ಈಗಾಗಲೇ ಯಡಿಯೂರಪ್ಪರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಒಳ ರಾಜಕಾರಣಕ್ಕೆ ಹೈರಾಣಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆ ಕೂಡಾ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯ ಮೂಲ ಶಾಸಕರು ಹಾಗೂ ವಲಸೆ ಬಂದಿರುವ ಶಾಸಕರು ಈಗಾಗಲೇ ಸಚಿವ ಸ್ಥಾನಕ್ಕೆ ಬಕಪಕ್ಷಿಯಂತೆ ಕಾದು ನಿಂತಿದ್ದು, ಸಚಿವಾಕಾಂಕ್ಷಿಗಳೊಳಗೆ ಸಮನ್ವಯ ಸಾಧಿಸಿ ಸಚಿವ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪರಿಗೆ ಸಾಧ್ಯವಾಗಿಲ್ಲ, ಹಾಗಾಗಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ರೇಣುಕಾಚಾರ್ಯ ಮೂಲ ಶಾಸಕರಿಗೆ ಮೊದಲು ಆದ್ಯತೆ ನೀಡಬೇಕೆಂದು ಹೇಳಿದ್ದು ಹೊಸದಾಗಿ ಬಂದಿದ್ದ 17 ಶಾಸಕರಲ್ಲಿ ಇರಿಸುಮುರಿಸು ತಂದಿತ್ತು. ಬಳಿಕ ರೇಣುಕಾಚಾರ್ಯ ತಮ್ಮ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದರು. ಅದಾಗ್ಯೂ, ಎಂಟಿಬಿ ನಾಗರಾಜು ರಂತಹ ಶಾಸಕರ ಆಕ್ರೋಶ ತಣ್ಣಗಾಗಲಿಲ್ಲ.
Also Read: ನಾವು ಅಧಿಕಾರ ಪಡೆಯಲು ಬಿಜೆಪಿಗೆ ಬಂದ 17 ಶಾಸಕರ ತ್ಯಾಗವೂ ಕಾರಣ – ರೇಣುಕಾಚಾರ್ಯ
ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿರುವ ಎಂಟಿಬಿ ನಾಗರಾಜು, ಮುಖ್ಯಮಂತ್ರಿ ನಮ್ಮನ್ನು ಭೇಟಿಯಾದಾಗಲೆಲ್ಲಾ ಮಂತ್ರಿ ಮಾಡುವುದಾಗಿ ಭರವಸೆ ನೀಡುತ್ತಾರೆ. ಆದರೆ ನಮ್ಮನ್ನು ಸಚಿವರನ್ನಾಗಿ ಮಾಡಲು ಅವರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೂಲ ಬಿಜೆಪಿಗರನ್ನು ಬೇಕಾದರೆ ಮಂತ್ರಿ ಮಾಡಲಿ, ಆದರೆ ಅದಕ್ಕೂ ಮೊದಲು, ತ್ಯಾಗ ಮಾಡಿ ಬಂದಿರುವ ನಮ್ಮನ್ನು ಮಂತ್ರಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.