ದೆಹಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಲಿಡುವ ಕೆಲವೇ ಕ್ಷಣಗಳ ಮುನ್ನ ಕೆಲವು ಭಾಗದಲ್ಲಿ ಭಾರೀ ಸಂಘರ್ಷ ಭುಗಿಲೆದ್ದಿದ್ದು, ಸಿಎಎ- ಎನ್ ಆರ್ ಸಿ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವಿನ ಹಿಂಸಾಚಾರಕ್ಕೆ ಪೊಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ.
ಈಶಾನ್ಯ ದೆಹಲಿಯ ಗೋಕುಲ್ ಪುರಿ ಪ್ರದೇಶದಲ್ಲಿ ಸೋಮವಾರ ಸಂಜೆ ಈ ಘಟನೆ ಸಂಭವಿಸಿದ್ದು, ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಗೋಕುಲ್ ಪುರ, ಭಜನ್ ಪುರ, ಜಫ್ರಾಬಾದ್, ಮೌಜ್ ಪುರ್ ಭಾಗದಲ್ಲಿ ವ್ಯಾಪಕ ಸಂಘರ್ಷದ ವಾತಾವರಣ ಉಂಟಾಗಿದ್ದು, ಪೆಟ್ರೋಲ್ ಬಂಕ್, ರಸ್ತೆಬದಿ ನಿಂತಿದ್ದ ವಾಹನಗಳು, ಅಂಗಡಿಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ.
ಭಾನುವಾರ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ನೂರಾರು ಮಂದಿ ಸಿಎಎ- ಎನ್ ಆರ್ ಸಿ ಪರ ಪ್ರತಿಭಟನೆ ನಡೆಸಿ, ದೆಹಲಿಯ ರಸ್ತೆಗಳನ್ನು ಬಂದ್ ಮಾಡಿರುವ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟಗಾರರನ್ನು ತೆರವುಗೊಳಿಸಿ, ರಸ್ತೆಗಳನ್ನು ಸಂಚಾರಮುಕ್ತಗೊಳಿಸದೇ ಹೋದರೆ, ದೆಹಲಿಯ ಜನ ರಸ್ತೆಗಿಳಿದು ಪ್ರತೀಕಾರ ತೀರಿಸಿಕೊಳ್ಳಲಿದ್ದಾರೆ ಎಂದು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಅಂತಹ ಬೆದರಿಕೆ ಬೆನ್ನಲ್ಲೇ ಮಧ್ಯಾಹ್ನದ ಹೊತ್ತಿಗೆ ಸಿಎಎ-ಎನ್ ಆರ್ ಸಿ ಪರ ಮತ್ತು ವಿರೋಧಿ ಗುಂಪುಗಳ ನಡುವಿನ ಸಂಘರ್ಷ ಆರಂಭವಾಗಿತ್ತು. ಸೋಮವಾರ ಅದು ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿದ್ದು, ಸಂಜೆ ಹೊತ್ತಿಗೆ ಪರಿಸ್ಥಿತಿ ಕೈಮೀರಿತು.
ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರದ ವೀಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೋಗಳಲ್ಲಿ ಪ್ರತಿಭಟನಾಕಾರರು ಪರಸ್ಪರ ಕಲ್ಲು ತೂರುತ್ತಿರುವುದು, ಬಡಿದಾಡುವುದು, ಪೆಟ್ರೋಲ್ ಬಾಂಬುಗಳನ್ನು ಎಸೆಯುವುದು ಸ್ಪಷ್ಟವಾಗಿ ದಾಖಲಾಗಿದೆ. ಸಿಎಎ ಪರ ಗುಂಪಿನವರು ಕೆಲವರು ಕೇಸರಿ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದರೆ, ಸಿಎಎ ವಿರೋಧಿಗಳು ಟೊಪ್ಪಿ ಹಾಕಿರುವುದು ಕಾಣುತ್ತಿದೆ. ಮೌಜ್ ಪುರ್ ಮತ್ತು ಚಾಂದ್ ಭಾಗ್ ಪ್ರದೇಶದಲ್ಲಿ ಗುಂಪೊಂದು ಭಾರತ್ ಮಾತಾಕಿ ಜೈ ಹೇಳುತ್ತಾ, ಪೆಟ್ರೋಲ್ ಬಾಂಬುಗಳನ್ನು ಎಸೆಯುವುದು ಕೂಡ ವೀಡಿಯೋಗಳಲ್ಲಿ ಕಂಡುಬಂದಿದೆ.
ಈ ನಡುವೆ, ಕೆಲವು ವೀಡಿಯೋಗಳಲ್ಲಿ, ಸ್ವತಃ ಪೊಲೀಸರು ಜನವಸತಿ ಕಟ್ಟಡಗಳತ್ತ ಕಲ್ಲು ತೂರುವ ದೃಶ್ಯಾವಳಿಗಳೂ ಇವೆ. ದೆಹಲಿ ಪೊಲೀಸರು ಉತ್ತರಪ್ರದೇಶ ಮತ್ತು ಮಂಗಳೂರು ಪೊಲೀಸರ ಮಾರ್ಗದಲ್ಲಿ ಸಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಜಾಲತಾಣಗಳಲ್ಲಿ ಕೆಲವು ಎತ್ತಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಕೈಯಲ್ಲಿ ರಿವಾಲ್ವರ್ ಹಿಡಿದ ವ್ಯಕ್ತಿಯೊಬ್ಬ ಗುಂಪಿನತ್ತ ಗುರಿಯಿಟ್ಟು ಬೆದರಿಸುತ್ತಾ ಖಾಲಿ ರಸ್ತೆಯಲ್ಲಿ ಧೀರೋದಾತ್ತವಾಗಿ ಓಡಾಡುವ ದೃಶ್ಯಾವಳಿ ಇದೆ. ಆತನನ್ನು ತಡೆಯಲು ಬಂದ ಪೊಲೀಸ್ ಪೇದೆಯೊಬ್ಬರಿಗೆ ಆತ ನೇರ ಗನ್ ಗುರಿ ಹಿಡಿದು ಬೆದರಿಸುವ ದೃಶ್ಯ ಕೂಡ ಸೆರೆಯಾಗಿದೆ. ಜೊತೆಗೆ ಆತನ ಬೆನ್ನಿಗೆ ಎದುರಾಳಿ ತಂಡದ ಮೇಲೆ ನಿರಂತರ ಕಲ್ಲು ತೂರುವ ಗುಂಪೊಂದು ಹಿಂಬಾಲಿಸಿಕೊಂಡು ಬರುತ್ತಿರುವುದೂ ಕಾಣುತ್ತಿದೆ.
ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ; ದೆಹಲಿ ಪೊಲೀಸರು ಸ್ವತಃ ಹಿಂಸಾಚಾರಕ್ಕೆ ಇಳಿದಿರುವ ದೃಶ್ಯಾವಳಿಗಳು ಆಘಾತಕಾರಿಯಾಗಿವೆ. ಕೆಲವು ಗುಂಪಿನವರು ರಿವಾಲ್ವರ್ ಹಿಡಿದು ರಾಜಾರೋಷವಾಗಿ ಪೊಲೀಸರನ್ನೇ ಬೆದರಿಸಿದರೂ ಕೈಕಟ್ಟಿಕೊಂಡು ನಿಂತಿರುವ ಪೊಲೀಸರು, ಮತ್ತೆ ಕೆಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರಷ್ಟೇ ಅಲ್ಲದೆ, ಜನವಸತಿ ಪ್ರದೇಶಗಳ ಮೇಲೆಯೂ ಕಲ್ಲು ತೂರುವುದು ವೀಡಿಯೋಗಳಲ್ಲಿ ದಾಖಲಾಗಿದೆ.
ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಪೇದೆಯೊಬ್ಬರ ಜೀವಹಾನಿ ಮತ್ತು ಡಿಸಿಪಿಯೊಬ್ಬರು ಗಾಯಗೊಂಡಿರುವ ಘಟನೆಗೆ ಮರುಗುತ್ತಲೇ ಹಲವರು, ಇಡೀ ಹಿಂಸಾಚಾರಕ್ಕೆ ಮೂಲತಃ ಪೊಲೀಸರ ತಾರತಮ್ಯ ಧೋರಣೆಯೇ ಕಾರಣ. ಡಿಸಿಪಿಯೊಬ್ಬರ ಪಕ್ಕದಲ್ಲೇ ನಿಂತುಕೊಂಡು ಭಾನುವಾರ ಕಪಿಲ್ ಮಿಶ್ರಾ, ನಾಳೆ ರಸ್ತೆಗಳಲ್ಲಿ ಇರುವ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನಾಕಾರರನ್ನು ಪೊಲೀಸರು ತೆರವು ಮಾಡದೇ ಇದ್ದರೆ, ನಾವೇ ರಸ್ತೆಗಿಳಿಯೋಣ, ರಸ್ತೆಗಳನ್ನು ಮುಕ್ತಗೊಳಿಸೋಣ ಎಂದು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುವ ಹೇಳಿಕೆ ನೀಡಿದ್ದರೂ, ದೆಹಲಿ ಪೊಲೀಸರು ಆ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ, ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆ ನೀಡುವ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಮಿಶ್ರಾ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದರೆ, ದೆಹಲಿ ಹಿಂಸಾಚಾರಕ್ಕೆ ಅವಕಾಶವೇ ಇರುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಹಲವರು ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.
ಇದೀಗ ಮುಖ್ಯಪೇದೆ ಸಾವಿಗೆ ಕಾರಣ ಯಾರು ಎಂಬ ಬಗ್ಗೆ ಸಿಎಎ ಪರ ಮತ್ತು ವಿರೋಧಿ ಬಣಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ದ್ವೇಷಕಾರುವ ಆರೋಪಗಳ ಸುರಿಮಳೆ ಆರಂಭವಾಗಿದ್ದು, ಪೇದೆ ಸಾವಿಗೆ ಸಿಎಎ ಪರ ಹೋರಾಟಗಾರರೇ ಕಾರಣ ಎಂದು ಸಿಎಎ ವಿರೋಧಿಗಳು, ಸಿಎಎ ವಿರೋಧಿ ಹೋರಾಟಗಾರರೇ ಕಾರಣವೆಂದು ಪರ ಇರುವವರು ಆರೋಪಿಸತೊಡಗಿದ್ದಾರೆ. ಒಂದೇ ವೀಡಿಯೋವನ್ನು ಎರಡೂ ಕಡೆಯವರು ಶೇರ್ ಮಾಡಿ, ಪರಸ್ಪರರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಅಲ್ಲದೆ, ಪೊಲೀಸ್ ಪೇದೆಯ ಫೋಟೋವನ್ನು ಮುಂದಿಟ್ಟುಕೊಂಡು ಇನ್ನಷ್ಟು ಹಿಂಸಾಚಾರಕ್ಕೆ ಕುಮಕ್ಕು ನೀಡುವ ಪ್ರಯತ್ನಗಳು ಕೂಡ ವ್ಯಾಪಕವಾಗಿ ನಡೆಯುತ್ತಿವೆ.
ಈ ನಡುವೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಯೋಗಿಂದರ್ ಯಾದವ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಜನತೆಗೆ ಶಾಂತಿ ಕಾಪಾಡುವಂತೆ ಕರೆನೀಡುವುದರ ಜೊತೆಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಯುವಂತೆ ದೆಹಲಿ ಪೊಲೀಸ್ ಹೊಣಗಾರಿಕೆ ಹೊತ್ತಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋರಿದ್ದಾರೆ. ಈ ನಡುವೆ, ಕಳೆದ ಒಂದು ತಿಂಗಳಿನಿಂದ ಪದೇ ಪದೇ ದೆಹಲಿಯಲ್ಲಿ ಹಿಂಸಾಚಾರ, ಹತ್ಯೆ, ಬಂದೂಕು ದಾಳಿಗಳು ಮರುಕಳಿಸುತ್ತಿವೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ತಡೆಯಬೇಕಾದ ಪೊಲೀಸರು, ಸ್ವತಃ ಇಂತಹ ಘಟನೆಗಳಲ್ಲಿ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಆರೋಪ ಹೊತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಗೃಹ ಸಚಿವ ಶಾ ರಾಜೀನಾಮೆ ನೀಡಬೇಕು ಎಂಬ ಕೂಗು ಕೂಡ ಜೋರಾಗಿದೆ.
ಸಂಜೆ ಹೊತ್ತಿಗೂ ಹಿಂಸಾಚಾರ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲವೆನ್ನಲಾಗುತ್ತಿದ್ದು, ಪೊಲೀಸರು ಬಹುತೇಕ ಕಡೆಗಳಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಕೆಲವು ಕಡೆ ಒಂದೋ ಪೊಲೀಸರು ಒಂದು ಗುಂಪಿನ ಪರ ನಿಂತು ಮತ್ತೊಂದು ಗುಂಪಿನ ಮೇಲಿನ ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ; ಇಲ್ಲವೇ ಮೂಕಪ್ರೇಕ್ಷಕರಾಗಿ ಎರಡೂ ಗುಂಪಿನ ನಡುವಿನ ಸಂಘರ್ಷವನ್ನು ನೋಡಿಕೊಂಡು ಸುಮ್ಮನಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಗಲಭೆ ಇಷ್ಟು ಅಲ್ಪ ಅವಧಿಯಲ್ಲಿ ಇಷ್ಟು ವ್ಯಾಪಕವಾಗಿ ಹಬ್ಬಿದೆ. ಬಹುತೇಕ ಈಶಾನ್ಯ ದೆಹಲಿಯಾದ್ಯಂತ ಗಲಭೆ ವ್ಯಾಪಿಸಿದ್ದು, ಆ ಭಾಗದ ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ಸಿಎಎ-ಎನ್ ಆರ್ ಸಿ ಹಿನ್ನೆಲೆಯಲ್ಲಿ ಧಾರ್ಮಿಕ ಸಹಬಾಳ್ವೆಯ ಕುರಿತು, ಧಾರ್ಮಿಕ ಸ್ವಾತಂತ್ರ್ಯದ ಕುರಿತು ತಮ್ಮ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಯೊಂದಿಗಿನ ತಮ್ಮ ಸೋಮವಾರ ಸಂಜೆಯ ಮಾತುಕತೆ ವೇಳೆ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ವಿಪರ್ಯಾಸವೆಂದರೆ; ಅದೇ ಟ್ರಂಪ್ ದೆಹಲಿಗೆ ಕಾಲಿಡುವ ಹೊತ್ತಿಗಾಗಲೇ ಧರ್ಮಾಧಾರಿತ ತಾರತಮ್ಯದ ಸಿಎಎ-ಎನ್ ಆರ್ ಸಿ ಪರ- ವಿರೋಧಿಗಳ ಸಂಘರ್ಷದ ಬೆಂಕಿ ಭುಗಿಲೆದ್ದಿದೆ.