ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೀತಿದೆ. ಬಿಜೆಪಿ ಹಾಗು ಆಮ್ ಆದ್ಮಿ ಪಾರ್ಟಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೀತಿದೆ. ಕಾಂಗ್ರೆಸ್ ಸೇರಿದಂತೆ ಬೇರೆಲ್ಲಾ ಸಣ್ಣಪುಟ್ಟ ಪಕ್ಷಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಎಲ್ಲಾ 70 ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಕಡೆಗೆ ಮತದಾರನ ಒಲವು ಸ್ಪಷ್ಟವಾಗ್ತಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳಿಗೆ ಮಾರು ಹೋಗಿದ್ದಾರೆ ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು. ಇದು ಬಿಜೆಪಿ ನಾಯಕರನ್ನು ಕಂಗಾಲಾಗಿಸಿದೆ.
ಹೆಚ್ಚು ಓದಿದ ಸ್ಟೋರಿಗಳು
ದೆಹಲಿ ಮತದಾರರನ್ನು ಧರ್ಮದ ಆಧಾರದಲ್ಲಿ ಇಬ್ಭಾಗ ಮಾಡಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ದೆಹಲಿಯ ಚುನಾವಣೆ ಭಾರತ, ಪಾಕಿಸ್ತಾನ ನಡುವಿನ ಯುದ್ಧಕ್ಕೆ ಹೋಲಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಪ್ರಚಾರದಲ್ಲೇ ಕರೆ ಕೊಡುತ್ತಾರೆ. ಒಟ್ಟಾರೆ ಧರ್ಮದ ಆಧಾರದಲ್ಲಿ ಜನರು ರೊಚ್ಚಿಗೇಳುವಂತೆ ಮಾಡಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತಾಗುತ್ತಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆ ಕೊಟ್ಟ ನಾಲ್ಕೇ ದಿನದಲ್ಲಿ ದೆಹಲಿಯ ಯುವಕನೊಬ್ಬ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಹೋರಾಟಗಾರರ ಮೇಲೆ ಆರಡಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದ. ಈ ಘಟನೆಯಲ್ಲಿ ಓರ್ವ ಪತ್ರಿಕೋದ್ಯಮ ವಿದ್ಯಾರ್ಥಿ ಗಾಯಗೊಂಡು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪರಿಚತ ವ್ಯಕ್ತಿಯೊಬ್ಬ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುವ ಜನರ ಮೇಲೆ ದಾಳಿ ಮಾಡಿದ್ದು, ಉದ್ದೇಶಪೂರ್ವಕವಾಗಿ ನಡೆದ ಘಟನೆಯಾ ಎನ್ನುವ ಅನುಮಾನ ಮೂಡಲು ಶುರುವಾಗುತ್ತಿವೆ. ಈ ಅನುಮಾನ ಮೂಡಲು ಕಾರಣವಾಗಿದ್ದು ಅಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ. ರಾಜಕೀಯ ಯಶಸ್ವಿಗಾಗಿ ಗುಂಡು ಹಾರಿಸುವಂತೆ ಯೋಜನೆ ರೂಪಿಸಲಾಯ್ತಾ ಅನ್ನೋ ಪ್ರಶ್ನಾರ್ಥಕ ಚಿಹ್ನೆ ಮೂಡುವಂತಾಗಿದೆ. ಈ ಹೋರಾಟವನ್ನು ಹತ್ತಿಕ್ಕಿದ್ರೆ ಚುನಾವಣೆಯಲ್ಲಿ ಮತಗಳಿಸಬಹುದು ಅನ್ನೋ ಕಾರಣಕ್ಕೆ ಯಾರಾದರು ಸಂಚು ಮಾಡಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಅನುಮಾನಕ್ಕೆ ಹಲವಾರು ಕಾರಣಗಳೂ ಇವೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿದೆ. ಆದರೆ ಅಲ್ಲಿನ ಪೊಲೀಸ್ ವ್ಯವಸ್ಥೆ ಮೇಲೆ ಹಿಡಿತ ಹೊಂದಿರುವುದು ನಮ್ಮ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಒಂದನೇ ಅನುಮಾನ ಏನಪ್ಪ ಅಂದ್ರೆ, ಆ ಯುವಕ ಬಂದೂಕಿನಿಂದ ಗುಂಡು ಹಾರಿಸಿದ್ದು, ಪ್ರತಿಭಟನಾಕಾರರ ಮೇಲೆ. ಆ ವೇಳೆ ದೆಹಲಿ ಪೊಲೀಸರು ಶಸ್ತ್ರ ಸಜ್ಜಿತವಾಗಿ ಕೆಲವೇ ಅಡಿಗಳ ದೂರ ನಿಂತಿದ್ದರು.

ಓರ್ವ ಬಂದೂಕುಧಾರಿ ಗುಂಡು ಹಾರಿಸುತ್ತಿದ್ದಾನೆ ಎಂದರೆ, ಕಾನೂನು ಪಾಲನೆ ಮಾಡಬೇಕಿದ್ದ ಪೊಲೀಸರು ಮಾಡಬೇಕಿದ್ದ ಮೊದಲ ಕೆಲಸ ಎಂದರೆ ಆತನ ಮೇಲೆ ಫೈರ್ ಮಾಡುವುದು. ಆದರೆ ಪೊಲೀಸರು ಆ ಕೆಲಸವನ್ನು ಮಾಡುವುದಿಲ್ಲ. ಆತನನ್ನು ತುಂಬಾ ಸಾಮಾನ್ಯ ರೀತಿಯಲ್ಲಿ ಬಂಧನ ಮಾಡುತ್ತಾರೆ. ಮತ್ತೊಂದು ಎಂದರೆ ಬಂದೂಕಿನಿಂದ ಗುಂಡು ಹಾರಿಸುವಾಗ ಆ ಪೊಲೀಸರ ತಂಡ ಸುಮ್ಮನೆ ನಿಂತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಈ ದೃಶ್ಯಗಳು ಪೊಲೀಸರಿಗೆ ಮೊದಲೇ ಗೊತ್ತಿತ್ತಾ ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತಿದೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ನಡೆದ ದಾಳಿ ವೇಳೆ ಪೊಲೀಸರು ಕೆಲಕಾಲ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಇದೊಂದು ಅನುಮಾನ ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 17 ವರ್ಷದ ಯುವಕ ಗುಂಡು ಹಾರಿಸುವುದಕ್ಕಾಗಿ ಹಣ ಪಾವತಿ ಮಾಡಿದ್ದು ಯಾರು..? ಎಂದು ಪ್ರಶ್ನಿಸಿದ್ದಾರೆ. ಸಂಸತ್ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನವೇ ರಾಹುಲ್ ಗಾಂಧಿ ಈ ಪ್ರಶ್ನೆ ಮಾಡಿರೋದು ಭಾರೀ ಕೋಲಾಹಲವನ್ನು ಸೃಷ್ಟಿ ಮಾಡುವ ಎಲ್ಲಾ ಸಾಧ್ಯಗಳು ಇವೆ.
ಇನ್ನು ಅರವಿಂದ್ ಕೇಜ್ರಿವಾಲ್ ಕೂಡ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಸಿಆರ್, ಎನ್‌ಆರ್‌ಸಿ ಆಕ್ರೋಶಭರಿತ ಹೇಳಿಕೆಗಳು ದೆಹಲಿ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ. ಇಲ್ಲಿ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯುತ್ತೆ ಎಂದಿದ್ದಾರೆ. ದೆಹಲಿ ಜಾಮಿಯಾ ಫೈರಿಂಗ್ ವಿಚಾರ ಮುಂದೆ ಯಾವ ಪರಿಣಾಮ ಬೀರುತ್ತೆ ಎನ್ನುವುದು ಚುನಾವಣಾ ಫಲಿತಾಂಶಕ್ಕೆ ಹಿಡಿದ ಕೈಗನ್ನಡಿಯಾಗಿರಲಿದೆ.