ಎರಡು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಮೂಲ ಆಶಯವನ್ನು ದುರ್ಬಲಗೊಳಿಸಿದೆ ಎಂಬ ಆಕ್ರೋಶಕ್ಕೆ ಕಾರಣವಾಗಿದ್ದ ವಿವಾದಾತ್ಮಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಇದೀಗ ಮತ್ತೊಂದು ಅಂತಹದ್ದೇ ತೀರ್ಪು ನೀಡಿದ್ದು, ನಾಲ್ಕು ಗೋಡೆಯ ನಡುವೆ ಎಸ್ಸಿ/ಎಸ್ಟಿ ಸಮುದಾಯದ ವ್ಯಕ್ತಿಗೆ ಮಾಡುವ ನಿಂದನೆ ಅಥವಾ ಅವಮಾನವನ್ನು ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಯಲ್ಲಿ ಅಪರಾಧ ಎನ್ನಲಾಗದು ಎಂದಿದೆ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಆಕೆಯ ಮನೆಯ ಒಳಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪರಿಶಿಷ್ಟ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧದ ಎಲ್ಲಾ ಬಗೆಯ ಬೆದರಿಕೆ, ದೌರ್ಜನ್ಯ, ಅವಮಾನ ಮತ್ತು ನಿಂದನೆಗಳೆಲ್ಲವನ್ನೂ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ(ಜಾತಿ ನಿಂದನೆ) ವ್ಯಾಪ್ತಿಯ ಅಪರಾಧಗಳೆಂದು ಪರಿಗಣಿಸಲಾಗದು. ಕೇವಲ ಸಂತ್ರಸ್ತರು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದಾರೆ ಎಂಬುದರ ಮೇಲೆ ಅವರ ವಿರುದ್ಧದ ಎಲ್ಲಾ ಬಗೆಯ ಅಪರಾಧಗಳನ್ನೂ ಈ ಕಾಯ್ದೆಯಡಿ ನೋಡಲಾಗದು. ಪರಿಶಿಷ್ಟ ಸಮುದಾಯಗಳಿಗೆ ಸೇರಿದ ವ್ಯಕ್ತಿಯ ವಿರುದ್ಧದ ಅಪರಾಧವನ್ನು ಅವರ ಜಾತಿಯ ಕಾರಣಕ್ಕೆ ಅವರನ್ನು ಅವಮಾನಗೊಳಿಸುವ, ನಿಂದಿಸುವ, ಘನತೆಗೆ ಧಕ್ಕೆ ತರುವ, ಕಿರುಕುಳ ಅಥವಾ ದೌರ್ಜನ್ಯಕ್ಕೆ ಒಳಪಡಿಸುವ ಉದ್ದೇಶದಿಂದಲೇ ನಡೆಸಿದ್ದರೆ ಮಾತ್ರ ಅದನ್ನು ಈ ಕಾಯ್ದೆಯಡಿ ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಸಾರ್ವಜನಿಕವಾಗಿ, ಸಾಕ್ಷ್ಯಗಳ ಎದುರಲ್ಲಿ ನಡೆಸಿದ ನಿಂದನೆ ಮತ್ತು ದೌರ್ಜನ್ಯಗಳನ್ನು ಮಾತ್ರ ಜಾತಿ ನಿಂದನೆ ಪ್ರಕರಣವೆಂದು ಪರಿಗಣಿಸಬಹುದು. 2008ರ ತನ್ನದೇ ತೀರ್ಪಿನ ಹಿನ್ನೆಲೆಯಲ್ಲಿ ಈ ‘ಸಾರ್ವಜನಿಕ ಸ್ಥಳ’ ಅಥವಾ ‘ಸಾರ್ವಜನಿಕ ಗಮನದ ಯಾವುದೇ ಸ್ಥಳ’ ಎಂಬುದನ್ನು ಅರ್ಥೈಸಲಾಗಿದೆ ಎಂಬುದನ್ನೂ ಪೀಠ ಸ್ಪಷ್ಟಪಡಿಸಿದೆ.

ಮನೆಯ ಹೊರಗೆ, ಮನೆಯ ಅಂಗಳದಲ್ಲಿ ಸಾರ್ವಜನಿಕರಿಗೆ, ದಾರಿಹೋಕರಿಗೆ ಕಾಣಿಸುವ ರೀತಿಯಲ್ಲಿ ಘಟನೆ ನಡೆದಿದ್ದರೆ ಖಂಡಿತವಾಗಿಯೂ ಅದು ಜಾತಿ ನಿಂದನೆ ಕಾಯ್ದೆಯ ವ್ಯಾಪ್ತಿಯೊಳಗೆ ಬರುತ್ತದೆ. ಆದರೆ, ಒಂದು ವೇಳೆ ಅಂತಹ ನಿಂದನೆ ಮತ್ತು ದೌರ್ಜನ್ಯದ ಘಟನೆ ಮನೆಯ ನಾಲ್ಕು ಗೋಡೆಗಳ ನಡುವೆ, ಸಾರ್ವಜನಿಕರ ಅವಗಾಹನೆಗೆ ಬರದ ರೀತಿಯಲ್ಲಿ ನಡೆದಿದ್ದರೆ, ಅದನ್ನು ಇತರೆ ಕಾನೂನುಗಳಡಿ ಸಾಮಾನ್ಯ ಅಪರಾಧವೆಂದು ಪರಿಗಣಿಸಬಹುದೇ ವಿನಃ, ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲಾಗದು ಎಂಬುದನ್ನು ಪೀಠ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಮಹಿಳೆಯ ಮನೆಯ ನಾಲ್ಕು ಗೋಡೆಯ ನಡುವೆ ಆರೋಪಿ ನಿಂದಿಸಿರುವುದಾಗಿ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಹಾಗಾಗಿ ಜಾತಿ ನಿಂದನೆ ಕಾಯ್ದೆಯ ವ್ಯಾಪ್ತಿಯಲ್ಲಿ ಇದನ್ನು ಅಪರಾಧ ಎಂದು ಪರಿಗಣಿಸಲಾಗದು. ಉಳಿದಂತೆ ಆ ವ್ಯಕ್ತಿಯ ವಿರುದ್ಧದ ಆರೋಪಗಳನ್ನು ಸಾಮಾನ್ಯ ಕಾನೂನುಗಳಡಿ ಪರಿಗಣಿಸಿ, ಪ್ರತ್ಯೇಕ ಪ್ರಕರಣದ ದಾಖಲಿಸಿಕೊಂಡು ವಿಚಾರಣೆ ನಡೆಸಬಹುದು ಎಂದು ನಿರ್ದೇಶನ ನೀಡಿದ ಪೀಠ, ಜಾತಿ ನಿಂದನೆ ಕಾಯ್ದೆಯಡಿ ಸಲ್ಲಿಸಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ.
ಜಾತಿ ನಿಂದನೆ ಕಾಯ್ದೆಯ ಮೂಲ ಆಶಯ, ಯಾವುದೇ ಪರಿಶಿಷ್ಟ ಜಾತಿ/ ಪಂಗಡದ ವ್ಯಕ್ತಿಗಳಿಗೆ ಅವರ ಜಾತಿಯ ಕಾರಣಕ್ಕಾಗಿ ಮಾಡುವ ಅವಮಾನ, ನಿಂದನೆ, ದೌರ್ಜನ್ಯಗಳನ್ನು ತಡೆಯುವುದು ಮತ್ತು ಅಂತಹ ಉದ್ದೇಶಿತ ಕೃತ್ಯಗಳನ್ನು ಎಸಗುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಾಗಿದೆ. ಸಮಾಜದ ದುರ್ಬಲ ಸಮುದಾಯಗಳ ವಿರುದ್ಧ ಮೇಲ್ಜಾತಿಯ ಜನ ನಡೆಸುವ ದಬ್ಭಾಳಿಕೆಯನ್ನು ತಡೆಯುವುದು ಜಾತಿ ನಿಂದನೆ ಕಾಯ್ದೆಯ ಉದ್ದೇಶ. ಆದರೆ, ಅಂತಹ ಸಮುದಾಯಗಳ ಜನರ ವಿರುದ್ಧ ನಡೆಯುವ ಎಲ್ಲಾ ಅಪರಾಧಗಳನ್ನೂ ಈ ಕಾಯ್ದೆಯಡಿ ಜಾತಿ ಉದ್ದೇಶಿತ ಅಪರಾಧಗಳು ಎಂದು ಪರಿಗಣಿಸಲಾಗದು ಎಂಬುದು ತೀರ್ಪಿನ ಸಾರಾಂಶ.