ಇಂದು ಮಾನವನ ಅಸ್ತಿತ್ವಕ್ಕಾಗಿ ಪರಿಸರ ಸಂರಕ್ಷಣೆ ಅತ್ಯವಶ್ಯ. ವಿಶ್ವ ಮಟ್ಟದಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ದೊಡ್ಡ ಆಂದೋಲನವೇ ನಡೆಯುತ್ತಿದೆ. ನಮ್ಮಲ್ಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಮತ್ತೊಂದೆಡೆ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶದಲ್ಲಿ ತೊಡಗಿದ್ದಾನೆ. ಪರಿಸರ ಸಂರಕ್ಷಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದರೂ ಕೆಲವೊಮ್ಮೆ ತಮಗೆ ಸಂಭಂಧವೇ ಇಲ್ಲದಂತೆ ಇವರು ವರ್ತಿಸುತ್ತಿರುವುದರಿಂದ ಪರಿಸರ, ಜಲಮೂಲಗಳ ನಾಶ ನಿರಂತರವಾಗಿ ನಡೆದೇ ಇದೆ.
ಲಕ್ಷಾಂತರ ಜನರ ಜೀವನಾಡಿಯಾಗಿರುವ ಕಾವೇರಿ ನದಿಯು ಮಾನವನ ಸ್ವಾರ್ಥದಿಂದಾಗಿ ಇಂದು ತನ್ನ ಆಸ್ತಿತ್ವವನ್ನೇ ಕಳೆದುಕೊಳ್ಳುತ್ತ ಸಾಗಿದೆ. ಕಳೆದ ಎರಡು ವರ್ಷಗಳಿಂದ ಕಾವೇರಿ ನದಿಯ ಪ್ರವಾಹದಿಂದಾಗಿ ನೂರಾರು ಜನರು ಕಾವೇರಿಯ ತವರು ಜಿಲ್ಲೆ ಕೊಡಗಿನಲ್ಲೇ ಸಂತ್ರಸ್ಥರಾಗಿದ್ದಾರೆ. ಕಾವೇರಿ ನದಿಯ ನೀರಿನ ಗುಣಮಟ್ಟವೂ ದಿನೇ ದಿನೆ ಕುಸಿಯುತ್ತಲೇ ಸಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ನದಿ ನೀರು ಮಾನವ ಸೇವನೆಗೆ ಯೋಗ್ಯವಲ್ಲ ಎಂದು ಪರಿಗಣಿತವಾದರೂ ಅಚ್ಚರಿ ಏನಿಲ್ಲ.
ಸುಮಾರು 800 ಕಿಲೋಮೀಟರ್ ಉದ್ದವಿದ್ದು ನಾಲ್ಕು ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುವ ಕಾವೇರಿ ನದಿಯ ಜಲಾನಯನ ಪ್ರದೇಶ 80 ಸಾವಿರ ಚದರ ಕಿಲೋಮೀಟರ್ ಗಳಷ್ಟು ವಿಸ್ತೀರ್ಣವಿದೆ. ಇಂದು ಕಾವೇರಿ ನದಿಯು ತವರು ಜಿಲ್ಲೆಯಲ್ಲೇ ಕಲುಷಿತಗೊಳ್ಳುತ್ತ ಸಾಗಿರುವುದು ಆತಂಕ ಮೂಡಿಸಿದೆ.
ಕೊಡಗಿನಲ್ಲಿ ಕಾವೇರಿ ಕಲುಷಿತಗೊಳ್ಳುತ್ತಿರುವುದು ಮುಖ್ಯವಾಗಿ ಕೋಳಿ , ಕುರಿ ಹಾಗೂ ಮೀನುಗಳ ತ್ಯಾಜ್ಯವನ್ನು ನದಿಗೆ ಎಸೆಯುತ್ತಿರುವುದರಿಂದ ಆಗಿದೆ. ಭಾಗಮಂಡಲದಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ , ಉಳಿಕೆ ಆಹಾರ ಪದಾರ್ಥಗಳನ್ನೂ ನದಿಗೆ ಎಸೆಯುತಿದ್ದಾರೆ. ಅಲ್ಲಲ್ಲಿ ಪರಿಸರ ಸಂರಕ್ಷಣೆಯ ನಾಮಫಲಕಗಳನ್ನು ಹಾಕಿದ್ದರೂ, ಪ್ಲಾಸ್ಟಿಕ್ ನಿಷೇಧವನ್ನೇ ಮಾಡಿದ್ದರೂ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಪುಣ್ಯ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ನಿಂದಾಗಿ ನದಿ ಕಲುಷಿತವಾಗುತ್ತಿದೆ.
ನಂತರ ಮುಂದೆ ನೆಲ್ಲಿ ಹುದಿಕೇರಿ , ಸಿದ್ದಾಪುರದಲ್ಲಿ ನಿತ್ಯವೂ ಸಾವಿರಾರು ಕೆಜಿ ಕೋಳಿ , ಮೀನು ತ್ಯಾಜ್ಯವನ್ನು ನದಿಗೆ ಎಸೆಯಲಾಗುತ್ತದೆ ಅಷ್ಟೇ ಅಲ್ಲ ಸಿದ್ದಾಪುರದ ಹೋಟೆಲ್ ಗಳು, ಲಾಡ್ಜ್ ಗಳಿಂದ ಹೊರ ಬರುವ ಕೊಳಚೆ ನೀರೂ ಕಾವೇರಿಯ ಒಡಲನ್ನು ಸೇರುತ್ತಿದೆ. ಈ ಕೊಳಚೆ ನೀರಿನ ಹರಿಯುವಿಕೆಗೆ ಸ್ಥಳಿಯ ಸಿದ್ದಾಪುರ ಗ್ರಾಮ ಪಂಚಾಯ್ತಿ ಕಠಿಣ ಕ್ರಮವನ್ನು ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿ ಸುಬ್ರಮಣಿ ಆರೋಪಿಸಿದರು.
ಮುಂದೆ ಸಾಗಿದರೆ ಸಿದ್ದಾಪುರದಿಂದ – ಕುಶಾಲನಗರದವರೆಗೂ ನದಿ ದಡದಲ್ಲಿ ತಲೆ ಎತ್ತಿರುವ ಹತ್ತಾರು ಹೋಂ ಸ್ಟೇ ಗಳಿಂದಲೂ ಮಲಿನತೆ ಹೆಚ್ಚಾಗುತ್ತಿದೆ. ಇಲ್ಲಿಂದ ಹೊರಬರುವ ಕೊಳಚೆ ನೀರೂ ನದಿಗೆ ಸೇರುತ್ತಿದೆ. ಜತೆಗೇ ದುಬಾರೆಯಲ್ಲಿನ ರಿವರ್ ರ್ಯಾಫ್ಟಿಂಗ್ ಚಟುವಟಿಕೆಯಲ್ಲಿ ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ಕವರ್ ಗಳೂ ನದಿಯನ್ನು ಸೇರುತ್ತಿವೆ. ಇನ್ನು ಕೆಲವು ಹೋಂ ಸ್ಟೇ ಗಳು ಪ್ರವಾಸಿಗರನ್ನು ಆಕರ್ಷಿಸಲು ನದಿಗೇ ಅಡ್ಡಲಾಗಿ ಕಾಂಕ್ರೀಟ್ ನಿರ್ಮಾಣ ಮಾಡಿ ರೂಮ್ಗಳನ್ನು ನಿರ್ಮಿಸಿರುವುದರಿಂದ ಇವುಗಳು ನದಿಯ ನೈಸರ್ಗಿಕ ಹರಿಯುವ ದಿಕ್ಕನ್ನೇ ಬದಲಿಸುತ್ತಿವೆ ಎಂದು ಕಾವೇರಿ ನದಿ ಸಂರಕ್ಷಣಾ ಸಮಿತಿಯ ಸಂಚಾಲಕ ಎಂ ಎನ್ ಚಂದ್ರ ಮೋಹನ್ ಪ್ರತಿದ್ವನಿಗೆ ತಿಳಿಸಿದರು. ಈ ಅನಧಿಕೃತ ನಿರ್ಮಾಣಗಳಿಂದಾಗಿ ಮಳೆಗಾಲದಲ್ಲಿ ಪ್ರವಾಹ ಬರಲೂ ಕಾರಣವಾಗಿದೆ ಎಂದ ಅವರು ನದಿಯ ನೈಸರ್ಗಿಕ ಹರಿಯುವಿಕೆಗೆ ತಡೆ ಒಡ್ಡಿದರೆ ನದಿಯ ವಿಸ್ತಾರ ಕಡಿಮೆ ಅಗುತ್ತದೆ ಇದರಿಂದಾಗಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತದೆ ಎಂದು ಅವರು ಹೇಳಿದರು.
ಸಿದ್ದಾಪುರ ಸಮೀಪದ ಕರಡಿಗೋಡು ಮತ್ತು ನೆಲ್ಲಿ ಹುದಿಕೇರಿ ಗ್ರಾಮಗಳಲ್ಲಿ ನದಿಯಿಂದ 300 ಮೀಟರ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಕಾನೂನೇ ಇದ್ದರೂ ಇದನ್ನು ಗಾಳಿಗೆ ತೂರಿ ನೂರಾರು ಮನೆಗಳು ನಿರ್ಮಾಣಗೊಂಡಿವೆ. ಈ ನಿರ್ಮಾಣಗೊಂಡ ಮನೆಗಳಿಗೆ ಗ್ರಾಮ ಪಂಚಾಯ್ತಿ ವಾರ್ಷಿಕ ತೆರಿಗೆ ಪಡೆದುಕೊಳ್ಳುತ್ತಿದೆ, ನೀರು ಮತ್ತು ವಿದ್ಯುತ್ ಸಂಪರ್ಕಕ್ಕೂ ನಿರಾಕ್ಷೇಪಣಾ ಪತ್ರ ಕೊಡುತ್ತಿದೆ. ಹೀಗಾಗಿ ಈ ನೂರಾರು ಮನೆಗಳು ಈಗ ಸಕ್ರಮ ವಾಗಿಬಿಟ್ಟಿವೆ. ಈ ಅಕ್ರಮ ನಿರ್ಮಾಣದಿಂದಾಗಿ ಪ್ರತೀ ವರ್ಷವೂ ಇವರು ಸಂತ್ರಸ್ಥರಾಗುತಿದ್ದು ಸರ್ಕಾರ ಗಂಜೀ ಕೇಂದ್ರ ತೆರೆಯುತ್ತದೆ. ಮಳೆಗಾಲದಲ್ಲಿ ನೀರು ಮನೆಯ ಒಳಗೆ ನಿಂತಿರುತ್ತದೆ. ಮಳೆಗಾಲ ಮುಗಿದ ನಂತರ ಇವರು ಗಂಜೀಕೇಂದ್ರ ದಿಂದ ಮನೆಗಳಿಗೆ ತೆರಳುತ್ತಾರೆ.
ಇನ್ನು ಕೂಡಿಗೆ ಮತ್ತು ಕುಶಾಲನಗರಗಳಲ್ಲಿಯೂ ಕೊಳಚೆ ನೀರು ನದಿಯನ್ನು ಸೇರುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಗಳದು ದಿವ್ಯ ನಿರ್ಲಕ್ಷ್ಯ ಪ್ರತಿಕ್ರಿಯೆಯಾಗಿದೆ.
ಈ ನಡುವೆ ಇನ್ನೊಂದು ಆಘಾತಕಾರಿ ಸುದ್ದಿ ಕುಶಾಲನಗರ ಸಮೀಪದ ಕಣಿವೆ ಎಂಬಲ್ಲಿ ಕಾವೇರಿ ನದಿಯೊಳಗೆ ಪ್ರವಾಹದಿಂದಾಗಿ ಆಗಿರುವ ಬೃಹತ್ ಕೊಳ್ಳಗಳಿಗೆ ಸಾವಿರಾರು ಲೋಡುಗಳಷ್ಟು ಕಲ್ಲು ಮತ್ತು ಮಣ್ಣನ್ನು ತುಂಬಲಾಗಿದೆ. ಸ್ಥಳೀಯ ಜಿಲ್ಲಾ ಪಂಚಾಯ್ತಿಯ ಸದಸ್ಯರೊಬ್ಬರು ತಮ್ಮ ಜಮೀನನ್ನು ಸಮತಟ್ಟು ಮಾಡಿದಾಗ ಉಳಿದ ಹೆಚ್ಚುವರಿ ಕಲ್ಲು ಮಣ್ಣನ್ನು ಇಲ್ಲಿಗೆ ತುಂಬಿಸಿದ್ದು ಇದರಿಂದಾಗಿ ನದಿಯ ಸರಾಗ ಹರಿಯುವಿಕೆಗೆ ಅಡಚಣೆ ಆಗಿದೆ. ಇಲ್ಲಿ ಹಾರಂಗಿ ನದಿಯೂ ಕೂಡ ಕಾವೇರಿಯ ಜತೆ ಸೇರುತಿದ್ದು ಹಳ್ಳ ಕೊಳ್ಳಗಳಿಗೆ ಮಣ್ಣು ತುಂಬಿರುವುದರಿಂದ ನದಿಯ ನೀರಿನ ಹರಿವು ಹೆಚ್ಚಾದಾಗ ನದಿ ಪಾತ್ರ ವಿಸ್ತಾರವಾಗಿ ಹೊರಗೆ ಹರಿಯುತ್ತದೆ. ಇದರಿಂದ ಅಕ್ಕ ಪಕ್ಕದ ಕೃಷಿ ಜಮೀನು ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತವೆ. ನದಿಯಿಂದ 300 ಮೀಟರ್ ವರೆಗೆ ಬಫರ್ ಜೋನ್ ಇದ್ದು ಯಾವುದೇ ರೀತಿಯ ಮಣ್ಣಿನ ಅಥವಾ ಕಟ್ಟಡದ ಕಾಮಗಾರಿ ಮಾಡುವಂತಿಲ್ಲ. ಅದರೆ ಇದೆಲ್ಲವನ್ನೂ ಗಾಳಿಗೆ ತೂರಿ ನದಿಯೊಳಗೆ ಮಣ್ಣು ತುಂಬಲಾಗಿದೆ.
ಈ ಕುರಿತು ಸ್ಥಳಿಯ ಹೆಬ್ಬಾಲೆ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು , ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಾರಿಕೆಯ ಉತ್ತರ ನೀಡುತಿದ್ದಾರೆ. ಸಂಬಂದ ಪಟ್ಟವರು ಇನ್ನಾದರೂ ಕಾರ್ಯೋನ್ಮುಖರಾದರೆ ನದಿ ಉಳಿದೀತು.