ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆ ನೇಮಕಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೇ 05.05.2020ಕ್ಕೆ ಹೊರಡಿಸಿರುವ ಅಧಿಸೂಚನೆಯಲ್ಲಿ ಗರಿಷ್ಠ 27 ಒಳಪಟ್ಟ ಅಭ್ಯರ್ಥಿಗಳು ಮೇ 16 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆಗೆ ತಯಾರಿ ನಡೆಸಿರುವ ಅಭ್ಯರ್ಥಿಗಳು ಅರ್ಜಿ ಹಾಕುತ್ತಾರೆ, ದೈಹಿಕವಾಗಿ ಹಾಗೂ ಪರೀಕ್ಷೆಯಲ್ಲಿ ಬುದ್ಧಿಶಕ್ತಿ ಪ್ರದರ್ಶನ ಮಾಡುವ ಅಭ್ಯರ್ಥಿಗಳು ರಾಜ್ಯ ಗೃಹ ಇಲಾಖೆಯಲ್ಲಿ ಉದ್ಯೋಗವನ್ನೂ ಗಿಟ್ಟಿಸುತ್ತಾರೆ. ಆದರೆ ಸಮಸ್ಯೆ ಇರುವುದು ಅದಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಪೇದೆ ಆಯ್ಕೆ ಇರುವ ವಯೋಮಿತಿ 30 ವರ್ಷಕ್ಕೂ ಮೇಲ್ಪಟ್ಟು ಇದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ 27 ವರ್ಷಕ್ಕೆ ಕಡಿತ ಮಾಡಲಾಗಿದೆ. ಅಂದರೆ ನಮ್ಮ ರಾಜ್ಯದಲ್ಲಿ 21 ವರ್ಷಕ್ಕೆ ಪದವಿ ಪೂರೈಸುವ ಯುವಕರು ಒಂದೆರಡು ವರ್ಷ ಮೊದಲಿಗೆ ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಾರೆ. 25 ವರ್ಷದಿಂದ ಆಯ್ಕೆ ಪ್ರಕ್ರಿಯಲ್ಲಿ ಭಾಗಿಯಾಗುತ್ತಾರೆ. ಆದರೆ ರಾಜ್ಯ ಗೃಹ ಇಲಾಖೆ ಮಾಡಿರುವ ನಿರ್ಧಾರದಿಂದ ಕೇವಲ 2 ವರ್ಷಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡುವಂತಾಗಿದೆ.


ದೊಡ್ಡ ಹುದ್ದೆಗೆ ಒಂದು ರೀತಿ.. ಪೇದೆಗೆ ಯಾಕೆ ಭೀತಿ..!?
ಇವತ್ತು ಪಿಎಸ್ಐ ಹುದ್ದೆ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪಿಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, 30 ವರ್ಷ ಗರಿಷ್ಠ ವಯೋಮಿತಿ ಎಂದು ಹೇಳಲಾಗಿದೆ. ಇದಕ್ಕೆ ಮೊದಲು ಪಿಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಸರ್ಕಾರ ಗರಿಷ್ಠ ವಯೋಮಿತಿಯನ್ನು 28 ವರ್ಷಕ್ಕೆ ಸೀಮಿತಗೊಳಿಸಿತ್ತು. ಆದರೆ ಹುದ್ದೆಯ ಆಕಾಂಕ್ಷಿಗಳು ಸರ್ಕಾರದ ಗಮನ ಸೆಳೆದ ಬಳಿಕ ಹೊಸದಾಗಿ ಅರ್ಜಿ ಆಹ್ವಾನ ಮಾಡಿದ್ದು ಹೊಸ ಅಧಿಸೂಚನೆಯಲ್ಲಿ ವಯೋಮಿತಿಯನ್ನು 30 ವರ್ಷಕ್ಕೆ ಏರಿಕೆ ಮಾಡಿರುವುದು ಪಿಎಸ್ಐ ಆಗಬೇಕೆಂದು ಕರಸತ್ತು ನಡೆಸುತ್ತಿದ್ದ ಅಭ್ಯರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ನಾವೂ ಪಿಎಸ್ಐ ಆಗಬಹುದು ಎನ್ನುವ ಕನಸಿಗೆ ರೆಕ್ಕೆಪುಕ್ಕಗಳು ಬಂದಿದ್ದು, ರಾಜ್ಯ ಸರ್ಕಾರ ತೆಗೆದುಕೊಂಡಯ ಸಕಾರಾತ್ಮಕ ನಿಲುವನ್ನು ಸ್ವಾಗತ ಮಾಡಿದ್ದಾರೆ. ಅದೇ ರೀತಿ ಪೊಲೀಸ್ ಪೇದೆಗಳೂ ಸಹ ನಮಗೂ 30 ವರ್ಷದ ವಯೋಮಿತಿ ಕೊಡಿ ಎಂದು ಸರ್ಕಾರಕ್ಕೆ ಭಿನ್ನಹ ಮಾಡಿಕೊಳ್ಳುತ್ತಿದ್ದಾರೆ. ಪಿಎಸ್ಐ ಹುದ್ದೆಗಳಲ್ಲಿ ಕೊಟ್ಟಿರುವ ರಿಯಾಯ್ತಿಯನ್ನು ಪೊಲೀಸ್ ಪೇದೆ ಹುದ್ದಳಿಗೂ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬೇರೆ ಯಾವ ಯಾವ ರಾಜ್ಯಗಳಲ್ಲಿ ಹೇಗಿದೆ..?
ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ದೆಹಲಿ, ಆಂಧ್ರಪ್ರದೇಶದಲ್ಲೂ ಪೊಲೀಸ್ ಪೇದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಆ ಎಲ್ಲಾ ರಾಜ್ಯಗಳಲ್ಲೂ ವಯೋಮಿತಿಯನ್ನು 30 ವರ್ಷ ಮೇಲ್ಪಟ್ಟು ನಿಗದಿ ಮಾಡಲಾಗಿದೆ. 33 ವರ್ಷಕ್ಕೂ ಪೊಲೀಸ್ ಪೇದೆ ಆಗುವ ಅವಕಾಶ ಕೊಡಲಾಗಿದೆ. ಇಡೀ ದೇಶದಲ್ಲಿ 33 ವರ್ಷಕ್ಕೂ ಪೊಲೀಸ್ ಪೇದೆ ಆಗಲು ಅವಕಾಶ ಕೊಟ್ಟಿರುವಾಗ ನಮ್ಮ ರಾಜ್ಯದ ಅಭ್ಯರ್ಥಿಗಳ ಅವಕಾಶವನ್ನು ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಪೇದೆಗೆ ಬರುವ ಯುವಕರು ತುಂಬಾ ಬಡತನದಲ್ಲಿ ಬೆಳೆದು ಯಾವುದೇ ದೊಡ್ಡ ದೊಡ್ಡ ಹುದ್ದೆಗಳಿಗೆ ತರಬೇತಿ ಪಡೆಯಲಾಗದ ಯುವಕರು ಪೊಲೀಸ್ ಪೇದೆಗಾಗಿ ಸ್ವಯಂ ತಯಾರಿ ನಡೆಸುತ್ತಾರೆ. ಅದಕ್ಕೂ ಮೊದಲು ಓದಲು ಸಾಧ್ಯವಾಗದೆ ಕಾಲೇಜು ಮೆಟ್ಟಿಲು ಹತ್ತದವರು, ನಂತರದ ದಿನಗಳಲ್ಲಿ ಪಿಯುಸಿ, ಪದವಿ ಪೂರೈಸಿದವರು ಪೊಲೀಸ್ ಪೇದೆಗಳಾಗಬಹುದು ಅಷ್ಟೆ. ಯಾಕಂದ್ರೆ ಸೇನೆಯಲ್ಲಿ ಕೇವಲ ಗರಿಷ್ಠ ವಯೋಮಿತಿ 21 ವರ್ಷಗಳು ಮಾತ್ರ. ಹಾಗಾಗಿ ಪೊಲೀಸ್ ಪೇದೆಯಾಗಲು ಗರಿಷ್ಠ 27 ವರ್ಷಕ್ಕೆ ನಿಗದಿ ಮಾಡಿರುವುದು ಅನ್ಯಾಯ ಎಂದು ಅಳಲು ತೋಡಿಕೊಳ್ಳುತ್ತಾರೆ.
ಬೇರೆ ಬೇರೆ ಹುದ್ದೆಗಳಿಗೆಲ್ಲಾ ಎಷ್ಟಿದೆ ವಯೋಮಿತಿ..?
ನಮ್ಮ ಕರ್ನಾಟಕ ಹಾಗೂ ದೇಶದಲ್ಲಿ ಬೇರೆ ಬೇರೆ ಹುದ್ದೆಗಳಿಗೆ ವಯೋಮಿತಿ ಯಾವ ರೀತಿ ಇದೆ ಎನ್ನುವುದನ್ನು ನೋಡುವುದಾದರೆ, ಎಸ್ಡಿಎ, ಎಫ್ಡಿಎ, ಕೆಎಎಸ್, ಐಎಎಸ್ ಹುದ್ದೆಗಳಿಗೆ ಪರೀಕ್ಷೆ ಬರೆಯಲು 40 ವರ್ಷಗಳ ಗರಿಷ್ಠ ಮಿತಿ ಕೊಡಲಾಗಿದೆ. ಆದರೆ ಸಾಮಾನ್ಯ ಪೊಲೀಸ್ ಪೇದೆ ಹುದ್ದೆಗೆ 27ಕ್ಕೆ ಕೊನೆ ಮಾಡಿರುವುದು ಸರಿಯಲ್ಲ ಎನ್ನುವುದು ಪರೀಕ್ಷಾಕಾಂಕ್ಷಿಗಳ ವಾದ. ಪೇದೆ ಆಗುವುದಕ್ಕೆ ದೈಹಿಕ ಕ್ಷಮೆತೆ ಇರಬೇಕು, ವಯಸ್ಸಾಗುತ್ತಿದ್ದಂತೆ ದೈಹಿಕ ಕ್ಷಮತೆ ಕ್ಷೀಣಿಸುತ್ತದೆ ಎಂದು ಸರ್ಕಾರ ವಾದ ಮಾಡಬಹುದು. ಹೌದು, ಸರ್ಕಾರದ ಮಾತನ್ನು ಅಲ್ಲಗಳೆಯುವಂತಿಲ್ಲ. ಆದರೆ ಆಯ್ಕೆಯಲ್ಲಿ ದೈಹಿಕ ಪರೀಕ್ಷೆಯೂ ಇರಲಿದ್ದು, ಬುದ್ಧಿಮತ್ತೆ ಪರೀಕ್ಷೆಗೆ ಲಿಖಿತ ಪರೀಕ್ಷೆಯೂ ಇರಲಿದೆ. ಹಾಗಾಗಿ ದೈಹಿಕವಾಗಿ ದಕ್ಷತೆ ಇಲ್ಲದವರು ಆಯ್ಕೆಯಾಗಲು ಸಾಧ್ಯವಾಗುವುದಿಲ್ಲ. ವಯೋಮಿತಿ ಹೆಚ್ಚಳದಿಂದ ಅದಕ್ಷ ಅಭ್ಯರ್ಥಿಗಳು ಗೃಹ ಇಲಾಖೆ ಸೇರಿಬಿಡುತ್ತಾರೆ ಎನ್ನುವ ಆತಂಕವೇನು ಇಲ್ಲ. ಅದೆಷ್ಟೋ ಬಡ ಸಮುದಾಯದ ಯುವಕರು ಬುದ್ಧಿ ಬಂದ ಬಳಿಕ ಸ್ವಯಂ ಓದುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮುಕ್ತ ವಿವಿಗಳನ್ನು ಸರ್ಕಾರ ತೆರೆದಿರುವುದು. ಅವರಿಗೆಲ್ಲಾ ನೂರಾರು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ಓದುತ್ತಿರುತ್ತಾರೆ. ಒಂದೇ ಒಂದು ಅವಕಾಶವನ್ನು ಕಣ್ಣಿಗೊತ್ತಿಕೊಂಡು ಸ್ವೀಕರಿಸುತ್ತಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಷ್ಟಸುಖಗಳನ್ನು ಬಲ್ಲವರಾಗಿದ್ದು, ಒಂದೇ ಒಂದು ಅವಕಾಶ ಕೊಟ್ಟರೆ, ಯುವ ಸುಮುದಾಯ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವಕಾಶ ಕೊಟ್ಟಂತಾಗುತ್ತೆ. ಪಿಎಸ್ಐ ಹುದ್ದೆಗಳಿಗೆ ತೋರಿದ ಔದಾರ್ತೆಯತೆಯನ್ನು ಪೊಲೀಸ್ ಪೇದೆಗಳ ಹುದ್ದೆಗೂ ತೋರಿಸುತ್ತಾರಾ ಕಾದು ನೋಡ್ಬೇಕು.