ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿದ್ದು, ಮೂರು ದಿನಗಳ ಬಳಿಕವೂ ಈಶಾನ್ಯ ದೆಹಲಿಯಲ್ಲಿ ತ್ವೇಷಮಯ ವಾತಾವರಣ ಮುಂದುವರಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ.
ಈ ನಡುವೆ ಹಿಂಸಾಚಾರ ನಿಯಂತ್ರಣ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ದ ಕ್ರಮಕ್ಕೆ ಮುಂದಾಗದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್, ಪ್ರಚೋದನಕಾರಿ ಭಾಷಣದ ವೀಡಿಯೋಗಳನ್ನು ವೀಕ್ಷಿಸಿ, ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಅಭಯ್ ವರ್ಮಾ ವಿರುದ್ಧ ಈವರೆಗೆ ಎಫ್ ಐಆರ್ ದಾಖಲಿಸಿಲ್ಲ ಏಕೆ ಎಂದು ಪ್ರಶ್ನಿಸಿದೆ. ನಗರ ಹೊತ್ತಿ ಉರಿಯುತ್ತಿದ್ದರೂ, ಎಫ್ ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿಮಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲವೇ ಎಂದು ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಪೀಠದ ಈ ಪ್ರಶ್ನೆ, ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಆಡಳಿತಪಕ್ಷದ ದ್ವೇಷ ಮತ್ತು ಹಿಂಸೆಗೆ ಕುಮ್ಮಕ್ಕು ನೀಡುವ ಪ್ರಚೋದನಕಾರಿ ಕೃತ್ಯ ಮತ್ತು ಹೇಳಿಕೆಗಳ ವಿಷಯದಲ್ಲಿ ದೆಹಲಿ ಪೊಲೀಸರೂ ಪರೋಕ್ಷವಾಗಿ ಪಾಲುದಾರರು ಎಂಬ ಜನಸಾಮಾನ್ಯರ ಭಾವನೆಗೆ ಇಂಬು ನೀಡಿದಂತಾಗಿದೆ.
ಹಾಗೆಯೇ ನ್ಯಾಯಾಂಗದ ಕಣ್ಣೆದುರೇ ದೆಹಲಿಯಲ್ಲಿ ಮತ್ತೊಮ್ಮೆ 1984ರ ಸಿಖ್ ಹತ್ಯಾಕಾಂಡದಂತಹ ದುರ್ಘಟನೆ ಸಂಭವಿಸಲು ಬಿಡುವುದಿಲ್ಲ. ಜನರ ಜೀವಕ್ಕೆ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ನಡುವೆ, ಸುಪ್ರೀಂಕೋರ್ಟ್ ಕೂಡ ದೆಹಲಿ ಗಲಭೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ವೃತ್ತಿಪರತೆಯ ಕೊರತೆಯಿಂದಾಗಿ ಹಲವು ಜೀವಗಳನ್ನು ಕಳೆದುಕೊಳ್ಳುವಂತಾಗಿದ್ದು ದುರಾದೃಷ್ಟಕರ ಎಂದು ಸಾಂದರ್ಭಿಕವಾಗಿ ಅಭಿಪ್ರಾಯಪಟ್ಟಿದೆ. ಜೊತೆಗೆ, ದೆಹಲಿ ಹಿಂಸಾಚಾರದ ಬಗ್ಗೆ ನಿರ್ಣಯ ಅಂಗೀಕರಿಸಿರುವ ಸುಪ್ರೀಂಕೋರ್ಟ್ ವಕೀಲರ ಸಂಘ(ಬಾರ್ ಅಸೋಸಿಯೇಷನ್) ಕೂಡ ಗಲಭೆ ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯವನ್ನು ಖಂಡಿಸುವುದಾಗಿ ಹೇಳಿದೆ.
ಬೆಳಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರು ಉದ್ದೇಶಪೂರ್ವಕವಾಗಿ ನಾಲ್ವರು ಬಿಜೆಪಿ ನಾಯಕರ ಹೇಳಿಕೆಯ ವೀಡಿಯೋಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆದರೆ, ಇಂತಹ ಪ್ರಚೋದನಕಾರಿ ಹೇಳಿಕೆಗಳು ಸಿಎಎ ವಿರೋಧಿಗಳ ಕಡೆಯಿಂದಲೇ ಬಂದಿವೆ. ಅಂತಹ ವೀಡಿಯೋಗಳನ್ನು ನಾನು ಇಲ್ಲಿ ಪ್ರದರ್ಶಿಸಿದರೆ ಅದು ಇನ್ನಷ್ಟು ಪ್ರಚೋದನಕ್ಕೆ ದಾರಿಮಾಡಿಕೊಡಲಿದೆ ಎಂದರು. ಆಗ, ನ್ಯಾ. ಎಸ್ ಮುರುಳೀಧರ್ ಮತ್ತು ನ್ಯಾ. ತಲ್ವಂತ್ ಸಿಂಗ್ ಅವರನ್ನೊಳಗೊಂಡ ಪೀಠ, ಎಸ್ ಜಿ ಅವರ ಈ ಹೇಳಿಕೆಯೇ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ಧಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂದು ಪರಿಗಣಿಸಿತು. “ಹೀಗೆ ಹೇಳುವ ಮೂಲಕ ನೀವು ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸುತ್ತಿದ್ದೀರಿ. ಸ್ವತಃ ಎಸ್ ಜಿ ಅವರೇ ಈ ಹೇಳಿಕೆಗಳು ಪ್ರಚೋದನಕಾರಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಆ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಲು ನೀವು ಮೀನಾಮೇಷ ಎಣಿಸುತ್ತಿರುವುದು ಏಕೆ? ಇಡೀ ದೇಶ ಈ ಪ್ರಶ್ನೆಯನ್ನು ಕೇಳುತ್ತಿದೆ” ಎಂದು ನ್ಯಾ. ಮುರಳೀಧರ್ ಅವರು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಆಗ, ಇದು ಎಫ್ ಐ ಆರ್ ದಾಖಲಿಸಲು ಸಕಾಲವಲ್ಲ. ದೂರುದಾರರು ಈ ವೀಡಿಯೋಗಳನ್ನೇ ಏಕೆ ತಾವು ಉಲ್ಲೇಖಿಸಿದ್ದೇವೆ ಎಂಬುದಕ್ಕೆ ಕಾರಣ ನೀಡಿಲ್ಲ. ಹಾಗಾಗಿ ಎಫ್ ಐಆರ್ ದಾಖಲಿಸಲು ಸೂಕ್ತ ಸಮಯವಲ್ಲ ಎಂದು ಎಸ್ ಜಿ ಹೇಳಿದರು. ಆದರೆ, ಆ ವಾದಕ್ಕೆ ಸೊಪ್ಪುಹಾಕದ ನ್ಯಾಯಪೀಠ, ‘ಎಫ್ ಐಆರ್ ದಾಖಲಿಸಲು ಈಗ ಸಕಾಲವಲ್ಲ ಎಂದರೆ ಇನ್ನು ಯಾವಾಗ? ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ನೀವು ಎಫ್ ಐಆರ್ ಹಾಕುತ್ತಿದ್ದೀರಲ್ಲವೆ? ಹಾಗಿರುವಾಗ ಈ ಹೇಳಿಕೆಗಳ ಕುರಿತು ಎಫ್ ಐಆರ್ ದಾಖಲಿಸಲು ಯಾಕೆ ಮುಹೂರ್ತ ನೋಡುತ್ತಿದ್ದೀರಿ” ಎಂದು ಖಾರವಾಗಿ ಪ್ರಶ್ನಿಸಿತು.
ವಿಚಾರಣೆ ನಡುವೆ ನ್ಯಾಯಾಲದಲ್ಲಿ ಹಾಜರಿದ್ದ ದೆಹಲಿ ಪೊಲೀಸ್ ಅಧಿಕಾರಿ, ತಾವು ಆ ಪ್ರಚೋದನಕಾರಿ ವೀಡಿಯೋಗಳನ್ನು ನೋಡಿಯೇ ಇಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮರಳೀಧರ್, ನಿಮ್ಮ ಕಚೇರಿಯಲ್ಲಿ ಎಷ್ಟೊಂದು ಟಿವಿಗಳಿವೆ. ಆದರೂ ಈ ವೀಡಿಯೋಗಳನ್ನು ನೀವು ನೋಡಿಲ್ಲ ಎಂದರೆ ದೆಹಲಿ ಪೊಲೀಸರ ಸ್ಥಿತಿಯ ಬಗ್ಗೆ ಕನಿಕರ ಬರುತ್ತಿದೆ ಎಂದರು. ಬಳಿಕ ನ್ಯಾಯಾಲಯದಲ್ಲಿಯೇ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ವೀಕ್ಷಣೆಗೆ ನ್ಯಾಯಾಧೀಶರು ಸೂಚಿಸಿದರು. ದೂರುದಾರ ಹರ್ಷ್ ಮಂದರ್ ಪರ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೀಸ್, ಅವರು ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಅಭಯ್ ವರ್ಮಾ ಅವರ ಪ್ರಚೋದನಕಾರಿ ಹೇಳಿಕೆಗಳೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿವೆ ಎಂದು ನ್ಯಾಯಪೀಠದ ಗಮನಸೆಳೆದರು. ಬಳಿಕ ಆ ಮೂವರ ಹೇಳಿಕೆಗಳ ವೀಡಿಯೋಗಳನ್ನೂ ಕಲಾಪದಲ್ಲಿ ವೀಕ್ಷಿಸಿಸಲಾಯಿತು.
ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಿದ ನ್ಯಾಯಪೀಠ, ಮತ್ತೊಂದು ಪೀಠಕ್ಕೆ ವಿಚಾರಣೆ ಮುಂದುವರಿಸಲು ಸೂಚಿಸಿತು ಮತ್ತು ಪ್ರಚೋದನಕಾರಿ ವೀಡಿಯೋಗಳ ಕುರಿತು ಎಫ್ ಐಆರ್ ದಾಖಲಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸ್ ಕಮೀಷನರ್ ಗೆ ನಿರ್ದೇಶನ ನೀಡಿತು. ಹಾಗೆಯೇ ಈ ಪ್ರಕರಣದಲ್ಲಿ ತನ್ನನ್ನು ವಿಚಾರಣೆಯ ವ್ಯಾಪ್ತಿಗೆ ಪರಿಗಣಿಸಬೇಕು ಎಂಬ ಕೇಂದ್ರದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿತು.
ಒಟ್ಟಾರೆ, ಬುಧವಾರ ನ್ಯಾಯಾಲಯದ ಮಧ್ಯಪ್ರವೇಶದ ಮೂಲಕ, ದೆಹಲಿಯ ಹಿಂಸಾಚಾರದ ಹಿಂದಿನ ವ್ಯಕ್ತಿಗಳು ಮತ್ತು ಅಂತಹವರ ವಿಷಯದಲ್ಲಿ ದೆಹಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತೆರೆದುಕೊಂಡಂತಾಯಿತು.
ಈ ನಡುವೆ ದೆಹಲಿಯಲ್ಲಿ ಕಣ್ಣಳತೆಯ ದೂರದಲ್ಲೇ ವ್ಯಾಪಕ ಹಿಂಸಾಚಾರ, ಮುಸ್ಲಿಮರ ಮೇಲಿನ ಮತೀಯ ಅಟ್ಟಹಾಸಗಳು ಮೇರೆ ಮೀರಿದ್ದರೂ ಮೂರು ದಿನಗಳಿಂದ ಆ ಬಗ್ಗೆ ಮೌನವಾಗೇ ಇದ್ದ ಪ್ರಧಾನಿ ಮೋದಿಯವರು, ಬುಧವಾರ ಟ್ವೀಟ್ ಮಾಡಿ, ಶಾಂತಿ ಕಾಪಾಡುವಂತೆ ಮತ್ತು ಪರಸ್ಪರ ಸಹೋದರಭಾವದಲ್ಲಿ ಸಹಬಾಳ್ವೆ ನಡೆಸುವಂತೆ ಜನತೆಗೆ ಬಹಿರಂಗ ಕರೆ ನೀಡಿದ್ಧಾರೆ. ಶಾಂತಿ ಮತ್ತು ಸೌಹಾರ್ದ ನಮ್ಮ ಯಾವತ್ತಿನ ಮೌಲ್ಯಗಳು ಎಂಬುದನ್ನು ಜನತೆ ಮರೆಯಬಾರದು ಎಂದು ಪ್ರಧಾನಿಗಳು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.