ಸಾಮಾಜಿಕ ಜಾಲತಾಣಗಳು ಎಷ್ಟರಮಟ್ಟಿಗೆ ಪ್ರಭಾವಿಯಾಗಿವೆ ಎಂದರೆ ಬೆಳಗಾಗುವುದರಲ್ಲಿ ನಮ್ಮ ಊರಿನ ಪ್ರತಿಭೆಯ ಸಾಧನೆ ಪ್ರಧಾನಿಯವರೆಗೆ ಮುಟ್ಟಿರುತ್ತೆ. ಕಳೆದ ವಾರದಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕರಾವಳಿಯ ಕಂಬಳದ ಓಟಗಾರ ಶ್ರೀನಿವಾಸ ಗೌಡನ ಕುರಿತೇ ಮಾತು. ಇವರಿಂದಾಗಿ ತುಳುನಾಡಿನ ಪ್ರಸಿದ್ಧ ಕ್ರೀಡೆ ಕಂಬಳ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಗ್ರಾಮೀಣ ಕ್ರೀಡೆಯನ್ನ ಜಲ್ಲಿಕಟ್ಟುವಿನೊಂದಿಗೆ ಸೇರಿಸಿ ನಿಷೇಧ ಹೇರಲು ಹೊರಟ್ಟಿದ್ದವರಿಗೆ ದಿಗಿಲು ಬಡಿಸುವಂತಾಗಿದೆ.
ಹಿರಿಯ ಪತ್ರಕರ್ತ ಡಿಪಿ ಸತೀಶ್ ಎಂದಿನಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಈತ ಶ್ರೀನಿವಾಸ ಗೌಡ (28), ದಕ್ಷಿಣ ಕನ್ನಡದ ಮೂಡುಬಿದಿರೆಯವರು, ಕಂಬಳದೋಟದಲ್ಲಿ ಕೋಣಗಳ ಜೊತೆ ಈತ 142.5 ಮೀಟರ್ ದೂರವನ್ನ 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾನೆ, ಉಸೇನ್ ಬೋಲ್ಟ್ ನೂರು ಮೀಟರ್ ಓಡೋದಕ್ಕೆ 9.58 ಸೆಕೆಂಡ್ ತೆಗೆದುಕೊಂಡಿದ್ದರು’ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಎಂಟು ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಟ್ವಿಟ್ ಮಾಡಿ ಹೊಗಳಿ ಬೋಲ್ಟ್ ಸಾಧನೆಯನ್ನು ಪ್ರಶ್ನೆ ಮಾಡಿದರು.
He is Srinivasa Gowda (28) from Moodabidri in Dakshina Kannada district. Ran 142.5 meters in just 13.62 seconds at a “Kambala” or Buffalo race in a slushy paddy field. 100 meters in JUST 9.55 seconds! @usainbolt took 9.58 seconds to cover 100 meters. #Karnataka pic.twitter.com/DQqzDsnwIP
— DP SATISH (@dp_satish) February 13, 2020
ಇತ್ತ ಟಿವಿ ಮಾಧ್ಯಮಗಳು ತಮ್ಮ ಎಂದಿನ ವರಸೆ ಶುರುಮಾಡಿ, ಬೋಲ್ಟ್ ಗಿಂತ ವೇಗ ಶ್ರೀನಿವಾಸ ಗೌಡ ಅಂತ ಅರಚಿಕೊಳ್ಳೋದಕ್ಕೆ ಶುರುಮಾಡಿದರು. ಕೇಂದ್ರ ಕ್ರೀಡಾ ಮಂತ್ರಿ ಕಿರೆನ್ ರಿಜಿಜು ಕೂಡ ಟ್ವೀಟ್ ಮಾಡಿ ಒಮ್ಮೆ ಆತನನ್ನ ಪರೀಕ್ಷೆ ಮಾಡಿಬಿಡೋಣ ಅಂತ ರಾಜ್ಯ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದ್ರು. ಈಗ ಮತ್ತೆ ಎಲ್ಲರ ಚಿತ್ತ ಕಂಬಳದ ಓಟಗಾರನತ್ತ, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯತ್ತ ನೆಟ್ಟಿತ್ತು, ಇಷ್ಟು ದಿನ ನಿಷೇಧಕ್ಕಾಗಿ ಸುದ್ದಿಯಾಗುತ್ತಾ ಇದ್ದ ಕಂಬಳ ದೇಶದೆಲ್ಲೆಡೆ ಸುದ್ದಿಯಾಯಿತು.
ರಾಜ್ಯ ಕ್ರೀಡಾ ಹಾಗೂ ಯುವಜನ ಸಚಿವ ಸಿಟಿ ರವಿ ಕೂಡ ಕೇಂದ್ರ ಮಂತ್ರಿಗಳ ಆದೇಶದಂತೆ ಒಮ್ಮೆ ಓಡಿಸಿ ನೋಡೋಣ ಆದರೆ ವರದಿಯ ಸತ್ಯಾಸತ್ಯತೆ ಪರಾಮರ್ಶೆ ನಂತರವೇ ನಿರ್ಧಾರ ಎಂದರು. ಸೋಮವಾರ ಶ್ರೀನಿವಾಸ್ ಗೌಡ ಬೆಂಗಳೂರಿನತ್ತ ಹೊರಟರು, ಅದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡುವಾಗ ಕಂಬಳದ ಓಟ ಬೇರೆ, ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡುವುದೇ ಬೇರೆ, ನನ್ನ ಆಸಕ್ತಿ ಕಂಬಳದ ಮೇಲೆ ಎಂದು ಹೇಳಿದ್ದರು. ಶ್ರೀನಿವಾಸ್ ಗೆ ಮನಸ್ಸಲ್ಲಿ ಕಸಿವಿಸಿ, ಮಾಧ್ಯಮಗಳೂ ಹೀರೋ ಮಾಡಿಬಿಟ್ಟಿವೆ, ಹೇಗೆ ವಿವರಿಸುವುದು ಎನ್ನುವುದಕ್ಕೆ ಸಮಯವೇ ಇರಲಿಲ್ಲ, ಅಂತೂ ಬೆಂಗಳೂರು ಸೇರಿದ್ದಾರೆ, ಗೌರವನ್ನೂ ಪಡೆದಿದ್ದಾರೆ.

ಇಷ್ಟರಲ್ಲಿ ಮಂಗಳವಾರ ಮುಂಜಾನೆ ಮತ್ತೊಂದು ಸುದ್ದಿ ಸ್ಫೋಟಗೊಂಡಿತು, ಬಜಗೋಳಿ ನಿಶಾಂತ್ ಶೆಟ್ಟಿ ಶ್ರೀನಿವಾಸ್ ಗೌಡನಿಗಿಂತಾ ವೇಗವಾಗಿ ಓಡಿದ್ದಾನೆ, ಕಂಬಳ ಕ್ರೀಡೆಯಲ್ಲಿ 143 ಮೀಟರ್ ಓಡಲು ಆತ ತೆಗೆದುಕೊಂಡಿದ್ದು ಕೇವಲ 13.61 ಸೆಕೆಂಡ್ ಮಾತ್ರ.
ಸುದ್ದಿಯ ಭರಾಟೆಗಳ ನಡುವೆ ವಿಶ್ವ ಪ್ರಸಿದ್ಧ ಓಟಗಾರ ಉಸೇನ್ ಬೋಲ್ಟ್ ಹೋಲಿಕೆ ಬಗ್ಗೆ ಅಪಸ್ವರಗಳು ಕೇಳಿಬರುತ್ತಾ ಇವೆ. ಈ ಹೋಲಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರೆ ಯಾರಲ್ಲೂ ಉತ್ತರವಿಲ್ಲ. ಏಕೆಂದರೆ, ಕಂಬಳದ ಓಟಕ್ಕೂ, ಸಿಂಥೆಟಿಕ್ ಟ್ರ್ಯಾಕ್‌ನ ಓಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಂಬಳದ ಓಟಗಾರರಿಗೆ ಸಿಗುವ ತರಬೇತಿಗೂ, ಒಲಿಂಪಿಕ್ಸ್‌ನ ತರಬೇತಿಗೂ ಆಕಾಶ ಭೂಮಿಯಷ್ಟು ವ್ಯತ್ಯಾಸವಿದೆ.
ಕಂಬಳ ಕೋಣಗಳ ಓಟ, ಕೈ ಸನ್ನೆ ಮೂಲಕ ಓಟದ ಆರಂಭವಾದರೆ, ರನ್ನಿಂಗ್ ರೇಸ್ ಎಲೆಕ್ಟ್ರಾನಿಕ್ ಡಿಜಿಟ್ ಕೌಂಟಿಂಗ್ ಶುರುವಿನೊಂದಿಗೆ ಆರಂಭ ಪಡೆದುಕೊಳ್ಳುತ್ತದೆ. ಕಂಬಳದ ಓಟಗಾರ ತನ್ನ ವೇಗವನ್ನ ಕೋಣದ ಸಹಾಯದಿಂದಲೇ ವೃದ್ಧಿಸಿಕೊಳ್ಳುತ್ತಾನೆ, ಆದರೆ ಟ್ರ್ಯಾಕ್ ಓಟಗಾರ ಆತನ ಸಾಮರ್ಥ್ಯದಿಂದಲೇ ವೇಗ ಪಡೆದುಕೊಳ್ಳಬೇಕು. ಬೋಲ್ಟ್ ಸರಾಸರಿ ವೇಗ ಪ್ರತೀ ಗಂಟೆಗೆ 27.08 ಕಿಮಿ ಆದರೆ ಕೋಣಗಳದ್ದು 56 ಕಿ.ಮೀ ಪ್ರತೀ ಗಂಟೆಗೆ. ಕಂಬಳದಲ್ಲಿ ಹಿಮ್ಮಡಿ ಪ್ರಮುಖ ಪಾತ್ರ ವಹಿಸಿದರೆ ಟ್ರ್ಯಾಕ್ ಓಟದಲ್ಲಿ ಮುಮ್ಮಡಿ ಪ್ರಾಮುಖ್ಯತೆ ಪಡೆದಿರುತ್ತೆ, ಎಲ್ಲದಕ್ಕೂ ಮಿಗಿಲಾಗಿ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡಲು ಕಂಬಳದ ಓಟಗಾರನಿಗೆ ಸಾಧ್ಯವಿದೆಯೇ ಎಂಬುದನ್ನು ಮೊದಲು ಅರಿಯಬೇಕು.

ಬೋಲ್ಟ್ ಮೀರಿಸುವ ಓಟಗಾರರ ವೈರಲ್ ವಿಡಿಯೋ ಹಾಗೂ ಪರೀಕ್ಷಾರ್ಥ ಪ್ರಯೋಗಗಳು ಇದೇ ಮೊದಲೇನಲ್ಲ, ಕ್ರೀಡಾ ಪ್ರಾಧಿಕಾರ (SAI Sports Authority of India) ಸಾಕಷ್ಟು ಸಲ ಸಾಮಾಜಿಕ ಜಾಲತಾಣದ ವೈರಲ್ ವ್ಯಕ್ತಿಗಳನ್ನ ಪರೀಕ್ಷೆಗೆ ಒಳಪಡಿಸಿದೆ, ಆದರ ಫಲಿತಾಂಶ ಹೊರಬರಲಿಲ್ಲ, ಆ ಪ್ರತಿಭೆಗಳು ಅನಾವರಣಗೊಳ್ಳಲೂ ಇಲ್ಲ. ಅಂತಹದ ನಿದರ್ಶನಗಳಲ್ಲಿ ಮಧ್ಯಪ್ರದೇಶದ ರಾಮೇಶ್ವರ ಗುರ್ಜಾರ್ ಕೂಡ ಒಬ್ಬರು, ನೂರು ಮೀಟರ್ ಕೇವಲ 11 ಸೆಕೆಂಡ್ ಗಳಲ್ಲಿ ಬರಿಗಾಲಿನಲ್ಲಿ ಓಡಿ ಹೀರೋ ಆಗಿದ್ದರು, ಕೊನೆಗೆ ಟ್ರ್ಯಾಕ್ ಲ್ಲಿ ನಿತ್ರಾಣವಾದರು. ಅದರಂತೆ ಜಶಿಕಾ ಖಾನ್, ಮೊಹಮ್ಮದ್ ಎಂಬುವರೂ ಕೂಡ ಅಂತರ್ಜಾಲದಿಂದ ಬೆಳಕಿಗೆ ಬಂದು ವೃತ್ತಿಪರ ಓಟದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಾಗದೇ ಉಳಿದರು.
ಒಟ್ಟಾರೆ ಕಂಬಳ ಕ್ರೀಡೆ ಹಾಗೂ ಓಟಗಾರರನ್ನ ಹೋಲಿಕೆ ಮಾಡಿ ನೋಡುವುದಕ್ಕಿಂತ ಕಂಬಳವನ್ನೇ ವಿಶೇಷ ಕ್ರೀಡೆಯನ್ನಾಗಿ ಪರಿಗಣಿಸಬೇಕು. ಏನಿದ್ದರೂ ಅಂತಿಮವಾಗಿ ಪ್ರಚಾರ ಸಿಗಬೇಕಾದವರಿಗೆ ಪ್ರಚಾರ ಸಿಕ್ಕಿದೆ. ಕಂಬಳಕ್ಕೆ ಕಂಬಳವೊಂದೇ ಸಾಟಿ.