ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ನಿನ್ನೆ ಹುಟ್ಟಿದ್ದಲ್ಲ, ನಾಳೆ ಸಾಯುವಂಥದ್ದೂ ಅಲ್ಲ. ಯುದ್ಧವಂತೂ ಪರಿಹಾರವಲ್ಲ. ಡೊಕ್ಲಾಂದಿಂದ ಗಲ್ವಾನ್ ವರೆಗೆ ತನ್ನ ಸಾರ್ವಭೌಮತ್ವ ಸಾಬೀತುಪಡಿಸಲು ಚೀನಾ ಪದೇ ಪದೇ ಪ್ರಯತ್ನಿಸುತ್ತಿದೆ. ಸದ್ಯ ಎರಡೂ ದೇಶಗಳ ನಡುವಿನ ಒಪ್ಪಂದವನ್ನೂ ಉಲ್ಲಂಘನೆ ಮಾಡಿದೆ. ಪರಿಣಾಮ ಸೈನಿಕರ ನಡುವೆ ಸಂಘರ್ಷವಾಗಿದೆ. ಸೈನಿಕರ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆಗೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ಘಟನೆ ಬಗ್ಗೆ ಪ್ರಧಾನಿ ಮೋದಿ ಅವರಿಂದ ಹಿಡಿದು ಸಂಬಂಧಪಟ್ಟ ಸಚಿವರು, ಸೇನಾಧಿಕಾರಿಗಳು ಮಾತನಾಡಿದ್ದಕ್ಕಿಂತ ಮೌನವಹಿಸಿದ್ದೇ ಹೆಚ್ಚು. ಮಾತಷ್ಟೇ ಅಲ್ಲ, ಯಾವ ರೀತಿಯ ಕ್ರಮಗಳೂ ಆಗಿಲ್ಲ. ಅದರಲ್ಲೂ ಚೀನಾ ಎರಡು ಗುರುತರ ಆರೋಪ ಮಾಡಿದ ಮೇಲೂ ಭಾರತ ಪ್ರತ್ಯುತ್ತರ ನೀಡಿಲ್ಲ. ಆರೋಪ ಒಂದು- ಘಟನೆಗೆ, ಘರ್ಷಣೆಗೆ ಭಾರತ ಕಾರಣ ಎಂದು. ಆರೋಪ ಎರಡು- ಭಾರತ ಗಡಿ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು. ಖಂಡಿತಕ್ಕೂ ಈ ಎರಡೂ ಸಂಗತಿಗಳಿಗೆ ತಕ್ಕ ಜವಾಬು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚೆ ಆಗಬೇಕಿದೆ.
ಆದರೆ ಪ್ರಶ್ನೆ ಇರುವುದು ವಿಪಕ್ಷಗಳ ನಾಯಕರಿಂದ ಸಲಹೆ-ಶಿಫಾರಸುಗಳನ್ನು ಸಂಗ್ರಹಿಸುವ ಮೋದಿ ಅವುಗಳನ್ನು ಪರಮಾರ್ಶಿಸತ್ತಾರಾ? ಅರ್ಹವಾದವುಗಳನ್ನು ಪರಿಗಣಿಸುತ್ತಾರಾ ಎಂದು. ಇದು ಪ್ರತಿಷ್ಟೆ ಪ್ರತಿಪಾದಿಸುವ ವಿಷಯವೂ ಅಲ್ಲ, ಸಮಯವೂ ಅಲ್ಲ. ವಿಪಕ್ಷಗಳ ಮಾತನ್ನೇಕೆ ಕೇಳಬೇಕೆಂದು ದಾರ್ಷ್ಯ ತೋರುವ ಸಂದರ್ಭವೂ ಅಲ್ಲ. ಹೆಗ್ಗಳಿಕೆ ಬೇರೆ ಪಕ್ಷಗಳ ಪಾಲಾಗಿಬಿಡುತ್ತದೆ ಎಂದು ಕೆಳಮಟ್ಟಕ್ಕಿಳಿದು ಯೋಚಿಸುವ ಕಾಲವಂತೂ ಅಲ್ಲವೇ ಅಲ್ಲ. ಮೋದಿ ಬಗ್ಗೆ ಇಂಥ ಅನುಮಾನ ಏಕೆಂದರೆ ಇತ್ತೀಚೆಗೆ ದೇಶವನ್ನೇ ಅಲುಗಾಡಿಸುತ್ತಿರುವ ಕರೋನಾ ಕಷ್ಟದಿಂದ ಪಾರಾಗಲೆಂದು ಸಂಸತ್ತಿನ ಸಭಾ ನಾಯಕರ ಸಭೆ ಕರೆದಿದ್ದರು. ಆದರೆ ಅವರ ಸಲಹೆಗಳನ್ನು ಮಾತ್ರ ಪರಿಗಣಿಸಲಿಲ್ಲ.
ಇದಲ್ಲದೆ ಒಂದಲ್ಲ, ಎರಡಲ್ಲ ಆರು ಬಾರಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿಗಳ ಅಭಿಪ್ರಾಯಗಳಿಗೂ ಕಿಮ್ಮತ್ತು ಕೊಡಲಿಲ್ಲ. ಜೂನ್ 16 ಮತ್ತು 17ರಂದು ಎರಡು ದಿನ ಸಭೆ ಹಮ್ಮಿಕೊಂಡಿದ್ದರು. ಆದರೆ ಮೊದಲ ದಿನ ಎರಡೂವರೆ ಗಂಟೆ ನಡೆದ ಸಭೆಯಲ್ಲಿ ಅವರು ಮತ್ತು ಅವರ ಭಂಟ, ಗೃಹ ಸಚಿವ ಅಮಿತ್ ಶಾ ಅವರೇ ಅರ್ಧ ಗಂಟೆಗಿಂತ ಹೆಚ್ಚು ಮಾತನಾಡಿದರು. ಎರಡೂ ದಿನವೂ ಬಹುತೇಕ ಮುಖ್ಯಮಂತ್ರಿಗಳಿಗೆ ಮಾತನಾಡುವ ಅವಕಾಶವೇ ಇರಲಿಲ್ಲ. ಇದು ಪ್ರತಿಬಾರಿ ಮುಖ್ಯಮಂತ್ರಿಗಳ ಸಭೆ ಕರೆದಾಗಲೂ ಆಗುತ್ತಿರುವ ಸಾಮಾನ್ಯ ಸಂಗತಿ. ಮುಖ್ಯಮಂತ್ರಿಗಳು ಲಿಖಿತ ವರದಿ ಸಲ್ಲಿಸಿ ಸುಮ್ಮನಾಗಬೇಕಾಗಿದೆ.
ಈ ರೀತಿ ಮಾಡುವುದರಿಂದ ಇವರ ಸಮಯವಷ್ಟೇಯಲ್ಲ, ಮುಖ್ಯಮಂತ್ರಿಗಳ, ಅಧಿಕಾರಿಗಳ ಅಮೂಲ್ಯ ಸಮಯವೂ ವ್ಯರ್ಥವಾಗಿದೆ. ಮುಖ್ಯಮಂತ್ರಿಗಳ ಸಭೆಯ ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಣಯ ಯಾವುದು? ಹಾಗಿದ್ದ ಮೇಲೆ ಸಭೆ ಕರೆದು ಚರ್ಚೆ ನಡೆಸಿದ್ದು ಏಕೆ? ಕೊರೊನಾ ಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಆಗಿರುವ ವೈಫಲ್ಯದಲ್ಲಿ ರಾಜ್ಯಗಳನ್ನೂ ಪಾಲುದಾರರನ್ನಾಗಿ ಮಾಡುವುದು, ಕ್ರಮೇಣ ಸಂಪೂರ್ಣವಾಗಿ ರಾಜ್ಯಗಳನ್ನೇ ಗುರಿ ಮಾಡುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ.

ಭಾರತ-ಚೀನಾ ನಡುವಿನ ಸಂಘರ್ಷ ಖಂಡಿತಕ್ಕೂ ಕರೋನಾಕ್ಕಿಂತ ದೊಡ್ಡ ವಿಷಯ. ಇದರಲ್ಲೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು. ನೆಪಮಾತ್ರಕ್ಕೆ ಸರ್ವ ಪಕ್ಷಗಳೊಂದಿಗೆ ಸಭೆ ನಡೆಸಬಾರದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾದ ಮೊದಲ ದಿನದಿಂದಲೂ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರಾಹುಲ್ ಗಾಂಧಿಯವರ ಅಷ್ಟೂ ಪ್ರಶ್ನೆಗಳ ಸಾರ ‘ಗಡಿಯಲ್ಲಿ ಏನಾಗುತ್ತಿದೆ’ ಎಂಬುದಷ್ಟೇಯಾಗಿದೆ. ಅವು ರಾಹುಲ್ ಗಾಂಧಿ ಅವರ ಪ್ರಶ್ನೆಗಳು ಮಾತ್ರವಲ್ಲ. ದೇಶವಾಸಿಗಳಲ್ಲೂ ಅಂಥ ಪ್ರಶ್ನೆಗಳು, ಅನುಮಾನಗಳು, ಗೊಂದಲಗಳು, ಕುತೂಹಲಗಳು ಇದ್ದೇ ಇವೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ. ಕಡೆಯ ಪಕ್ಷ ಇಂದಿನ ಸಭೆಯಲ್ಲಾದರೂ ಮಾತನಾಡಬೇಕಾಗುತ್ತದೆ.
ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಇಂದಿನ ಪರಿಸ್ಥಿತಿ ಬಗ್ಗೆ ಜೂನ್ 6ರಿಂದ ಎರಡೂ ದೇಶಗಳ ಸೇನಾ ಅಧಿಕಾರಿಗಳು ಹಾಗೂ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳ ಮಟ್ಟದಲ್ಲಿ ನಿರಂತರವಾಗಿ ಸಭೆ ನಡೆಯುತ್ತಿವೆ. ಮಾತುಕತೆಯ ನಡುವೆಯೇ ಚೀನಾ ಸಂಘರ್ಷಕ್ಕಿಳಿದಿದೆ. ಈ ಹಿನ್ನೆಲೆಯಲ್ಲಿ 1962ರಲ್ಲಿ ಎರಡೂ ದೇಶಗಳ ನಡುವೆ ಏರ್ಪಟ್ಟಿದ್ದ 3,488 ಕಿಲೋ ಮೀಟರ್ ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಬಳಸುವುಂತಿಲ್ಲ ಎಂಬ ಒಪ್ಪಂದದ ಪುನರ್ ಪರಮಾರ್ಶೆ ಆಗಬೇಕಿದೆ. ಯುದ್ಧದ ಹೊರತಾಗಿ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ. ಚೀನಾ ಮೇಲೆ ಅಂತಾರಾಷ್ಟ್ರೀಯ ಸಮೂಹದಿಂದ ಒತ್ತಡ ಹೇರಿಸಬೇಕಾಗಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ವಿಶ್ವಾಸ ಗಳಿಸಬೇಕಿದೆ. ಪ್ರಭಾವಿ ದೇಶಗಳ ಗೆಳೆತನವನ್ನು ಗಳಿಸಿಕೊಳ್ಳಬೇಕಿದೆ. ಈ ಎಲ್ಲಾ ವಿಷಯಗಳು ಇಂದಿನ ಸಭೆಯಲ್ಲಿ ಚರ್ಚೆಯಾಗಬೇಕಿದೆ. ಬಳಿಕ ನಿರ್ಣಯಗಳನ್ನೂ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಇಂದಿನ ಸಭೆ ನಿರರ್ಥಕವಾಗಲಿದೆ.