ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. 70 ಕ್ಷೇತ್ರಗಳ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ 62 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನುಳಿದ 8 ಕ್ಷೇತ್ರಗಳಲ್ಲಿ ಕಮಲ ನಗೆ ಬೀರಿದೆ. ಕಾಂಗ್ರೆಸ್ ಮಾತ್ರ 2015ರಂತೆಯೇ ಈ ಬಾರಿ ಕೂಡ ಶೂನ್ಯ ಸಂಪಾದನೆ ಮಾಡಿದೆ. ಆದರೆ ನರೇಂದ್ರ ಮೋದಿ 2015ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸೋಲಿಸಿ ಸರ್ಕಾರ ರಚನೆ ಮಾಡಿದ್ದರು. ಆ ಬಳಿಕ ಕಳೆದ ವರ್ಷ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 25 ವರ್ಷಗಳ ಬಳಿಕ ಸರ್ಕಾರ ರಚನೆ ಮಾಡುವಷ್ಟು ಸ್ಥಾನವನ್ನು ಏಕೈಕ ಪಕ್ಷವಾಗಿ ಪಡೆಯುವಂತೆ ಮಾಡಿದ್ದರು. ನರೇಂದ್ರ ಮೋದಿ ಆ ಬಳಿಕ ದೇಶಭಕ್ತಿಯ ಅಜೆಂಡಾ ಹಿಡಿದು ದೇಶಾದ್ಯಂತ ಪ್ರಚಾರ ನಡೆಡಸಿದ್ದರು. ಹೋದಲ್ಲಿ ಬಂದಲ್ಲಿ ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್, ರಾಮಜನ್ಮ ಭೂಮಿ ವಿವಾದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯನ್ನು ಮುಂದುವರಿಸಿದ್ದರು. ಆದರೆ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಮಾತ್ರ ಕೇವಲ ಅಭಿವೃದ್ಧಿ ಮಂತ್ರ ಜಪಿಸುತ್ತ ದಿಲ್ಲಿ ಜನರ ಮುಂದೆ ಮತಯಾಚಿಸಿದ್ದರು. ಆದರೆ ಇದೇ ಆಮ್ ಆದ್ಮಿ ಪಾರ್ಟಿ ಗೆಲುವಿಗೆ ಸಹಕಾರಿಯಾಗಿದೆ ಎನ್ನುವುದು ಕಷ್ಟ.
ದೆಹಲಿಯಲ್ಲಿ ಸತತ ಎರಡನೇ ಬಾರಿ ದಿಗ್ವಿಜಯ ಸಾಧಿಸಿದ ಅರವಿಂದ್ ಕೇಜ್ರಿವಾಲ್‌ಗೆ ನರೇಂದ್ರ ಮೋದಿ ಶುಭಕೋರಿದ್ದಾರೆ. ಆಮ್ ಆದ್ಮಿ ಪಾರ್ಟಿ ಹಾಗು ಶ್ರೀ ಅರವಿಂದ ಕೇಜ್ರಿವಾಲ್ ಅವರಿಗೆ ಶುಭವಾಗಲಿ. ದೆಹಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಇಚ್ಛೆಗಳನ್ನು ಪೂರೈಸಿ ಎಂದು ಟ್ವೀಟ್ ಮಾಡಿದ್ದಾರೆ. ಫೆಬ್ರವರಿ 3 ಮತ್ತು 4ರಂದು ಅಬ್ಬರದ ಪ್ರಚಾರ ಮಾಡಿದ್ದ ನರೇಂದ್ರ ಮೋದಿ ದೆಹಲಿ ಸರ್ಕಾರ ಜನರ ಕಲ್ಯಾಣಕ್ಕಾಗಿ ನಾವು ಜಾರಿ ಮಾಡಿದ್ದ ಯೋಜನೆಯನ್ನು ರದ್ದು ಮಾಡಿದೆ. ಆದರೆ ಫೆಬ್ರವರಿ 11ರ ಬಳಿಕ ಅವರ ಆಟ ನಡೆಯಲ್ಲ, ದೆಹಲಿಯಲ್ಲಿ ಬಿಜೆಪಿ ಪರವಾದ ಅಲೆಯನ್ನು ನೋಡಿದ ಬಳಿಕ ಕೆಲವರ ನಿದ್ರೆ ಹಾಳಾಗಿದೆ ಎಂದು ಕೇಜ್ರಿವಾಲ್ ಉದ್ದೇಶಿಸಿ ಹೇಳಿದ್ದರು. ಇದೀಗ ಅದೇ ನರೇಂದ್ರ ಮೋದಿ ಅರವಿಂದ್ ಕೇಜ್ರಿವಾಲ್‌ಗೆ ಶುಭಕೋರಿದ್ದಾರೆ.
ಅರವಿಂದ್ ಕೇಜ್ರಿವಾಲ್ ಕೂಡ ನರೇಂದ್ರ ಮೋದಿ ಮಾಡಿದ್ದ ಚುನಾವಣಾ ತಂತ್ರಗಾರಿಕೆಯನ್ನೇ ಫಾಲೋ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ಪ್ರದಾನಿ ಅಭ್ಯರ್ಥಿಯೇ ಇಲ್ಲ. ಒಂದು ವೇಳೆ ಕಾಂಗ್ರೆಸ್‌ಗೆ ಸೂಕ್ತ ಪ್ರಧಾನಿ ಅಭ್ಯರ್ಥಿ ಇದ್ದರೆ ಘೋಷಣೆ ಮಾಡಲಿ ಎಂದು ಸವಾಲು ಎಸೆದಿದ್ದರು. ಇದೇ ಸೂತ್ರ ಬಳಸಿಕೊಂಡ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಯಾರು ಘೋಷಣೆ ಮಾಡುವ ಧೈರ್ಯ ಪ್ರದರ್ಶನ ಮಾಡಿ ಎಂದು ಸವಾಲು ಹಾಕಿದ್ದರು. ಈ ಮೂಲಕ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿಯಾಗಬಲ್ಲ ನಾಯಕರು ದೆಹಲಿಯಲ್ಲಿ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದನ್ನೇ ಸಕಾರಾತ್ಮಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಮಹಾನ್ ಮಾತುಗಾರ. ಇತ್ತೀಚಿಗೆ ದಂಡ ಪ್ರಯೋಗ ಮಾಡಬೇಕು ಎಂದಿದ್ದ ರಾಹುಲ್ ಗಾಂಧಿ ಹೇಳಿಕೆಯನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿ ಲಾಭ ಪಡೆಯುವ ಯತ್ನ ಮಾಡಿದ್ದರು. ಚೌಕಿದಾರ್ ಎಂದಿದ್ದನ್ನೇ ದೊಡ್ಡ ಅಭಿಯಾನ ಮಾಡುವ ಮೂಲಕ ಲಾಭ ಪಡೆದುಕೊಂಡಿದ್ದರು. ಆದರೆ ಈ ಬಾರಿ ದೆಹಲಿ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ವತಃ ಬಿಜೆಪಿ ನಾಯಕರೇ ಬಾಯಿಗೆ ಬಂದಂತೆ ಮಾತಿನ ಸುರಿಮಳೆ ಸುರಿಸಿದ್ದರು. ಅರವಿಂದ್ ಕೇಜ್ರಿವಾಲ್ ಓರ್ವ ಭ್ರಷ್ಟ, ಭಯೋತ್ಪಾದಕ ಎಂದೆಲ್ಲಾ ಟೀಕೆ ಮಾಡಿದ್ದರು. ಎಷ್ಟೇ ಪ್ರಚೋದನಾತ್ಮಕ ಮಾತುಗಳನ್ನು ಆಡಿದರೂ ಅರವಿಂದ್ ಕೇಜ್ರಿವಾಲ್ ಜನರು ಅಭಿವೃದ್ಧಿಯನ್ನು ನೋಡಿ ಮತ ನೀಡ್ತಾರೆ. ಬೇರೆ ಯಾವುದೇ ಆರೋಪಗಳು ನನಗೆ ಸಲ್ಲುವುದಿಲ್ಲ ಎನ್ನುವ ತಂತ್ರಗಾರಿಕೆ ರೂಪಿಸಿ ಮೌನಕ್ಕೆ ಶರಣಾದರು.
ಪ್ರಧಾನಿ ನರೇಂದ್ರ ಮೋದಿ ಕೆಲವೊಂದು ಹೇಳಿಕೆಗಳನ್ನು ಗಮನಿಸಿದರೂ ಗಮನಿಸದಂತೆ ಮೌನಕ್ಕೆ ಶರಣಾಗುತ್ತಾರೆ. ಅದನ್ನೇ ಫಾಲೋ ಮಾಡಿದ ಅರವಿಂದ ಕೇಜ್ರಿವಾಲ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ಚಕಾರ ಎತ್ತಲಿಲ್ಲ. ಪೌರತ್ವ ವಿರೋಧಿ ಹೋರಾಟಗಾರರನ್ನು ಬೆಂಬಲಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ಆ ಬಗೆ ಮೌನಕ್ಕೆ ಶರಣಾದರು. ಆದರೆ ಬಿಜೆಪಿ ಮಾತ್ರ ತುಕ್ಡೆ ತುಕ್ಡೇ ಗ್ಯಾಂಗ್, ಪಾಕಿಸ್ತಾನಿ, ನಗರ ನಕ್ಸಲ್ ಎನ್ನುವ ಮೂಲಕ ಅರವಿಂದ್ ಕೇಜ್ರಿವಾಲ್‌ರನ್ನು ಮನಸ್ಸೋಇಚ್ಛೆ ಟೀಕೆ ಮಾಡಿತ್ತು. ಇದು ಜನರ ಮನಸ್ಸು ಆಪ್ ಪರ ವಾಲುವಂತೆ ಮಾಡಿತು. ಬಿಜೆಪಿಯ ಮನಸೋ ಇಚ್ಛೆ ಹೇಳಿಕೆಗೆ ಗೆಲುವಿನ ಮೂಲಕ ಉತ್ತರ ಕೊಟ್ಟ ಅರವಿಂದ್ ಕೇಜ್ರಿವಾಲ್, ದೆಹಲಿಯ 2 ಕೋಟಿ ನಿವಾಸಿಗಳು ತೀರ್ಮಾನ ಮಾಡಿದ್ದಾರೆ. ಅವರ ಮಗ ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಅಲ್ಲ ತೀಮಾನಿಸಿದ್ದಾರೆ ಎನ್ನುವ ಮೂಲಕ ಕಮಲಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಹಿಂದುತ್ವ, ಭಯೋತ್ಪಾದನೆ, ಇಂಡೋ ಪಾಕ್ ವಾರ್, ನಕ್ಸಲ್ ಎಂದೆಲ್ಲಾ ಟೀಕಿಸಿದ್ದು ಅರವಿಂದ್ ಕೇಜ್ರಿವಾಲ್‌ಗೆ ಅನುಕೂಲವೇ ಆಗಿದ್ದು, ಮತದಾನವಾದ 62.59 ಶೇಕಡ ಮತಗಳಲ್ಲಿ 53ರಷ್ಟು ಮತಗಳನ್ನು ಗೆದ್ದು ಮೂರನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಗೋಲಿ ಮಾರೋ ಎಂದಿದ್ದ ಬಿಜೆಪಿ ಮುಖಭಂಗ ಅನುಭವಿಸಿದೆ. ಶಾಹಿನ್ ಬಾಗ್ ಹೋರಾಟಗಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಆಮ್ ಆದ್ಮಿ ಪಾರ್ಟಿಗೆ ಸೇರಿದವ ಎಂದು ವಿವಾದ ಸೃಷ್ಟಿಸಿದ್ದು ಪೊಲೀಸ್ ಅಧಿಕಾರಿಗೆ ಚುನಾವಣಾ ಆಯೋಗ ಚಾಟಿ ಬೀಸಿದ್ದು ಕೂಡ ಅರವಿಂದ್ ಕೇಜ್ರಿವಾಲ್‌ಗೆ ವರವಾಗಿ ಪರಿಣಮಿಸಿದೆ ಎನ್ನಬಹುದು. ಒಟ್ಟಾರೆ, ಅರವಿಂದ್ ಕೇಜ್ರಿವಾಲ್ ಈ ಬಾರಿ ಮುಟ್ಟಿದ್ದೆಲ್ಲಾ ಆಶೀರ್ವಾದ ಎನ್ನುವಂತಾಗಿದ್ದು, ಬರೋಬ್ಬರಿ 62 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ 67 ಸ್ಥಾನದಿಂದ 62 ಸ್ಥಾನಕ್ಕೆ ಆಪ್ ಕುಸಿದಿರೋದು ಬೇಸರದ ಸಂಗತಿಯಾದರೂ 62 ಸ್ಥಾನ ಗಳಿಸಿರೋದು ಸಾಧನೆಯೇ ಸರಿ.