ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಶಶಿ ಶೇಖರ್ ವೆಂಪಾಟಿ ಅವರು BBC (British Broadcasting Corporation)ನ ಮಹತ್ವದ ಕಾರ್ಯಕ್ರಮಕ್ಕೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ದೆಹಲಿ ಗಲಭೆಯ ಸಮಯದಲ್ಲಿ BBC ಸಂಸ್ಥೆಯಿಂದ ಏಕಪಕ್ಷೀಯವಾದ ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಾಳಿರುವುದಾಗಿ ತಮ್ಮ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ನವ ದೆಹಲಿಯಲ್ಲಿ ಮಾರ್ಚ್ 8ರಂದು BBC ಸಂಸ್ಥೆಯಿಂದ ಆಯೋಜಿಸಲಾಗಿದ್ದ ಮಹಿಳಾ ಆಟಗಾರ್ತಿಯರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವೆಂಪಾಟಿ ಅವರಿಗೆ ಆಹ್ವಾನ ನೀಡಲಾಗಿತ್ತು.
BBCಯ ಮುಖ್ಯ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಪತ್ರಕರ್ತೆ ಯೋಗಿತಾ ಲಿಮಾಯೆ ಅವರ ವರದಿಯನ್ನು ಉಲ್ಲೇಖ ಮಾಡಲಾಗಿದೆ. ಈ ವರದಿಯು ದೆಹಲಿ ಗಲಭೆಯ ಸಂದರ್ಭದಲ್ಲಿ ಪೊಲೀಸರ ಪಾತ್ರವನ್ನು ವಿಶ್ಲೇಷಿಸಿದ ವರದಿ ಇದಾಗಿತ್ತು. ವರದಿಯಲ್ಲಿ ದೆಹಲಿ ಪೊಲೀಸರು ಗಲಭೆಯನ್ನು ಹುಟ್ಟುಹಾಕುತ್ತಿರುವ ಕೆಲವರಿಗೆ ಸಹಾಯಾಸ್ತ ಚಾಚುತ್ತಿರುವುದು ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾಗಿರುವುದಕ್ಕೆ ಕಾರಣವನ್ನು ಕೂಡಾ ತೋರಿಸಲಾಗಿತ್ತು. ಹಲವು ಸಾಕ್ಷಿಗಳ ಹೇಳಿಕೆಯ ಮೇರೆಗೆ ಈ ವರದಿಯನ್ನು ನೀಡಲಾಗಿತ್ತು.

BBC ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ಪೊಲೀಸರು ಗಲಭೆಕಾರರ ಜೊತೆಗೂಡಿ ಕಲ್ಲುತೂರಾಟ ನಡೆಸುವುದು ಕೂಡಾ ಸ್ಪಷ್ಟವಾಗಿ ತೋರಿಸಲಾಗಿತ್ತು. ಇನ್ನು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದ 23 ವರ್ಷ ವಯಸ್ಸಿನ ಯುವಕ ಫೈಜಾ಼ನ್ ಸಾವಿನ ಕುರಿತಾದ ತನಿಖಾ ವರದಿಯನ್ನು ಕೂಡಾ BBC ಪ್ರಸಾರ ಮಾಡಿತ್ತು. ಈ ತನಿಖಾ ವರದಿಗಳು ದೆಹಲಿ ಪೊಲೀಸರ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿತ್ತು.
ಈ ವರದಿಯನ್ನು ಏಕಪಕ್ಷೀಯ ವರದಿ ಎಂದು ಹಾಗೂ ಗಲಭೆಯಿಂದ ಉರಿಯುತ್ತಿದ್ದ ದೆಹಲಿಯಲ್ಲಿ ಮತ್ತಷ್ಟು ಅಶಾಂತಿಯನ್ನು ಉಂಟು ಮಾಡಲು ಕಾರಣವಾಯಿತು ಎಂದು ಪ್ರಸಾರ ಭಾರತಿ ಆರೋಪಿಸಿದೆ. ಗಲಭೆಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದ ದೆಹಲಿ ಪೊಲೀಸರ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಗಲಭೆಕೋರರ ಮಾರಣಾಂತಿಕ ದಾಳಿಯಿಂದ ಗಲಭೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅವರ ಸಾವಿನ ಕುರಿತು ಹಾಗೂ ಇಂಟೆಲಿಜೆನ್ಸ್ ಅಧಿಕಾರಿಯ ಮೇಲೆ ನಡೆದ ಇರಿತದಿಂದ ಅವರು ಮೃತಪಟ್ಟಿರುವ ಕುರಿತು ಯಾವುದೇ ವರದಿಯನ್ನು ಮಾಡಲಾಗಿಲ್ಲ ಎಂದು ವೆಂಪಾಟಿಯವರು ಪತ್ರದಲ್ಲಿ ಹೇಳಿದ್ದಾರೆ.

“ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಭಾರತಿ ಮತ್ತು BBC ಒಳ್ಳೆಯ ಸಂಬಂಧವನ್ನು ಹೊಂದಿದ್ದರೂ, ತಾವೂ ಕಾರ್ಯ ನಿರ್ವಹಿಸುವ ಮೂಲ ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಬರುವುದು ಮುಖ್ಯವಾಗಿರುತ್ತದೆ. BBC ಸಂಸ್ಥೆಯು ತನ್ನ ಸಂಪಾದಕೀಯ ನಿಲುವುಗಳನ್ನು ಬದಲಾಯಿಸುವ ಭರವಸೆಯನ್ನು ನಾವು ಹೊಂದಿದ್ದೇವೆ,” ಎಂದು ವೆಂಪಾಟಿ ಹೇಳಿದ್ದಾರೆ.