ಇತ್ತೀಚೆಗೆ ಕೇಂದ್ರ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದಂತೆ ಕಾಣುತ್ತೆ, ಎರಡನೇ ಅವಧಿಗೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಪ್ರಬುದ್ಧವಾಗಿ ಆಡಳಿತ ನಡೆಸಬೇಕಿತ್ತು, ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿಕೊಳ್ಳಬೇಕಿತ್ತು, ಅಭಿವೃದ್ಧಿ ಹಾಗೂ ಜನಪರ ಆಡಳಿತದ ಮೂಲಕ ಓಟು ಸಂಪಾದಿಸುತ್ತೇವೆ ಎಂಬುದನ್ನ ಮನದಟ್ಟು ಮಾಡಿಕೊಂಡು ಮುನ್ನಡೆಯಬೇಕಿತ್ತು ಆದರೆ ದೇಶವನ್ನ ಮತ್ತಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ, ದೇಶದ ಈಗಿನ ಸ್ಥಿತಿಗತಿಗಳಿಗೆ ಮತದಾರರು ಕಾರಣ ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರದ ರೀತಿ ನೀತಿಗಳು ಬಂದು ನಿಂತಿವೆ.
ದೆಹಲಿಯಲ್ಲಿ ಜನಸಾಮಾನ್ಯರ ಸಿಎಂ ಎಂದೇ ಕರೆಸಿಕೊಳ್ಳುವ ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ವಿರೋಚಿತ ಗೆಲುವು ಸಾಧಿಸಿ ಬಿಜೆಪಿಯ ಹಮ್ಮುಬಿಮ್ಮಿಗೆ ಪೆಟ್ಟು ಕೊಟ್ಟು ಮೂಲೆಗೆ ತಳ್ಳುತ್ತಿದ್ದಂತೆ, ಇದೇ ಆಮ್ ಆದ್ಮಿಗಳ (ಜನಸಾಮಾನ್ಯರ) ಮೇಲೆ ಬಿಜೆಪಿ ಸರ್ಕಾರ ದ್ವೇಷ ಸಾಧಿಸಿದಂತೆ ಕಾಣುತ್ತಿದೆ. ಚುನಾವಣಾ ಫಲಿತಾಂಶ ಬಂದ ಒಂದೇ ದಿನಕ್ಕೆ ಸಬ್ಸಿಡಿ ರಹಿತ ಅನಿಲ ದರವನ್ನು ಪ್ರತಿ ಸಿಲಿಂಡರ್ ಗೆ ಬರೊಬ್ಬರಿ ರೂ. 144.5 ಹೆಚ್ಚಿಸಿ ಆದೇಶ ಹೊರಡಿಸಿದೆ. ಅಂದರೆ ಆರು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಈ ತರಹದ ದರ ಏರಿಕೆಯಾಗಿತ್ತು.
ದರ ಹೆಚ್ಚಳಕ್ಕೆ ಕಾರಣವೇನು ಎಂದು ಕೇಳಿದರೆ ಒಂದೇ ಸಿದ್ಧ ಉತ್ತರ ‘ಜಾಗತಿಕ ಮಾರುಕಟ್ಟೆಯಲ್ಲಿ LPG ಇಂಧನ ದರ ಭಾರಿ ಏರಿಕೆಯಾಗಿದೆ ಹಾಗಾಗಿ ಹೀಗೆಲ್ಲಾ ಏರಿಕೆ ಮಾಡುವುದು ಅನಿವಾರ್ಯ’ ಅಂದರೆ ಈ ಉತ್ತರ ಹೇಗಿದೆ ಅಂದರೆ ಭಾರತೀಯರಾದ ನಾವೆಲ್ಲಾ ಸುಮ್ಮನೆ ಸರ್ಕಾರಗಳನ್ನ ದೂಷಿಸುವ ಬದಲು ಅಂತರಾಷ್ಟ್ರೀಯ ಮಾರುಕಟ್ಟೆ ದರವನ್ನು ಅರಿತುಕೊಂಡು ಮಾತಾಡಬೇಕು, ಹಾಗೇ ಕಾಲಕಾಲಕ್ಕೆ ಏರಿಳಿತಗೊಳ್ಳುವ ಬೆಲೆಗಳಿಗೆ ಮರು ಮಾತಾಡದೇ ಒಗ್ಗಿಕೊಳ್ಳಬೇಕು ಹಾಗೂ ಸರ್ಕಾರ ಈ ದರ ಏರಿಕೆಯನ್ನು ತಗ್ಗಿಸುವಲ್ಲಿ ಯಾವುದೇ ರೀತಿಯ ಶ್ರಮ ಪಡುವುದಿಲ್ಲ.
ಮೊದಲು ಕಳೆದ ಹತ್ತು ವರ್ಷಗಳಲ್ಲಿ ಅಡುಗೆ ಅನಿಲದ ದರದ ಬಗ್ಗೆ ಒಮ್ಮೆ ಕಣ್ಣು ಹಾಯಿಸಿದರೆ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತನ್ನ ವೆಬ್ ಸೈಟ್ ಲ್ಲಿ ನಮೂದಿಸಿರುವಂತೆ ಡಿಸೆಂಬರ್ 2013 ರಲ್ಲಿ ಹದಿನಾಲ್ಕು ಕೆಜಿ ಸಬ್ಸಿಡಿ ರಹಿತ ಅನಿಲದ ದರ ದೆಹಲಿಯಲ್ಲಿ ರೂ. 1021 ತಲುಪಿತ್ತು, ಏಪ್ರಿಲ್ 2014ರಲ್ಲಿ 980.50 ರೂಪಾಯಿಗೆ ಇಳಿಯಿತು ಅಲ್ಲಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಅತೀ ಕನಿಷ್ಟ ದರ 487 ರೂಪಾಯಿ ಪ್ರತಿ ಸಿಲಿಂಡರ್ ಗೆ ಆಗಸ್ಟ್ 2016ರಲ್ಲಿ ದಾಖಲಾಯ್ತು. ಅಲ್ಲಿಂದ ಪುನಃ ಅನಿಲ ದರ ಏರಿಕೆ ನಾಗಾಲೋಟ ಪಡೆದುಕೊಂಡು 2018 ನವೆಂಬರ್ ಲ್ಲಿ 942.50 ರೂಪಾಯಿಗೆ ಮುಟ್ಟಿತು. ಚುನಾವಣಾ ವರ್ಷ ಎದುರು ನೋಡುತ್ತಿದ್ದ ಸರ್ಕಾರ ಪುನಃ ಕಡಿತಗೊಳಿಸಿ ಫೆಬ್ರವರಿ 2019ಕ್ಕೆ 659 ರುಪಾಯಿಗೆ ಸಿಲಿಂಡರ್ ದರ ನಿಗದಿ ಮಾಡಿತು. ಮೊನ್ನೆ ಮೊನ್ನೆವರೆಗೆ 714 ರೂಪಾಯಿ ಇದ್ದ ದರ ದೆಹಲಿ ಚುನಾವಣೆ ಮುಗಿದ ನಂತರ ಒಮ್ಮೆಲೆ ಗಗನಕ್ಕೆ ಚಿಮ್ಮಿ 858 ರೂಪಾಯಿ (ದೆಹಲಿ ದರ) ಗೆ ತಲುಪಿದೆ.
ಹಾಗಾದರೆ ಸಬ್ಸಿಡಿಗೆ ಪಡೆದುಕೊಳ್ಳುವವರ ಕಥೆ ಏನು? ಅವರಿಗೆ ಎಂಟು ರೂಪಾಯಿ ಹೊರೆಯಾಗಲಿದೆ ಹಾಗೂ ಉಜ್ವಲ ಗ್ರಾಹಕರಿಕೆ ಆರು ರೂಪಾಯಿ ಹೆಚ್ಚಳ ಮಾಡಲಾಗಿದೆ ಅಂದರೆ ಸರ್ಕಾರ ಸಬ್ಸಿಡಿ ಪಡೆಯುವವರ ಮೇಲೆ ಹೆಚ್ಚೇನು ಹೊರೆ ನೀಡಿಲ್ಲ.
ದೇಶದ ಆರ್ಥಿಕತೆಗೆ ಸಬ್ಸಿಡಿಗಳೇ ಹೊರೆ, ಅಧಿಕ ಸಂಖ್ಯೆಯ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಸಬ್ಸಿಡಿ ತ್ಯಜಿಸಿಕೊಂಡವರೂ ಇದ್ದಾರೆ, ಅವರೆಲ್ಲಾ ಈಗ ಮನದಲ್ಲೇ ಶಪಿಸುತ್ತಿರಬಹುದು. ವಿಪಕ್ಷಗಳು ಬಿಜೆಪಿ ಸರ್ಕಾರದ ಪೂರ್ವದಲ್ಲಿ ಈ ತರಹದ ಬೆಳವಣಿಗೆಗೆ ಕಾರಣೀಭೂತರಾಗಿದ್ದರೂ ಈಗ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು ಸಕಾಲ. ಕಾಂಗ್ರೆಸ್ ನ ರಾಹುಲ್ ಗಾಂಧಿ 2014ರಲ್ಲಿ ಸಿಲಿಂಡರ್ ಹಿಡಿದು ಬೀದಿಯಲ್ಲಿ ಪ್ರತಿಭಟಿಸಿದ್ದ ಸ್ಮೃತಿ ಇರಾನಿ ಫೋಟೋ ಟ್ವೀಟ್ ಮಾಡಿ ಬಿಜೆಪಿ ಸರಕಾರವನ್ನು ಕುಟುಕಿದ್ದಾರೆ. ಉತ್ತರಖಾಂಡ್ ನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಕೊಂಚ ಭಿನ್ನವಾಗಿ ಪ್ರತಿಕ್ರಿಯೆ ನೀಡಿ, ಇತಿಹಾಸದಲ್ಲಿ ಇಂತಹ ದರ ಏರಿಕೆಯಂತಹ ಧೈರ್ಯ ಪ್ರದರ್ಶಿಸಿರುವ ಬಿಜೆಪಿಯನ್ನ ಮೆಚ್ವಲೇಬೇಕು ಎಂದು ಹೇಳಿ ಅಣಕಿಸಿದ್ದಾರೆ. ಕಾಂಗ್ರೆಸ್ ಅಷ್ಟೇ ಅಲ್ಲದೇ ಎಡಪಕ್ಷಗಳು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಸೋಮವಾರದ ನಂತರ ಪದೇ ಪದೇ ದೇಶಾದ್ಯಂತ ಖಾಲಿ ಸಿಲಿಂಡರ್ ಪ್ರದರ್ಶನಗಳು ನಡೆಯಲಿದೆ ಎಂಬ ಸಂದೇಶ ರವಾನೆಯಾಗಿದೆ.
ಅಡುಗೆ ದರ ಇರಬಹುದು ಅಥವಾ ಡೀಸೆಲ್, ಪೆಟ್ರೋಲ್ ದರವೇ ಆಗಿರಬಹುದು, ಇವುಗಳು ನೇರವಾಗಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರ ಜೊತೆ, ಸಾಮಾನ್ಯ ಜನರನ್ನೂ ಕೆರಳಿಸುತ್ತವೆ. ನೀವೇನಾದರೂ ಅನಿಲ ದರವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಚುನಾವಣಾ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆಯೇ ಅನಿಲ ಹಾಗೂ ಇಂಧನದ ದರ ಕಡಿಮೆ ಇರುತ್ತದೆ. ಅದು ಲೋಕಸಭಾ ಚುನಾವಣೆಗಳಿರಬಹುದು, ನಮ್ಮ ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭವೇ ಆಗಿರಬಹುದು, ಮೊನ್ನೆ ನಡೆದ ದೆಹಲಿ ಚುನಾವಣೆಯೂ ಸೇರಿಕೊಂಡಿರಬಹುದು, ಇತಿಹಾಸದ ಪುಟಗಳನ್ನ ತಿರುವಿದರೆ ಇಂಧನ ಹಾಗೂ ಅನಿಲ ದರ ನಿಯಂತ್ರಣ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ, ಹಾಗೂ ಎಲ್ಲಾ ಪಕ್ಷಗಳೂ ಜನರನ್ನ ಶೋಷಣೆ ಮಾಡಿವೆ. ಬಿಜೆಪಿ ಸರ್ಕಾರ ಅವರೇ ಹೊಗಳಿ ಉತ್ತುಂಗಕ್ಕೆ ಏರಿಸಿಕೊಂಡಷ್ಟು ಭಿನ್ನವೇನಲ್ಲ.
ಒಟ್ಟಿನಲ್ಲಿ CAA, NRC, NPR ಎಲ್ಲಾ ಸಮುದಾಯದವರನ್ನ ಒಗ್ಗೂಡಿಸದಿದ್ದರೂ ಈ ವಿಷಯಗಳು ಮಾತ್ರ ಬಿಜೆಪಿಗೆ ಬಿಸಿ ತುಪ್ಪವಾಗಲಿದೆ, ಜನರ ಮನ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರವೃತ್ತವಾಗುವ ಅವಕಾಶ ಸಿಕ್ಕಿದೆ. ಸಿಕ್ಕಿರುವ ಈ ಅವಕಾಶವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತದೋ? ಇಲ್ಲವೋ? ಎಂದು ಕಾದು ನೋಡಬೇಕಿದೆ.