ಅಪನಗದೀಕರಣದ ನಂತರ ಈಗ ಚಿನ್ನದ ಮೇಲೆ ಕಪ್ಪುಹಣದ ಬ್ರಹ್ಮಾಸ್ತ್ರ ಬಿಡಲು ಮೋದಿ ಸರ್ಕಾರ ಸಿದ್ದತೆ ನಡೆಸಿದೆ. ವಾಸ್ತವವಾಗಿ ಇದು ಕಾರ್ಯಸಾಧ್ಯ ಯೋಜನೆಯೇ ಎಂಬುದು 5 ಟ್ರಿಲಿಯನ್ ಡಾಲರ್ ಪ್ರಶ್ನೆಯಂತೂ ಹೌದು.
ಜಗತ್ತಿನ ಚಿನ್ನದ ಸಂಗ್ರಹದ ಪೈಕಿ ಭಾರತ ಮೂರನೇ ಸ್ಥಾನದಲ್ಲಿ ಇದ್ದರೂ ಗೃಹಬಳಕೆ ಚಿನ್ನದ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲೇ ಇದೆ. ಚಿನ್ನ ಇಲ್ಲದೇ ನಿಶ್ಛಿತಾರ್ಥ, ಮದುವೆ, ನಾಮಕರಣ ಕಾರ್ಯಕ್ರಮಗಳು ನಡೆಯುವುದೇ ಇಲ್ಲ. ಚಿನ್ನ ನಮ್ಮ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ. ಶ್ರೀಮಂತರಿರಲಿ, ಬಡವರೇ ಇರಲಿ ಮದುವೆ ಹೊತ್ತಿಗೆ ಚಿನ್ನದ ತಾಳಿ, ಸರ ಹಾಕಲೇ ಬೇಕು, ಕನಿಷ್ಠ ಚಿನ್ನದ ತಾಳಿಯನ್ನಾದರೂ ಹಾಕಿಯೇ ಹಾಕುತ್ತಾರೆ. 90ರ ದಶಕದ ಉದಾರೀಕರಣ, ಜಾಗತೀಕರಣದ ಪ್ರತಿಫಲವಾಗಿ ಜನಸಾಮಾನ್ಯರ ಆದಾಯವೂ ಹೆಚ್ಚಳವಾಗಿದೆ. ಅಸಂಘಟಿತ ವಲಯದಲ್ಲಿನ ಜನರು, ಅಂದರೆ, ರೈತರು, ಕಾರ್ಮಿಕರು, ಸಣ್ಣವ್ಯಾಪಾರಿಗಳು ತಮ್ಮ ಉಳಿತಾಯವನ್ನು ಬ್ಯಾಂಕುಗಳಲ್ಲಿ , ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಬದಲು ಚಿನ್ನದ ರೂಪದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ ಭಾರತದಲ್ಲಿ ಬಳಕೆಯಾಗುವ ಚಿನ್ನದ ಪ್ರಮಾಣ ಹೆಚ್ಚುತ್ತಲೇ ಇದೆ. ಸಂಘಟಿತ ವಲಯದಲ್ಲಿ ಚಿನ್ನವನ್ನು ಭೌತಿಕ ಸ್ವರೂಪದಲ್ಲಿ ಖರೀದಿ ಮಾಡುವ ಬದಲು ಬಾಂಡ್ ಗಳ ಮೂಲಕ ಡಿಮ್ಯಾಟ್ ರೂಪದಲ್ಲಿ ಹೂಡಿಕೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಚಿನ್ನದ ಮೇಲಿನ ಸಂಘಟಿತ ವಲಯದ ಹೂಡಿಕೆ ಪ್ರಮಾಣವು ಅತ್ಯಲ್ಪ ಇದೆ. ಈಗಲೂ ಶೇ.90ರಷ್ಟು ಜನ ಚಿನ್ನವನ್ನು ಅದರಲ್ಲೂ ಆಭರಣ ರೂಪದಲ್ಲೇ ಖರೀದಿಸುತ್ತಿದ್ದಾರೆ.
ಈ ಪೈಕಿ ಬಹಳಷ್ಟು ಕಪ್ಪು ಹಣವು ಚಿನ್ನ ಖರೀದಿಗೆ ಬಳಕೆಯಾಗುತ್ತಿದೆ ಎಂಬುದು ಮೋದಿ ಸರ್ಕಾರದ ಲೆಕ್ಕಾಚಾರ. ಹೀಗಾಗಿ ಕಪ್ಪುಹಣ ಕ್ಷಮಾದಾನ ಯೋಜನೆಯಂತೆಯೇ ಚಿನ್ನದ ಕ್ಷಮಾದಾನ ಯೋಜನೆಯನ್ನು ಜಾರಿಗೆ ತರುತ್ತಿದೆ. ಚಿನ್ನದ ರೂಪದಲ್ಲಿರುವ ಕಪ್ಪುಹಣವನ್ನು ಪತ್ತೆಹಚ್ಚುವುದು ಈ ಯೋಜನೆಯ ಉದ್ದೇಶ. ಈ ಹಿಂದೆ ನೀತಿ ಆಯೋಗವು ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸಿ, ವಿದೇಶಿ ವಿನಿಮಯ ಉಳಿಸುವ ಸಲುವಾಗಿ ಚಿನ್ನದ ಮೇಲಿನ ಹೂಡಿಕೆಗೆ ಪರ್ಯಾಯ ಮಾರ್ಗವನ್ನು ಸೂಚಿಸಿತ್ತು. ಆಗ ಚಿನ್ನದ ಘೋಷಣೆ ಯೋಜನೆಯು ಒಂದಾಗಿತ್ತು.
ದೇಶದ ಜನರು ಹೊಂದಿರುವ ಚಿನ್ನದ ಪ್ರಮಾಣವು 20000 ಟನ್ ಎಂದು ಅಂದಾಜು ಮಾಡಲಾಗಿದೆ. ಲೆಕ್ಕವಿಲ್ಲದ ಆಮದು, ಪೂರ್ವಜರಿಂದ ಬಂದ ದಾಖಲೆಯಿಲ್ಲದ ಚಿನ್ನ ಇವೆಲ್ಲವನ್ನು ಪರಿಗಣಿಸಿದರೆ ಚಿನ್ನದ ಪ್ರಮಾಣವು 25000-30000 ಟನ್ ಗಳಷ್ಟಾಗಬಹುದು. ಇದು ಪ್ರಸ್ತುತ ಚಿನ್ನದ ಮಾರುಕಟ್ಟೆ ದರಕ್ಕೆ ಪರಿವರ್ತಿಸಿದರೆ ಸುಮಾರು 1-1.5 ಟ್ರಿಲಿಯನ್ ಡಾಲರ್ ಗಳಷ್ಟಾಗುತ್ತದೆ. ಇದನ್ನು ಪ್ರಸ್ತುತ ಡಾಲರ್ ನ ರುಪಾಯಿಯ ವಿನಿಮಯ ಮೌಲ್ಯಕ್ಕೆ ಪರಿವರ್ತಿಸಿದರೆ 70-105 ಲಕ್ಷ ಕೋಟಿ ರುಪಾಯಿಗಳಾಗುತ್ತದೆ. ಅಂದರೆ, ನೋಟು ರದ್ದು ಮಾಡಿದ ಪ್ರಮಾಣಕ್ಕೆ ಹೋಲಿಸಿದರೆ, ಐದರಿಂದ ಎಂಟು ಪಟ್ಟು ಹೆಚ್ಚಳವಾಗುತ್ತದೆ. ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ನ 3-4 ಪಟ್ಟು ಹೆಚ್ಚಾಗುತ್ತದೆ.
ಮೋದಿ ಸರ್ಕಾರದ ಆರ್ಥಿಕತಜ್ಞರ ಸರಳ ಅಂಕಗಣಿತ ಇದಾಗಿರಬಹುದು- ಸುಮಾರು 70-105 ಲಕ್ಷ ಕೋಟಿ ಮೌಲ್ಯದ ಚಿನ್ನದ ಪೈಕಿ ಶೇ.5-10ರಷ್ಟು ದಾಖಲೆ ಇಲ್ಲದ್ದು ಎಂದು ಘೋಷಣೆ ಆದರೂ ಅದರ ಮೊತ್ತ ಸುಮಾರು 7-10 ಲಕ್ಷ ಕೋಟಿಯಾಗುತ್ತದೆ. ಈ ಮೊತ್ತದ ಮೇಲೆ ಶೇ.3ರಷ್ಟು ಶೈಕ್ಷಣಿಕ ಉಪಕರ ಸೇರಿ ಶೇ.33ರಷ್ಟು ತೆರಿಗೆ ಹಾಕಿದರೆ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 2.5-4.5 ಲಕ್ಷ ಕೋಟಿ ನಿರಾಯಾಸವಾಗಿ ಹರಿದು ಬರುತ್ತದೆ.
ಭಾರತದಂತಹ ಸಂಕೀರ್ಣ ಆರ್ಥಿಕವ್ಯವಸ್ಥೆ ಮತ್ತು ಜೀವನಶೈಲಿಯಲ್ಲಿ ಇಂತಹ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಅತಿಕಷ್ಟ. ಏನಾದರೂ ಸರಿ ಕಪ್ಪುಹಣ ನಿಗ್ರಹಿಸುತ್ತೇವೆ ಎಂದು ಅಪನಗದೀಕರಣದ ಎಂಬ ದುಸ್ಸಾಹಸ ಮಾಡಿದ ಮೋದಿ ಸರ್ಕಾರವು ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿದೆ.
ಸರ್ಕಾರ ಅಧಿಕೃತವಾಗಿ ಚಿನ್ನದ ಕ್ಷಮಾದಾನ ಯೋಜನೆಯ ತೆರಿಗೆ ಪ್ರಮಾಣ ಮತ್ತಿತರ ನಿಯಮಗಳನ್ನು ಪ್ರಕಟಿಸಿದ ನಂತರವಷ್ಟೇ ಈ ಯೋಜನೆ ಸಾಫಲ್ಯ-ವೈಫಲ್ಯತೆಗಳನ್ನು ಅಂದಾಜಿಸಲು ಸಾಧ್ಯ.