1989ರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಕುರಿತು 2018ರ ಮಾರ್ಚ್ 20ರಂದು ತಾನು ನೀಡಿದ್ದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ವಾಪಸು ಪಡೆದಿದೆ. ಈ ಕಾಯಿದೆಯನ್ನು ದುರ್ಬಲಗೊಳಿಸದೆ ಮೊದಲಿನಂತೆಯೇ ಮುಂದುವರೆಸುವ ಇರಾದೆಯನ್ನೂ ಸಾರಿದೆ.
ಈ ಕಾಯಿದೆಯನ್ನು ಅಮಾಯಕ ವ್ಯಕ್ತಿಗಳ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಲು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು 2018ರ ಮಾರ್ಚ್ 20ರ ತೀರ್ಪು ಹೇಳಿತ್ತು. ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗುವ ಕೇಸುಗಳಲ್ಲಿ ಆಪಾದಿತರಿಗೆ ನಿರೀಕ್ಷಣಾ ಜಾಮೀನಿನ ಅವಕಾಶ ಕಲ್ಪಿಸಿತ್ತು. ಈ ತೀರ್ಪನ್ನು ವಾಪಸು ಪಡೆದಿರುವುದಾಗಿ ಸುಪ್ರೀಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಇದೇ ಅಕ್ಟೋಬರ್ ಒಂದರಂದು ಸಾರಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರನ್ನು ಸುಳ್ಳುಗಾರರು ಅಥವಾ ದಗಾಕೋರರು ಎಂದು ಭಾವಿಸುವುದು ತಪ್ಪು. ಮೂಲಭೂತ ಮಾನವೀಯ ಘನತೆಯ ಉಲ್ಲಂಘನೆಯಿದು. ಸುಳ್ಳು ದೂರುಗಳ ಹಿಂದಿರುವುದು ಮಾನವ ವೈಫಲ್ಯವೇ ವಿನಾ ಜಾತಿಯಲ್ಲ ಎಂದು ನ್ಯಾಯಪೀಠ ಈ ಹಿಂದಿನ ತೀರ್ಪಿನ ಕುರಿತು ಟೀಕೆ ಟಿಪ್ಪಣಿ ಮಾಡಿತು.
2018ರ ಮಾರ್ಚ್ 20ರ ತೀರ್ಪಿನಲ್ಲಿ ನೀಡಲಾಗಿದ್ದ ಮೂರು ಮುಖ್ಯ ನಿರ್ದೇಶನಗಳು ದಲಿತ ಆದಿವಾಸಿ ಸಮುದಾಯಗಳ ಪ್ರತಿಭಟನೆಗೆ ಕಾರಣವಾಗಿದ್ದವು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದೂರು ಸಲ್ಲಿಸಿದ ಒಡನೆಯೇ ಆಪಾದಿತರನ್ನು ಬಂಧಿಸುವಂತಿಲ್ಲ, ಹೀಗೆ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪೂರ್ವಾನುಮತಿ ಪಡೆಯಬೇಕು, ಹಾಗೂ ದೂರಿನಲ್ಲಿ ಮಾಡಲಾಗಿರುವ ಆಪಾದನೆಗಳಲ್ಲಿ ಮೊದಲ ನೋಟಕ್ಕೆ ವಾಸ್ತವಾಂಶ ಕಾಣುತ್ತಿದೆಯೇ ಎಂಬುದರ ವಿಚಾರಣೆ ನಡೆಸಬೇಕು. ಆ ನಂತರವೇ ದೂರಿನ ಕುರಿತು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಬೇಕು, ಆಪಾದಿತರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ಇರಬೇಕು ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಗೋಯಲ್ ಮತ್ತು ಉದಯ ಉಮೇಶ ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ 2018ರ ಮಾರ್ಚ್ ನಲ್ಲಿ ನಿರ್ದೇಶನಗಳನ್ನು ನೀಡಿತ್ತು.
ಈ ಮೂರೂ ನಿರ್ದೇಶನಗಳನ್ನು ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಕ್ಟೋಬರ್ ಒಂದರಂದು ವಾಪಸು ಪಡೆದು ಅಸಿಂಧು ಎಂದು ಹೊಡೆದು ಹಾಕಿದೆ. ಈ ನಿರ್ದೇಶನಗಳು ತಮ್ಮ ರಕ್ಷಣೆಗಿದ್ದ ಕಾಯಿದೆಯನ್ನು ದುರ್ಬಲಗೊಳಿಸಿವೆ ಎಂದು ದಲಿತರು-ಆದಿವಾಸಿಗಳ ಆಕ್ರೋಶ ಸ್ಫೋಟಗೊಂಡಿತ್ತು. ಹಿಂಸಾಚಾರಕ್ಕೆ ತಿರುಗಿದ ಪ್ರದರ್ಶನಗಳಲ್ಲಿ ಏಳು ಮಂದಿ ದಲಿತರೂ ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದರು. ಕೇಂದ್ರ ಸರ್ಕಾರ 2018ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿನಲ್ಲಿ ಮರುವಿಮರ್ಶೆ ಮನವಿ ಸಲ್ಲಿಸಿತು. 2018ರ ಆಗಸ್ಟ್ ತಿಂಗಳಲ್ಲಿ ಈ ಮೂರೂ ನಿರ್ದೇಶನಗಳನ್ನು ತಿರಸ್ಕರಿಸುವ ಕಾಯಿದೆ ತಿದ್ದುಪಡಿಯೊಂದನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು.
2018ರ ಮಾರ್ಚ್ 20ರಂದು ತೀರ್ಪು ನೀಡಿದ್ದ ಅದೇ ನ್ಯಾಯಪೀಠದ (ನ್ಯಾಯಮೂರ್ತಿಗಳಾದ ಆದರ್ಶ್ ಗೋಯೆಲ್ ಮತ್ತು ಉದಯ ಉಮೇಶ್ ಲಲಿತ್) ಮುಂದೆ ಸರ್ಕಾರದ ಮರುವಿಮರ್ಶಾ ಮನವಿಯನ್ನು ಸಲ್ಲಿಸಲಾಗಿತ್ತು. ಈ ನಡುವೆ ನ್ಯಾಯಮೂರ್ತಿ ಗೋಯೆಲ್ ನಿವೃತ್ತರಾದರು. ಹೊಸ ನ್ಯಾಯಪೀಠವನ್ನು ರಚಿಸಲಾಯಿತು. ಈ ಹೊಸ ನ್ಯಾಯಪೀಠವು ಮರುವಿಮರ್ಶಾ ಅರ್ಜಿಯನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಿತು. ಎಂ. ಆರ್. ಶಾ ಮತ್ತು ಬಿ. ಆರ್. ಗವಾಯಿ ಉಳಿದ ಇಬ್ಬರು ನ್ಯಾಯಮೂರ್ತಿಗಳು.
1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿಗೆ ತಂದದ್ದು ರಾಜೀವ್ ಗಾಂಧೀ ಸರ್ಕಾರ. ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅವರು ದೌರ್ಜನ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಅವರಿಗೆ ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹಲವು ಬಗೆಯ ಅಪರಾಧಗಳು, ಅವಹೇಳನಗಳು ಹಾಗೂ ಕಿರುಕುಳಗಳಿಗೆ ಅವರನ್ನು ಗುರಿ ಮಾಡಲಾಗುತ್ತಿದೆ. ಕ್ರೂರ ಅಮಾನುಷ ಪ್ರಕರಣಗಳಲ್ಲಿ ಅವರ ಜೀವ ಆಸ್ತಿಪಾಸ್ತಿಗಳು ಕಳೆದು ಹೋಗುತ್ತಲೇ ಇವೆ’ ಎಂದು 1989ರ ಕಾಯಿದೆಯ ಉದ್ದೇಶ ಮತ್ತು ಕಾರಣಗಳಲ್ಲಿ ವಿವರಿಸಲಾಗಿತ್ತು.
ಈ ಉದ್ದೇಶ ಮತ್ತು ಕಾರಣಗಳನ್ನು ಆಧರಿಸಿ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಸರ್ಕಾರದ ಮರುವಿಮರ್ಶಾ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದರು. 2018ರ ಮಾರ್ಚ್ 20ರ ಸುಪ್ರೀಂ ಕೋರ್ಟ್ ತೀರ್ಪಿನ ಅಂಶಗಳನ್ನು ಅಸಿಂಧುಗೊಳಿಸಲು ಸಂಸತ್ತಿನಲ್ಲಿ ಮಾಡಲಾಗಿದ್ದ ತಿದ್ದುಪಡಿಯನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು. 2018ರ ಮಾರ್ಚ್ 20ರಂದು ಆದರ್ಶ್ ಗೋಯಲ್ ಮತ್ತು ಉದಯ ಉಮೇಶ ಲಲಿತ್ ಅವರ ನ್ಯಾಯಪೀಠ ನೀಡಿದ್ದ ಮೂರು ನಿರ್ದೇಶನಗಳ ತೀರ್ಪನ್ನು ಈ ಅರ್ಜಿಗಳು ಸಮರ್ಥಿಸಿದ್ದವು. ಈ ಅರ್ಜಿಗಳ ಕುರಿತ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾದಿರಿಸಿದೆ. ಮೂಲ ಕಾಯಿದೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬ ಇಂಗಿತವನ್ನೂ ನೀಡಿದೆ.
ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ. 66ರಷ್ಟು ಹೆಚ್ಚಿದೆ. ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತಿದೆ. ಈ ಹತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಇಮ್ಮಡಿಯಾಗಿವೆ. ವಿಚಾರಣೆಗೆ ಕಾದಿರುವ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಾಕಿಯ ಬೆಟ್ಟ ಬೆಳೆಯುತ್ತಿದೆ. ಸಜೆಯಲ್ಲಿ ಕೊನೆಯಾಗುವ ಪ್ರಕರಣಗಳ ಪ್ರಮಾಣ ಶೇ. 28ಕ್ಕೆ ಕುಸಿದಿದೆ.
ಜಾತಿ ವ್ಯವಸ್ಥೆಯ ಒಳಿತನ್ನು ಎತ್ತಿ ಹೇಳುವ ಮತ್ತು ಮೀಸಲಾತಿಯನ್ನು ಅಂತ್ಯಗೊಳಿಸುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಂದ್ರ ಸರ್ಕಾರದ ಒಳಗಿನಿಂದ ಮತ್ತು ಹೊರಗಿನಿಂದ ಕಾಲಕಾಲಕ್ಕೆ ಕೇಳಿ ಬರುತ್ತಿವೆ. ಭಯ ಮತ್ತು ಅಪಮಾನದ ಲಜ್ಜೆಯನ್ನು ಬದಿಗೊತ್ತಿರುವ ದಲಿತರು ಪ್ರತಿರೋಧದ ಮತ್ತು ತಿಳಿವಳಿಕೆಯ ಹಾದಿ ಹಿಡಿದಿರುವುದು ಮೇಲ್ಜಾತಿಗಳನ್ನು ಇನ್ನಷ್ಟು ಕೆರಳಿಸಿ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಅಧ್ಯಯನಗಳು ಸಾರಿವೆ. ಇಂತಹ ಕಠೋರ ವಾಸ್ತವದ ನಡುವೆಯೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂಬುದಾಗಿ 2018ರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದು ಗಾಯದ ಮೇಲೆ ಬರೆ ಎಳೆದದ್ದಕ್ಕಿಂತ ಕಡಿಮೆಯೇನೂ ಅಲ್ಲ.