ಸಂವಿಧಾನದ ಮೂರು ಪ್ರಮುಖ ಅಂಗಗಳು ಎಂದರೆ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ. ಈ ಮೂರು ಅಂಗಗಳು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ. ಈ ಮೂರು ಅಂಗಳಿಗಳಿಗೂ ಒಂದಕ್ಕೆ ಒಂದು ಸಂಬಂಧ ಇರುತ್ತದೆ. ಆದರೆ, ಈ ಮೂರು ಅಂಗಗಳು ಯಾವುದೇ ಮತ್ತೊಂದು ಅಂಗದ ಸವಾರಿಯನ್ನು ಸಹಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಆದರೆ ಕೆಲವೊಮ್ಮೆ ಶಾಸಕಾಂಗದ ಮೇಲೆ ನ್ಯಾಯಾಂಗ ಸವಾರಿ ಮಾಡಿದರೆ ಇನ್ನೊಮ್ಮೆ ನ್ಯಾಯಾಂಗ, ಕಾರ್ಯಾಂಗದ ಮೇಲೆ ಶಾಸಕಾಂಗ ಸವಾರಿ ಮಾಡುತ್ತಿದೆಯೇ? ಎನ್ನುವ ಅನುಮಾನ ಮೂಡುವುದು ಸಹಜ. ಇದೀಗ ಮತ್ತೆ ಅದೇ ರೀತಿಯ ಅನುಮಾನ ಮೂಡುವಂತೆ ಮಾಡಿದೆ ದೆಹಲಿಯ ಗಲಭೆ ಪ್ರಕರಣ.
ಪೌರತ್ವ ತಿದ್ದುಪಡಿ ಕಾನೂನು ಜಾರಿಯಾದ ಬಳಿಕ ದೇಶದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದೆ. ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಮುಸ್ಲಿಂ ಸಮುದಾಯದ ಜನರ ಜೊತೆ ಅನೇಕ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕಾನೂನು ಜಾರಿ ಮಾಡಿಯೇ ತೀರುತ್ತೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ರೂ ಹೋರಾಟ ಮಾತ್ರ ಅಂತ್ಯವಾಗು ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ದೆಹಲಿಯ ಶಾಹಿನ್ ಬಾಗ್‌ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ, ಜಾಮಿಯಾ ವಿಶ್ವವಿದ್ಯಾನಿಯಲ ಬಳಿ ಸೇರಿದಂತೆ ದೆಹಲಿಯ ಹಲವಾರು ಕಡೆ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಂಡು ಆಗ್ರಾ ಬಳಿಕ ದೆಹಲಿಗೆ ಭೇಟಿ ಕೊಡುತ್ತಿದ್ದಂತೆ ಶುರುವಾದ ಗಲಭೆ ಇದೀಗ ಹತೋಟಿಗೆ ಬರುತ್ತಿದೆ. ಇಲ್ಲೀವರೆಗೂ ಸಾವನ್ನಪ್ಪಿದವರ ಸಂಖ್ಯೆ ಅಧಿಕೃತವಾಗಿ ಬರೋಬ್ಬರಿ 40ರ ಗಡಿ ದಾಟಿ ಮುನ್ನುಗ್ಗುತ್ತಿದೆ. 300ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಸಾವು ನೋವಿನ ಜೊತೆ ಸೆಣಸಾಡುತ್ತಿದ್ದಾರೆ. 123 ಎಫ್‌ಐಆರ್ ದಾಖಲು ಮಾಡಲಾಗಿದ್ದು, 630 ಜನರನ್ನು ಅರೆಸ್ಟ್ ಮಾಡಲಾಗಿದೆ. ಎರಡು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ದೆಹಲಿ ಸರ್ಕಾರದ 9 ನಿರಾಶ್ರಿತ ಕೇಂದ್ರಗಳನ್ನು ಶುರುಮಾಡಿದ್ದು, ಗಲಭೆಯಲ್ಲಿ ಮನೆ ಮಠ ಕಳೆದುಕೊಂಡ ಕುಟುಂಬಸ್ಥರಿಗೆ 25 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ಕೊಡಲು ನಿರ್ಧಾರ ಮಾಡಲಾಗಿದೆ. ಆದರೆ ನ್ಯಾಯಾಂಗದ ಮೇಲೆ ಶಾಸಕಾಂಗ ದರ್ಬಾರ್ ಮಾಡುತ್ತಿದ್ಯಾ ಎನ್ನುವ ಅನುಮಾನ ದೇಶದ ಜನರನ್ನು ಕಾಡಲು ಶುರು ಮಾಡಿದೆ.
ದೆಹಲಿ ಹೈಕೋರ್ಟ್ ಇಂದು ಕೇಂದ್ರ ಗೃಹ ಇಲಾಖೆ, ದೆಹಲಿ ಸರ್ಕಾರ ಹಾಗು ದೆಹಲಿ ಪೊಲೀಸರಿಗೆ 3 ನೋಟಿಸ್ ಕೊಟ್ಟಿದೆ. ಸಂಜೀವ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಾಗ ಹೋರಾಟಗಾರ ಹರ್ಷ ಮಂದರ್, ಆರ್‌ಜೆ ಸಾಯೇಮಾ, ಆ್ಯಕ್ಟರ್ ಹಾಗು ಹೋರಾಟಗಾರ್ತಿ ಸ್ವರ ಭಾಸ್ಕರ್ ಪ್ರಚೋದನಕಾರಿ ಭಾಷಣ ಮಾಡಿರುವ ಬಗ್ಗೆ ತಿಳಿಸುವಂತೆ ಸೂಚಿಸಿದೆ. ಇನ್ನೊಂದು ಪ್ರಕರಣದಲ್ಲಿ ಬಿಜೆಪಿ ಐಟಿ ಸೆಲ್ ಸಲ್ಲಿಸಿದ್ದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಹೈದ್ರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹಾಗು ಸಹೋದರ ತೆಲಂಗಾಣ ಶಾಸಕ ಅಮಾನತುಲ್ಲಾ ಖಾನ್, ವಾರಿಸ್ ಪಠಾಣ್ ಹಾಗು ದೆಹಲಿ ಉಪಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಮೇಲೆ ಎಫ್‌ಐಆರ್ ದಾಖಲು ಮಾಡಿ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡುವಂತೆ ಕೋರಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲೂ ಪ್ರಚೋದನೆ ಮಾಡಿದ್ದಾರಾ? ಎನ್ನುವ ಬಗ್ಗೆ ಕೋರ್ಟ್‌ಗೆ ತಿಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಅರ್ಜಿಯನ್ನು ಏಪ್ರಿಲ್ 13ರಂದು ವಿಚಾರಣೆ ಮಾಡುವುದಾಗಿ ತಿಳಿಸಿದೆ.
ದೆಹಲಿಯಲ್ಲಿ ಅಧಿಕೃತ 42 ಜನರ ಪ್ರಾಣಕ್ಕೆ ಸಂಚಕಾರ ತಂದಿರುವ ಯಾವ ಪಕ್ಷದ ನಾಯಕರೇ ಆದರೂ ಶಿಕ್ಷೆಗೆ ಗುರಿಯಾಗಲೇ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುವವರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದಿದ್ದ ಕೇಂದ್ರ ಹಣಕಾಸು ರಾಜ್ಯ ಸಚಿವರ ವಿಚಾರದಲ್ಲಿ ಇನ್ನೂ ಪೊಲೀಸರು ಎಫ್‌ಐಆರ್ ದಾಖಲು ಮಾಡಿಲ್ಲ. ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಹಾಗು ಮತ್ತೋರ್ವ ಬಿಜೆಪಿ ನಾಯಕ ವಿಶಾಲ್ ಪಹುಜಾ ಹಾಗು ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿತ್ತು. ಆದರೆ ಪೊಲೀಸರು ಇವರು ಗುರುತರ ಆರೋಪ ಮಾಡಿಲ್ಲವಾದ್ದರಿಂದ ಎಫ್‌ಐಆರ್ ದಾಖಲು ಬೇಕಾಗಿಲ್ಲ ಎಂದು ಕೋರ್ಟ್‌ಗೆ ಸೂಚಿಸಿದೆ. ಇದೀಗ ಮಾರ್ಚ್ 2ರಂದು ಕೋರ್ಟ್ ತನ್ನ ನಿರ್ಧಾರ ತಿಳಿಸಲಿದೆ. ಸಂಸದ ಪರ್ವೇಶ್ ವರ್ಮಾ ಕೂಡ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಆದ ಸ್ಥಿತಿಯೇ ನಿಮಗೂ ಆಗಲಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರಿಗೆ ಎಚ್ಚರಿಕೆ ನೀಡಿದ್ದರು.
ದೇಶದಲ್ಲಿ ಒಂದೇ ಕಾನೂನು ಜಾರಿಯಲ್ಲಿದೆ. ಕೋರ್ಟ್ ಕೂಡ ಒಂದೇ ಆಗಿದೆ. ಪೊಲೀಸರು ಕೂಡ ಅವರೇ.. ಆದರೆ ವಿಚಾರಣಾ ಶೈಲಿ, ನೋಟಿಸ್‌ಗೆ ಪ್ರತಿಕ್ರಿಯೆ ಸೇರಿದಂತೆ ದೆಹಲಿ ಗಲಭೆ ವಿಚಾರದಲ್ಲಿ ನಡೆಯುತ್ತಿರುವ ಎಲ್ಲಾ ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಂಡಾಗ ಪಕ್ಷಪಾತ ಧೋರಣೆ ನಡೆಯುತ್ತಿದ್ಯಾ..? ಕಾರ್ಯಾಂಗ, ನ್ಯಾಯಾಂಗದ ಮೇಲೆ ಶಾಸಕಾಂಗ ದರ್ಬಾರ್ ಮಾಡುತಿದ್ಯಾ ಎನ್ನುವ ಅನುಮಾನ ಮೂಡುವಂತೆ ಮಾಡುತ್ತಿದೆ.