ಶಿರೋಮಣಿ ಅಕಾಲಿದಳ ಹಾಗೂ ಜನನಾಯಕ್ ಜನತಾ ದಳ (ಜೆಜೆಪಿ) ದೆಹಲಿ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಉಳಿಯುವ ನಿರ್ಧಾರ ಮಾಡಿರುವ ನಂತರ, ಬಿಜೆಪಿಯು ತನ್ನ ಪ್ರಚಾರಕ್ಕಾಗಿ ಹಾಗೂ ವಿರೋಧ ಪಕ್ಷಗಳ ಅಪಪ್ರಚಾರಕ್ಕಾಗಿ ಕೋಮು ಭಾವನೆಗಳನ್ನು ಕೆರಳಿಸುವಂತಹ ತನ್ನ ಚಾಳಿಯನ್ನು ಮುಂದುವರೆಸಿದೆ. ದೆಹಲಿ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಕೋಮು ಭಾವನೆಗಳನ್ನು ಪ್ರಚೋದಿಸುವಂತಹ ಹಾಗೂ ಮುಸ್ಲಿಂರು ದೆಹಲಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ ಎನ್ನುವಂತಹ ಸಂದೇಶಗಳನ್ನು ನೀಡುವ ಪೋಸ್ಟ್ ಗಳನ್ನು ಹಾಕಲಾಗಿದೆ.
IPC ಸೆಕ್ಷನ್ 153 ಪ್ರಕಾರ ಕೋಮು ದ್ವೇಷವನ್ನು ಹಬ್ಬಿಸುವಂತಹ ಹಲವು ಪೋಸ್ಟ್ಗಳನ್ನು ಮಾಡಿರುವ ದೆಹಲಿ ಬಿಜೆಪಿಯು, ಪೋಸ್ಟ್ನಲ್ಲಿನ ಚಿತ್ರಗಳಲ್ಲಿ ದೆಹಲಿ ಹಿಂಸಾಚಾರಕ್ಕೆ ಜಾಮಿಯಾ ವಿದ್ಯಾರ್ಥಿಗಳು ಹಾಘೂ ಮುಸ್ಲಿಂರು ಕಾರಣ ಎಂದು ಬಿಂಬಿಸಿದ್ದಾರೆ. The Art and the Artist ಶಿರೋಣಾಮೆ trendನಲ್ಲಿ, ಒಂದು ಚಿತ್ರದಲ್ಲಿ ಬಸ್ ಬೆಂಕಿ ಹತ್ತಿ ಉರಿಯುತ್ತಿರುವುದು ಹಾಗೂ ಇನ್ನೊಂದು ಚಿತ್ರದಲ್ಲಿ ಅರವಿಂದ ಕೇಜ್ರಿವಾಲ್ ತಲೆಯ ಮೇಲೆ ಬಿಳಿ ಟೋಪಿ ಹಾಕಿರುವ ಚಿತ್ರವನ್ನು ಹಾಕಲಾಗಿದೆ. ಈ ಚಿತ್ರದಲ್ಲಿ ಓಕ್ಲಾ-ಜಾಮಿಯಾ ಶಾಸಕ ಅಮಾನತುಲ್ಲಾ ಖಾನ್ ಕೂಡ ಇದ್ದಾರೆ. ಬಸ್ಸಿಗೆ ಬೆಂಕಿ ಹಚ್ಚಿದವರು ಇವರೇ ಎಂದು ಇಲ್ಲಿ ಬಿಂಬಿಸಲಾಗಿದೆ.
ಇನ್ನು, ಕಳೆದ ವಾರ ಬಿಜೆಪಿ ಸಂಸತ್ ಸದಸ್ಯ ಹಾಗೂ ದೆಹಲಿ ಸಿಎಂ ಸ್ಥಾನದ ಆಕಾಂಕ್ಷಿ ಪರ್ವೇಶ್ ಸಾಹಿಬ್ ಸಿಂಗ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ , ಸರ್ಕಾರಿ ಜಾಗದಲ್ಲಿ 54ಕ್ಕೂ ಹೆಚ್ಚು ಮಸೀದಿ ಹಾಗೂ ಮದರಸಗಳಿದ್ದು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅವುಗಳನ್ನು ತೆರವುಗೊಳಿಸಲಾಗುವುದು. ಈ ಕುರಿತಾಗಿ ದೆಹಲಿಯ ಉಪ ರಾಜ್ಯಪಾಲರಿಗೆ ಈಗಾಗಾಲೇ ಸೂಚನೆಯನ್ನು ನೀಡಲಾಗಿದೆ, ಎಂದು ಬರೆದುಕೊಂಡಿದ್ದರು.
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಸರ್ಕಾರಿ ಜಾಗದಲ್ಲಿ ಯಾವುದೇ ಮಂದಿರಗಳು ಇರುವುದರ ಕುರಿತು ಮಾಹಿತಿಯೇ ಇಲ್ಲ. ಕೇವಲ ಮಸೀದಿಗಳು, ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿವೆ. ಒಂದು ವೇಳೆ ಮಂದಿರ ಅಥವಾ ಗುರುದ್ವಾರಗಳು ಸರ್ಕಾರಿ ಜಾಗವನ್ನು ಆಕ್ರಮಿಸಿಕೊಂಡಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ದೆಹಲಿ ಅಲ್ಪಸಂಖ್ಯಾತರ ಆಯೋಗವು ನೀಡಿದ ವರದಿಯ ಪ್ರಕಾರ ಪರ್ವೇಶ್ ಅವರು ಹೇಳಿದಂತಹ ದೆಹಲಿಯ ಯಾವುದೇ ಮಸೀದಿ, ಮಿನಾರ್ ಅಥವಾ ಮದರಸಗಳು ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿಲ್ಲ ಎಂದು ಹೇಳಿದೆ. ಪರ್ವೇಶ್ ಅವರ ಹೇಳಿಕೆಗಳು ಮುಸ್ಲಿಂ ಸಮುದಾಯದಲ್ಲಿ ಭಯ ಹುಟ್ಟು ಹಾಕಿಸುವಂತಹದ್ದು, ಎಂದು ಆಯೋಗವು ಕಳವಳ ವ್ಯಕ್ತ ಪಡಿಸಿದೆ. ಇನ್ನು ಈ ಹೇಳಿಕೆಗಳನ್ನು ನೀಡಿದಕ್ಕಾಗಿ ಪರ್ವೇಶ್ ಸಿಂಗ್ ಅವರ ವಿರುದ್ದ ಮೊಕದ್ದಮೆ ಹೂಡಲು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದು ಕೂಡ ಆಯೋಗವು ತಿಳಿಸಿದೆ.
ಗಲಭೆಗಳಿಂದ ಬಿಜೆಪಿಗೇ ಲಾಭ!
ಅಮೇರಿಕಾದ ಯೇಲ್ ಯುನಿವರ್ಸಿಟಿ ನಡೆಸಿರುವ ಸಂಶೋಧನೆಯ ಪ್ರಕಾರ ಚುನಾವಣೆಗೆ ಮುಂಚೆ ಗಲಭೆಗಳು ನಡೆದ ರಾಜ್ಯಗಳಲ್ಲಿ ಬಿಜೆಪಿಯ ಮತಗಳ ಸಂಖ್ಯೆ ಶೇಕಡಾ 0.8ರಷ್ಟು ಏರಿಕೆ ಕಂಡಿದೆ. ಮತ್ತು ಈ ಗಲಭೆಗಳ ಪರಿಣಾಮದಿಂದ ಕಾಂಗ್ರೆಸ್ನ ಮತಗಳಲ್ಲಿ ಗಣನೀಯ ಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ. ಆಕ್ಸ್ಫರ್ಡ್ ಯೂನಿವರ್ಸಿಟಿಯ ಅಧ್ಯಯನಕಾರರು ನಡೆಸಿದ ಸಂಶೋಧನೆಯ ಪ್ರಕಾರ ಅಲ್ಪಸಂಖ್ಯಾತರ ಮೇಲಿನ ಧಾಳಿಯು ಬಿಜೆಪಿಗೆ ಮತ ಬ್ಯಾಂಕ್ ವೃದ್ಧಿಸಲು ಸಹಾಯ ಮಾಡಿದೆ ಎಂಬ ಆತಂಕಕಾರಿ ವಿಷಯವನ್ನು ಬಯಲಿಗೆಳೆದಿದೆ.
ಇಷ್ಟೆಲ್ಲಾ ಅಡ್ಡದಾರಿಯನ್ನು ಹಿಡಿದರೂ, ಬಿಜೆಪಿಗೆ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಕಬ್ಬಿಣದ ಕಡಲೆಕಾಯಿಯಾಗಿದೆ. ಏಕೆಂದರೆ, Centre for the Study of Developing Societies (CSDS) ನಡೆಸಿದ ಸರ್ವೆಯ ಪ್ರಕಾರ ದೆಹಲಿಯ ಮತದಾರರು ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ನಡೆಸಲಿದ್ದಾರೆಯೇ ಹೊರತು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನಲ್ಲ. “ಶೇಕಡಾ 55 ಜನ ಆಪ್ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಲಿದ್ದಾರೆ, ಹಾಗೂ ಕೇವಲ 15 ಶೇಕಡಾ ಜನರು ನರೇಂದ್ರ ಮೋದಿ ಆಡಳಿತಕ್ಕೆ ಮತ ಹಾಕಲಿದ್ದಾರೆ,” ಎಂದು ವರದಿಯು ಹೇಳಿದೆ. ಹೀಗಾಗಿ, ದೆಹಲಿ ಬಿಜೆಪಿಯನ್ನು ಪರಿಗಣಿಸಿದೇ, ಈ ಚುನಾವಣೆಯನ್ನು ಮೋದಿ ವರ್ಸಸ್ ಕೇಜ್ರಿವಾಲ್ ಎಂದೇ ಪರಿಗಣಿಸಿದರೂ, ಕೇಜ್ರಿವಾಲ್ ಕಡೆ ಜನರ ಒಲವು ಹೆಚ್ಚಿರುವುದು ತಿಳಿದು ಬಂದಿದೆ.
ಅಂದಹಾಗೇ, ಈ ಬಾರಿಯ ದೆಹಲಿ ಚುನಾವಣೆಗೆ ಬಿಜೆಪಿ ಪರವಾಗಿ ಪ್ರಚಾರ ಮಾಡಲು ʼಸ್ಟಾರ್ ಪ್ರಚಾರಕರʼ ಒಂದು ದೊಡ್ಡ ಪಟ್ಟಿ ಸಿದ್ದವಾಗಿದೆ. ಸುಮಾರು 40 ಜನ ಸ್ಟಾರ್ ಪ್ರಚಾರಕರು ಈ ಬಾರಿ ಕೇಜ್ರಿವಾಲ್ ಅವರನ್ನು ಸೋಲಿಸಲು ಪಣ ತೊಟ್ಟಿದೆ.ಈ ಸ್ಟಾರ್ ಪ್ರಚಾರಕರ ಬಳಗವನ್ನು ಪ್ರಧಾಣಿ ನರೇಂದ್ರ ಮೋದಿ ಮುನ್ನಡೆಸಲಿದ್ದಾರೆ.
ಕೃಪೆ: ದಿ ವೈರ್