ದೇಶದ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿ ಹೀನಾಯವಾಗಿ ಸೋಲನುಭವಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ನೇತೃತ್ವದ ಬಿಜೆಪಿ ಈ ಬಾರಿ ಗೆಲುವು ಸಾಧಿಸಲಿದೆಯೇ? ಅದಕ್ಕಾಗಿ ತಯಾರಿ ನಡೆಸುತ್ತಿದೆಯೇ? ಅಥವಾ ಚುನಾವಣೆ ಪೂರ್ವ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂಬ ಭೀತಿಯಿಂದ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಲಿದೆಯೇ?
ಇಂತಹದ್ದೊಂದು ಅನುಮಾನ ದಟ್ಟವಾಗತೊಡಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೂ ಅವರ ಅಲೆ 2015 ರಲ್ಲಿ ಕಿಂಚಿತ್ತೂ ಕಂಡುಬಂದಿರಲಿಲ್ಲ. ಹಾಗೊಂದು ವೇಳೆ ಬಂದಿದ್ದೇ ಆಗಿದ್ದರೆ ಬಿಜೆಪಿ ಆಪ್ ವಿರುದ್ಧ ಜಯಗಳಿಸಿ ಅಧಿಕಾರಕ್ಕೆ ಬರಬಹುದಾಗಿತ್ತು. ಆದರೆ, ಮೋದಿ ಅಲೆಯಾಗಲೀ ಅಥವಾ ಹವಾ ಆಗಲಿ ದೆಹಲಿಯ ಯಾವುದೇ ಮೂಲೆಯಲ್ಲೂ ಬೀಸಲೇ ಇಲ್ಲ. ಹೀಗಾಗಿ ಹೀನಾಯ ಸೋಲು ಕಂಡ ಕಮಲ ಪಾಳಯ ಕೇವಲ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
ಐದು ವರ್ಷಗಳ ನಂತರ ಇದೀಗ ದೆಹಲಿ ಅಸೆಂಬ್ಲಿಗೆ ಮತ್ತೆ ಚುನಾವಣೆ ಎದುರಾಗಿದೆ. ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದ್ದರೆ, ಎಂದಿನಂತೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿ ತಲೆಕೆಡಿಸಿಕೊಂಡಿದೆ. ಆದರೆ, ಕೇಂದ್ರದಲ್ಲಿ ಆಡಳಿತಾರೂ ಬಿಜೆಪಿ ಮಾತ್ರ ಚುನಾವಣೆ ತಾಲೀಮು ಆರಂಭಿಸಿದೆಯಾದರೂ ಮೋದಿ, ಅಮಿತ್ ಶಾ ಸೇರಿದಂತೆ ಪಕ್ಷದ ಯಾವುದೇ ಘಟಾನುಘಟಿಗಳ ಮುಖದಲ್ಲಿಯೂ ಗೆಲುವಿನ ಚೆಹರೆಯೇ ಕಂಡುಬರುತ್ತಿಲ್ಲ.

ಎಲೆಕ್ಷನ್ ಮೀಟಿಂಗ್ ಮಾಡಬೇಕು, ಅದಕ್ಕಾಗಿ ಎಲ್ಲರೂ ಒಂದೆಡೆ ಕುಳಿತು ಚುನಾವಣೆ ಬಗ್ಗೆ ಕೆಲವು ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟರೆ ಇಡೀ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಕಳೆದ ಐದು ವರ್ಷಗಳಲ್ಲಿ ಕೇಜ್ರಿವಾಲ್ ಸರ್ಕಾರ ಜಾರಿಗೆ ತಂದಿರುವ ಅನೇಕ ಜನಪರ ಕಾರ್ಯಕ್ರಮಗಳ ಎದುರು ಬಿಜೆಪಿಗೆ ಜನರ ಮುಂದಿಡಲು ಯಾವುದೇ ವಿಚಾರಗಳು ಸಿಗುತ್ತಿಲ್ಲ. ಆಡಳಿತ ವಿರೋಧಿ ಎಂದು ಹೇಳಿಕೊಳ್ಳುವಂತಹ ಸರಕು ಬಿಜೆಪಿಗೆ ಸಿಗುತ್ತಿಲ್ಲ. ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸರ್ಕಾರ ಹೊಗಳಿಕೊಳ್ಳುವಂತಹ ಅಥವಾ ಜನ ಮೆಚ್ಚುವಂತಹ ಕೆಲಸವನ್ನೇನೂ ಮಾಡಿಲ್ಲ. ಹಾಗೊಂದು ವೇಳೆ ಅದೇ CAA, NRC ಅಂತ ಜನರ ಮುಂದಿಟ್ಟರೆ ಥೂ ಛೀ ಎಂದು ಉಗಿಯುವುದು ಗ್ಯಾರಂಟಿ. ಹೀಗಾಗಿ ಬಿಜೆಪಿ ನಾಯಕರು ದೆಹಲಿ ಚುನಾವಣೆಯಲ್ಲಿ ಅಡಕತ್ತರಿಗೆ ಸಿಲುಕಿಕೊಳ್ಳುವಂತಹ ಸಂದಿಗ್ಧತೆ ಎದುರಾಗಿದೆ. ಈ ಎಲ್ಲಾ ನಕಾತಾತ್ಮಕ ಅಂಶಗಳಿಂದಲೇ ಬಿಜೆಪಿ ದೆಹಲಿ ಚುನಾವಣೆಯಲ್ಲಿ ಶಸ್ತ್ರತ್ಯಾಗ ಮಾಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಇದಕ್ಕೆ ಮುನ್ನುಡಿ ಬರೆದಿರುವುದು ಮುಖ್ಯಮಂತ್ರಿ ಹುದ್ದೆ. ಈ ಬಾರಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೇ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ನಿರ್ಧರಿಸಿದೆ.
ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಗೃಹಮಂತ್ರಿ ಅಮಿತ್ ಶಾ ಅವರು ಚುನಾವಣೆ ಪೂರ್ವಸಿದ್ಧತಾ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಇಷ್ಟೇ ಅಲ್ಲ, ಈ ಬಾರಿ 40-45 ಹೊಸಮುಖಗಳಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಈ ಪೈಕಿ ನಾಲ್ವರು ಹಾಲಿ ಸಂಸದರಿಗೂ ಟಿಕೆಟ್ ಕೊಟ್ಟು ಅವರನ್ನು ಗೆಲ್ಲಿಸಿ ಹೋಗಬಹುದಾದ ಹೆಚ್ಚಿನ ಮರ್ಯಾದೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಚಿಂತಿಸಿದೆ.

2015 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 70 ಸೀಟುಗಳ ಪೈಕಿ 67 ಸೀಟುಗಳನ್ನು ಗೆದ್ದು ಪ್ರತಿಪಕ್ಷಕ್ಕೆ ಅಧಿಕೃತ ಸ್ಥಾನವೇ ಇಲ್ಲದಂತೆ ಮಾಡಿತ್ತು. ಐದು ವರ್ಷಗಳ ನಂತರ ಬಂದಿರುವ ಈ ಚುನಾವಣೆಯಲ್ಲಿಯೂ ಹಿಂದಿನ ಫಲಿತಾಂಶವನ್ನು ಮರುಕಳಿಸಲು ಆಮ್ ಆದ್ಮಿ ಪಾರ್ಟಿಗೆ ಸ್ವಲ್ಪ ಕಷ್ಟವಾಗಬಹುದು. ಸರ್ಕಾರವೇನೋ ಉತ್ತಮ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರೂ ಸ್ಥಳೀಯವಾಗಿ ಕೆಲವು ಶಾಸಕರು ತಮ್ಮ ದರ್ಪ ಮತ್ತಿತರೆ ಕಾರಣಗಳಿಂದ ಹೆಸರು ಕೆಡಿಸಿಕೊಂಡಿದ್ದಾರೆ. ಹೀಗಾಗಿ ಇಂತಹ ಶಾಸಕರು ಇರುವ ಕಡೆಗೆ ಹೊಸ ಮುಖಗಳಿಗೆ ಟಿಕೆಟ್ ಕೊಡಲು ಆಪ್ ನಿರ್ಧರಿಸಿದೆ.
ಉಚಿತ ಕುಡಿಯುವ ನೀರು, ಸಬ್ಸಿಡಿ ವಿದ್ಯುತ್, ಮೊಹಲ್ಲಾ ಕ್ಲಿನಿಕ್, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೇಜ್ರಿವಾಲ್ ಸರ್ಕಾರ ನೀಡಿದೆ. ಈ ಕಾರ್ಯಕ್ರಮಗಳೇ ಬಿಜೆಪಿಗೆ ಈ ಬಾರಿ ಮುಳುವಾಗಲಿವೆ ಮತ್ತು ಬಹುದೊಡ್ಡ ಸವಾಲಾಗಿ ಪರಿಣಮಿಸಿವೆ. ಇಂತಹ ಕಾರ್ಯಕ್ರಮಗಳಿಗೆ ವಿರುದ್ಧವಾಗಿ ಸಿಎಎ, ಎನ್ಆರ್ ಸಿ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿಕೊಂಡರೆ ಬರುವ ಮತಗಳೂ ಬರುವುದಿಲ್ಲ ಎಂಬ ಖಾತರಿ ಬಿಜೆಪಿ ನಾಯಕರಿಗೆ ಬಂದಾಗಿದೆ. ಅಲ್ಲದೇ, ಈಗಾಗಲೇ ದೇಶಾದ್ಯಂತ ಈ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ನಡೆದು ವಿವಾದ ಸೃಷ್ಟಿಯಾಗಿರುವುದರಿಂದ ದೆಹಲಿ ಮತದಾರರು ಜಾಗೃತರಾಗಿದ್ದಾರೆ. ಹೀಗಾಗಿ ಬಿಜೆಪಿಗೆ ಚುನಾವಣೆ ನುಂಗಲಾರದ ತುತ್ತಾಗಿದೆ. ಕೇಜ್ರಿವಾಲ್ ಜನಪ್ರಿಯತೆ ಎದುರು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾರನ್ನೂ ಬಿಂಬಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.
ಕೇಜ್ರಿವಾಲ್ ಅವರ ಜನಪ್ರಿಯತೆ ಮುಂದೆ ಆಡಳಿತ ವಿರೋಧಿ ವಿಚಾರ ಮಸುಕಾಗಲಿದೆ. ಏಕೆಂದರೆ ಅವರು ಜನರ ನಡುವೆ ಕೆಲಸ ಮಾಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಇನ್ನೇನಿದ್ದರೂ ಸ್ಥಳೀಯ ಮಟ್ಟದಲ್ಲಿ ಅಂದರೆ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಶಾಸಕರ ಆಡಳಿತ ವಿರೋಧಿ ಅಲೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಬೇಕಾದ ಅನಿವಾರ್ಯತೆ ಬಿಜೆಪಿಗಿದೆ. ಆದರೆ, ಇದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಸಣ್ಣ ಪುಟ್ಟ ಆಡಳಿತ ವಿರೋಧಿ ಅಲೆಯಲ್ಲಿರುವ 30 ರಿಂದ 35 ಶಾಸಕರಿಗೆ ಈ ಬಾರಿ ಟಿಕೆಟ್ ನೀಡದಿರಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಇವರಲ್ಲಿ ಮೂವರು ಮಂತ್ರಿಗಳೂ ಇದ್ದಾರೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯು ಬಿಜೆಪಿಗೆ ಇದ್ದ ಏಕೈಕ ಪ್ರಚಾರದ ಸರಕನ್ನೂ ಕಿತ್ತುಕೊಳ್ಳಲಿದೆ.
ಇನ್ನು ದೆಹಲಿಯಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಲ್ಲಿ ಶೇ.13 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಓಖ್ಲಾ, ಸೀಲಂಪುರ, ಮಾತಿಯಾ ಮಹಲ್, ಬಲ್ಲಿಮರನ್, ಮುಸ್ತಾಫಾಬಾದ್ ಮತ್ತು ಚಾಂದಿನಿ ಚೌಕ್ ಸೇರಿದಂತೆ 15 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕರಾಗಿದ್ದಾರೆ. ಆದರೆ, ಇವರೆಲ್ಲರೂ ಆಮ್ ಆದ್ಮಿ ಪಾರ್ಟಿ ಪರವಾಗಿ ನಿಲ್ಲುತ್ತಾರೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಆಮ್ ಆದ್ಮಿ ಪಾರ್ಟಿ ಮೃದು ಧೋರಣೆ ತಳೆದಿದೆಯಲ್ಲದೇ, ತಮ್ಮ ಹೋರಾಟಕ್ಕೆ ಸಾಥ್ ನೀಡಲಿಲ್ಲ ಎಂಬ ಅಸಮಾಧಾನ ಮುಸ್ಲಿಂ ಸಮುದಾಯದ ಒಂದು ವರ್ಗದಲ್ಲಿದೆ. ಹೀಗಾಗಿ ಇಂತಹ ಅತೃಪ್ತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ನೆರವಾಗಬಹುದು.
ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಹಾಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಜಾಟ್ ಸಮುದಾಯದ ನಾಯಕರಾಗಿದ್ದು, ಆ ವರ್ಗದ ಮತಗಳನ್ನು ಸೆಳೆಯಬಲ್ಲರು, ಬನಿಯಾ ಸಮುದಾಯಕ್ಕೆ ಸೇರಿದ ರಾಜ್ಯಸಭೆ ಸದಸ್ಯ ವಿಜಯ್ ಗೋಯಲ್ ಈ ಸಮುದಾಯದ ಮತಗಳನ್ನು ಸೆಳೆಯಬಹುದಾಗಿದ್ದು, ಗುಜ್ಜಾರ್ ಸಮುದಾಯಕ್ಕೆ ಸೇರಿರುವ ರಮೇಶ್ ಬಿಧೂರಿ ಅವರನ್ನು ಕಣಕ್ಕಿಳಿಸಿ ಆ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಲೆಕ್ಕಾಚಾರ ಹಾಕಿದೆ. ಅದೇರೀತಿ ಸಿಖ್ಖರ ಮತಗಳನ್ನು ಸೆಳೆಯಲು ಆರ್.ಪಿ.ಸಿಂಗ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚನೆ ನಡೆಸಿದೆ.
ಈ ಎಲ್ಲಾ ಸಂಸದರನ್ನು ಕಣಕ್ಕಿಳಿಸಿ ಬಹುಮತ ಬರುವಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡು 16 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಲೆಕ್ಕಾಚಾರಗಳು ನಡೆಯುತ್ತಿವೆ ಎನ್ನುತ್ತವೆ ಬಿಜೆಪಿ ಮೂಲಗಳು.